ಧ್ಯಾನವಿಲ್ಲ ತಪವಿಲ್ಲ
ಗಾಢನಿದ್ದೆಯಲಿ ಮೈಮರೆತವ
ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ
ನೇರ ಈ ಮರ್ತ್ಯಲೋಕಕ್ಕೆ ಬಿದ್ದು
ನೆತ್ತಿಯೊಡೆದು ಬಾಯ್ಬಿಟ್ಟು
ಈ ನೆಲದಂತರಾಳಕ್ಕೂ
ಆ ಅನೂಹ್ಯ ಲೋಕಕ್ಕೂ
ನಡುವೆ ನಿಸ್ತಂತುವಿನೆಳೆ
*
ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ
ಕರುಳಿನಾಳಕ್ಕಿಳಿದು ಆವರಿಸಿಬಿಡುವ
ಗಾರುಡಿಗ ನೋಟಕ್ಕೆ
ಸುತ್ತಲ ಚರಾಚರಗಳ ತಿಮಿರು
ಪಟಪಟನೆ ಉದುರಿ
ಅವನ ಪಾದಕಭ್ಯಂಜನ.
*
ಪಾದ ನೆಲಕ್ಕೂರಿ ಬೇರು ಬಿಟ್ಟು
ಮರವೇ ತಾನಾಗಿದ್ದು ಕಣ್ಕಟ್ಟು!
ಮೈತುಂಬಾ ಸುಮ್ಮನಾದರೂ
ಸಾವಿರಾರು ಹಕ್ಕಿಗೂಡು.
ಅಂಟಿಯೂ ಅಂಟಿಲ್ಲದ
ಹಗುರಾತಿ ಹಗುರ ನೂಲಿನೆಳೆಗಳ
ಮೇಲ್ಮೇಲಿನ ತೇಲಾಟದಲ್ಲೇ
ಥಟ್ಟನೆಲ್ಲರ ಕಣ್ಣು ತಪ್ಪಿಸಿ
ವೋಮದಾಚೆಯ ನಂಟು.
ಲೋಕದ ಚೂರಿಯಿರಿತಕ್ಕೆ
ಕರುಳ ತುಂಬಾ ಗುನ್ನ.
ಗಾಯಗಳನು ಹೂಗಳಂತೆ ಕಿತ್ತು
ಬೊಗಸೆ ತುಂಬಾ ತುಂಬಿ
‘ಉಫ್’ ಎಂದು ಊದಿದ್ದಕ್ಕೆ
ಆಕಾಶದ ತಾರೆಗಳಾಗಿ ಹೋಗುವುದೇ?
*
ಒಣಗಿ ಬಿದ್ದ ಎಲೆಗಳ ಮೇಲೆ
ಊರಲೋ ಬೇಡವೋ ಎನ್ನುತ್ತಲೇ
ಭಾರವಿಲ್ಲದ ಹೆಜ್ಜೆ ಸೋಕಿಸಿದರೂ
ಸಣ್ಣ ಕಂಪನಕ್ಕೇ ನೊಂದು
ಮೆಲ್ಲಗೆ ಬಾಗಿ ಒಣಗಿದೆಲೆ ಎತ್ತಿ
ಎಲ್ಲಿ ಯಾವ ಮೂಲೆಯಲಿ
ಒಂದಿಷ್ಟಾದರೂ ಜೀವ ಮುದುಡಿ ಹೋಯಿತೋ….
ಆತಂಕದ ಎದೆಬಡಿತ.
ಹೀಗೇ… ಹೀಗೇ…
*****