ವೈಪರೀತ್ಯದ ಒಡಲಲ್ಲಿ ಹೊಸ ಹುಟ್ಟು

ವೈಪರೀತ್ಯದ ಒಡಲಲ್ಲಿ ಹೊಸ ಹುಟ್ಟು

ಭಾರತೀಯ ಚಿತ್ರರಂಗಕ್ಕೆ ಈಗ ನೂರನೇ ವರ್ಷ. ನಿಜಕ್ಕೂ ಇದೊಂದು ಅಪೂರ್ವ ಕಾಲಘಟ್ಟ ಹಾಗೂ ಐತಿಹಾಸಿಕ ಸಂದರ್ಭ. ಯಾವುದೇ ಐತಿಹಾಸಿಕ ಸಂದರ್ಭಗಳು ಸಂಭ್ರಮಕ್ಕೆ ಕಾರಣವಾಗಲೇಬೇಕು. ಅದೇ ಸಂದರ್ಭದಲ್ಲಿ ಸಿಂಹಾವಲೋಕನ ಮತ್ತು ಆತ್ಮಾವಲೋಕನಗಳಿಗೆ ಅವಕಾಶವಿರಬೇಕು. ಇಲ್ಲವಾದರೆ ಸಂಭ್ರಮವು ಅರಿವಿನ ನೆಲೆಗಳನ್ನು ನುಂಗಿ ನೊಣೆಯುವ ಅಮಲಾಗುವ ಅಪಾಯವಿರುತ್ತದೆ.

ಹಾಗೆ ನೋಡಿದರೆ ವಿವಿಧ ಸ್ಥಿತ್ಯಂತರಗಳ ಮೂಲಕ ಸಿನಿಮಾ ಲೋಕವು ಮುನ್ನಡೆಯುತ್ತ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತ ಜನಸಾಮಾನ್ಯರ ಆಕರ್ಷಣೆಯ ಕೇಂದ್ರವಾಗಿ ಉಳಿದಿದೆ; ಬೌದ್ಧಿಕ ವಲಯದ ಆಸಕ್ತ ಕ್ಷೇತ್ರವೂ ಆಗಿದೆ. ವ್ಯಾಪಾರಿ ಸಿನಿಮಾ – ಹೊಸ ಅಲೆ ಸಿನಿಮಾ ಎಂಬ ಸ್ಥೂಲ ವಿಂಗಡಣೆಗೂ ಒಳಪಟ್ಟು ಆಮೇಲೆ ಪರಸ್ಪರ ಕೊಳುಕೊಡುಗೆಯ ಮೂಲಕ ಹೊಸ ವಿನ್ಯಾಸಗಳ ಹುಡುಕಾಟವನ್ನೂ ನಡೆಸಿದೆ. ಸಿನಿಮಾ ಸದಾ ಪ್ರಯೋಗಶೀಲವಾಗಿರುವುದೇ ಒಂದು ವಿಶಿಷ್ಟತೆಯಾಗಿದೆ. ಇದಕ್ಕೆ ‘ವ್ಯಾಪಾರಿ’ ಎಂದು ಕರೆಯುವ ‘ಮುಖ್ಯವಾಹಿನಿ ಸಿನಿಮಾಗಳೂ’ ಹೊರತಾಗಿಲ್ಲ. ಪ್ರಯೋಗಶೀಲತೆಯು ಪರ್ಯಾಯ ಸಿನಿಮಾಗಳ ಸೊತ್ತಾಗಿ ಮಾತ್ರ ಉಳಿದಿಲ್ಲ. ಮುಖ್ಯವಾಹಿನಿ ಸಿನಿಮಾವಲಯದೊಳಗೂ ವಿವಿಧ ಪ್ರಯೋಗಗಳು ನಡೆಯುತ್ತಾ ಬಂದಿವೆ. ಹಿಂದೆ ಬರುತ್ತಿದ್ದ ರಾಜಕಪೂರ್‌ ಅವರ ಕೆಲವು ಸಿನಿಮಾಗಳು (ಎಲ್ಲಾ ಅಲ್ಲ), ಭಗ್ನ ಮನಸ್ಸಿನ ಖಿನ್ನತೆಗೆ ಕನ್ನಡಿ ಹಿಡಿಯುತ್ತ ಬಂದ ಗುರುದತ್ ಅವರ ಸಿನಿಮಾಗಳು, ಈಗಿನ ಅಮಿತಾಬ್ ಅಭಿನಯದ ಕೆಲವು ಸಿನಿಮಾಗಳು, ಹಿಂದಿ ವಲಯದ ಸಾಂಕೇತಿಕ ಉದಾಹರಣೆಗಳು. ಹೊಸ ಅಲೆ ಅಥವಾ ಪರ್ಯಾಯ ಮಾದರಿಯ ಏಕತಾನತೆಯನ್ನು ಮುರಿದ ಶ್ಯಾಮ್ ಬೆನೆಗಲ್, ಗೋವಿಂದ ನಿಹಲಾನಿ – ಇಂಥವರ ಸಿನಿಮಾಗಳನ್ನೂ ಇಲ್ಲಿ ನೆನೆಯಲೇಬೇಕು. ತಮಿಳಿಗೆ ಬಂದರೆ ಮುಖ್ಯವಾಹಿನಿಯೊಳಗೆ ಪ್ರಯೋಗಶೀಲರಾದ ಕೆ. ಬಾಲಚಂದರ್, ಮಣಿರತ್ನಂ, ಕಮಲಹಾಸನ್ ಮುಂತಾದವರನ್ನು ಸಾಂಕೇತಿಕವಾಗಿ ಉದಾಹರಿಸಬಹುದು. ಮಲೆಯಾಳಂನ ಮುಖ್ಯವಾಹಿನಿ ಚಿತ್ರಗಳಿಗೆ ಅವುಗಳದೇ ಆದ ಪ್ರತ್ಯೇಕ ಛಾಪು ಇದೆ. ತೆಲುಗಿನ ಕೆ. ವಿಶ್ವನಾಥ್ ಅವರ ಚಿತ್ರಗಳೂ ಮುಖ್ಯವಾಹಿನಿಯಲ್ಲೇ ಭಿನ್ನವಾದವು. ಕನ್ನಡದಲ್ಲಿ ಎನ್. ಲಕ್ಷ್ಮೀನಾರಾಯಣ್, ಸಿದ್ಧಲಿಂಗಯ್ಯ, ಗೀತಪ್ರಿಯ, ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್. ಸ್ವಾಮಿ ನಿರ್ದೇಶನ ಹಾಗೂ ಡಾ. ರಾಜಕುಮಾರ್ ಅಭಿನಯದ ಅನೇಕ ಚಿತ್ರಗಳೂ ಸದಭಿರುಚಿ ಮತ್ತು ಸಹ್ಯವಿನ್ಯಾಸದ ರೂಪಗಳು; ಕೆಲವೊಮ್ಮೆ ರೂಪಕಗಳು. ಬಹುಸಂಖ್ಯಾತವಲ್ಲದ ಭಾಷೆಗಳಲ್ಲಿ (ಮಣಿಪುರಿ, ಬೋಜ್‌ಪುರಿ, ತುಳು, ಕೊಂಕಣಿ, ಕೊಡವ, ಬಂಜಾರ ಇತ್ಯಾದಿ) ನಡೆದ ಪ್ರಯೋಗಶೀಲ ಪ್ರಯತ್ನಗಳೂ ಉಲ್ಲೇಖನೀಯ. ಈ ನಡುವೆ ಸತ್ಯಜಿತ್ ರಾಯ್ ಮಾದರಿಯಲ್ಲಿ ಮುಂದುವರೆದ ಹೊಸ ಅಲೆ / ಪರ್ಯಾಯ ಚಿತ್ರಗಳ ಪ್ರಯೋಗಶೀಲತೆಯು ಮೃಣಾಲ್‌ಸೇನ್, ಋತ್ವಿಕ್ ಘಟಕ್, ಅಡೂರು ಗೋಪಾಲಕೃಷ್ಣನ್, ಭಟ್ಟಾಚಾರ್ಯ, ಗಿರೀಶ್ ಕಾಸರವಳ್ಳಿ ಮುಂತಾದವರಲ್ಲಿ ವಿಸ್ತಾರಗೊಂಡಿತು. ಇವರಲ್ಲಿ ಕೆಲವರು ತಮ್ಮದೇ ವಿನ್ಯಾಸಗಳನ್ನು ಕಟ್ಟಿಕೊಟ್ಟರು. ಇನ್ನು ಕೆಲವರು ಹೊಸ ಅಲೆಯ ಹಾದಿಯನ್ನು ಸವೆದ ಹಾದಿ ಮಾಡಿದರು. ರಾಷ್ಟ್ರೀಯ – ಅಂತರ ರಾಷ್ಟ್ರೀಯ ಚಿತ್ರೋತ್ಸವಗಳು ಅನ್ಯಭಾಷಿಕ ಬುದ್ಧಿವಂತರಿಗೇನೊ ಎಂಬಂತೆ ‘ಮೌನ’ವನ್ನೇ ಮುಖ್ಯ ಮಾದರಿಯಾಗಿಸಿದವರೂ ಉಂಟು. ಮಾತು ಮನುಷ್ಯನ ಮುಖ್ಯ ಮಾಧ್ಯಮ, ಮುಖ್ಯ ವಾಹಿನಿಯವರು ಮಾತನ್ನು ಅತಿರೇಕಕ್ಕೆ ಕೊಂಡೊಯ್ದರೆ, ಪರ್ಯಾಯ ಚಿತ್ರದವರು ಮೌನವನ್ನು ಅತಿರೇಕಕ್ಕೆ ಕೊಂಡೊಯ್ದರು. ನಿಧಾನ ಗತಿಯನ್ನು ಮನುಸ್ಮೃತಿಯಂತೆ ಅನುಸರಿಸಿದವರೂ ಉಂಟು!

ಬರಬರುತ್ತ ನಮ್ಮ ಸಿನಿಮಾರಂಗವು ‘ಪ್ರಧಾನವಾಗಿ’ ಎರಡು ವಲಯದ ಉಸುಕಿನಲ್ಲಿ ಸಿಲುಕಿಕೊಂಡಿದೆ. ಒಂದು ಆರ್ಥಿಕ ಗುತ್ತಿಗೆದಾರರ ವಲಯ; ಇನ್ನೊಂದು ಬೌದ್ಧಿಕ ಗುತ್ತಿಗೆದಾರರ ವಲಯ. ಎರಡು ವಲಯದವರೂ ತಮ್ಮದೇ ವೈಪರೀತ್ಯಗಳಲ್ಲಿ ಹೂತುಹೋಗುತ್ತಿದ್ದಾರೆ. ಬಾಕ್ಸ್ ಆಫೀಸ್ ಯಶಸ್ಸಿಗೆ ಆರ್ಥಿಕ ಗುತ್ತಿಗೆದಾರರ ಮಾದರಿಯನ್ನೂ ಪರ್ಯಾಯ ಪ್ರಯತ್ನ ಹಾಗೂ ಪ್ರಶಸ್ತಿಗೆ ಬೌದ್ಧಿಕ ಗುತ್ತಿಗೆದಾರರ ಮಾದರಿಯನ್ನೂ ಅನುಸರಿಸಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿರುವಂತೆ ಕಾಣುತ್ತಿದೆ. ಜಡಗೊಂಡ ಈ ಎರಡೂ ವಲಯಗಳ ಒಡೆಯರ ಸಿದ್ಧಸೂತ್ರಗಳಿಗೆ ಆಯಾ ವಲಯದಲ್ಲಿ ಮನ್ನಣೆ ಎಂಬಂತಾಗಿದೆ. ಆರ್ಥಿಕ ಹಾಗೂ ಬೌದ್ಧಿಕ ಗುತ್ತಿಗೆದಾರರ ಜಡ ಮಾದರಿಯ ವೈಪರೀತ್ಯಗಳನ್ನು ಮೀರುವ ‘ಪ್ರಯೋಗ’ಗಳಿಗೆ ಮನ್ನಣೆ ಸಿಗುವ ಸಾಧ್ಯತೆಗಳು ಕ್ಷೀಣ ಸ್ತರದಲ್ಲಿವೆ.

ನಿಜ; ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಬೇಕೇ ಬೇಕು. ಆದರೆ ಬಂಡವಾಳವೊಂದೇ ಸಿನಿಮಾದ ಬಂಡವಾಳವಾಗಬಾರದು. ಆರ್ಥಿಕ ಶಕ್ತಿಯೊಂದೇ ಅಧಿಕಾರ ನಡೆಸಬಾರದು. ಹೌದು; ಸಿನಿಮಾಕ್ಕೆ ಬೌದ್ಧಿಕತೆ ಬೇಕು. ಆದರೆ ಬೌದ್ಧಿಕತೆಯೊಂದೇ ಸಿನಿಮಾದ ಆದಿ ಮತ್ತು ಅಂತಿಮ ಶಕ್ತಿಯಲ್ಲ. ಬೌದ್ಧಿಕ ಹಾಗೂ ಆರ್ಥಿಕ ಶಕ್ತಿಯನ್ನು ಅರಗಿಸಿಕೊಳ್ಳುವ ಅಂತಃಶಕ್ತಿಯ ಅಂತಃಕರಣ, ನಮ್ಮ ಸಿನಿಮಾಕ್ಕೆ ಬೇಕು. ಅಂತಃಕರಣವಿಲ್ಲದ ಸಿನಿಮಾ ಆಕೃತಿಯ ಹೆಸರಲ್ಲಿ ವಿಕೃತಿಯನ್ನು ವೈಭವೀಕರಿಸುತ್ತದೆ. ಇಂದು ಮುನ್ನೆಲೆಯಲ್ಲಿ ನಿಂತು ನಿದ್ದೆಗೆಡಿಸುತ್ತಿರುವ ವಿಕೃತಿಗಳು ಮುಖ್ಯವಾಹಿನಿ ಸಿನಿಮಾಗಳಲ್ಲಿರಬೇಕಾದ ಸದಭಿರುಚಿಗೆ ಸವಾಲಾಗಿವೆ. ವಿಕೃತಿಗಳಿಲ್ಲದ (ಕೆಲವರ) ಕಲಾತ್ಮಕ ನಾಮಾಂಕಿತ ಸಿನಿಮಾಗಳು ಆತ್ಮರತಿಯನ್ನೇ ಆಕಳಿಸುತ್ತ ಕೂತಲ್ಲೆ ಕೂತಿವೆ. ಎರಡೂ ವಲಯಗಳ ಒಳಗೆ ಕೆಲವು ಉತ್ತಮ ಕೊಡುಗೆಗಳೂ ಇವೆ. ಹೀಗೆ ನಮ್ಮ ಚಿತ್ರರಂಗ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ವೈಪರೀತ್ಯಗಳನ್ನೂ ವಿವೇಕದ ಒಳನೋಟಗಳನ್ನೂ ಒಟ್ಟಿಗೇ ಒಳ ಗೊಳ್ಳುತ್ತ ಬೆಳೆಯುತ್ತ ಬಂದಿದೆ.

ಈಗ ನೋಡಿ; ಹೊಸ ಅಲೆ ಅಥವಾ ಪರ್ಯಾಯ ಸಿನಿಮಾದ ಹೆಸರಿನಲ್ಲಿ ನಿಧಾನಗತಿ ಯಾಕೆ ಬಂತು? ‘ಮೌನವೇ ಆಭರಣ’ ಎಂಬಂತೆ ರಭಸಮತಿಗೆ ಪರ್ಯಾಯ-ನಿಧಾನಗತಿ; ಉಸಿರುಗಟ್ಟಿಸುವಷ್ಟು ಮಾತು ಆವರಿಸಿಕೊಂಡಿದ್ದಕ್ಕೆ ಪರ್ಯಾಯ-ಮೌನ. ಇದು ನನ್ನ ತಿಳುವಳಿಕೆ. ಆಗ ಇದು ಸರಿಯಾದ ಪ್ರತಿಕ್ರಿಯೆಯೂ ಹೌದು. ಆದರೆ ಪ್ರತಿಕ್ರಿಯೆಯು ಸಂಕೇತವಷ್ಟೇ ಆಗುವ ಬದಲು ‘ಪ್ರತಿಮಾ’ ವಿಧಾನವಾದರೆ ಮೌನವೂ ಉಸಿರುಗಟ್ಟಿಸುತ್ತದೆ. ನಿಧಾನಗತಿಯೂ ಅನಗತ್ಯ ಹೇರಿಕೆಯಾಗುತ್ತದೆ. ಹಾಗಾದರೆ ಏನು ಮಾಡಬೇಕು ? ಮುಖ್ಯವಾಹಿನಿ ಮತ್ತು ಪರ್ಯಾಯ ಚಿತ್ರಗಳ ಒಳಿತುಗಳನ್ನು ಇದ್ದ ಹಾಗೆಯೇ ಸ್ವೀಕರಿಸಿ ಸುಲಭ ಮಧ್ಯಮಮಾರ್ಗವನ್ನು ಹಿಡಿದು ‘ಸೇತು ಸಿನಿಮಾ’ (ಬ್ರಿಜ್ ಸಿನಿಮಾ) ಎನ್ನಿಸಿಕೊಳ್ಳಬೇಕೆ?

ನನ್ನ ಅಭಿಪ್ರಾಯದಲ್ಲಿ ‘ಬ್ರಿಜ್ ಸಿನಿಮಾ’ ಎನ್ನುವುದೊಂದು ಕಲಾಕೃತಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅದೊಂದು ಆತುರದಲ್ಲಿ ಕೊಟ್ಟ ಹೆಸರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಒಮ್ಮೆ ಹೀಗೇ ಆಯಿತು. ಅದು ಗೋಪಾಲಕೃಷ್ಣ ಅಡಿಗರ ನೇತೃತ್ವದ ನವ್ಯ ಸಾಹಿತ್ಯ ತಂಡ ಪ್ರಖರವಾಗಿದ್ದ ಕಾಲ. ಕುವೆಂಪು, ಬೇಂದ್ರೆಯವರಾದಿಯಾಗಿ ಬೆಳೆಸಿದ ನವೋದಯ ಸಾಹಿತ್ಯದ ಸತ್ವ ಹಾಗೂ ಅದೇ ಮಾದರಿಯಲ್ಲಿ ಬರೆಯುವವರ ಸಂಖ್ಯೆ ಕ್ಷೀಣಿಸಿದ ಕಾಲ. ಹೆಚ್ಚು ಕಡಿಮೆ ಆಡಳಿತ ಪಕ್ಷ – ವಿರೋಧ ಪಕ್ಷ ಎಂಬಂತೆ (ನವೋದಯ-ನವ್ಯ) ವಿಂಗಡಿತವಾಗಿ ಮುಖಾಮುಖಿ ಮತ್ತು ಮುಖಭಂಜಕತೆ ಮುಂಚೂಣಿಗೆ ಬಂದಿದ್ದ ಕಾಲ. ಆಗ ಡಾ. ಜಿ.ಎಸ್. ಶಿವರುದ್ರಪ್ಪ ಮತ್ತು ಶ್ರೀ ಚನ್ನವೀರಕಣವಿಯವರು ನವೋದಯದ ಸತ್ವವನ್ನು ಉಳಿಸಿಕೊಂಡೇ ನವ್ಯ ಸಾಹಿತ್ಯದ ‘ಒಳಿತು’ಗಳನ್ನು ಸ್ವೀಕರಿಸಿ ವಿಭಿನ್ನ ರಚನೆಗಳನ್ನು ಕಟ್ಟಿಕೊಟ್ಟರು. ಇವರು ನೂರಕ್ಕೆ ನೂರು ನವೋದಯದಲ್ಲೂ ನಿಲ್ಲಲಿಲ್ಲ. ನವ್ಯವೂ ಆಗಲಿಲ್ಲ. ಹೀಗಾಗಿ ಇವರನ್ನು ‘ಸಮನ್ವಯ ಕವಿಗಳು’ ಎಂದು ಕರೆಯತೊಡಗಿದರು. ಸಿನಿಮಾ ಪರಿಭಾಷೆಯಲ್ಲಿ ಹೇಳುವುದಾದರೆ, ಇವರದು ‘ಬ್ರಿಜ್ ಸಾಹಿತ್ಯ’. ಆದರೆ ಹೀಗೆ ಕರೆಯುವುದರ ಮೂಲಕ ಅವರ ಪ್ರಯೋಗ ಶೋಧವನ್ನು ನಿರ್ಲಕ್ಷಿಸಿದಂತಾಗುತ್ತದೆ. ನವೋದಯ ಅಥವಾ ನವ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಒತ್ತಡಗಳ ರಾಜಕೀಯವು ಇನ್ನೊಂದು ಪ್ರಯೋಗಾತ್ಮಕತೆಗೆ ಕುರುಡಾಗಬಾರದಲ್ಲವೆ? ಇಂಥವರ ಪ್ರಯೋಗಾತ್ಮಕತೆಯು ಒಂದು ಪರಂಪರೆಯಾಗದಿರಬಹುದು; ವ್ಯಕ್ತಿ ವಿಶಿಷ್ಟ ವಿನ್ಯಾಸವಂತೂ ಆಗುತ್ತದೆ. ಅದನ್ನೇ ಅನೇಕರು ಅನುಸರಿಸಿದರೆ ಪರಂಪರೆಯೂ ಆಗುತ್ತದೆ. ಸಾಹಿತ್ಯದ ಈ ನಿದರ್ಶನವನ್ನೇ ನಾನು ‘ಬ್ರಿಜ್ ಸಿನಿಮಾ’ ಕಲ್ಪನೆಗೂ ಅನ್ವಯಿಸಬಯಸುತ್ತೇನೆ. ಬ್ರಿಜ್ ಸಿನಿಮಾ ಎನ್ನುವುದು ಅನುಕೂಲಕ್ಕಾಗಿ ಕೊಟ್ಟ ಅವಸರದ ಹೆಸರು. ಎರಡು ವಲಯದ ಒಳಿತುಗಳನ್ನು ಯಾಂತ್ರಿಕವಾಗಿ ಸ್ವೀಕರಿಸುವುದು ಸಹ ಸಿದ್ಧಸೂತ್ರವಾಗುತ್ತದೆ. ಸಿದ್ಧ ಸೂತ್ರಗಳನ್ನು ಸದಾ ಮೀರುವ ಚಲನಶೀಲತೆ, ನಮ್ಮ ಸಿನಿಮಾರಂಗಕ್ಕೆ ಬೇಕಾಗಿದೆ. ಇದು ನಿರಂತರ ಪ್ರಯೋಗ ಶೋಧದಿಂದ ಸಾಧ್ಯವಾಗುತ್ತದೆ. ಮುಖ್ಯವಾಹಿನಿ ಹಾಗೂ ಪರ್ಯಾಯ ಸಿನಿಮಾ ಕ್ಷೇತ್ರಗಳೆರಡೂ ಈ ಅಂಶವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಕೃತಿಯೊಂದನ್ನು ಕಟ್ಟುವ ಮನೋಧರ್ಮಕ್ಕೆ ಇದು ತಾನಾಗಿಯೇ ಅರ್ಥವಾಗುತ್ತದೆ.

ಆದರೆ, ನಮ್ಮ ಸನ್ನಿವೇಶವು ಬೇರೊಂದೇ ಕತೆಯನ್ನು ಹೇಳುತ್ತಿದೆ. ನಮ್ಮ ಒಟ್ಟು ಸಾಮಾಜಿಕ ಸಂದರ್ಭ ಕಲುಷಿತಗೊಂಡಾಗ ಅದರ ಪ್ರಭಾವ ಸಿನಿಮಾದಿ ಕಲೆಗಳ ಮೇಲೂ ಆಗುತ್ತದೆ. ಸಮಾಜದಲ್ಲಿ ಮುಂಚೂಣಿಗೆ ಬಂದ ಅಥವಾ ಬಂದಿವೆಯೆಂದು ಭಾವಿಸಲಾದ ವರ್ತನಾ ವಿನ್ಯಾಸಗಳು ಸಿನಿಮಾದಂತಹ ‘ಸಮೂಹ ಮಾಧ್ಯಮ’ವನ್ನು ಬೇಗ ಪ್ರವೇಶಿಸುತ್ತವೆ. ಅಥವಾ ಸಿನಿಮೋದ್ಯಮಿಗಳು ಬೇಗ ಸ್ವೀಕರಿಸುತ್ತಾರೆ. ಸಮಾಜದಲ್ಲಿ ಸಂಭವಿಸುತ್ತಿರುವ ‘ವಿಕೃತಿ’ಗಳು ಸಿನಿಮಾಕ್ಕೆ ವೈಭವೀಕೃತ ವಸ್ತುವಾಗತೊಡಗುತ್ತವೆ. ಸಿನಿಮಾವು ‘ಮಾಧ್ಯಮ’ಕ್ಕಿಂತ ಹೆಚ್ಚಾಗಿ ‘ಉದ್ಯಮ’ವಾಗಿರುವುದು ಇದಕ್ಕೆ ಒಂದು ಕಾರಣ. ಉದ್ಯಮವಾಗಿದ್ದರೂ ಮಾಧ್ಯಮದ ಮಮತೆ ಯನ್ನು ಉಳಿಸಿಕೊಂಡ ಉದ್ಯಮಿಗಳಿಂದ ಕಡೇ ಪಕ್ಷ ಸದಭಿರುಚಿಯನ್ನು ನಿರೀಕ್ಷಿಸಬಹುದು. ಮಾಧ್ಯಮ ಎನ್ನುವುದನ್ನೇ ನಿರಾಕರಿಸಿ, ಇದು ಉದ್ಯಮ ಮಾತ್ರ ಎಂದು ಭಾವಿಸಿದ ಲಾಭಕೋರತನ ಮತ್ತು ಜೂಜುಕೋರತನದಿಂದ ವಿಕೃತಿಗಳ ವೈಭವೀಕರಣವನ್ನಷ್ಟೇ ನಿರೀಕ್ಷಿಸಬಹುದು. ಕೆಲವರು ವಿಕೃತಿಗಳನ್ನೂ ನವಿರಾಗಿ ಹೇಳಿ ರೂಕ್ಷತೆಯಿಂದ ದೂರ ಇರುವ ಪ್ರಯತ್ನ ಮಾಡುವು ದುಂಟು. ಅದೇನೇ ಇರಲಿ, ಸಿನಿಮಾ ಕೇವಲ ಉದ್ಯಮವಲ್ಲ. ನೂರಕ್ಕೆ ನೂರು ಮಾಧ್ಯಮವೂ ಅಲ್ಲ. ಮೂಲತಃ ಮಾಧ್ಯಮವಾಗಿದ್ದ ಸಿನಿಮಾ ಈಗ ಉದ್ಯಮವಾಗಿ ರೂಪಾಂತರಗೊಂಡಿದೆ. ಚಿಕ್ಕ ಪ್ರಮಾಣವೊ ದೊಡ್ಡ ಪ್ರಮಾಣವೊ ಬಂಡವಾಳವಿಲ್ಲದೆ ಸಿನಿಮಾ ಸೃಷ್ಟಿ ಸಾಧ್ಯವಿಲ್ಲ. ಕೆಲವರು ಮಾಧ್ಯಮದ ನೆಲೆಗಳನ್ನು ಪ್ರಧಾನವೆಂದು ತಿಳಿಯುತ್ತಾರೆ. ಅನೇಕರು ಉದ್ಯಮದ ನೆಲೆಗಳು ಮಾತ್ರ ಪ್ರಧಾನ ಎಂದು ಬಂಡವಾಳ ಹೂಡುತ್ತಾರೆ. ಸಾಹಿತ್ಯ, ಚಿತ್ರಕಲೆ, ಸಂಗೀತ ಮುಂತಾದ ಕಲೆಗಳಿಗೆ ಸೃಷ್ಟಿಯ ಸಂದರ್ಭದಲ್ಲಿ ಬಂಡವಾಳ ಬೇಕಿಲ್ಲ. ಆನಂತರ ಅಲ್ಪಪ್ರಮಾಣದ ಹಣಬೇಕು. ಆದರೆ ಚಿಕ್ಕ ಸಿನಿಮಾಕ್ಕೂ ಸೃಷ್ಟಿಯ ಸಂದರ್ಭದಲ್ಲೇ ಲಕ್ಷಾಂತರ ಹಣಬೇಕು. ಸಿನಿಮಾ ಎಂಬ ಮಾಧ್ಯಮದೊಳಗೇ ಉದ್ಯಮದ ಶಕ್ತಿ ಸೇರಿಕೊಂಡಿದೆ. ಸಮತೋಲನಗೊಳಿಸದೆ ಹೋದರೆ ಮಾಧ್ಯಮ ಮತ್ತು ಉದ್ಯಮ ಎರಡೂ ವಿಪರೀತದ ಹಾದಿ ಹಿಡಿಯುತ್ತವೆ. ಇದನ್ನು ಮನಗಂಡೇ ನಾನು ಎಂಬತ್ತರ ದಶಕದಲ್ಲೇ ಸಿನಿಮಾ ಎನ್ನುವುದು ಒಂದು ‘ಕಲೋದ್ಯಮ’ ಎಂದು ಕರೆದೆ, ವಿವರಿಸಿ ಲೇಖನ ಬರೆದೆ.

ಒಂದು ಅಂಶವನ್ನು ನೆನಪಿಡಬೇಕು. ಮಾಧ್ಯಮಕ್ಕೆ ‘ಸಂವೇದನೆ’ ಮುಖ್ಯ. ಉದ್ಯಮಕ್ಕೆ ‘ಸಂಪಾದನೆ’ ಮುಖ್ಯ. ಕಲೋದ್ಯಮಕ್ಕೆ? ಸಮತೋಲನ ಮುಖ್ಯ. ವಾಸ್ತವದ ಅರಿವಿನಲ್ಲಿ ಹುಟ್ಟುವ ಅಂತಃಶಕ್ತಿ ಮುಖ್ಯ. ಆಗ ಮುಖ್ಯವಾಹಿನಿ ಹಾಗೂ ಪರ್ಯಾಯ ಸಿನಿಮಾ ವಲಯ ದೊಳಗೆ ಅವುಗಳದೇ ಆದ ಹೊಸ ಆವಿಷ್ಕಾರಗಳು ಸಾಧ್ಯ. ಇಂಥ ಕೆಲವಾದರೂ ಪ್ರಯತ್ನಗಳು ನಡೆಯುತ್ತಿವೆಯೆನ್ನುವುದು ಸಮಾಧಾನದ ಸಂಗತಿಯಾದರೂ ವೈಪರೀತ್ಯಗಳು ನುಂಗಿ ನೊಣೆದು ಮುನ್ನೆಲೆಯಲ್ಲಿ ವಿಜೃಂಭಿಸುತ್ತವೆಯೆಂಬ ವಿಷಾದ ನನ್ನನ್ನು ಕಾಡಿಸುತ್ತಿದೆ. ಆದರೇನು ಮಾಡುವುದು? ವೈಪರೀತ್ಯಗಳ ಒಡಲಲ್ಲೇ ಹೊಸ ಹುಟ್ಟು ಸಾಧ್ಯ. ಕನ್ನಡವನ್ನೂ ಒಳಗೊಂಡಂತೆ ಭಾರತೀಯ ಸಿನಿಮಾ ರಂಗದಲ್ಲಿ ವೈಪರೀತ್ಯವನ್ನು ಮೀರಿದ ಪ್ರಯೋಗಾತ್ಮಕ ಹುಟ್ಟುಗಳು ಸಂಭವಿಸುತ್ತ ಬಂದಿವೆ. ಚರಿತ್ರೆಗೊಂದು ಚಲನಶೀಲತೆ ತಂದಿವೆ. ಈ ಚಲನಶೀಲತೆಯನ್ನು ವಿಸ್ತರಿಸುತ್ತಾ ಹೋಗಬೇಕು. ಹೊಸ ಹುಟ್ಟುಗಳನ್ನು ಹತ್ತಿಕ್ಕುವ ಉದ್ದೇಶಪೂರ್ವಕ ಗರ್ಭಪಾತಗಳನ್ನು ತಡೆಯ ಬೇಕು.

(ವಿನಂತಿ : ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಹೆಸರುಗಳು ಸಾಂಕೇತಿಕ. ಎಷ್ಟೋ ಸಾಧಕರ ಹೆಸರನ್ನು ಪಟ್ಟಿ ಮಾಡಬಹುದಾದರೂ ಈ ಲೇಖನದ ಮಿತಿಗದು ಸಾಧ್ಯವಿಲ್ಲ. ಅನ್ಯಥಾ ಭಾವಿಸಬಾರದಾಗಿ ವಿನಂತಿ.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯೋದಯ
Next post ಬೀಡಾಡಿ ಬುದ್ಧ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…