“ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ?
ಪರದಾಟ ಸಾಕಿನ್ನು, ಮಹರಾಯ!
ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,-
ನಿನ್ನ ಮನೆಯಾಳಲ್ಲ ಸ್ವಾಮಿ !”
ಎರಡರಲಿ ಒಂದೇನೊ ಆಳಾಗಿ ಇರಬೇಕು,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಆ ಆಳು ಗಂಡಿರಲೆ? ಹೆಣ್ಣಿರಲೆ?-ಹೇಳಿಬಿಡು,
ನನ್ನ ಕೈಹಿಡಿದ ರನ್ನಾ!
“ಗಂಡಯ್ಯ, ಇನ್ನೂ ಇಹುದೆ ಈ ಹಳೆ ಬಿಂಕ
ಅರಸುತನ, ಆಳಬಾಳೆಂಬ?
ನಾ ನಿನ್ನ ತೊರೆದೇನು! ಹಿಡಿ ನಿನ್ನ ಕಡೆ ಸುಂಕ;
ಕೈಮುಗಿದೆ ;-ಇರಲಿ ಆ ಜಂಬ!”
ನೀ ತೊರೆಯೆ ನಾ ಕೆಟ್ಟೆ, ನೀರಿರದ ಗೋಕಟ್ಟೆ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಬರುವುದೆಲ್ಲಾ ಬರಲಿ, ಗಂಡು ನಾನಂಜುವೆನೆ,
ನನ್ನ ಕೈಹಿಡಿದ ರನ್ನಾ?
“ಅಯ್ಯೋ! ನನ್ನೆದೆ ಮುತ್ತೆ ನೀನೊಡೆದು ಹೋಗುವೆಯ?-
ಮಿತ್ತು ಹತ್ತಿರವಾಯ್ತೆ ನನಗೆ?
ಮಣ್ಣಿನಲಿ ಕುಳಿ ತೆಗೆದು ನೀನೆನ್ನನಿಡುವಾಗ,
ಗಂಡಯ್ಯ, ಒದಗೀತೆ ಸಹನೆ!”
ದೇವರಲಿ ನನಗಿವೆ ಅಪಾರ ನಂಬಿಕೆ ಭಕ್ತಿ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಒದಗೀತು ನನಗಂಥ ಅಳಲ ದಾಟುವ ಶಕ್ತಿ
ನನ್ನ ಕೈಹಿಡಿದ ರನ್ನಾ
“ಅಂತಾದರಳಿವಿನ ಮಹಾ ಮೌನದೊಳಗಿಂದ
ನಾ ನಿನ್ನ ಶಾಂತಿಯನು ಕಾಡ ಬಹೆನು;
ನಿದ್ದೆಯಲಿ ಮುಳುಗಿರುವ ನಿನ್ನ ಹಾಸಿನ ಸುತ್ತ
ಬೊಮ್ಮರಕ್ಕಸಗಳನು ಕುಣಿಸ ಬಹೆನು.”
ನಾನಾಗ ನಿನ್ನಂಥ ಸತಿಯ ಕೈಹಿಡಿಯುವೆನು
ನನ್ನ ಚಿನ್ನಾ ಓ ನನ್ನ ಚಿನ್ನಾ!
ಅವಳ ಕಣ್ಣಿಗೆ ಹೆದರಿ ನರಕವೇ ಓಡುವುದು
ನನ್ನ ಚಿನ್ನಾ, ಓ ನನ್ನ ಚಿನ್ನಾ!
-Robert Burns: My Spouse Nancy
*****