ರಾಗ ರಂಜನೆಯ ಭೋಗ ಭಂಜನೆಯ | ಓಜೆ ಬಂದಿಹುದು ಒಳಗೆ
ಯೋಗ ಭೂಮಿಯಲಿ ತೂಗುದೀಪದೊಲು | ತೇಜ ಸಿಂಚಿಸಿದೆ ಎದೆಗೆ
ಯಾವ ಲೋಕದೊಳೂ ಭಾವ ಮಂಜರಿಯ | ಹಾವಭಾವ ಚೆಲುವು
ನೋವು ನಂಜುಗಳ ಬೇವುಬೇಲಿಗಳ | ಸೋವುತಿರುವ ಬಲವು
ಧಾರೆಧಾರೆಯಲಿ ನೀರೆ ಜಾರಿದೊಲು | ಭೀಮ ಬಂಡೆಯಿಂದ
ತೂರಿ ತುಂತುರನು ತೋರಿ ಅಂತರವ | ಭೂಮ ಗಾನದಿಂದ
ಗಗನ ಗಹ್ವರವ ಸೊಗದಿ ಕೂಡಿಸುತ | ಹಾಡುತಿಹುದು ರಾಗ
ಜಗದ ಜಂಜಡವ ನಗುವಿನಲೆಗಳಲಿ | ದೂಡುವಂಥ ಯೋಗ
ಚಿಕ್ಕ ಹೂವುಗಳ ಚೊಕ್ಕ ಜೀವಿಗಳ | ಮಣ್ಣ ಬಣ್ಣ ಭೋಗ
ಹಕ್ಕಿ ಹಾಡುಗಳ ಚಿಕ್ಕೆ ಮೋಡಿಗಳ | ಮೋಡ ವರ್ಣ ರಾಗ
ಸಂಜೆ ಬೆಳಗುಗಳ ಕಂಜ ಕಾಂತಿಯಲಿ | ರಸವನೀಂಟಿ ದುಂಬಿ
ಗುಂಜು ಗುಂಜಿನಲಿ ಮಂಜು ಮಧುರದಲಿ | ಗುಣುಗುತಿಹುದು ತುಂಬಿ
ಸುತ್ತಿ ಮಲಗಿರುವ ಚಿತ್ರ ಸರ್ಪವನು | ತಟ್ಟಿ ಎಬ್ಬಿಸುತ್ತ
ಮತ್ತ ಪುಂಗಿಯಲಿ ಸುತ್ತಿ ರಾಗದಲಿ | ತಲೆಯ ತೂಗಿಸುತ್ತ
ರಾಗ ರಾಗಿಸಿದೆ ಜೋಗ ಜೊಂಪಿಸಿದೆ | ಅಮರನಾದದಲ್ಲಿ
ಭೊಗ ವೀಣೆಯಲಿ ಚಾಗ ರಾಗಿಣಿಯು | ಮಿಡಿಯ ಮೋದದಲ್ಲಿ
*****