ಪ್ರಿಯ ಸಖಿ,
ಹುಟ್ಟು ನಮ್ಮ ಕೈಯಲಿಲ್ಲ. ಹಾಗೂ ಸಾವೂ ಕೂಡ. (ಆತ್ಮ ಹತ್ಯೆಗಳನ್ನು ಹೊರತುಪಡಿಸಿ) ಆದರೆ ಇವೆರಡರ ನಡುವಿನ ಬದುಕು ನಮ್ಮ ಕೈನಲ್ಲೇ ಇದೆ. ಇದನ್ನು ನಮಗೆ ಬೇಕೆಂದಂತೆ ರೂಪಿಸಿಕೊಳ್ಳುವ ಅವಕಾಶ ನಮಗಿದೆ. ಒಂದು ಮಗುವಿನ ಹುಟ್ಟಿನೊಂದಿಗೆ ಅನೇಕ ಆಸೆ, ಕನಸುಗಳೂ ಹುಟ್ಟಿಕೊಳ್ಳುತ್ತವೆ.
ಬದುಕಿನುದ್ದಕ್ಕೂ ಅವುಗಳನ್ನು ಪೂರೈಸಿಕೊಳ್ಳಲು ವ್ಯಕ್ತಿ ಹೆಣಗುತ್ತಾನೆ. ಸಫಲವಾಗುವುದು ಕೆಲವೇ ಕೆಲವು. ಇನ್ನುಳಿದವು ವ್ಯಕ್ತಿಯ ಸಾವಿನೊಂದಿಗೇ ಸಾಯುತ್ತವೆ. ಅಥವಾ ಆದು ಬೇರಾರದೋ ಆಸೆ ಕನಸು ಮುಂದುವರೆಯುತ್ತವೆ. ವ್ಯಕ್ತಿ ಸಫಲಗೊಳಿಸಿಕೊಂಡ ಆಸೆ, ಕನಸುಗಳಿಂದಲೇ ನಾವು ಅವನನ್ನು ಅಳೆಯುತ್ತೇವೆ. ಅವನು ಆಗದೇ ಉಳಿದ ವ್ಯಕ್ತಿತ್ವದಿಂದ ಅವನನ್ನು ನಾವು ಅಳೆಯುವುದಿಲ್ಲ.
ಈ ವ್ಯಕ್ತಿತ್ವವನ್ನು ಅಳೆಯುವ ಕೆಲಸವೂ ಆಗುವುದು ವ್ಯಕ್ತಿಯ ಸಾವಿನಲ್ಲಿ. ಅವನ ಗುಣ, ಸ್ವಭಾವ, ಆಸ್ತಿ, ಅಂತಸ್ತು, ಸಾಧಿಸಿದ ಕೆಲಸ, ಸಮಾಜದ ಸೇವೆ, ಬುದ್ಧಿವಂತಿಕೆ, ಒಳ್ಳೆಯತನ ಇತ್ಯಾದಿಗಳಂದ ವ್ಯಕ್ತಿಯನ್ನು ತೂಗುತ್ತೇವೆ. ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬ ಮಾತೊಂದಿದೆ.
ಸತ್ತ ವ್ಯಕ್ತಿ ಸಮಾಜಕ್ಕೆ ಉಪಯೋಗಿಯಾಗಿದ್ದರೆ ಜನ ಅವನು ಪರಿಪೂರ್ಣ ಬದುಕನ್ನು ಬಾಳಿ ಸತ್ತರೂ ಇವನು ಇಷ್ಟು ಬೇಗ ಸಾಯಬಾರದಿತ್ತು. ಇಂತಹಾ ಸಹೃದಯ ಅಪರೂಪ. ಇವನಂತವನಿಂದ ಸಮಾಜಕ್ಕೆ ಇನ್ನೂ ಬಹಳಷ್ಟು ಆಗಬೇಕಾದುದಿತ್ತು. ಇವನ ಸಾವಿನಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಒಳ್ಳೆಯವರನ್ನು ಸಾವೂ ಬೇಗ ಕೊಂಡೊಯ್ಯುತ್ತದೆ…. ಎಂದೆಲ್ಲಾ ವಿಷಾದಿಸುತ್ತಾರೆ.
ಅದೇ ಸಮಾಜಕ್ಕೆ ಉಪಯೋಗವಿಲ್ಲದ, ಸಮಾಜ ಕಂಟಕ ಸತ್ತಾಗ ಜನ ಸಧ್ಯ ಸತ್ತನಲ್ಲಾ, ಎಂದು ಹೇಳಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಸಖಿ, ಸಾವನ್ನು ಕುರಿತ ಕಥೆಯೊಂದು ನೆನಪಾಗುತ್ತದೆ. ವ್ಯಕ್ತಿಯೊಬ್ಬ ದೇವರಲ್ಲಿ ಹೀಗೆ ಬೇಡಿಕೊಂಡನಂತೆ. ದೇವ ನಾನು ಸತ್ತಾಗ ನನ್ನ ಸಾವಿಗೆ ದುಃಖಿಸಿ ಅಳುವ ಕೆಲವರಾದರೂ ಜನರಿರುವಂತೆ ಕರುಣಿಸು, ಎಂದು. ಅದಕ್ಕೆ ದೇವರು ಇದು ನನ್ನಿಂದ ಆಗದ ಕೆಲಸ. ಇದು ನಿನ್ನಿಂದಲೇ ಸಾಧ್ಯ. ನಿನ್ನ ಸಾವಿಗೆ ಜನ ದುಃಖಿಸುವಂತಾಗಲು, ಜನರು ಮೆಚ್ಚುವಂತೆ ನೀನು ಬದುಕಬೇಕು ಎಂದನಂತೆ.
ಸಖಿ, ಈ ಕಥೆಯೊಳಗೆ ಬದುಕಿನ ಗೂಡಾರ್ಥವೇ ಆಡಗಿದೆಯಲ್ಲವೇ? ಹುಟ್ಟು, ಸಾವು ಯಾವುದೋ ಶಕ್ತಿಯ ಕೈಯಲ್ಲಿದ್ದರೂ ಮಧ್ಯದ ಈ ಬದುಕಿನಲ್ಲಿ ಗುಣವಂತನಾಗುವುದು, ಕೆಡಕನಾಗುವುದು ವ್ಯಕ್ತಿಯ ಕೈಯಲ್ಲೇ ಇದೆಯಲ್ಲವೇ? ಸಾವಿನಾಚೆಗೆ ಏನಿದೆಯೋ ಯಾರಿಗೂ ತಿಳಿದಿಲ್ಲ. ನಾವಿಲ್ಲಿ ಒಳ್ಳೆಯವರಾಗಿ, ಸಮಾಜಕ್ಕೆ ಬೇಕಾದವರಾಗಿ ಬದುಕಿದರೆ ಮುಂದೆ ಸ್ವರ್ಗ, ಮೋಕ್ಷ ಸಿಗುತ್ತದೆ ಎಂಬ ಮಾತಿಗೂ ಯಾವುದೇ ಆಧಾರವಿಲ್ಲ. ಆದರೆ ಒಬ್ಬ ಒಳ್ಳೆಯ ವ್ಯಕ್ತಿಯ ಸಾವಿಗೆ ಹಲವಾರು ಜನರು ಕಣ್ಣೀರು ಹರಿಸುತ್ತಾರೆಂಬುದು ನಿಜ. ಬಹುಶಃ ವ್ಯಕ್ತಿ ಸಾರ್ಥಕ ಬದುಕಿಗೆ ಇದೇ ದೊಡ್ಡ ಕೊಡುಗೆ ಹಾಗೇ ಜನರ ಕಣ್ಣೀರನ್ನು ಸಂಪಾದಿಸುವುದೇ ನಿಜವಾದ ಧನ್ಯತೆ. ಆಲ್ಲವೇ ?
*****