ಪ್ರಿಯ ಸಖಿ,
ಅದೊಂದು ವಿಜ್ಞಾನಿಗಳ ಗಹನವಾದ ಸಭೆ, ಪ್ರತಿಯೊಬ್ಬ ವಿಜ್ಞಾನಿಯೂ ಪ್ರಪಂಚದಲ್ಲೆಲ್ಲಾ ಮಾನವನೇ ಅತ್ಯಂತ ಶ್ರೇಷ್ಠ ಜೀವಿ. ಅವನು ಎಲ್ಲ ಪ್ರಾಣಿಗಳನ್ನೂ ತನ್ನ ಅಧೀನದಲ್ಲಿರಿಸಿಕೊಂಡು ಈ ಭೂಮಿಯನ್ನೇ ಆಳಬಲ್ಲ ಎಂಬ ವಿಷಯವನ್ನು ಕುರಿತು ವಿಷಯ ಮಂಡಿಸುತ್ತಿದ್ದಾರೆ.
ಪ್ರಪಂಚದಲ್ಲೆಲ್ಲಾ ಅಳಬಲ್ಲ, ನಗಬಲ್ಲ, ಯೋಚಿಸಬಲ್ಲ, ವಿವೇಚಿಸಬಲ್ಲ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನೇ. ಅವನು ಸಿಂಹ, ಹುಲಿ, ಆನೆ, ಕರಡಿ, ಚಿರತೆ, ನರಿ, ತೋಳದಂತಹಾ ಪ್ರಾಣಿಗಳನ್ನು ಪಳಗಿಸಿ ತನ್ನ ಅಡಿಯಾಳಾಗಿ ಮಾಡಿಕೊಳ್ಳಬಲ್ಲ. ಜಿಂಕೆ, ಕುದುರೆ, ಹಸು, ಎಮ್ಮೆ, ಕುರಿ, ತೋಳಗಳಂತಹ ಪ್ರಾಣಿಗಳನ್ನು ಸಾಕಿ ತನ್ನಿಷ್ಟದಂತೆ ಉಪಯೋಗ ಪಡೆಯಬಲ್ಲ. ಪ್ರಪಂಚದ ಎಲ್ಲ ಪ್ರಾಣಿಗಳ ಸ್ವಭಾವವನ್ನೂ ವಿಜ್ಞಾನದ ಮುಖಾಂತರ ತಿಳಿದುಕೊಂಡಿರುವುದರಿಂದ ಯಾವ ಪ್ರಾಣಿಯನ್ನೇ ಆಗಲಿ ಹತೋಟಿಯಲ್ಲಿಡುವುದು ಮಾನವನಿಗೆ ಕಷ್ಟವೇ ಅಲ್ಲ. ಆದ್ದರಿಂದಲೇ ಜಗತ್ತಿನಲ್ಲೇ ಸರ್ವಶ್ರೇಷ್ಠವಾದ, ಬಲಿಷ್ಟವಾದ ಪ್ರಾಣಿ ಮಾನವನೇ ಇತ್ಯಾದಿ ವಿಷಯಗಳನ್ನು ವಿಜ್ಞಾನಿಗಳು ಚರ್ಚೆಯ ಮುಖಾಂತರ ಸಾಬೀತು ಪಡಿಸುತ್ತಿದ್ದಾರೆ.
ಇವರ ವಾದವನ್ನೆಲ್ಲಾ ಈ ವಿಜ್ಞಾನಿಗಳ ಗುಂಪಿನ ಅತ್ಯಂತ ಹಿರಿಯ ಹಾಗೂ ಪ್ರಮುಖ ವಿಜ್ಞಾನಿ ಕೇಳಿಸಿಕೊಳ್ಳುತ್ತಿದ್ದಾನೆ. ಆದರೆ ಅವನಿಗೆ ಆ ಕಡೆಗೆ ಏಕಾಗ್ರತೆ ಇಲ್ಲ. ಸಭೆ ಪ್ರಾರಂಭವಾದಾಗಿನಿಂದ ಇವನಿಗೆ ತನ್ನ ಶರಟಿನೊಳಗೆ ತುರಿಕೆ ಪ್ರಾರಂಭವಾಗಿದೆ. ಯಾವುದೋ ಕ್ರಿಮಿ ಇವನ ಮೈಮೇಲೆ ಓಡಾಡುತ್ತಾ ಕಚ್ಚುತ್ತಿರುವುದು ಸ್ಪಷ್ಟವಾಗಿದೆ. ಆದರೆ ಅದೊಂದು ಗಂಭೀರವಾದ ಸಭೆಯಾದ್ದರಿಂದ ಆಡಲಾಗದೇ, ಅನುಭವಿಸಲಾಗದೇ ಕೂತ ಜಾಗದಲ್ಲೇ ಮಿಸುಕಾಡುತ್ತಾ ಕುಳಿತಿದ್ದಾನೆ. ಶರಟಿನ ಮೇಲೆ ಯಾರಿಗೂ ಗೊತ್ತಾಗದಂತೆ ಉಜ್ಜಿಕೊಳ್ಳುತ್ತಿದ್ದಾನೆ. ಕೆರೆದುಕೊಳ್ಳುತ್ತಿದ್ದಾನೆ. ಯಾರಾದರೂ ಇತ್ತ ಗಮನಹರಿಸಿದರೆ ಪೆಚ್ಚುನಗೆ ನಕ್ಕು ಕೈ ಹಿಂದೆಳೆದುಕೊಳ್ಳುತ್ತಾನೆ.
ಸುಮಾರು ಹೊತ್ತಿನಿಂದ ಇವನ ಪರದಾಟ ಹೀಗೇ ಸಾಗಿದೆ. ಚರ್ಚೆ, ವಾದ, ವಿವಾದಗಳು ಮುಗಿಯಲು ಬಂದಿವೆ. ಇನ್ನು ಈ ಪ್ರಮುಖ ವಿಜ್ಞಾನಿ ನಿರ್ಣಯವನ್ನು ತೆಗೆದುಕೊಂಡು ಒಪ್ಪಿಗೆ ಸೂಚಿಸಿದರೆ ಎಲ್ಲವೂ ಮುಗಿದಂತೆಯೇ. ಇದ್ದಕ್ಕಿದ್ದಂತೆ ಇನ್ನು ತಡೆಯಲಾರದವನಂತೆ ಈ ಹಿರಿಯ ವಿಜ್ಞಾನಿ ತನ್ನ ಶರಟನ್ನು ಬಿಚ್ಚಿದ್ದಾನೆ. ಅಷ್ಟು ಹೊತ್ತಿನಿಂದಲೂ ಇವನನ್ನು ಕಚ್ಚಿ ಹಿಂಸೆ ನೀಡುತ್ತಿರುವ ಪುಟಾಣಿ ಇರುವೆಯನ್ನು ಹುಡುಕಿ ತೆಗದು ಟೇಬಲ್ಲಿನ ಮೇಲೆ ಹರವಿ “ಪ್ರಪಂಚದಲ್ಲಿ ಶ್ರೇಷ್ಠವಾದವನು ಮಾನವನೊಬ್ಬನೇ ಅಲ್ಲ. ನನ್ನಂತಹ ದೊಡ್ಡ ವಿಜ್ಞಾನಿಯನ್ನೂ ಗಂಟೆಗಳಿಂದ ಕಾಡಿಸಿದ ಈ ಯಕಶ್ಚಿತ್ ಇರುವೆಯಂತಾ ಪ್ರಾಣಿ ಕೂಡ ಶ್ರೇಷ್ಠವಾದುದೇ. ಆದ್ದರಿಂದ ಈ ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ತಮ್ಮ ತಮ್ಮ ವಿಶಿಷ್ಟತೆಯಿಂದ ಶ್ರೇಷ್ಠವಾದುದೇ. ಈ ನಮ್ಮ ಇಂದಿನ ಎಲ್ಲ ಚರ್ಚೆ ಹುರುಳಿಲ್ಲದ್ದು ಎಂಬ ನಿರ್ಣಯವನ್ನು ಈ ಸಭೆಗೆ ನೀಡುತ್ತಿದ್ದೇನೆ” ಎಂದು ಘೋಷಿಸಿ ಸಭೆಯಿಂದ ಹೊರನಡೆಡುಬಿಟ್ಟ. ಟೇಬಲ್ಲಿನ ಉದ್ದಗಲಕ್ಕೂ ಹರಿದಾಡುತ್ತಿದ್ದ ಇರುವೆ, ಪೆಚ್ಚಾದ ವಿಜ್ಞಾನಿಗಳ ಮುಖವನ್ನು ನೋಡಿ ಗಹಗಹಿಸಿ ನಗಲಾರಂಭಿಸಿತು.
*****