ಬೈಲು ಬಯಲಲ್ಲಿ ಒಂದು ಮೃಗವು ಹುಟ್ಟಿತ್ತು.
ಅದ ಕಂಡಹೆನೆಂಬರಿಗೆ ಕಾಣಬಾರದು.
ಹೆಳಿಹೆನೆಂಬರಿಗೆ ಹೇಳಬಾರದು.
ಅದು ಚಿದ್ರೂಪ ಚಿನ್ಮಯವು.
ಅದು ಗೊತ್ತ ಮೆಟ್ಟಿ ಆಡುವದನರಿಯದೆ,
ಕತ್ತಲೆಯಲ್ಲಿ ಮುಳುಗಿ ಕಾಮನ
ಬಾಧೆಗೆ ಶಿಲ್ಕಿ ಎತ್ತಲೆಂದರಿಯದೆ,
ಭವಬಂದನದಲ್ಲಿ ಮುಳುಗಿ
ಕಾಲನ ಬಾಧೆಗೊಳಗಾಗಿ,
ಸತ್ತುಹುಟ್ಟುವ ಮನುಜರ
ಮತ್ತೆ ಶಿವಶರಣರ ಕೂಡಿ,
ತತ್ವವ ಬಲ್ಲೆವೆಂದು, ತರ್ಕಕ್ಕೆ ಬಾಹರು.
ಇದು ಹುಸಿ. ನಮ್ಮ ಶರಣರು ಇದ ಮೆಚ್ಚರು.
ತತ್ವವೆಂಬುದನೆ ಮೆಟ್ಟಿ ಮಿಥ್ಯವ
ನುಡಿವರ ತಮ್ಮ ಪುತ್ರರೆಂದು ಭಾವಿಸಿ,
ಸತ್ತುಹುಟ್ಟುವರ ನೊತ್ತರಿಸಿ,
ನಿಶ್ಚಿಂತದಲ್ಲಿ ನಿಜವ ನೆಮ್ಮಿ
ಬಟ್ಟ ಬಯಲೊಳಗಣ ಮೃಗದ ಗೊತ್ತ ಮೆಟ್ಟಿ,
ಬಚ್ಚ ಬರಿಯ ಬೆಳಗಿನೊಳಗಾಡುವ ಶರಣರ,
ಈ ಸತ್ತು ಮೆಟ್ಟಿ ಹುಳಿಸಿಕೊಂಬ,
ಮಿಥ್ಯವಾದಿಗಳೆತ್ತ ಬಲ್ಲರು ನಿಮ್ಮ ನೆಲೆಯ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ