೧
ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ.
ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು.
ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು
ಮುಖ ತಿರುಗಿಸುವುದು ಎಂಬ ಒಂದು ವಿಧ
ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
೨
ಸೆಟೆದ ಬಾಲ, ನಿಮಿರಿದ ಕೂದಲು, ಊರಿದ ಕಾಲುಗುರು-
ಒಟ್ಟಾರೆ ಹೂಡಿದ ಬಿಲ್ಲಿನಂತಿರುವ ಬೆಕ್ಕು
ಆಕ್ರಮಿಸಿತ್ತೀಗ ನನ್ನ ಇಡೀ ದೃಷ್ಟಿ ಪರಿಧಿಯನ್ನು-
ದಾರಿತಪ್ಪಿದಂತೆ ನಾನು ಚರಿತ್ರಪೂರ್ವ ಭೂಖಂಡಗಳಲ್ಲಿ
ಬಿದ್ದಂತೆ ಅಪರಿಚಿತ ಸಮುದ್ರಗಳಲ್ಲಿ. ಆದರೂ
ಎವೆಯಿಕ್ಕಲಿಲ್ಲ ನಾನು. ಎವೆಯಿಕ್ಕಲಿಲ್ಲ ಬೆಕ್ಕು.
ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ
ಯಾವದೋ ಸ್ಥಿತಿವಿಶೇಷದಲ್ಲಿ ನಿಂತಿತ್ತು ನನ್ನೆದುರು
ಬೆಕ್ಕಿಗೆ ಬೆಕ್ಕೇ ಛಲವಾಗಿ.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
೩
ಕೊನೆಗೂ ಸೋತದ್ದು ಮೃಗವೆ. ಅಥವಾ ಹಾಗೆಂದುಕೊಂಡುದು
ನಾನು. ಆ ಸೆಟೆದ ಮೈ ಕ್ರಮೇಣ ನುಸುಲಾಗಿ
ಹೊರಟು ಹೋಯಿತು ಬೆಕ್ಕು ಬೆಕ್ಕಿನ ಗತಿಯಲ್ಲಿ.
ಹೀಗೆ ನನ್ನ ದೃಷ್ಟಿ ಒಮ್ಮೆಲೆ ಖಾಲಿಯಾದಾಗ
ಅನಿಸಿತು ನನಗೆ-ಒಪ್ಪಿಕೊಳ್ಳಬಹುದಿತ್ತು ನಾನು
ಬೆಕ್ಕಿಗೆ ಬೆಕ್ಕಿನ ಸ್ವಾಭಿಮಾನ. ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಹುಬಲಿಯಂತೆ-
ಬಿಟ್ಟುಕೊಡುವುದರಿಂದ.
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಎಂದು ನನಗೆ ಗೊತ್ತಿರಲಿಲ್ಲ.
*****