೧
ಕೇಸು ಖಟ್ಳೆಗಳೆಂದು ಮುನಿಸಿಪಲ್ ಕಛೇರಿಗಳೆಂದು
ತುರ್ತಾಗಿ ದಾಪುಗಾಲಿಕ್ಕುತಿರುವ ನಿಮ್ಮನ್ನು
ಕೈಸನ್ನೆಯಿಂದ ನಿಲ್ಲಿಸಿ
ಗಂಭೀರವಾಗಿ ಒಂದು ಬೀಡಿ ಕೇಳುವ ಮುದುಕ
ತೆಂಕು ಪೇಟೆಯಲ್ಲಿ ನಾಲ್ಕೈದು ಅಂಗಡಿಗಳನ್ನಿಟ್ಟಿದ್ದ
೨
ಸದಾ ಬಾಯಿಗೆ ಗಿಡಿದ ಬೀಡದ ಕೆಂಪು ರಸವನ್ನು
ಬೀದಿಯ ಉದ್ದಕ್ಕೂ ಫೂ ಫೂ ಎಂದು ಉಗುಳುತ್ತ
ಎದುರು ಸಿಕ್ಕಿದವರನ್ನೆಲ್ಲ ಮಾತಾಡಿಸುತ್ತ
ಸುಡುಬಿಸಿಲಿಗೆ ಬೆವರುತ್ತ ನಡೆಯುವ ಮಾಸ್ತರರು
ಮೊದಲು ಕವಿತೆಗಳನ್ನು ಬರೆಯುತ್ತಿದ್ದರು
೩
ಹಳೆ ಮಂಗಳೂರು ಹಂಚಿನ ಮನೆ ಚಾವಡಿಯಲ್ಲಿ ಕುಲಿತು
ಈಗಿರುವ ಇಲ್ಲದ ಎಂದೂ ಇದ್ದಿರದ ವ್ಯಕ್ತಿಗಳನ್ನು
ಅವಾಚ್ಯ ಶಬ್ದಗಳಿಂದ ಬಯ್ಯುವ ಅಥವ ಕರೆಯುವ
ಇಳಿವಯಸ್ಸಿನ ಹೆಂಗಸು
ಈ ಪೇಟೆಯಲ್ಲಿ ಮೊತ್ತಮೊದಲು ತುಟಿಗೆ ರಂಗು ಹಾಕಿದವಳು
೪
ಲೈಟುಕಂಭದ ಕೆಳಗೆ ತನ್ನ ನೆರಳನ್ನೇ ತುಳಿದು
ಹಟಯೋಗಿಯಂತೆ ನಿಂತ ಮನುಷ್ಯ
ಹಿಂದೆ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.
ಯಾರನ್ನೂ ನೋಡದೆ, ಮಾತಾಡಿಸದೆ
ಎಲ್ಲವನ್ನೂ ತಿರಸ್ಕರಿಸುತ್ತಾನೆ-ನನ್ನನ್ನೂ ಈ ಪೇಟೆಯನ್ನೂ.
*****