ಪ್ರಿಯ ಸಖಿ,
ಕೆಲವೊಂದು ಸನ್ನಿವೇಶಗಳನ್ನು, ದೃಶ್ಯಗಳನ್ನು ನಾವು ಕಣ್ಣಾರೆ ನೋಡದಿದ್ದರೂ ನಮ್ಮ ಮನಸ್ಸು ಅದನ್ನು ಕಲ್ಪಿಸಿಕೊಂಡು ಅತಿಸೂಕ್ಷ್ಮವಾಗಿ ಚಿತ್ರಿಸಿಕೊಂಡಿರುತ್ತದೆ. ಆ ಚಿತ್ರ ನಮ್ಮ ಮನಃಪಟಲವಲ್ಲಿ ಅಚ್ಚೊತ್ತಿ ಸದಾ ಕಾಡುತ್ತಿರುತ್ತವೆ. ಆ ಕೆಲಚಿತ್ರಗಳು…. ಭಾರತೀಯ ಯೋಧರ ಒಂದೊಂದು ಅಂಗಗಳನ್ನೂ ಬೇರ್ಪಡಿಸಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ಬಾಂಗ್ಲಾದೇಶ ರೈಫಲ್ಸ್ ಪಡೆಯವರು, ತಮ್ಮ ಕೈಗೆ ಸಿಕ್ಕ ಯುದ್ಧ ಕೈದಿಗಳನ್ನು ನಾನಾ ವಿಧದ ಹಿಂಸೆ ನೀಡಿ ಬದುಕಲಾರದಂತೆ, ಸಾಯಲಾರದಂತೆ ಗೋಳುಗುಟ್ಟಿಸುತ್ತಿರುವ ನೆರೆದೇಶದವರು, ಆಗಷ್ಟೇ ಹುಟ್ಟಿ, ಕಣ್ಣು ಬಿಡುತ್ತಿರುವ ಹೆಣ್ಣು ಕೂಸಿನ ಬಾಯಲ್ಲಿ ಭತ್ತ ತುಂಬಿ ಕ್ರೂರವಾಗಿ ಕೊಲ್ಲುವವರು.
ವರದಕ್ಷಿಣೆ ತರಲಿಲ್ಲವೆಂದು ಹೆಣ್ಣಿಗೆ ವಿವಿಧ ಹಿಂಸೆ ನೀಡುತ್ತಾ ಹೀನ ಸಂತೋಷವನ್ನನುಭವಿಸುವವರು, ಕ್ಷುಲ್ಲಕ ಕಾರಣಕ್ಕೆ ರಕ್ತ ಬಸಿದು ಕೊಲೆ ಮಾಡುವವರು, ಕಾಲುಬಾಯಿ ರೋಗಕ್ಕೆ ತುತ್ತಾದ ಸಾವಿರಾರು ಹಸುಗಳ ಮಾಂಸ ಉಪಯೋಗಕ್ಕೆ ಬರುವುದಿಲ್ಲವೆಂದು ಅವುಗಳನ್ನೆಲ್ಲಾ ಒಟ್ಟಾಗಿ ಅಗ್ನಿಗಾಹುತಿ ನೀಡುತ್ತಿರುವ ವಿದೇಶಿಯರು, ದೇವರು ಒಲಿಯುವನೆಂಬ ಮೂಢನಂಬಿಕೆಗೆ ಬಲಿಯಾಗಿ ಕುರಿ, ಕೋಳಿ, ಕೋಣನ ಬಲಿ ನೀಡುತ್ತಿರುವ ಭಕ್ತರು, ತನ್ನ ಜಿಹ್ವಾಚಾಪಲ್ಯಕ್ಕಾಗಿ ಅನುದಿನವೂ ಸಾವಿರಾರು ಪ್ರಾಣಿ ಬಲಿ ನಡೆಸುತ್ತಿರುವವರು…. ಒಂದೇ, ಎರಡೇ ! ಮಾನವನ ಕ್ರೂರ ಮನದ ಈ ಚಿತ್ರಗಳು ನೂರು ಕರಾಳ ಕಥೆ ಹೇಳಬಲ್ಲವು.
ಮಾನವ ಜನ್ಮ ದೊಡ್ಡದು. ಅತ್ಯಂತ ಶ್ರೇಷ್ಠವಾದುದೆಂದು ಮಾನವನ ನಂಬುಗೆ. ಆದರೆ ಇಂತಹಾ ಘೋರಗಳನ್ನೆಸಗುತ್ತಿರುವುದೂ ಮಾನವ ಮಾತ್ರ! ಪ್ರಾಣಿಗಳು ತಮ್ಮ ಹಸಿವಿಂಗಿಸಿಕೊಳ್ಳಲಷ್ಟೇ ಬೇರೆ ಪ್ರಾಣಿಗಳನ್ನು ಬೇಟೆಯಾಡುತ್ತವೆ ಕೊಲ್ಲುತ್ತವೆ. ಆದರೆ ಈ ನರಮನುಷ್ಯ ನಾಗರೀಕತೆ ಬೆಳೆದಂತೆಲ್ಲ ಸಭ್ಯನಾಗದೇ ಸಭ್ಯತೆಯ ಮುಸುಕಿನೊಳಗೆ ಇಂಥಹಾ ಹೀನ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾನೆ. ಮಾನವನ ರಾಕ್ಷಸತ್ವದ ಈ ಮುಖಗಳನ್ನು ಕಂಡಾಗ ಎದೆ ನಡುಗುತ್ತದೆ. ಮನುಕುಲಕ್ಕೆ ಉತ್ತಮ ಭವಿಷ್ಯವಿದೆಯೇ ಎಂದು ಚಿಂತಿಸುತ್ತದೆ.
ತಲ್ಲಣಿಸುವ ಮನ ಗದ್ಗದಿಸುತ್ತಾ ‘ಓ ಮಾನವ ನೀನೆಷ್ಟು ಕ್ರೂರಿ ನಿನ್ನ ಅಹಂಕಾರಕ್ಕಾಗಿ, ಸ್ವಾರ್ಥ ಹಿತಕ್ಕಾಗಿ, ನಿನ್ನ ಪ್ರತಿಷ್ಠೆ ಮೇಲರಿಮೆಗಾಗಿ ಶ್ರೇಷ್ಠನೆಂಬ ಪೊಗರಿನಿಂದ ಅದೆಷ್ಟು ಘೋರಗಳನ್ನು ನಡೆಸುತ್ತಿರುವ ‘ನಿಜಕ್ಕೂ ನಿನಗೆ ಕ್ಷಮೆಯಿದೆಯೆ?’ ಎಂದು ಕೇಳುತ್ತದೆ.
*****