ಬುದ್ಧ ಮತ್ತು ಕಲಾವಿದ

ಬುದ್ಧ ಮತ್ತು ಕಲಾವಿದ

ಬುದ್ಧನ ಜೀವನ ಕುರಿತಾದ ಹೊಸ ನಾಟಕದ ತಾಲೀಮು ಶುರುವಾಗಿತ್ತು. ನಿರ್ದೇಶಕ, ಸಂಗದೊಡೆಯರು, ಸಹಕಲಾವಿದರು ಆ ನಟನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಯಾಕೆಂದರೆ ಅವನು ಬುದ್ಧನ ಪಾತ್ರವನ್ನು ನಿರ್ವಹಿಸುತ್ತಿದ್ದ.

ಅದ್ಭುತ ಅಭಿನಯಕ್ಕೆ ಹೆಸರಾದ ಕಲಾವಿದ ಅವನು. ರಂಗಭೂಮಿಯ ಬದುಕಿನಲ್ಲಿ ಪ್ರೀತಿ, ಆಸ್ಥೆ ಇರಿಸಿಕೊಂಡವನು. ಪಾತ್ರ ಭಿಕಾರಿಯದೊ, ಬಡವ-ಬಲ್ಲಿದನದೊ, ರಾಜ-ಸೇವಕನದೊ, ಖಳ-ವಿದೂಷಕನದೊ ಯಾವುದೇ ಆಗಿದ್ದರೂ ಕಲಾವಿದ ಅದರಲ್ಲಿ ಪರಕಾಯ ಪ್ರವೇಶ ಮಾಡಿದವನಂತೆ ಜೀವದುಂಬುತ್ತಿದ್ದ. ಜೊತೆಗೆ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಡೈಲಾಗ್ ಸೃಜಿಸಿಕೊಳ್ಳುವ, ಹಾವ-ಭಾವ ಅಭಿವ್ಯಕ್ತಿಸುವ ದಟ್ಟ ಪ್ರತಿಭೆಯಿಂದಾಗಿ ಜನ ಅವನನ್ನು ಅಭಿಜಾತ ಕಲಾವಿದನೆಂದು ಗುರುತಿಸಿದ್ದರು.

ಈ ಅರ್ಹತೆಯ ಆಧಾರದ ಮೇಲೆ ಆ ಕಲಾವಿದನಿಗೆ ಬುದ್ಧನ ಪಾತ್ರ ಸಿಕ್ಕಿತ್ತು. ಅವನ ಎತ್ತರದ ಸ್ಫುರದ್ರೂಪಿ ನಿಲುವು ಕೂಡ ಆ ಪಾತ್ರಕ್ಕೆ ತಕ್ಕಂತಿತ್ತು. ನಾಟಕದ ನಿರ್ದೇಶಕ “ನೀನಿಲ್ಲದೆ ಬುದ್ಧನ ಪಾತ್ರವನ್ನು ಯಾರಿಗೂ ನಿರ್ವಹಿಸಲು ಸಾಧ್ಯವಿಲ್ಲ. ಒಂದಿಷ್ಟು ಕಷ್ಟಪಟ್ಟರೆ ಈ ಪಾತ್ರ ನಿನ್ನನ್ನು ಮೇರು ಕಲಾವಿದನನ್ನಾಗಿ ರೂಪಿಸುವುದು. ಹಾಗೆಯೇ ನಿನ್ನ ಬದುಕಿಗು ಹೊಸದಿಕ್ಕು ಸಿಗುವುದು” ಎಂದು ಹೃದಯದ ಮಾತು ಆಡಿದ್ದ. ಅದರಿಂದ ಹೆಚ್ಚು ಪ್ರೇರಿತನಾದ ಕಲಾವಿದ ಸಂಭಾಷಣೆಗಳನ್ನು ಅತ್ಯುತ್ಸಾಹದಿಂದಲೇ ಮನದಟ್ಟು ಮಾಡಿಕೊಂಡಾಗಿತ್ತು.

ಬುದ್ಧನ ಪಾತ್ರ ನಿರ್ವಹಣೆಯ ವಿಷಯದಲ್ಲಿ ಕಲಾವಿದನಿಗೆ ಅತಿಯಾದ ಆತ್ಮ ವಿಶ್ವಾಸವಿತ್ತು.

ನಾಟಕದ ಅರ್ಧಭಾಗ ಸಿದ್ಧಾರ್ಥನದು. ಉತ್ತರಾರ್ಧ ಬುದ್ಧನ ಅಮೂಲ್ಯ ಬದುಕಿನದು. ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲಾವಿದ ಸಿದ್ಧಾರ್ಥನಾಗಿ ಗೆಲ್ಲುತ್ತ, ಬುದ್ಧನಾಗಿ ಸೋಲುತ್ತಿರುವುದು ಎಲ್ಲರಿಗೂ ಅಚ್ಚರಿ ಅನಿಸತೊಡಗಿತ್ತು. ಆದರೆ ಕಲಾವಿದನಲ್ಲಿ ಬುದ್ಧನನ್ನು ಕಾಣುವ ವಾಂಛೆ ನಿರ್ದೇಶಕನದು. ಅದನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡ ಕಲಾವಿದ ತಾಲೀಮಿನಲ್ಲೂ ಪಾತ್ರದ ವೇಷ-ಭೂಷಣಗಳನ್ನೇ ಧರಿಸಿಕೊಂಡಿದ್ದ. ಆ ಶ್ವೇತ ಬಟ್ಟೆಯಲ್ಲಿ, ಕುಳಿತುಕೊಳ್ಳುವ ಭಂಗಿಯಲ್ಲಿ ಕಲಾವಿದ ನಿಜಕ್ಕೂ ಬುದ್ಧನನ್ನೇ ಹೋಲುತ್ತಿದ್ದ. ಬುದ್ಧ ಹೇಳಿದ ಅಂತರಾಳದ ಎಷ್ಟೋ ಮಾತುಗಳು ಕಲಾವಿದನ ಬಾಯಿಯಿಂದ ಸ್ಫುಟವೂ, ಅನನ್ಯವೂ ಆಗಿ ಹೊರ ಹೊಮ್ಮುತ್ತಿದ್ದವು. ಆದರೆ ಬುದ್ಧನ ಕಣ್ಣುಗಳಲ್ಲಿ ತುಂಬಿದ ಬೆಳಕು ತುಟಿಯಲ್ಲಿ ತುಳುಕಿದ ಮಂದಸ್ಮಿತ ಮಾತ್ರ ಕಲಾವಿದನ ಕಣ್ಣು, ತುಟಿಗಳಲ್ಲಿ ಪ್ರಕಟಗೊಳ್ಳದೆ ಅಲ್ಲಿ ವಿಕಾರ, ವಿಕೃತಗಳೇ ಗೋಚರಿಸತೊಡಗಿದ್ದವು.

“ಕಣ್ಣಲ್ಲಿ ಬೆಳಕು, ತುಟಿಗಳಲ್ಲಿ ಹಾಲುನಗೆ ಬರಲಿ” ನಿರ್ದೇಶಕ ಪದೆಪದೆ ಹೇಳಿದ. ಕಲಾವಿದ ಪಟ್ಟು ಹಿಡಿದು ಅಭಿನಯಿಸಿದ. ಅಭಿನಯಿಸುತ್ತ ಅಭಿನಯಿಸುತ್ತ ಬುದ್ಧನ ಕಣ್ಣ ಬೆಳಕು ನಗುವಿನ ನೈಜತೆಯಿಂದ ಕಲಾವಿದ ದೂರಾಗುತ್ತಲೇ ಹೋದ. ಆತಂಕವೆನಿಸಿತು ನಿರ್ದೇಶಕನಿಗೆ. ಆ ನಡುವೆಯೂ “ಬುದ್ಧನ ಆ ಕಣ್ಣಿನ ಬೆಳಕು, ತುಟಿಯ ಮೇಲಿನ ನಗುವೇ ಮನುಷ್ಯನ ನೋವು ನೀಗಿಸಿದ್ದು, ಕಣ್ಣೀರು ಒರೆಸಿದ್ದು. ಲೋಕದ ಕುರೂಪ ಅಳಿಸಿದ್ದು. ಅಂಥ ಭಾವ ನಿನ್ನ ಕಣ್ಣು, ತುಟಿಗಳಲ್ಲೂ ಬರಲಿ” ಎಂದು ಉತ್ತೇಜಿಸಿದ.

ಮತ್ತೆ ಕಲಾವಿದ ಉತ್ಸುಕನಾಗಿ ನಟಿಸಿದ. ಅದರಲ್ಲಿ ಕ್ರಿಯೆ ಇತ್ತು; ಸತ್ವ ಇರಲಿಲ್ಲ. ಚಡಪಡಿಕೆಯನ್ನು ಹತ್ತಿಕ್ಕಿಕೊಂಡ ನಿರ್ದೇಶಕ “ನೋಟ ವಿಕಾರವೂ, ನಗೆ ವಿಕೃತವೂ ಆಗಿದೆ” ಎಂದು ಮತ್ತೆ ಬುದ್ಧನ ಕಣ್ಣು ಬೆಳಕು, ಮಂದಸ್ಮಿತದ ಬಗ್ಗೆ ಬಣ್ಣಿಸಿ “ಅಂಥ ಜೀವಭಾವ ವ್ಯಕ್ತಪಡಿಸು” ಎಂದು ಒತ್ತಾಯಿಸಿದ. ಅಷ್ಟೂ ಸಾಲದು ಎಂಬಂತೆ ಬುದ್ಧನ ಭಾವಚಿತ್ರ ಮತ್ತು ಚಿಕ್ಕ ಪ್ರತಿಮೆಗಳನ್ನು ತರಿಸಿ ಕಲಾವಿದನಿಗೆ ತೋರಿಸಿದ. ಬುದ್ಧನ ನೋಟ, ಆ ನಗು ಎಂಥ ಅದ್ಭುತಮಯ! ಅದನ್ನು ತಾನು ಅನುಕರಿಸಲೇ ಬೇಕೆಂದುಕೊಂಡ ಕಲಾವಿದ ಎಲ್ಲಿಲ್ಲದ ಚೈತನ್ಯವನ್ನು ದುಡಿಸಿಕೊಳ್ಳಲು ಯತ್ನಿಸಿದ. ಮತ್ತೆ ಅವನ ಕಣ್ಣಲ್ಲಿ ಅದೇ ವಿಕಾರ ನೋಟ, ತುಟಿಯಲ್ಲಿ ವಿಕೃತ ಲಾಸ್ಯ, “ಛೇ ಛೇ….” ಎಂದು ಹತಾಶನಾಗಿ ನುಡಿದು, ತಲೆಗೆ ಕೈ ಹಚ್ಚಿ ಕುಳಿತ ನಿರ್ದೇಶಕ.

ತಳಮಳಿಸಿದ ಕಲಾವಿದ ಆಚೆಗೆ ಹೋಗಿ ಮತ್ತೆ ಮತ್ತೆ ಅನುಭವಿಸಿದ. ಆ ಭಾವಕ್ಕಾಗಿ ಕಾತರಿಸಿದ. “ನನ್ನ ಕಣ್ಣಲ್ಲಿ ಆ ಬೆಳಕು ಬಂತೆ? ತುಟಿಯಲ್ಲಿ ನಗು ಕಂಡಿತೆ?” ಕಲಾವಿದ ಕೇಳುತ್ತಲೇ ಇದ್ದ. ಸಹಕಲಾವಿದರು “ಊಂ ಹೂಂ” ಎನ್ನುತ್ತಿದ್ದರು.

ಜೀವಕೋಶ ಹೊಯ್ದಾಡಿದರೂ ತನ್ನ ಪ್ರಯತ್ನವನ್ನು ಬಿಡಲಿಲ್ಲ ಕಲಾವಿದ. ಸೆಕೆಂಡು, ನಿಮಿಷ, ದಿನ ಎಷ್ಟೋ ಹಗಲು ಕಳೆದವು. ಅವನ ನೋಟದ ವಿಕಾರ ನಗೆಯ ವಿಕೃತೆ ಮಾಸಲಿಲ್ಲ. ತಾನು ನಿಜವಾದ ಕಲಾವಿದ ಹೌದೋ, ಅಲ್ಲವೋ? ಎಂದು ಅನುಮಾನ ಕಾಡಿತು ಅವನಿಗೆ. ಆದರೆ ಮನಸ್ಸು ಮುದುಡಿಸಿಕೊಳ್ಳಲಿಲ್ಲ. ಆ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ತಾನು ಉತ್ಕೃಷ್ಟ ಕಲಾವಿದನೆಂದು ತೋರಿಸಿಕೊಡುವ ಛಲ ಹುಟ್ಟಿಸಿಕೊಂಡ.

ಮತ್ತೆ ಮತ್ತೆ ಅಭಿನಯಿಸಿದ. ಎಷ್ಟು ಸಲಕ್ಕೂ ಅದೇ ವಿಕಾರ ನೋಟ. ವಿಕೃತ ನಗೆ. `ಛೆ’ ಎಂದ. ಬುದ್ಧನ ಕಣ್ಣಿನ ಬೆಳಕಲ್ಲಿ, ತುಟಿಯ ನಗುವಲ್ಲಿ ಇರುವ ರಹಸ್ಯವಾದರೂ ಏನು? ಅಂಥ ನೋಟ, ಅಂಥ ನಗು ಬುದ್ಧನ ಮುಖದಲ್ಲಿ ಜೀವದಳೆಯಲು ಹೇಗೆ ಸಾಧ್ಯವಾಯಿತು?

ಚಿಂತಿಸಿದ ಕಲಾವಿದ. ಆದರೆ ಆಳಕ್ಕಿಳಿಯಲಿಲ್ಲ. ಆಳಕ್ಕಿಳಿದರೆ ಅದೇನೂ ನಿಗೂಢವಲ್ಲ. ಬುದ್ಧನ ಬದುಕು ತೆರೆದಿಟ್ಟ ಪುಸ್ತಕದಂತೆ. ಒಳಗೂ-ಹೊರಗೂ ಒಂದೇ ಬಗೆಯ ಥಳಕು. ಸಿದ್ಧಾರ್ಥ ಭೋಗಾಭಿಲಾಷೆಗಳಿಗೆ ಎಳ್ಳು ನೀರು ಬಿಟ್ಟ ನಿಸ್ವಾರ್ಥ. ಆಳಾಳಕ್ಕಿಳಿದು ಬದುಕಿನ ಹುಡುಕಾಟ ನಡೆಸಿದವನು. ಒಳಕತ್ತಲೆಯನ್ನು ಹೊರದೂಡಿ ಬುದ್ಧನಾದವನು. ಜಗತ್ತಿನ ಬೆಳಕನ್ನು ತನ್ನಾದಾಗಿಸಿಕೊಂಡವನು. ಪೂರ್ತಿ ಬೆಳಕೇ ಆದವನು. ಆಸೆಗೆದ್ದ ಬುದ್ಧ ಕಡಲಾಳ ಮುತ್ತಿನಂತೆ, ತೆಂಗಿನೊಳಗಿನ ಸಿಹಿ ನೀರಿನಂತೆ ಪರಿಶುದ್ಧ. ನೊಂದವರಿಗೆ ಅಮೃತವ ಉಣಿಸಿದವನು.

ಬುದ್ಧನಿಗೆ ತದ್ವಿರುದ್ಧ ಈ ಕಲಾವಿದನ ಬಗೆ. ಅವನುಸಿರುಸಿರಿಗೂ ಆಸೆಗಳು. ಬರಿ ಆಸೆಗಳಲ್ಲ; ದುರಾಸೆಗಳು. ಅದು ಖ್ಯಾತಿಯದು, ಖ್ಯಾತಿಯ ಜೊತೆಗಿನ ದುಡ್ಡಿನದು, ದುಡ್ಡಿನೊಂದಿಗಿನ ತೆವಲಿನದು ಅದಕ್ಕೆ ಅವನು ನಂಬಿಗಸ್ತ ಮನುಷ್ಯರನ್ನು ವಂಚಿಸಿದ್ದು, ಪ್ರೀತಿಸಿದ ಹೆಣ್ಣುಗಳನ್ನು ಶೋಷಿಸಿದ್ದು, ಸಾವು ನೋವಿನ ಕಕ್ಷೆಗೆ ತಳ್ಳಿದ್ದು, ಅದೇ ಅವನ ವಿಕಾರ ನೋಟಕ್ಕೂ, ವಿಕೃತ ನಗೆಗೂ ಸಾಕ್ಷಿ.

ಕಲಾವಿದನಿಗೆ ಅದರ ತಿಳಿವು ಇಲ್ಲ. ಬದುಕಿಗೂ ನಟನೆಗೂ ಅಂತರ ಇದೆಯೆಂಬುದರ ವಾಸ್ತವದ ಪ್ರಜ್ಞೆ ಮೀರಿ ನಟಿಸುವುದು ಅವನಿಗೆ ರೂಢಿಯಾಗಿ ಹೋಗಿದೆ. ಹೀಗಾಗಿ ಅದ್ಭುತ ನಟನೆಯಿಂದಲೇ ಬುದ್ಧನನ್ನು ಮೈತುಂಬಿಕೊಳ್ಳುವ ಧಾರ್ಷ್ಟ್ಯತನ ಪ್ರದಶಿಸುತ್ತಾನೆ. ಬುದ್ಧನ ಪ್ರತಿಮೆಯನ್ನು ನೋಡಿ ನೋಡಿ ನಟಿಸುತ್ತಾನೆ, ಅವನನ್ನು ಕಂಡು ಬುದ್ಧ ಪ್ರತಿಮೆಯಲ್ಲೇ ನಗುತ್ತಾನೆ.
*****

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಟ್ಟಿ ಕಟ್ಟಿಸಿದೆ ರುದ್ರವ್ವಾ
Next post ಜಾಣೆ ನೋಡುನು ಬಾರೆ ಜಾತಕ ರಂಗದೊಳು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…