ಕರ್ಮದ ಬಾಳಿಗೆ ಮಣ್ಣಿಟ್ಟು
ನೋಡಿದೆ ಜೀವದ ಒಳಗುಟ್ಟು!
ಧರ್ಮಕೆ ಕಸಿಯನು ನಾ ಮಾಡಿ
ತಿಂದೆನೊ ಪಾಪದ ಹಣ್ಣು ಇಡಿ;
ಮೂಡಲ ಸೂರ್ಯನು ಅಲ್ಲಿರನು
ಮನುಜನು ಬುದ್ದಿಯ ತಾಳಿರನು!
ಗಂಟೆಯ ಮುಳ್ಳದು ತಿರುಗಾಡಿ
ಲೋಕಕೆ ಕಲಿಪುದು ಬಲುಮೋಡಿ.
ಸುತ್ತಲು ಮಂಜಿನ ನೆನೆಹನಿ
ಕಣ್ಣಲಿ ಪಾಡಿನ ಮಂಕು ಹನಿ!
ಹೊಂಡವೆ ನೀರಿನ ಸದ್ಯನೆಲೆ,
ಲೋಕ ದಾರಿದ್ರ್‍ಯದ ಕಟ್ಟುಬಲೆ;
ಜೀವನ ಜಿದ್ದಿನ ಜೀಕಲಿನ
ಆಶ್ರಯವಾಗಿದೆ-ಅದೆ ಮಲಿನ!
ಪಾಪಿಯ ನಗುವಿನ ಕಹಿ ಗೆಲುವು
ಯಾರ ಹೃದಯಕೆ ಎಸೆದುಗುಳು?
ಪುಷ್ಪದ ಎಸಳಿನ ಆ ಸೊಗವು
ಮೋಹಿನಿ ತೋರಿದ ಆ ಸೊಬಗು-
ಅಂಗೈ ತೋರಿದ ಭಾಗ್ಯವದು
ಎಲ್ಲಿವರೆಗದು- ಅದೆ ನೆನವು!
ಸೂಜಿಯು ಹೊರುವುದು ದಾರವನು
ಇರುವೆಯು ಹೊರುವುದು ಕಾಳನ್ನು,
ಮರಗಳು ಹೊರುವುವು ಹಣ್ಣನ್ನು
ಮಾನವ ಹೊರುವನು ಪಾಪವನು!
ನಾಯಿಗೆ ನಾಯ್ಗಳು ವೈರಿಗಳು,
ಜನಗಳು ಜನಕೆ ಮೊನೆಮುಳ್ಳು!
ರಕ್ತದ ದಾಹವೆ ಹೃದಯದಲು,
ಕಾಮಿಯ ವಾಣಿಯ ಉಸುರಿನಲು;
ಸತ್ತರು ಮರೆಯರು ಲೋಭವನು,
ಮತ್ಸರ ಬಾಳಿನ ದರ್ಪವನು,
ಮೀನಿಗೆ ಮೀನೇ ಸವಿಯೂಟ
ಸೋದರ ವಧೆಯೇ ನರನಾಟ!
ವಿದ್ಯೆಯು ದ್ರೋಹಿಯ ಮಂಕಾಟ,
ಬಡವನ ವಂಚಿಪ ಹುಸಿಮಾಟ!
ತಿನ್ನುವ ಕಾಳದು ಕರುಳಿನಲಿ
ಉರಳ್ವದು ಮೋಹದ ರಾಟೆಯಲಿ.
ಅದರಿಂ ಸೂರ್ಯನು ಚಂದ್ರನನು
ವಂಚಿಪ ಬಾಳಿನ ತಿರುಳನ್ನು,
ನೋಡುತ ಪೋಗ್ವುದೆ-ಈ ಮಾಯ,
ಮಾಯ ಪ್ರಪಂಚದ ಅಧಿಮಾಯ!
*****