ಇಲ್ಲಿ ಹಿಂದೊಮ್ಮೆ ಕೋಣೆಗಳ ತುಂಬ ಸಿಗರೇಟು
ತುಂಡುಗಳಿದ್ದವು. ಹರಿದ ಕಾಗದಗಳಲ್ಲಿ ಅಕ್ಷರಗಳು ಚೂರಾಗಿ
ಎಲ್ಲೆಲ್ಲೂ ಬಿದ್ದಿದ್ದವು. ಪುಸ್ತಕದ ಅಟ್ಟಳಿಕೆಯಲ್ಲಿ
ಅನಂತಮೂರ್ತಿ, ಲಂಕೇಶ ಒಟ್ಟಿಗೇ ಕುಳಿತ್ತಿದ್ದರು.
ಮೇಜಿನ ಮೇಲಿದ್ದ ಮೈಸೂರಿಂದ ತಂದ ಆನೆಯ
ಮೈಯೆಲ್ಲ ಹೆದ್ದಾರಿಯಿಂದೆದ್ದ ಧೂಳು. ಅಟ್ಟದಲ್ಲಿ
‘ವಠಾರ’ದ ಪ್ರತಿಗಳು ಮತ್ತು ರಾತ್ರಿಹಗಲು ಓಡಾಡುವ
ಚುರುಕಾದ ಇಲಿಗಳು.
ಇಲ್ಲೀಗ ಉಳಿದಿದ್ದರೆ ಏನಾದರೂ ನನ್ನ ಗುರುತುಗಳು
ಯಾರೋ ನಾನಿಲ್ಲದಿದ್ದಾಗ ಬಂದು
ಹೇಳಬೇಕೆಂದಿದ್ದು ಹೇಳದೆ ಹೋದ ಮಾತುಗಳು
ಮತ್ತು ಗೋಡೆಯ ಮೇಲಿನ ಆ ತೂತುಗಳು
ಹೌದು, ಅಲ್ಲಿ ನನ್ನ ಹೆಸರಿನ ಹಲಗೆ ಇತ್ತು.
*****