ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ.
ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸಕ್ಕಂಜಿಯೇ ಹಕ್ಕಿಗಳೆಲ್ಲ ಹಾರಿಹೋದವು, ಆದರೆ ಒಂದು ಗುಬ್ದಿ ಮಾತ್ರ ಹಾರಿ ಹೋಗದೆ, ಒಂದು ತೆನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಹೊಲದವನ ಬಾಯ ಬೆದರಿಕೆಗಾಗಲಿ, ಬಾರಕೋಲಿನ ಸಪ್ಪಳಕ್ಕಾಗಲಿ ಅದು ಮಿಸುಕಲಿಲ್ಲ; ಕವಣೆಗಲ್ಲಿಗೂ ಹಣಿಯಲಿಲ್ಲ. ಅಟ್ಟದಿಂದಿಳಿದು ಕಾವಲಿಗನು ಆ ಗುಬ್ದಿ ಕುಳಿತಲ್ಲಿಗೆ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ತಂದು, ಅದರ ಕಾಲಿಗೆ ದಾರಕಟ್ಟಿ ಅಟ್ಟದ ಕಾಲಿಗೆ
ಬಿಗಿದನು. ಆದರೂ ಅದು ಪಕ್ಕ ಬಿಚ್ಚಿ ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು ಕಾವಲಿಗನು ಕೇಳಿದನು – “ಸತ್ತೇಯೇನು ಗುಬ್ಬಿ?”
ಆ ಗುಬ್ದಿ ಹೇಳಿತು –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚಗೀ ಕಾಲಿನಲ್ಲಿ
ಜೋಕಾಲಿ ಆಡಹತ್ತಿದ್ದೇನೆ.
ನಾನೇಕೆ ಸಾಯುವೆನು ?”
ಹೊಲದವನು ಅದನ್ನು ಬಿಚ್ಚಿ ಕೊಂಡೊಯ್ದು ಹರಿಯುವ ಹಳ್ಳದಲ್ಲಿ ಒಗೆದನು, ಆಗಲೂ ಅದು ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು – “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳಕ್ಕೆ ಬಂದು ಈಸಾಡುತ್ತಿದ್ದೇನೆ.
ನಾನೇಕೆ ಸಾಯುವೆನು ?”
ಒಕ್ಕಲಿಗನು ಆ ಗುಬ್ಬಿಯನ್ನು ಊರಲ್ಲಿ ತೆಗೆದುಕೊಂಡು ಹೋಗಿ, ಗಾಣಿಗನ ಗಾಣದ ಗಾಲಿಯಲ್ಲಿ ಹಾಕಿದನು. ಮತ್ತೆಯೂ ಅದು ಫಡಫಡಿಸಿತು. ಕೇಳಿದನು-
“ಸತ್ತೆಯೇನು ಗುಬ್ಬಿ ?”
ತನ್ನ ದಾಟಿಯಲ್ಲಿಯೇ ಗುಬ್ಬಿ ಮರುನುಡಿಯಿತು.
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಿನಲ್ಲಿ ಈಸಾಡಿ
ಈಗ ಎಣ್ಣೆ ಹೂಸಿಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”
ಹೊಲದವನು ಗುಬ್ದಿಯನ್ನು ಮನೆಗೊಯ್ದು ಒಲೆಯಮೇಲಿನ ಸಳಮಳಿಸುವ ನೀರಿನ ಭಾಂಡೆಯಲ್ಲಿ ಚೆಲ್ಲಿದನು. ಅಲ್ಲಿಯೂ ಗುಬ್ಬಿಯ ಫಡಫಡಾಟ ನಡೆದೇ ಇತ್ತು. “ಸತ್ತೆಯಾ ಗುಬ್ದಿ” ಎಂದು ಕೇಳಿದನು. ಗುಬ್ದಿ ಹೇಳಿತು –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಇಲ್ಲಿ ಬಿಸಿಬಿಸಿ ನೀರಿನಿಂದ
ಎರಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”
ಗುಬ್ಬಿಯನ್ನು ಹೆಂಡತಿಯ ಕೈಗಿತ್ತು, ಇದನ್ನು ಕೊಯ್ದು ಅಡಿಗೆ ಮಾಡಲು ಹೊಲದವನು ತಿಳಿಸಿದನು. ಹೆಂಡತಿಯು ಮರುಕ್ಷಣದಲ್ಲಿ ಅಡಿಗೆಮಾಡಿ ಗಂಡನಿಗೆ ಉಣಬಡಿಸಿದಳು. ಉಂಡ ಬಳಿಕ ಹೊಟ್ಟೆಯಲ್ಲಿ ಫಡಫಡಿಸುತ್ತಿರುವ ಗುಬ್ಬಿಯನ್ನು ಕುರಿತು ಗಂಡನು ಕೇಳಿದನು –
“ಸತ್ತೆಯಾ ಗುಬ್ಬಿ ?”
ಮರುಕ್ಷಣದಲ್ಲಿಯೇ ಒಕ್ಕಲಿಗನು ಕಾರಿಕೊಂಡನು. ಅದರಲ್ಲಿ ಗುಬ್ಬಿ ಕಾಣಿಸಿ ಕೊಂಡಿತು. ಮತ್ತೆ ಫಡಫಡಿಸುತ್ತ –
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದ ಕಾಲಿಗೆ ಜೋಕಾಲಿ ಆಡಿ
ಹಳ್ಳದ ತಿಳಿ ನೀರಿನಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಬಿಸಿಬಿಸಿ ನೀರಿನಿಂದ ಎರಕೊಂಡು
ಪಲ್ಲೆ ಮಾಡಿಸಿ ಉಂಡುಗಿಂಡು
ಹೊರಟಿದ್ದೇನೆ ನೋಡು.
ನಾನೇಕೆ ಸಾಯುವೆನು ?”
ಎನ್ನುತ್ತ ಬುರ್ರನೆ ಹಾರಿಹೋಯಿತು ಸಾವಿಲ್ಲದ ಗುಬ್ಬಿ.
*****