ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ.
ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ ಅಪ್ರತಿಮ ರಂಗ ಕಲಾವಿದರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ಹೆಮ್ಮೆಯಲ್ಲಿ ನಮ್ಮ ಪಾಲೂ ಇದೆ. ಹಿಂದೆ ಗುಬ್ಬಿ ಕರ್ನಾಟಕ ಫಿಲಂಸ್ ನವರು ಚಿತ್ರನಿರ್ಮಾಣ ಮಾಡುತ್ತಿದ್ದರು. ‘ಬೇಡರ ಕಣ್ಣಪ್ಪ’ ಚಿತ್ರ ನಿರ್ಮಿಸಿದರು. ಈ ನಿರ್ಮಾಣ ತಂಡದಲ್ಲಿ ಜಿಲ್ಲೆಯ ಅಂದಿನ ಪ್ರಸಿದ್ದರಾದ ಮುರಿಗೆಪ್ಪ ಮತ್ತು ದುರ್ಗದ ಗುರುನಾಥ ಸಹ ನಿರ್ಮಾಪಕರು, ಮೇರುನಟ ರಾಜ್ ಚಿತ್ರರಂಗದಲ್ಲಿ ಉದಯಿಸುವಲ್ಲಿ ದುರ್ಗದವರ ಪಾತ್ರವೂ ಇದೆ ಎಂಬುದು ಸಾಮಾನ್ಯ ವಿಷಯವೇನಲ್ಲ. ಹಾಗೆಯೇ ಸಾಹಸ ಸಿಂಹ ವಿಷ್ಣುವರ್ಧನ್ ಮತು ರೆಬೆಲ್‍ಸ್ಟಾರ್ ಅಂಬರೀಷ್ ಇವರ ಅಭಿನಯದ ಪ್ರಥಮ ಚಿತ್ರ `ನಾಗರಹಾವು’ ಚಿತ್ರೀಕರಣವಾದ ಸ್ಥಳ ಚಿತ್ರದುರ್ಗ. ಈ ಯುವಕರು ಕಲಾವಿದರಾಗಿ ಮರುಹುಟ್ಟು ಪಡೆದದ್ದು ಈ ಗಂಡು ಮೆಟ್ಟಿದ ನಾಡಿನಲ್ಲೇ ಎಂಬುದು ಹೆಮ್ಮೆಯ ವಿಷಯವೇ. ‘ನಾಗರಹಾವು’ ಚಿತ್ರದ ಕಥೆಗಾರ ನಮ್ಮವರೇ ಆದ ತ.ರಾ.ಸು. ಎಂಬುದು ಮತ್ತಷ್ಟು ಪುಳಕಗೊಳ್ಳುವ ಸಂಗತಿ. ೧೯೬೦ರಲ್ಲಿ ನಾಟಕ ರಂಗದಿಂದ ಚಿತ್ರರಂಗಕ್ಕೆ ಹಾರಿದ ದುರ್ಗದ ವರನಟ ಬಿ. ಲಕ್ಷ್ಮಯ್ಯ ಮತ್ತು ವೀರಭದ್ರಪ್ಪ ಆ ಕಾಲದಲ್ಲಿ ಚಿತ್ರಗಳಲ್ಲಿ ಅಭಿನಯಿಸಿ ದುರ್ಗದವರ ಕಣ್ಣುಗಳಲ್ಲಿ ಮಿಂಚು ಮೂಡಿಸಿದವರು. ದುರ್ಗದ ಪೈಲಾನ್ ನಂಜಪ್ಪಸಹ ‘ರಣಧೀರ ಕಂಠೀರವ’ ಚಿತ್ರದಲ್ಲಿ ಪೈಲಾನ್ ಪಾತ್ರದಲ್ಲೇ ಕಾಣಿಸಿಕೊಂಡು ಮನೆಮಾತಾದರು.
ಅದೇ ದಶಕದಲ್ಲಿ ಎಚ್.ವಿ.ನಾಗೇಂದ್ರಪ್ಪ ನಾಗಭೂಷಣಶೆಟ್ಟಿ ಇತರರು ಸೇರಿ ನಿರ್ಮಿಸಿದ ‘ಅರಿಶಿನ ಕುಂಕುಮ’ ದುರ್ಗ ಮುತ್ತೈದೆಯರ ಮನಗೆದ್ದಿತ್ತು. ಗುಬ್ಬಿಕರ್ನಾಟಕ ಫಿಲಂಸ್‌ನಿಂದ ಡಾ|| ರಾಜ್ ಅಭಿನಯದ ‘ಮುರಿಯದ ಮನೆ’ ‘ಜೇನುಗೂಡು’ ವಿನಂತಹ ಯಶಸ್ವಿ ಸಾಂಸಾರಿಕ ಚಿತ್ರಗಳೂ ತೆರೆ ಕಂಡವು. ಎಚ್.ವಿ. ನಾಗೇಂದ್ರಪ್ಪನವರು ‘ಪ್ರೇಮಸಾಕ್ಷಿ’, ‘ಶುಭಮಿಲನ’, ‘ಸಿಂಗಾರಿ ಬಂಗಾರಿ’ ಚಿತ್ರಗಳನ್ನು ಮಾಡಿದ ಖ್ಯಾತರು. ಇವುಗಳಲ್ಲಿ ಕ್ರಮವಾಗಿ ಅನಂತನಾಗ್, ವಿಷ್ಣು, ಕಾಶೀನಾಥ್ ಹೀರೋಗಳು. ಬೆಳ್ಳಿತೆರೆಯ ಹೆಸರಾಂತ ವಿತರಕ ಬಿ.ಕೆ.ಚನ್ನಣ್ಣ ‘ಕೃಷ್ಣ ರುಕ್ಮಿಣಿ’ ಚಿತ್ರವನ್ನು ವಿಷ್ಣು ನಾಯಕತ್ವದಲ್ಲಿ ನಿರ್ಮಿಸಿದರು. ಹಿರಿಯೂರಿನ ಸೇತುರಾಮ್ ಪಳಗಿದ ವಿತರಕರು. ಚಿತ್ರರಂಗದ ವಿತರಕರಲ್ಲಿ ಅಗ್ರಗಣ್ಯರೆನಿಸಿದ ಕೆ.ಎಚ್. ನಾಗರಾಜ್ ಅವರ ಸಂಸ್ಥೆಯಿಂದಲೂ ಬಹಳಷ್ಟು ಚಿತ್ರಗಳು ದೊರೆ ಭಗವಾನ್ ನಿರ್ದೆಶನದಲ್ಲಿ ಆಗಿವೆ. ಡಾ|| ರಾಜ್ ಗೆಳೆತನ ಸಂಪಾದಿಸಿ ಹಂತಹಂತವಾಗಿ ಮೇಲೇರಿದ ಕೆ.ಎಚ್. ನಾಗರಾಜ್ ೧೯೭೦ ರಿಂದ ೮೦ ರ ದಶಕದಲ್ಲಿ ಇಡೀ ಕನ್ನಡ ಚಿತ್ರೋದ್ಯಮವನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರೆಂಬುದು ಹೆಮ್ಮೆಯ ವಿಷಯವೇ. ಇವರ ಚಂದ್ರಿಕಾ ಮೂವೀಸ್ ಸಂಸ್ಥೆಯಲ್ಲಿ ಡಾ|| ರಾಜ್ ಸಹ ಪಾಲುದಾರರು. ‘ಮನೆ ಮನೆ ಕಥೆ’, ’ಸುಖಸಂಸಾರಕ್ಕೆ ಹನ್ನೆರಡು ಸೂತ್ರಗಳು’ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ ಪ್ರಭಾಕರ ರೆಡ್ಡಿ ದುರ್ಗದವರು. ಇವರ ಸೋದರ ಮಧುಸೂದನರೆಡ್ಡಿ ಚಿತ್ರನಟರು. ಯಶಸ್ವಿ ‘ಸಾಂಗ್ಲಿಯಾನ’ ಮತ್ತು ‘ಸಿ.ಬಿ.ಐ. ಶಂಕರ್’ ಚಿತ್ರಗಳನ್ನು ತೆರೆಗಿತ್ತ ವೇಮಣ್ಣ ರೆಡ್ಡಿ ನಮ್ಮವರು. ‘ಜಗ್ಗು, ಕುರಿದೊಡ್ಡಿ ಕುರುಕ್ಷೇತ್ರ’ ಚಿತ್ರಗಳ ನಿರ್ದೆಶಕ ವಿಜಯಗುಜ್ಜರ್ ಹೊಸದುರ್ಗದ ಪ್ರತಿಭೆ. ಪಂಚಮವೇದ, ‘ಅಂತರಾಳ’ ‘ಅಂಡಮಾನ್’ ತೆರೆಗಿತ್ತ ವಿಶ್ವನಾಥ ಗುಯಿಲಾಳಿನವರು. ಸೀತಾಂಜನೇಯ, ಒಲವಿನ ಕಾಣಿಕೆ ಚಿತ್ರಗಳ ನಿರ್ದೆಶಕ ಬೂದಾಳ ಕೃಷ್ಣಮೂರ್ತಿ ಶ್ರೀರಾಮಪುರದವರು. ‘ಊರಿಗಿಟ್ಟ ಕೊಳ್ಳಿ’ ತೆರೆಗಿತ್ತ ಕಲ್ಲೇಶ ಮತ್ತು ಪಿ. ಲಂಕೇಶರ ‘ಎಲ್ಲಿಂದಲೋ ಬಂದವರು’ ಚಿತ್ರಗಳ ನಿರ್ಮಾತೃ ಶೈಲೇಂದ್ರಬಾಬು ಹಿರಿಯೂರಿನವರು. ‘ಅಮೃತಬಿಂದು’ವಿನ ನಿರ್ದೆಶಕ ಹಂತಿ ಇಲ್ಲಿನವರು. ಖ್ಯಾತ ನಟ ದ್ವಾರಕೀಶ್ ಚಿತ್ರದುರ್ಗದ ಅಂಬುಜಾ ಅವರನ್ನು ವಿವಾಹವಾದ್ದರಿಂದ ಅವರು ದುರ್ಗದ ಅಳಿಯ, ‘ಕ್ರಾಂತಿಯೋಗಿ ಬಸವಣ್ಣ’ ಎಂಬ ಚಿತ್ರವನ್ನು ನಿರ್ಮಿಸಿದ ಸನ್ಯಾಸಿ ಯಾರು ಗೊತ್ತೇ ? ಮಾತೆಮಹಾದೇವಿ. ಇತ್ತೀಚೆಗೆ ಚಿತ್ರರಂಗದಲ್ಲಿ ಹೆಸರು ಹಣ ಮಾಡಿದ ರೆಹಮಾನ್ ಚಿತ್ರದುರ್ಗದವರು. ರೆಹಮಾನ್ ಮತ್ತು ಮುಸ್ತಫಾ ನಿರ್ಮಾಣದ ‘ಯಜಮಾನ’ ಮತ್ತು ‘ಹುಚ್ಚ’, ‘ನಿನ್ನೇ ಪ್ರೀತಿಸ್ತೇನೆ’ ಅತ್ಯಂತ ಯಶಸ್ವಿ ಚಿತ್ರಗಳು. ವಿಷ್ಣು ಅವರ ಚಿತ್ರರಂಗದ ಬದುಕಿನಲ್ಲಿ ಮೈಲಿಗಲಾದ ‘ಯಜಮಾನ’, ನಟ ಸುದೀಪ್‍ಗೆ ಬ್ರೇಕ್ ನೀಡಿದ ‘ಹುಚ್ಚ’ ಚಿತ್ರ ನಿರ್ಮಿಸಿದ ಖ್ಯಾತಿ ನಮ್ಮವರ ಖಜಾನೆಯಲ್ಲಿದೆ.
ಇನ್ನು ಚಿತ್ರರಂಗಕ್ಕೆ ನಾವು ಸುಂದರ ತಾರೆಗಳನ್ನು ಕೊಟ್ಟಿದ್ದೇವೆ. ‘ಸ್ಪರ್ಶ’ ಚಿತ್ರದ ತಾರೆ ರೇಖಾ, ನಟ ಅಭಿಜಿತ್, ಶಿವಕುಮಾರ್, ಶಿವಮೂರ್ತಿ, ಕೊಂಡಜ್ಜಿ ರಾಜಶೇಖರ ದತ್ತಾತ್ರೇಯ, ಎಚ್.ಜಿ.ಸೋಮಶೇಖರರಾವ್. ಜಯಕುಮಾರ್ ಧಡೂತಿ ನಟಿ ಮಂಜುಮಾಲಿನಿ ದುರ್ಗದವರೇ.
ಚಿತ್ರರಂಗಕ್ಕೆ ಗಣನೀಯವಾಗಿ ಸಾಹಿತ್ಯ ಕೊಡುಗೆಯನ್ನು ನೀಡಿದವರೂ ನಮ್ಮಲ್ಲಿದ್ದಾರೆ ತ.ರಾ.ಸು. ಅವರ ನಾಗರಹಾವು, ಹಂಸಗೀತೆ, ಚಂದನದ ಗೊಂಬೆ, ಗಾಳಿಮಾತು, ಮಸಣದ ಹೂವು, ಆಕಸ್ಮಿಕ ಇವೆಲ್ಲಾ ಕಾದಂಬರಿಗಳು ಯಶಸ್ವಿ ಚಲನಚಿತ್ರಗಳಾಗಿ ಶತದಿನೋತ್ಸವ ಕಂಡಿವೆ. ಹಿಂದಿನ ‘ಬಸಂತ್ ಬಹಾರ್’ ಚಿತ್ರಕ್ಕೆ ಹಂಸಗೀತೆಯೇ ಸ್ಪೂರ್ತಿ. ನಾಗರಹಾವು ನಾಲ್ಕು ಭಾಷೆಗಳಲ್ಲಿ ಚಲನಚಿತ್ರವಾಗಿದೆ. ಹಳೆಯ ಚಿತ್ರಗಳಿಗೆ ತ.ರಾ.ಸು. ಅವರದ್ದೇ ಕಥೆ, ಸಂಭಾಷಣೆ. ತ.ರಾ.ಸು. ಅವರ ‘ಬಿಡುಗಡೆಯ ಬೇಡಿ’ ಕಾದಂಬರಿಯನ್ನು ಖ್ಯಾತ ನಿರ್ದೆಶಕ ದೊರೆ ಭಗವಾನ್ ನಿರ್ಮಿಸಿದಾಗ ಚಿತ್ರಕ್ಕೆ ಸಂಭಾಷಣೆ ಬರೆದದ್ದು ದುರ್ಗದವರೇ ಆದ ಬಿ.ಎಲ್.ವೇಣು. ತ.ರಾ.ಸು. ಚಿತ್ರಗಳು ರಾಜ್ಯ, ರಾಷ್ಪ ಪ್ರಶಸ್ತಿಗೆ ಪಾತ್ರವಾಗಿವೆ.
ಬಿ.ಎಲ್. ವೇಣು ಅವರ ಕಾದಂಬರಿಗಳು ಸಹ ಚಲನಚಿತ್ರಗಳಾಗಿವೆ. ಪರಾಜಿತ, ಪ್ರೇಮಪರ್ವ, ಅಜೇಯ, ದೊಡ್ಡಮನೆ ಎಸ್ಟೇಟ್, ಪ್ರೀತಿವಾತ್ಸಲ್ಯ, ಬೆತ್ತಲೆಸೇವೆ, ಪ್ರೇಮಬಾಲೆ, ರಾಮರಾಜ್ಯದಲ್ಲಿ ರಾಕ್ಷಸರು ಇವೆಲ್ಲಾ ಯಶಸ್ವಿ ಚಿತ್ರಗಳಾಗಿದ್ದು ಹಲವು ಶತದಿನೋತ್ಸವ ಆಚರಿಸಿವೆ. ಪ್ರೇಮಪರ್ವ ನಾಲ್ಕು ಭಾಷೆಗಳಲ್ಲಿ ಚಲನಚಿತ್ರವಾಗಿದ್ದರೆ ಅಜೇಯ ತಮಿಳಿನಲ್ಲಿ ‘ಪುದಿರ್’ ಹೆಸರಿನಲ್ಲಿ ಚಿತ್ರವಾಗಿದೆ. ಅಲ್ಲದೆ ಸುಮಾರು ೫೩ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ವೇಣು ಚಿತ್ರರಂಗದ ದಿಗ್ಗಜಗಳಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ದೊರೆ ಭಗವಾನ್, ವಿಜಾಯ್, ಸೋಮಶೇಖರ್, ಸಾಯಿಪ್ರಕಾಶ್, ಫಣಿ ರಾಮಚಂದ್ರ, ಶಿವಮಣಿ, ಎಸ್.ನಾರಾಯಣ್, ಭಾರ್ಗವ, ಡಿ.ರಾಜೇಂದ್ರಬಾಬು ಅಂತಹವರ ಚಿತ್ರ ನಿರ್ದೆಶಕರ ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರ ಸಂಭಾಷಣೆಗಾಗಿ ರಾಜ್ಯಪ್ರಶಸ್ತಿ, ಹಲವಾರು ಸಲ ಚಿತ್ರರಸಿಕರ ಸಂಘದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೆಚ್ಚಾಗಿ ವಿಷುವರ್ಧನ್ ಚಿತ್ರಗಳಿಗೇ ಸಂಭಾಷಣೆ ನೀಡಿರುವುದು ಉಲ್ಲೇಖನಾರ್ಹ. ಖಾತರಂಗಶಿಲ್ಪಿ ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ) ‘ವೀರಪ್ಪನ್’ ಚಿತ್ರಕ್ಕೆ ಸಂಭಾಷಣೆ ಹಾಗೂ ‘ಭುಜಂಗಯ್ಯನ ದಶಾವತಾರಗಳು’ ಚಿತ್ರದ ಸಹ ನಿರ್ದೆಶಕರು. ಬಿ.ವಿ. ವೈಕುಂಠರಾಜು ಅವರ ಕಾದಂಬರಿಗಳಾದ ‘ಆಕ್ರಮಣ’ ಮತ್ತು ‘ಉದ್ಭವ’ ಕೂಡ ಯಶಸ್ವಿ ಚಲನಚಿತ್ರಗಳು. ಅನುಸೂಯ ರಾಮರೆಡ್ಡಿ ಅವರ ‘ಮಮತೆಯ ಮಡಿಲಲ್ಲಿ’ ಕೂಡ ಯಶಸ್ವಿ ಕೌಟುಂಬಿಕ ಚಿತ್ರ. ಹೇಗಿದ ದುರ್ಗದ ಕಮಾಲು!
*****