9.1 ಯಕಗಾನ ಶಿಕ್ಷಣದ ಅಗತ್ಯ-ಮಹತ್ವ
ಯಕ್ಷಗಾನದ ಕಳೆ ಕುಂದುತ್ತಿದೆ ಮತ್ತು ಯಕ್ಷಗಾನ ಪ್ರೇಕಕರ ಸಂಖ್ಯೆ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯನ್ನು ಯಕಗಾನದತ್ತ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಮಾತುಗಳು ಯಕ್ಷಪ್ರಪಂಚದಲ್ಲಿ ಆಗಾಗ ಕೇಳಿ ಬರುತ್ತಿವೆ. ಇದೇನು ಉತ್ಪ್ಪ್ರೇಕೆಯ ಮಾತಲ್ಲ. ಪರಿಸ್ಥತಿ ಹೀಗೆ ಮುಂದುವರಿದರೆ ಯಕ್ಷಗಾನ ಶಿಥಿಲವಾಗುತ್ತಾ ಹೋಗಿ ಕೆಲವೇ ದಶಕಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುವ ಭೀತಿಯಿದೆ. ಈಗೇನೋ ಹರಿಕೆ ಹೇಳುವವರು ಇರುವುದರಿಂದ ಹರಿಕೆ ಬಯಲಾಟಗಳು ನಡೆಯುತ್ತಿವೆ ಮತ್ತು ದೇವಾಲಯಗಳಿಗೆ ಆದಾಯ ಬರುತ್ತಲಿದೆ. ಪರಿಸ್ಥಿತಿ ಹೀಗೆ ಮುಂದು ವರಿದರೆ ಬಯಲಾಟ ಪ್ರದರ್ಶನ ಮಾಡಿಸುತ್ತೇವೆ ಎಂದು ಯಾರೂ ಹರಿಕೆ ಹೇಳಿಕೊಳ್ಳದ ದಿನಗಳು ಬರಲಿವೆ. ಹಾಗಾಗದಂತೆ ಈಗಲೇ ಮುನೆನಚ್ಚರಿಕೆ ವಹಿಸಬೇಕಾಗ ಅಗತ್ಯವಿದೆ. ಅವುಗಳಲ್ಲಿ ಒಂದುಯಕಗಾನ ಶಿಕಣಕ್ಕೆ ಆದ್ಯತೆ ನೀಡಿಕೆ.
ಯಕಗಾನ ಶಿಕ್ಷಣ ಯಾಕೆ ಬೇಕು ಎನ್ನುವುದಕ್ಕೆ ಈ ಕೆಳಗಿನ ಸಮಾಧಾನಗಳನ್ನು ನೀಡಬಹುದು:
1. ಹೊಸ ಆಕರ್ಷಣೆಗೆ : ಯಕ್ಷಗಾನ ಕಲಾ ಪ್ರಕಾರದ ಆಕರ್ಷಣೆ ಕುಸಿಯುತ್ತಿರು ವುದು ಆತಂಕದ ವಾಸ್ತವಿಕ ಸತ್ಯ. 1990ರ ಬಳಿಕ ಯಕಗಾನ ಕಲಾಪ್ರಕಾರವು ಅವ್ಯಾಹತ ವಾಗಿ ಇತರ ಕಲಾಪ್ರಕಾರಗಳಿಂದ ಧಾಳಿಗೊಳಗಾಯಿತು. ಆರ್ಕೆಸ್ಟ್ರಾಗಳು ಮತ್ತು ಪಾಶ್ಚಾತ್ಯ
ನೃತ್ಯ ಪ್ರಕಾರಗಳು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ವಿಜೃಂಭಿಸ ತೊಡಗಿದವು. ಗಣೇಶೋತ್ಸವ, ಶಾರದೋತ್ಸವ, ಜಾತ್ರೋತ್ಸವ ಕಾಲದಲ್ಲಿ ಆರ್ಕೆಸ್ಟ್ರಾ ಮತ್ತು ಪಾಶ್ಚಾತ್ಯ ನೃತ್ಯ ಪ್ರಕಾರ ಗಳಿಂದ ಆಸ್ತಿಕ ಭಕ್ತಾಭಿಮಾನಿಗಳನ್ನು ದೇವರತ್ತ ಆಕರ್ಷಿಸಬೇಕಾದ ಅನಿವಾರ್ಯ ಪರಿಸ್ಥತಿ ಉಂಟಾಯಿತು. ದೇವಾಲಯಗಳು ಮತ್ತು ಭಜನಾ ಮಂದಿರಗಳು ಪರಿಸ್ಥತಿಯನ್ನು ಸುಧಾರಿಸಲು ಯತ್ನಿಸುವ ಬದಲು ಪರಿಸ್ಥತಿಗೆ ಶರಣಾಗಿ ಬಿಟ್ಟವು. ಯಕ್ಷಗಾನಕ್ಕೆ ಆಶ್ರಯ ನೀಡಬೇಕಾಗಿದ್ದ ದೇವಾಲಯಗಳು ಮತ್ತು ಭಜನಾ ಮಂದಿರಗಳು ತಮ್ಮ ಧರ್ಮವನ್ನು ಅರಿತು ಪಾಲಿಸಲಿಲ್ಲ. ಈಗ ಯಕ್ಷಗಾನಕ್ಕೆ ಹೊಸ ಆಕರ್ಷಣೆ ನೀಡಿ ಹೊಸ ತಲೆಮಾರನ್ನು ಯಕ್ಷಗಾನದತ್ತ ಸೆಳೆಯಬೇಕಾಗಿದೆ. ಅದಕ್ಕೇ ಯಕ್ಷಗಾನ ಶಿಕಣದ ಅಗತ್ಯವಿರುವುದು.
2. ಕಲಾವಿದರ ಸೃಷ್ಟಿ : ಹಿಂದೆ ಕಲಾವಿದರು ತಮ್ಮ ಸಾಧನೆಯ ಪ್ರಸಿದ್ಧಿಯಿಂದ ಪ್ರೇಕಕರನ್ನು ಯಕ್ಷಗಾನದತ್ತ ಆಕರ್ಷಿಸುತ್ತಿದ್ದರು. ಅನೇಕ ಮಂದಿ ಶಿಷ್ಯರನ್ನು ಸೃಷ್ಟಿಸುತ್ತಿ ದ್ದರು. ಕೋಲುಳಿಸುಬ್ಬ, ಕಾವು ಕಣ್ಣ, ಸಣ್ಣ ತಿಮ್ಮಪ್ಪ, ಬಣ್ಣದ ಕುಟ್ಯಪ್ಪುಪ, ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಕ್ರಿಶ್ಚಿಯನ್ ಬಾಬು, ಕದ್ರಿ ವಿಷ್ಣು, ಪಡ್ರೆ ಚಂದು, ಅಳಿಕೆ ರಾಮಯ್ಯ ರೈ, ಶೇಣಿ ಗೋಪಾಲಕೃಷ್ಣ ಭಟ್, ಸಾಮಗ ಸಹೋದರರು, ತೆಕ್ಕಟ್ಟೆ, ಶಂಭು ಹೆಗಡೆ, ಅಜ್ಜ ಬಲಿಪ ಭಾಗವತರು, ನೆಡ್ಳೆ ನರಸಿಂಹ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮುಂತಾಗಿ ಅನೇಕ ಸಿದ್ಧ ಪ್ರಸಿದ್ಧರು ಈಗ ಬದುಕುಳಿದಿಲ್ಲ. ಹೊಸ ಪೀಳಿಗೆಗೆ ಇವರ ಹೆಸರೂ ಗೊತ್ತಿಲ್ಲ. ಕೋಳ್ಯೂರು ರಾಮಚಂದ್ರ ರಾಯರು, ಸೂರಿಕುಮೇರಿ ಗೋವಿಂದ ಭಟ್ಟರು, ಕುಂಬಳೆ ಸುಂದರ ರಾಯರು, ಕೆರೆಮನೆ ಮಹಾಬಲ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ಶ್ರೀಧರ ಭಂಡಾರಿ, ಮಿಜಾರು ಅಣ್ಣಪ್ಪ, ಗೋಪಾಲಕೃಷ್ಣ ಕುರುಪ್,ಮುಂತಾದವರಲ್ಲಿ ಬಹುತೇಕರು ನಿವೃತ್ತರಾಗಿದ್ದಾರೆದ ಉಳಿದವರು ಇನ್ನೇನು ನಿವೃತ್ತರಾಗಲಿದ್ದಾರೆ. ಯಕ್ಷಗಾನ ಪ್ರಪಂಚದಲ್ಲಿ ಹೊಸ ತಾರೆಗಳ ಸೃಷ್ಟಿಯಾಗುತ್ತಿಲ್ಲ. ಹೆಸರಿಸಬಹುದಾದ ಕೆಲವು ಕಲಾವಿದರು ರಂಗದಲ್ಲಿ ಈಗಲೂ ಸಕ್ರಿಯರಾಗಿದ್ದಾರೆನ್ನುವುದು ನಿಜ. ಆದರೆ ಅವರಿಂದ ಹೊಸ ಪೀಳಿಗೆಯನ್ನು ಯಕ್ಷಗಾನದತ್ತ ಎಳೆದು ತರಲು ಸಾಧ್ಯವಾಗುತ್ತಿಲ್ಲ. ಅದಕ್ಕೆಂದೇ ಶಾಲಾಕಾಲೇಜುಗಳಲ್ಲಿ ಯಕ್ಷಗಾನ ಶಿಕಣ ನೀಡಬೇಕಾದ ಅನಿವಾರ್ಯತೆ ಉದ್ಭವಿಸಿದೆ.
3. ಸಾಮಾನ್ಯ ಶಿಕ್ಷಣದ ಗುಣಮಟ್ಟ ಏರಿಕೆ : ಶಾಲಾ ಕಾಲೇಜುಗಳ ಶಿಕಣದ ಗುಣಮಟ್ಟ ಆಘಾತಕಾರಿಯಾಗಿ ಕುಸಿದಿದೆ. ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೊರ ಬರುವವರಲ್ಲಿ ಶೇ 90ಕ್ಕಿಂತಲೂ ಹೆಚ್ಚಿನ ಮಂದಿಗೆ ಭಾರತದ ಕಲೆಸಾಹಿತ್ಯಸಂಸ್ಕೃತಿಗಳ ಪರಿಚಯವಿಲ್ಲವೆಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಮತ್ತು ಉಪನ್ಯಾಸಕರುಗಳಲ್ಲಿ ಕಲೆಸಾಹಿತ್ಯ ಆಸ್ವಾದಿಸುವ ಗುಣ ಮಾಯವಾಗಿ ಹೇಗಾದರೂ ಹಣ ಗಳಿಸಿ ವಿಲಾಸೀ ಜೀವನ ಸಾಗಿಸಬೇಕೆನ್ನುವ ಹಂಬಲ ತುಂಬಿಕೊಂಡಿರುವುದನ್ನು ಈ ಅಧ್ಯಯನಗಳು ಬಹಿರಂಗಪಡಿಸಿವೆ. ಅರ್ಥಕಾಮಗಳು ಧರ್ಮಮೋಕ್ಷಗಳ ಪರಿಧಿಯೊಳಗಿರ ಬೇಕು ಎನ್ನುತ್ತದೆ ಭಾರತೀಯ ಸಂಸ್ಕೃತಿ. ಧರ್ಮಮೋಕ್ಷಗಳ ತಿರುಳು ಇರುವುದೇ ಕಲೆ ಮತ್ತು ಸಾಹಿತ್ಯದಲ್ಲಿ. ಇವೆರಡರಲ್ಲಿ ಆಸಕ್ತಿ ಇಲ್ಲದವ ದೇವರನ್ನು, ಧರ್ಮವನ್ನು ಅರಿತು ಕೊಳ್ಳಲು ಸಾಧ್ಯವೇ ಇಲ್ಲ. ಯಕ್ಷಗಾನ ಭಾರತದ ಅನನ್ಯ ಸಾಂಸ್ಕೃತಿಕ ಕಲೆ. ಅದಕ್ಕೆ ಮನುಷ್ಯನನ್ನು ಮಾನವನನ್ನಾಗಿ ಪರಿವರ್ತಿಸುವ ಶಕ್ತಿಯಿದೆ. ಜ್ಞಾನ, ತರ್ಕ ಶಕ್ತಿ, ಪ್ರತ್ಯುತ್ಪನ್ನ ಮತಿತ್ವ, ವಿಚಾರ, ಭಾವ, ಬುದ್ಧಿ, ಭಾಷಾ ಶುದ್ಧಿ, ವ್ಯಾಯಾಮ ಇವೆಲ್ಲವನ್ನೂ ಒಳಗೊಂಡಿರುವ ಉನ್ನತ ಸಂಸ್ಕಾರವನ್ನು ನೆಲೆಗೊಳಿಸುವ ಶಕ್ತಿಯಿರುವ ಯಕ್ಷಗಾನ ಶಾಲಾಕಾಲೇಜು ಶಿಕ್ಷಣದ ಒಂದು ಅಂಗವಾಗಬೇಕು. ‘ರಾಮರಾಜ್ಯ’ನಿರ್ಮಾಣ ಮಾಡಲು ಸಾಧ್ಯವಿರುವುದು ಮಾನವತಾವಾದಿ ಕಲಾವಿದರಿಂದ ಮತ್ತು ಸಾಹಿತಿಗಳಿಂದ. ಕಲೆಯ ಸಾಧ್ಯತೆ ಸಾಹಿತ್ಯದ್ದ ಕ್ಕಿಂತಲೂ ಅಧಿಕ. ಯಕ್ಷಗಾನ ಶಿಕಣವು ಉನ್ನತ ಮೌಲ್ಯ ನಿರ್ಮಾಣಕ್ಕೆ ನೆರವಾಗಿ ಕರ್ನಾಟಕವನ್ನು ಒಂದು ಬಲಿಷ್ಠ ಸಾಂಸ್ಕೃತಿಕ ಘಟಕವನ್ನಾಗಿ ಮಾರ್ಪಡಿಸಲಿದೆ.
4. ಸಾಂಸ್ಕೃತಿಕ ನೆಲೆಗಟ್ಟು : ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಶಿಕಣ ನೀಡುವುದ ರಿಂದ ಭದ್ರವಾದ ಸಾಂಸ್ಕೃತಿಕ ನೆಲೆಗಟ್ಟು ನಿರ್ಮಾಣವಾಗುತ್ತದೆ. ಪಿತೃಭಕ್ತಿ ಶ್ರೀರಾಮಭೀಷ್ಮ; ಮಾತಾಪಿತರ ಬಗ್ಗೆ ಗೌರವ ಶ್ರವಣ ಕುಮಾರ; ಸತ್ಯಕ್ಕೆ ಮಹತ್ವ ಶಿಬಿ, ಹರಿಶ್ಚಂದ್ರ; ಗುರುಭಕ್ತಿ ಏಕಲವ್ಯ, ಕೃಷ್ಣ, ಅರ್ಜುನ; ಪತಿಭಕ್ತಿಸೀತೆ, ಸಾವಿತ್ರಿ, ಮಂಡೋದರಿ; ಏಕಪತ್ನೀ ವೃತ ಶ್ರೀರಾಮ, ಲಕ್ಮಣ; ಸಹೋದರ ಪ್ರೇಮ ಭರತ, ಲಕ್ಮಣ;ಇವೆಲ್ಲವನ್ನೂ ಯಕ್ಷಗಾನ ಶಿಕಣ ಒಳಗೊಂಡಿರುತ್ತದೆ. ಸತ್ಯಕ್ಕೆ ಜಯಎನ್ನುವುದು ಯಕ್ಷಗಾನ ಸಾರುವ ಮೌಲ್ಯ. ಯಕ್ಷಗಾನ ಒಂದು ಜಾತ್ಯತೀತ ಕಲೆ. ಅದು ಜಾತಿಕೋಮು ಭಾವನೆಗಳನ್ನು ದೂರಮಾಡಿ ಜಾತ್ಯತೀತತೆ ಮತ್ತು ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಮ್ಮ ದೇಶದಲ್ಲಿ ರಾಜಕೀಯ ಅಧಿಕಾರ ಪಡೆಯಲು ಜಾತಿ, ದೇವರು, ಧರ್ಮ, ಕೋಮುಗಳನ್ನು ರಾಜಕಾರಣಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಭಾರತ ಆಂತರಿಕ ತುಮುಲದಲ್ಲಿ, ಕೋಮು ಗಲಭೆಗಳಲ್ಲಿ, ಮೌಲ್ಯರಾಹಿತ್ಯ ರಾಜಕಾರಣದ ಕುಂಭೀಪಾಕ ನರಕದಲ್ಲಿ ನರಳುತ್ತಿದೆ. ಯಕ್ಷಗಾನ ಕಲೆಯು ಮಾನವನ ಜೀವನವನ್ನು ಸಹ್ಯವನಾನಗಿ ಮತ್ತು ಸಾರ್ಥಕವನ್ನಾಗಿ ಮಾಡುತ್ತದೆ.
5. ಉದ್ಯೋಗ ನಿರ್ಮಾಣ : ಯಕ್ಷಗಾನವು ಉದ್ಯೋಗ ನಿರ್ಮಾಣ ಮಾಡುವ ಕಲೆಯೂ ಹೌದು. ಪ್ರಭಾಕರ ಜೋಷಿಯವರ ಮಾಹಿತಿಯ ಪ್ರಕಾರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸುಮಾರು 32 ವ್ಯವಸಾಯಿ ಮತ್ತು ಅರೆ ವ್ಯವಸಾಯಿ ಯಕ್ಷಗಾನ ಮೇಳಗಳಿವೆ.
ಅವು ಸುಮಾರು ಏಳುನೂರು ಮಂದಿಗೆ ನೇರ ಮತ್ತು ಎಂಟುನೂರು ಮಂದಿಗೆ ಪರೋಕ್ಷ ಉದ್ಯೋಗ ನೀಡಿವೆ. ಕಲಾವಿದರು, ಸಾಗಾಟ, ಅಡುಗೆ ಪೂಜೆ, ಚೌಕಿ ಮತ್ತು ರಂಗಸ್ಥಳ ಕೆಲಸಗಾರರು, ಡ್ರೈವರು ಮೆಕಾನಿಕ್ಕುಗಳು ನೇರ ಉದ್ಯೋಗಿಗಳು. ವೇಷಭೂಷಣ ಮತ್ತು ಹಿಮ್ಮೇಳ ತಯಾರಕರು ಪರೋಕ ಉದ್ಯೋಗಿ ಗಳು. ಕಲಾವಿದರಲ್ಲಿ ವೃತ್ತಿಪರರು ಮತ್ತು ಹವ್ಯಾಸಿಗಳಿದ್ದಾರೆ. ಹವ್ಯಾಸಿಗಳು ಬೇಸಿಗೆಯಲ್ಲಿ ವಾರ್ಷಿಕೋತ್ಸವ, ಜಾತ್ರೆ, ಭೂತದ ಕೋಲ ಇತ್ಯಾದಿ ಸಂದರ್ಭಗಳ ಯಕ್ಷಗಾನ ಬಯಲಾಟ ಗಳಲ್ಲಿ ಕಲಾವಿದರಾಗಿ ಭಾಗವಹಿಸಿ ಗೌರವಧನ ಪಡೆಯುತ್ತಾರೆ. ವೃತ್ತಿ ಮೇಳಗಳು ಕಲಾವಿದನೊಬ್ಬನಿಗೆ ದಿನಕ್ಕೆ ಸರಾಸರಿ ರೂ 400 ಕನಿಷ್ಠ ರೂ 150 ಮತ್ತು ಗರಿಷ್ಠ ರೂ 750 ಸಂಬಳ ನೀಡುತ್ತವೆ. ಧರ್ಮಸ್ಥಳ ದಂತಹ ವೃತ್ತಿ ಮೇಳಗಳು ಕಲಾವಿದರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಕಲ್ಪಿಸಿವೆ. ಕರಾವಳಿ ಜಿಲ್ಲೆಗಳ ಸುಮಾರು 1000 ಕುಟುಂಬಗಳು ಯಕ್ಷಗಾನವನ್ನೇ ನಂಬಿ ಬದುಕು ಸಾಗಿಸುತ್ತವೆ. ಶಿಕಣವು ಯಕ್ಷಗಾನವನ್ನು ಪುನರುತ್ಥಾನಗೊಳಿಸಿ ನಿರುದ್ಯೋಗ ನಿವಾರಣೆಗೆ ತನ್ನ ಮಿತಿ ಯಲ್ಲಿ ಪರಿಹಾರವನ್ನು ಒದಗಿಸುತ್ತದೆ.
6. ಜಾಗತೀಕರಣಕ್ಕೆ ಉತ್ತರ : ಜಾಗತೀಕರಣವು ಸ್ಥಳೀಯ ಕಲೆಸಾಹಿತ್ಯಸಂಸ್ಕೃತಿ ಗಳನ್ನು ಅಪ್ರಸ್ತುತವನ್ನಾಗಿ ಮಾಡಿ ಪಾಶ್ಚಾತ್ಯ ಕಲೆಸಾಹಿತ್ಯಸಂಸ್ಕೃತಿಗಳನ್ನು ವೈಭವೀ ಕರಿಸುತ್ತದೆ. ಭಾರತೀಯರಿಗೆ ತಮ್ಮ ಕಲೆಸಾಹಿತ್ಯದ ಬಗ್ಗೆ ಅಭಿಮಾನ ಬಹಳ ಕಡಿಮೆ. ಹಾಗಾಗಿ ಭಾರತದಲ್ಲಿ ಪಾಶ್ಚಾತೀಕರಣ ಪ್ರಚಂಡ ವೇಗವನ್ನು ಪಡಕೊಂಡಿದೆ. ಹೀಗೆ ಇದು ಮುಂದುವರಿದರೆ ದೇಶಕ್ಕೆ ಸಾಂಸ್ಕೃತಿಕ ಅನನ್ಯತೆ ಎಂಬುದೇ ಇರಲಾರದು. ಕೆಲವು ವರ್ಷಗಳ ಹಿಂದೆ ನಾನು ಯುರೋಪಿನ ಎಂಟು ದೇಶಗಳನ್ನು ಸಂದರ್ಶಿಸಿ ಕೆಲವು ಯುರೋಪಿಯನ್ನರ ಮನೆಗಳಲ್ಲಿ ಉಳಕೊಂಡಿದ್ದಾಗ ಅವರು ಭಾರತೀಯ ಸಂಸ್ಕೃತಿಯನ್ನು ತೋರಿಸು ಎಂದು ದುಂಬಾಲು ಬೀಳುತ್ತಿದ್ದರು. ನನಗೆ ಗೊತ್ತಿರುವ ಯೋಗಾಸನ ಮಾಡಿ, ಯಕ್ಷಗಾನ ಕುಣಿದು ಇದು ಭಾರತೀಯ ಸಂಸ್ಕೃತಿ ಎನ್ನುತ್ತಿದ್ದೆ. ಯಕ್ಷಗಾನವನ್ನು ಇದು ನಿನ್ನ ರಾಷ್ಟ್ರೀಯ ಕಲೆಯಾಎಂದು ಕೇಳಿದ ಯುರೋಪಿಯನ್ನರಿದ್ದಾರೆ. ದುರ್ದೈವಕ್ಕೆ ಅದನ್ನು ಕರ್ನಾಟಕದ ರಾಜ್ಯಕಲೆ ಎಂದು ಫೋಷಿಸಲಿಕ್ಕೂ ನಮ್ಮನ್ನು ಆಳುವವರಿಂದ ಸಾಧ್ಯವಾಗಿಲ್ಲ, ಇನ್ನಾದರೂ ಸಾಧ್ಯವಾಗಬೇಕು. ಯಕ್ಷಗಾನ ನಮ್ಮ ಸಾಂಸ್ಕೃತಿಕ ಅನನ್ಯತೆಯಾಗಬೇಕು. ಶಾಲಾಕಾಲೇಜು ಗಳಿಂದ ಹೊರಬರುವ ಭಾವೀ ಜನಾಂಗ ನನಗೆ ಯಕ್ಷಗಾನ ಗೊತ್ತಿದೆ ಎಂದು ಎದೆ ತಟ್ಟಿ ಹೇಳಿಕೊಂಡು ಪಾಶ್ಚಾತೀಕರಣಕ್ಕೆ ಸವಾಲೊಡ್ಡಲು ಸಾಧ್ಯವಾಗಬೇಕು. ಅದಕ್ಕೇ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಶಿಕ್ಷಣದ ಅಗತ್ಯ ಇರುವುದು.
7. ಸಭ್ಯ ಸಮಾಜ ನಿರ್ಮಾಣ : ಶಾಲಾ ಕಾಲೇಜುಗಳಲ್ಲಿ ಔಪಚಾರಿಕ ಶಿಕ್ಷಣ ದೊಡನೆ, ವಯಸ್ಕರಿಗಾಗಿ, ಶಾಲಾಕಾಲೇಜು ಬಿಟ್ಟವರಿಗಾಗಿ ಅನಪೌಚಾರಿಕ ಯಕ್ಷಗಾನ
ಶಿಕ್ಷಣ ಕ್ರಮ ರೂಪಿಸಬೇಕಾಗಿದೆ. ಆಳುವವರು ಮತ್ತು ಆಳಿಸಿಕೊಳ್ಳುವವರು ಎಲ್ಲರಿಗೂ ಯಕ್ಷಗಾನ ಶಿಕ್ಷಣದ ಅಗತ್ಯವಿದೆ. ಯಕ್ಷಗಾನ ಶಿಕ್ಷಣವು ಸಮಾಜದ ಚಿತ್ರಣವನ್ನೇ ಬದಲಾಯಿಸಿ ಸಭ್ಯ ಸಮಾಜವೊಂದರ ನಿರ್ಮಾಣಕ್ಕೆ ನೆರವಾಗಲಿದೆ. ಹಾಗಾದಾಗ ನಮ್ಮ ದೈನಂದಿನ ಗೋಳುಗಳಾದ ಭ್ರಷ್ಟಾಚಾರ, ಸೃಜನ ಪಕ್ಷಪಾತ, ಜಾತೀಯತೆ, ಅತ್ಯಾಚಾರ ಅನಾಚಾರ, ಮತೀಯತೆ ಇತ್ಯಾದಿಗಳು ನಿಧಾನವಾಗಿ ಮಾಯವಾಗಬಹುದು. ಮೌಲ್ಯಾಧರಿತ ಸಮಾಜ ವೊಂದರ ನಿರ್ಮಾಣವಾಗುವ ಸಾಧ್ಯತೆ ಇದೆ.
ಯಕ್ಷಗಾನ ಶಿಕ್ಷಣ ನೀಡುವುದು ಹೇಗೆ?
9.2 ಯಕ್ಷಗಾನ ಔಪಚಾರಿಕ ಶಿಕ್ಷಣ
ಪಠ್ಯಕ್ರಮದಲ್ಲಿ ಒಳಗೊಂಡು ವ್ಯವಸ್ಥತವಾಗಿ ನೀಡಲಾಗುವುದೇ ಔಪಚಾರಿಕ ಶಿಕಣ. ಸ್ಥೂಲವಾಗಿ ಔಪಚಾರಿಕ ಶಿಕ್ಷಣದ ವ್ಯಾಪ್ತಿಯನ್ನು ಹೀಗೆ ತೋರಿಸಬಹುದು:
ಕೋಷ್ಟಕ 9.1 : ಔಪಚಾರಿಕ ಶಿಕಣದ ವ್ಯಾಪ್ತಿ
ಹಂತ ವಸ್ತು
ಪ್ರಾಥಮಿಕ ಮೂಲವಿಷಯಗಳು. ಕಲೆಃ ಕಲಾವಿದರ ಪರಿಚಯ
ಪ್ರೌಢ ಪ್ಲಸ್‌ಟೂ ಸೇರಿ; ರಾಗ, ತಾಳ, ನೃತ್ಯ ಮತ್ತು ಹೆಜ್ಜೆಗಳ ಪರಿಚಯ
ಕಾಲೇಜು ಪ್ರಸಂಗ ಸಾಹಿತ್ಯ ಪರಿಚಯ
ವಿಶ್ವವಿದ್ಯಾಲಯ ಸಂಶೋಧನೆಗೆ ಪ್ರಾಶಸ್ತ್ಯ
1. ಪ್ರಾಥಮಿಕ ಶಾಲಾ ಹಂತದ ಶಿಕಣ : ಇದು ಒಂದರಿಂದ ಎಂಟನೇ ತರಗತಿಯ ವರೆಗಿನ ಹಂತವನ್ನು ಒಳಗೊಂಡಿದೆ. ಇಲ್ಲಿ ಹಂತಹಂತವಾಗಿ ಯಕ್ಷಗಾನ ಎಂದರೇನು, ಯಕ್ಷಗಾನದ ಹಿಮ್ಮೇಳ ಎಂದರೇನು, ಯಕ್ಷಗಾನದ ವೇಷಗಳು ಯಾವುವು ಮತ್ತು ಪ್ರಮುಖ ಯಕ್ಷಗಾನ ಕಲಾವಿದರು ಯಾರು ಎನ್ನುವುದನ್ನು ತಿಳಿಸಬೇಕು. ಈ ಹಂತದಲ್ಲಿ ಯಕ್ಷಗಾನವು ಒಂದು ಪ್ರತ್ಯೇಕ ಪಠ್ಯಕ್ರಮವಾಗಿರುವುದಿಲ್ಲ. ಅದು ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಉರ್ದು, ತಮಿಳು, ತೆಲುಗು, ಮಲೆಯಾಳ, ಮರಾಠೀಭಾಷಾ ಪಠ್ಯಪುಸ್ತಕ ಗಳಲ್ಲಿ ಪಾಠಗಳಾಗಿ ಸೇರ್ಪಡೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವನ್ನೇ ಕಲಿಸದ ಶಾಲೆಗಳಿವೆ. ಕನ್ನಡ ಕಲಿಯದ ಮಕ್ಕಳೂ ಇದ್ದಾರೆ. ಆದುದರಿಂದ ಎಲ್ಲಾ ಭಾಷಾ ಪಠ್ಯಗಳಲ್ಲಿ ಯಕ್ಷಗಾನದ ಪರಿಚಯಾತ್ಮಕ ಪಾಠಗಳಿರಬೇಕು.
ಪ್ರಾಯೋಗಿಕವಾಗಿ ಆರುಏಳುಎಂಟನೆಯ ತರಗತಿಗಳ ವಿದ್ಯಾರ್ಥಿಗಳನ್ನು ಸೇರಿಸಿ ಒಂದು ಯಕ್ಷಗಾನ ತಂಡವನ್ನು ರೂಪಿಸಿ ಸ್ಥಳೀಯ ಕಲಾವಿದರಿಂದ ಶನಿವಾರ ಮಧ್ಯಾಹ್ನದ ಬಳಿಕ ಶಿಕಣ ನೀಡುವ ವ್ಯವಸ್ಥೆಯಾಗಬೇಕು. ಆ ತಂಡಕ್ಕೆ ವಾರ್ಷಿಕೋತ್ಸವದಲ್ಲಿ, ಊರ ಜಾತ್ರೆಯಲ್ಲಿ, ವಿಶೇಷ ಸಭೆ ಸಮಾರಂಭಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ಸಾಲಿಗ್ರಾಮ ಮಕ್ಕಳ ಮೇಳ ಸಾಗರೋಲ್ಲಂಘನ ಮಾಡಿದೆ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಅಧ್ಯಕತೆಯಲ್ಲಿ ಸುಳ್ಯದ ರಾಜರಾಜೇಶ್ವರಿ ಹೆಮ್ಮಕ್ಕಳ ಯಕ್ಷಗಾನ ತಂಡಕ್ಕೆ ಆರು ಮತ್ತು ಏಳನೆ ತರಗತಿಯವರು, 1980ರಲ್ಲಿ ನಾನು ನೃತ್ಯ ಕಲಿಸಿ ಸುಧನ್ವ ಮತ್ತು ಬಬ್ರುವಾಹನವೆಂಬ ಎರಡು ಪ್ರಸಂಗಗಳನ್ನು ನಿರ್ದೇಶಿಸಿದ್ದೆ. ಈ ತಂಡವನ್ನು ಶಾಲಾ ಶಿಕ್ಷಕಿ ಕಲಾವತಿ ಟೀಚರು ಬೆಂಗಳೂರು, ಹುಬ್ಬಳ್ಳಿಧಾರವಾಡಗಳಿಗೆ ಕರೆದೊಯ್ದು ಪ್ರದರ್ಶನಗಳ ಏರ್ಪಾಡು ಮಾಡಿದ್ದರು. ಡಾ|| ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ತೆಂಕುತಿಟ್ಟು ಯಕ್ಷಗಾನ ಮಕ್ಕಳ ಮೇಳ, ಪ್ರಕಾಶ ಮೂಡಿತ್ತಾಯ ಮತ್ತು ಡಾ|| ಪೂವಪ್ಪ ಕಣಿಯೂರು ನೇತೃತ್ವದಲ್ಲಿ ಸುಳ್ಯ ತಾಲೂಕು ಶಿಕಕರ ಮಕ್ಕಳ ಮೇಳ ಈಗಲೂ ಸಕ್ರಿಯವಾಗಿವೆ. ಸಂಪಾಜೆಯಲ್ಲಿ ರಂಗತಜ್ಞ ಎನ್.ಎಸ್. ದೇವಿಪ್ರಸಾದ್ ಪಂಚಲಿಂಗೇಶ್ವರ ಮಕ್ಕಳ ಮೇಳ ವನ್ನು ರೂಪಿಸಿದ್ದಾರೆ. ಕಲಾವಿದ ಕಾಂತಮಂಗಲ ಬಣ್ಣದ ಸುಧಾಕರರು ಸುಳ್ಯದಲ್ಲೊಂದು ಮಕ್ಕಳ ಮೇಳವನ್ನು ರೂಪಿಸಿ ಹಲವು ಕಡೆಗಳಲ್ಲಿ ಪ್ರದರ್ಶನ ಮಾಡಿಸಿದ್ದಾರೆ. ಇಂತಹ ಉದಾಹರಣೆ ಅಲ್ಲಲ್ಲಿ ದೊರೆಯುತ್ತವೆ. ಇದನ್ನು ಪ್ರೇರಣೆಯಾಗಿ ಸ್ವೀಕರಿಸಿ ಎಲ್ಲಾ ಶಾಲೆಗಳ ಶಿಕಕಶಿಕಕಿಯರು ಮಕ್ಕಳ ಯಕ್ಷಗಾನ ತಂಡಗಳನ್ನು ಸಿದ್ಧಗೊಳಿಸಬೇಕಾಗಿದೆ. ತಾಲೂಕು ಮಟ್ಟದ ಕ್ರೀಡಾ ಕೂಟಗಳಿರುವಂತೆ ತಾಲೂಕು ಮಟ್ಟದ ಮಕ್ಕಳ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿ ಗುಣಮಟ್ಟವನ್ನು ಸುಧಾರಿಸಬೇಕಾಗಿದೆ.
2. ಪ್ರೌಢ ಮತ್ತು ಪ್ಲಸ್ ಟೂ ಹಂತದಲ್ಲಿ : ಈ ಹಂತದಲ್ಲಿ ಮಕ್ಕಳಿಗೆ ರಾಗ, ತಾಳ, ನೃತ್ಯ ಮತ್ತು ಹೆಜ್ಜೆಗಳ ಪರಿಚಯ ಮಾಡಿಸಬೇಕು. ಇದಕ್ಕೆ ಒಬ್ಬ ನುರಿತ ಶಿಕ್ಷಕ-ಶಿಕ್ಷಕಿಯ ಅಗತ್ಯವಿದೆ. ಶಾಲೆಗಳಲ್ಲಿ ಕ್ರೀಡೆ ಮತ್ತು ಚಿತ್ರ ಕಲೆಗೆಂದೇ ಪ್ರತ್ಯೇಕ ಶಿಕ್ಷಕರಿರುತ್ತಾರೆ. ಹಾಗೆಯೇ ಯಕ್ಷಗಾನ ಶಿಕ್ಷಕರ ನೇಮಕವಾಗಬೇಕು. ಡಿ.ಪಿ.ಎಡ್-ಬಿ. ಎಡ್-ಎಂ.ಎಡ್.ಗಳಲ್ಲಿ ಯಕ್ಷಗಾನವನ್ನು ಸ್ಪೆಷಲ್ ಸಬ್ಜೆಕ್ಟ್ ಮಾಡಿದರೆ ಇಂತಹ ಶಿಕಕರು ಧಾರಾಳ ದೊರೆಯುತ್ತಾರೆ.
ಯಕ್ಷಗಾನ ಶಿಕ್ಷಕರ ನೆರವಿನಿಂದ ಹೈಸ್ಕೂಲು ಪದವಿಪೂರ್ವ ಕಾಲೇಜುಗಳಲ್ಲಿ ಯಕ್ಷಗಾನ ತಂಡಗಳು ರೂಪುಗೊಳ್ಳಬೇಕು. ಅವು ವಾರ್ಷಿಕ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆಗಾಗ ಹಿರಿಯರಿಂದ ಯಕ್ಷಗಾನ ತಾಳಮದ್ದಲೆ ಮತ್ತು ಯಕ್ಷಗಾನ ವಿದ್ವಾಂಸರಿಂದ ಭಾಷಣ ಗಳನ್ನು ಏರ್ಪಡಿಸಬೇಕು. ಯಕ್ಷಗಾನ ಗೀತಗಾಯನ ಸ್ಪರ್ಧೆ, ಯಕ್ಷಗಾನ ಪದ್ಯ ರಚನಾ ಸ್ಪರ್ಧೆಗಳು ವಾರ್ಷಿಕ ವರ್ಧಂತಿಯ ಸ್ಪರ್ಧೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಯಕ್ಷಗಾನ ಕಲಾವಿದರ ಸಂದರ್ಶನವನ್ನು ಕೇತ್ರಕಾರ್ಯವಾಗಿ ನೀಡಬೇಕು.
3. ಕಾಲೇಜು ಹಂತದಲ್ಲಿ :ಕಾಲೇಜು ಹಂತದಲ್ಲಿ ಇಂಗ್ಲೀಷ್, ಹಿಂದಿ, ಸಂಸ್ಕೃತ, ಕನ್ನಡ ಮತ್ತು ಎಲ್ಲಾ ದ್ವಿತೀಯ ಭಾಷಾ ಪಠ್ಯದಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ಯಕ್ಷಗಾನ ಕವಿಗಳ ಬಗ್ಗೆ ಪಾಠಗಳನ್ನು ಅಳವಡಿಸಬಹುದು. ಮೇಜರ್ ಕನ್ನಡದಲ್ಲಿ ಯಕ್ಷಗಾನ ಛಂದಸ್ಸನ್ನು ಒಂದು ಪಠ್ಯಕ್ರಮವಾಗಿ ಇರಿಸಿಕೊಳ್ಳಬಹುದು. ಕಾಲೇಜಲ್ಲಿ ಅಧ್ಯಾಪಕರನ್ನು ಒಳಗೊಳಿಸಿ ತಾಳಮದ್ದಲೆ ತಂಡ ರೂಪಿಸಬಹುದು. ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರ ಪ್ರತ್ಯೇಕ ಯಕ್ಷಗಾನ ತಂಡಗಳನ್ನು ರೂಪಿಸಬಹುದು. ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆ ಗಳನ್ನು ನಡೆಸಬಹುದು. ಯಕ್ಷಗಾನ ಪ್ರಸಂಗಗಳ ವಿಮರ್ಶಾಸ್ಪರ್ಧೆ ಏರ್ಪಡಿಸಬಹುದು. ಯಕ್ಷಗಾನ ಮೇಳಗಳ ಬಗೆಗಿನ ಮಾಹಿತಿ ಸಂಗ್ರಹವನ್ನು ಕೇತ್ರ ಕಾರ್ಯಕ್ಕೆ ಇರಿಸಿಕೊಳ್ಳಬಹುದು. ಯಕ್ಷ ವಿದ್ವಾಂಸರ ನೆರವಿನಿಂದ ಲೇಖನಗಳನ್ನು ಸಿದ್ಧಪಡಿಸಬಹುದು.
4. ವಿಶ್ವವಿದ್ಯಾಲಯ ಮಟ್ಟದಲ್ಲಿ : ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ ಎಂ.ಎ. ಹಂತದಲ್ಲಿ ಯಕ್ಷಗಾನದ ಬಗ್ಗೆ ಒಂದು ಕಡ್ಡಾಯ ಪೇಪರು ಇರಬೇಕು. ಯಕ್ಷಗಾನ ಸಂಶೋಧನೆಗೆ ಅದರಲ್ಲಿ ಒತ್ತು ನೀಡಬೇಕು. ಉಳಿದಂತೆ ಕಾಲೇಜಲ್ಲಿ ನಡೆಸುವ ಎಲ್ಲಾ ಯಕ್ಷಗಾನೀಯ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದಲ್ಲೂ ಮಾಡಬೇಕು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಒಂದು ಯಕ್ಷಗಾನ ಪೀಠವಿದೆ. ಅದೊಂದು ಯಕ್ಷಗಾನ ವಿಶ್ವವಿದ್ಯಾಲಯವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾದರಿಯಲ್ಲಿ ರೂಪುಗೊಳ್ಳಬೇಕು. ಆಗ ಯಕ್ಷಗಾನದ ಉಳಿವಿಗೆ ಮತ್ತು ಬೆಳವಣಿಗೆಗೆ ಶಿಸ್ತುಬದ್ಧವಾಗಿ ಮತ್ತು ಅಕಾಡೆಮಿಕ್ಕಾಗಿ ಯೋಚಿಸಲು, ಕಾರ್ಯ ಪ್ರವೃತ್ತವಾಗಲು ಸಾಧ್ಯವಿದೆ. ಸಂಗೀತಕ್ಕೆ,ಸಂಸ್ಕೃತಕ್ಕೆ ವಿಶ್ವವಿದ್ಯಾಲಯಗಳು ರಚನೆಯಾದಂತೆ ಯಕ್ಷಗಾನಕ್ಕೂ ರಚನೆಯಾದರೆ ಯಕ್ಷಗಾನವನ್ನು ಪಠ್ಯಕ್ರಮವಾಗಿಸಲು ತುಂಬಾ ಸುಲಭವಾಗಲಿದೆ.
9.3 ಯಕ್ಷಗಾನ ಅನೌಪಚಾರಿಕ ಶಿಕ್ಷಣ
ಅಕಾಡೆಮಿಕ್ ವಲಯದ ಹೊರಗಿನದ್ದು ಅನೌಪಚಾರಿಕ ಶಿಕ್ಷಣವಾಗಿರುತ್ತದೆ. ಗಾಂಧೀಜಿ ಪ್ರತಿಗ್ರಾಮವೂ ಒಂದು ಸ್ವತಂತ್ರ ಘಟಕವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಪ್ರತಿ ಗ್ರಾಮದಲ್ಲಿ ಒಂದು ರಂಗಮಂದಿರವಿದ್ದು ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಫುಲಾವಕಾಶ ವಿರಬೇಕೆಂದು ತಮ್ಮ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಲ್ಲಿ ಹೇಳಿಕೊಂಡಿದ್ದಾರೆ. ಗ್ರಾಮ ಪಂಚಾಯತುಗಳ ನೇತೃತ್ವದಲ್ಲಿ ಸರಕಾರ ಮತ್ತು ಸಮಾಜ ಕೈ ಜೋಡಿಸಿ, ಸೇವಾ ಸಂಸ್ಥೆಗಳ ನೆರವಿನಿಂದ ಗ್ರಾಮ ರಂಗಮಂದಿರಗಳನ್ನು ರೂಪಿಸಿದರೆ ಯಕ್ಷಗಾನ ಶಿಕಣಕ್ಕೆ ಮತ್ತು ಪ್ರದರ್ಶನಕ್ಕೆ ಸರ್ವಋತು ಅವಕಾಶ ದೊರೆಯುತ್ತದೆ.
ಯಕ್ಷಗಾನದ ಅನೌಪಚಾರಿಕ ಶಿಕಣ ನೀಡಿಕೆಗೆ ನಾಲ್ಕು ಸಂಘಟನೆಗಳನ್ನು ಬಳಸಿಕೊಳ್ಳಬೇಕು :
1. ಗ್ರಾಮ ಪಂಚಾಯತುಗಳು :ಗ್ರಾಮ ಸ್ವರಾಜ್ಯವನ್ನು ನಿರ್ಮಿಸುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದು. ಕೆಲವು ಗ್ರಾಮಪಂಚಾಯತಿಗಳು ಗ್ರಂಥಾಲಯವನ್ನು ಮತ್ತು ಸಮುದಾಯ ಭವನವನ್ನು ಹೊಂದಿವೆ. ಗ್ರಾಮ ಪಂಚಾಯಿತಿ ಸದಸ್ಯರು ತಾವೇ ಮುತುವರ್ಜಿ ವಹಿಸಿ ಆಸಕ್ತರನ್ನು ಒಟ್ಟಿಗೆ ಸೇರಿಸಿ ಯಕ್ಷಗಾನ ತಂಡವೊಂದನ್ನು ರೂಪಿಸಿ ನುರಿತ ಕಲಾವಿದ ರಿಂದ ಶಿಕಣಕ್ಕೆ ಏರ್ಪಾಡು ಮಾಡಬೇಕು. ಇಂದು ಗ್ರಾಮಸಭೆಗಳು ಕಾಟಾಚಾರಕ್ಕಾಗಿ ನಡೆಯುತ್ತವೆ. ಗ್ರಾಮ ಸಭೆಗಳು ಗ್ರಾಮ ಹಬ್ಬಗಳಾಗಿ ಮಾರ್ಪಾಡಾಗಬೇಕು. ಗ್ರಾಮಸಭೆ ನಡೆಯುವಂದು ಪಂಚಾಯತಿ ಸದಸ್ಯರು ಮತ್ತು ಊರವರು ಒಟ್ಟಾಗಿ ತಾಳಮದ್ದಳೆ ಅಥವಾ ಯಕ್ಷಗಾನದ ಪ್ರದರ್ಶನವನ್ನು ಏರ್ಪಡಿಸಬೇಕು. ದೇವಾಲಯಗಳ ಜಾತ್ರೆಯ ಹಾಗೆ ಪಂಚಾಯತಿಗಳು ನಾಡಹಬ್ಬ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಅಂದು ಯಕ್ಷಗಾನ ಪ್ರದರ್ಶನ ಇರಿಸಿಕೊಳ್ಳಬೇಕು. ಪಂಚಾಯಿತಿ ಸದಸ್ಯರು ಮನಸ್ಸು ಮಾಡಿದರೆ ಇದು ಸಾಧ್ಯವಿದೆ. ಜತೆಗೆ ಅಂತರ್ಪಂಚಾಯತಿ ಯಕ್ಷಗಾನ ಸ್ಪರ್ಧೆ ಏರ್ಪಡಿಸಿ ಗ್ರಾಮದಲ್ಲೊಂದು ಉತ್ಸಾಹದ ವಾತಾವರಣ ಮೂಡಿಸಲು ಅವಕಾಶವಿದೆ.
2. ಸ್ವಸಹಾಯ ಗುಂಪುಗಳು : ಕರಾವಳಿ ಕರ್ನಾಟಕದಲ್ಲಿ ನವೋದಯ ಸರಕಾರೀ ಮತ್ತು ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಸ್ವಸಹಾಯ ಗುಂಪುಗಳು ಸಾಕಷ್ಟಿವೆ. ಅವು ವಾರಕ್ಕೊಮ್ಮೆ ಸದಸ್ಯರ ಮನೆಗಳಲ್ಲಿ ಸಭೆ ಸೇರುತ್ತವೆ. ಗ್ರಾಮ, ಹೋಬಳಿ ಮತ್ತು ತಾಲೂಕು ಮಟ್ಟಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಒಕ್ಕೂಟ ಸಭೆಗಳನ್ನು ನಡೆಸುತ್ತವೆ. ಸ್ವಸಹಾಯ ಗುಂಪುಗಳ ಚಟುವಟಿಕೆಗಳಿಗೆ ಯಕ್ಷಗಾನ ಶಿಕ್ಷಣ ಸೇರ್ಪಡೆಯಾಗಬೇಕು. ಎಲ್ಲಾ ಸ್ವಸಹಾಯ ತಂಡಗಳು ಒಟ್ಟಾಗಿ ಗ್ರಾಮಮಟ್ಟದಲ್ಲಿ ಯಕ್ಷಗಾನ ತಂಡಗಳನ್ನು ರೂಪಿಸಿಕೊಳ್ಳಬೇಕು. ಒಕ್ಕೂಟದ ಸಭೆಗಳಲ್ಲಿ ತಾಳಮದ್ದಳೆಗೆ ಮತ್ತು ವಾರ್ಷಿಕೋತ್ಸವ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಸ್ವಸಹಾಯ ಸಂಘಗಳು ಕಲಾವಿದರನ್ನು ರೂಪಿಸಲು ಶಕ್ತವಾದರೆ ಯಕ್ಷಗಾನ ಕಲಾವಿದರ ಕೊರತೆ ನೀಗುತ್ತದೆ.
3. ಯುವಕ, ಯುವತಿ, ಭಜನಾ ಮಂಡಳಿಗಳು : ಕರಾವಳಿ ಕರ್ನಾಟಕದಲ್ಲಿ ಸಾಕಷ್ಟು ಯುವಕಯುವತಿ ಮತ್ತು ಭಜನಾ ಮಂಡಳಿಗಳಿವೆ. ಕೆಲವು ಯುವಕಯುವತಿಯರು ಭಜನಾ ಮಂಡಳಿಯ ಸದಸ್ಯರೂ ಆಗಿದ್ದಾರೆ. ಭಜನಾ ಮಂಡಳಿಗಳು ವಾರಕ್ಕೊಮ್ಮೆ ಭಜನೆ ನಡೆಸುತ್ತವೆ. ಸ್ವಸಹಾಯ ಗುಂಪಿನ ಸದಸ್ಯರಲ್ಲಿ ಅನೇಕರು ಭಜನಾ ಮಂಡಳಿಗಳ ಸದಸ್ಯರೂ ಆಗಿದ್ದಾರೆ. ಭಜನಾ ಮಂಡಳಿಗಳು ಭಜನಾ ಮಂದಿರಗಳನ್ನು ನಿರ್ಮಿಸಿಕೊಂಡಿರುವುದರಿಂದ ಯಕ್ಷಗಾನ ಕಲಿಕೆಗೆ ಸ್ಥಳದ ಕೊರತೆ ಇಲ್ಲ. ಭಜನಾ ಮಂದಿರಗಳ ವಾರ್ಷಿಕೋತ್ಸವದಂದು ಯಕ್ಷಗಾನ ತಾಳಮದ್ದಲೆ ಮತ್ತು ಪ್ರದರ್ಶನಕ್ಕೆ ವಿಪುಲಾವಕಾಶವಿದೆ.
ಶ್ರೀ ಕೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ವರ್ಷಕ್ಕೊಮ್ಮೆ ಧರ್ಮಸ್ಥಳದಲ್ಲಿ ಭಜನಾ ಕಮ್ಮಟ ನಡೆಯುತ್ತದೆ. ಅದರಲ್ಲಿ ಪ್ರಗತಿ ಬಂಧು ಸ್ವಸಹಾಯ ಗುಂಪುಗಳು ಭಾಗವಹಿಸುತ್ತವೆ. ಭಜನಾ ಕಮ್ಮಟದ ಹಾಗೆ ವರ್ಷಕ್ಕೊಮ್ಮೆ ಯುವಕಯುವತಿಭಜನಾ ಮಂಡಳಿಗಳಿಗಾಗಿ ಯಕ್ಷಗಾನ ಕಮ್ಮಟವನ್ನು ಏರ್ಪಡಿಸಬಹುದು. ವರ್ಷಕ್ಕೊಮ್ಮೆ ನಡೆಯುವ ಯುವಜನ ಮೇಳದಲ್ಲಿ ಯಕ್ಷಗಾನ ಸ್ಪರ್ಧೆ ಒಂದು ಐಟಮ್ಮು ಆಗಿರುತ್ತದೆ. ಇದನ್ನು ಯುವಕ ಮಂಡಲಗಳು ಸದುಪಯೋಗ ಪಡಿಸಿಕೊಳ್ಳಬೇಕು. ಯುವಕ ಯುವತಿಭಜನಾ ಮಂಡಳಿಗಳು ಯಕ್ಷಗಾನವು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗಳಿಗೆ ದಾಟಿಸುವ ಸಾಂಪ್ರದಾಯಿಕ ಕಲೆ ಎನ್ನುವುದನ್ನು ಅರ್ಥ ಮಾಡಿಕೊಂಡು ಯಕ್ಷಗಾನ ಕಲಿಕೆಗೆ ಮನಸ್ಸು ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ವಾದ ಬದಲಾವಣೆ ಗಳಾಗಲಿವೆ. ಹಾಗಾಗಲು ಯುವಜನ ಮತ್ತು ಕ್ರೀಡಾ ಇಲಾಖೆ ನೆರವಾಗಬೇಕು.
4. ದೇವಾಲಯಗಳು : ಕರಾವಳಿ ಕರ್ನಾಟಕದ ಬಹುತೇಕ ದೇವಾಲಯಗಳು ಮುಜರಾಯಿ ಇಲಾಖೆಯ ವಶದಲ್ಲಿವೆ. ಕರಾವಳಿಯ ಜನರಲ್ಲಿ ವಿಪರೀತ ದೈವಭಕ್ತಿ ಇರುವುದ ರಿಂದ ದೇವಾಲಯಗಳ ಬೊಕ್ಕಸಗಳಲ್ಲಿ ಭರ್ತಿ ಹಣವಿದೆ. ಮುಜರಾಯಿ ಇಲಾಖೆ ಮತ್ತು ದೇವಾಲಯದ ವಿಶ್ವಸ್ಥ ಮಂಡಳಿ ಮನಸ್ಸು ಮಾಡಿದರೆ ದೇವಾಲಯಗಳನ್ನು ಸಾಂಸ್ಕೃತಿಕ ಕೇಂದ್ರಗಳಾಗಿ ಪರಿವರ್ತಿಸಲು ಸಾಧ್ಯವಿದೆ.
ಪ್ರತಿ ದೇವಾಲಯಗಳು ಯಕ್ಷಗಾನ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ಯಕ್ಷಗಾನ ತಂಡಗಳನ್ನು ರೂಪಿಸಬೇಕು. ವಾರಕ್ಕೊಂದು ತಾಳಮದ್ದಳೆ ಮತ್ತು ತಿಂಗಳಿಗೊಂದು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಜಾತ್ರೆಯ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ರನ್ನು ಸನ್ಮಾನಿಸಬೇಕು. ದೇವಾಲಯಗಳಲ್ಲಿ ಯಕ್ಷಗಾನದ ಗ್ರಂಥಾಲಯಗಳಿರಬೇಕು. ದೇವಾಲಯಗಳ ವಿಶ್ವಸ್ಥ ಮಂಡಳಿಗಳಲ್ಲಿ ಒಬ್ಬನಾದರೂ ಯಕ್ಷಗಾನ ಕಲಾವಿದ ಅಥವಾ ವಿದ್ವಾಂಸನಿರಬೇಕು. ಹಾಗಾದಾಗ ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಜನರಿಗೆ ಹತ್ತಿರವಾಗುತ್ತವೆ.
ಕೆಲವು ವರ್ಷಗಳ ಹಿಂದೆ ಕುಂದಾಪುರದ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರರ ಜತೆ ಇಂಗ್ಲೆಂಡಿಗೆ ಹೋಗಿ ಅವರ ಸೊಸೆ ಶಾಂತಾರಾವ್ ಅವರ ಹ್ಯಾಲಿಫ್ಯಾಕ್ಸ್ ಮನೆಯಲ್ಲಿ ನಾಲ್ಕು ದಿನ ಕಳೆದಿದ್ದೆ. ಇಂಗ್ಲೆಂಡಿನ ಪ್ರಾಥಮಿಕ ಶಾಲೆಗಳಲ್ಲಿ ಅನ್ಯದೇಶಗಳ ಕಲಾ ಪ್ರಕಾರ ವೊಂದನ್ನು ಕಲಿಯಲೇಬೇಕೆಂಬ ನಿಯಮವಿದೆ. ಅದು ಆ ದೇಶದ ಶಿಕಣ ನೀತಿಯ ಒಂದು ಭಾಗ. ಭರತನಾಟ್ಯ ಚೆನ್ನಾಗಿ ಬಲ್ಲ ಶಾಂತಾರಾವ್ ಹ್ಯಾಲಿಫ್ಯಾಕ್ಸಿನ ಶಾಲೆಗಳಲ್ಲಿ ಭರತನಾಟ್ಯದ ಶಿಕಣ ನೀಡಿ ತುಂಬಾ ಹೆಸರು ಗಳಿಸಿದ್ದರು. ಅವರಿಗೆ ಯಕ್ಷಗಾನ ನೋಡಿ ಗೊತ್ತಿರಲಿಲ್ಲ. ಅವರ ಭರತನಾಟ್ಯ ಶಾಲೆಯಲ್ಲಿ ನಾನು ಭರತನಾಟ್ಯದ ಗೆಜ್ಜೆ ಧರಿಸಿ ಯಕ್ಷಗಾನದ ನೃತ್ಯ ಮಾಡಿ ತೋರಿಸಿದೆ. ಯಕ್ಷಗಾನ ಮತ್ತು ಭರತನಾಟ್ಯ ಒಟ್ಟಿಗೆ ಸೇರಿಸಿ ಹೊಸದೊಂದು ನಾಟ್ಯ ಪ್ರಕಾರವನ್ನು ಹುಟ್ಟು ಹಾಕುವ ಬಗ್ಗೆ ಶಾಂತಾರಾವ್ ಈಗಲೂ ಯೋಚಿಸುತ್ತಿದ್ದಾರೆ.
ಅನ್ಯದೇಶಗಳ ಕಲಾ ಪ್ರಕಾರವೊಂದರ ಕಲಿಕೆ ಇಂಗ್ಲೆಂಡಿನ ಶಿಕಣ ನೀತಿಯ ಒಂದು ಅಂಗ. ನಮ್ಮ ದೇಶದ ಕಲಾಪ್ರಕಾರದ ಕಲಿಕೆ ನಮ್ಮ ಶಿಕ್ಷಣ ನೀತಿಯ ಒಂದು ಅಂಗ ಯಾಕಾಗಬಾರದು?
ಅಭ್ಯಾಸಾತ್ಮಕ ಪ್ರಶ್ನೆಗಳು
1. ಯಕ್ಷಗಾನ ಶಿಕಣದ ಅಗತ್ಯವೇನಿದೆ?
2. ಯಕ್ಷಗಾನ ಔಪಚಾರಿಕ ಶಿಕಣ ಹೇಗಿರಬೇಕು?
3. ಯಕ್ಷಗಾನ ಅನೌಪಚಾರಿಕ ಶಿಕಣಕ್ಕೆ ಯಾವ ಸಂಘಟನೆಗಳನ್ನು ಬಳಸಿಕೊಳ್ಳಬಹುದು ?
4. ಯಕ್ಷಗಾನಕ್ಕೊಂದು ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಿಸುವ ಅಗತ್ಯವಿದೆಯೆ?
ಕಠಿಣ ಪದಗಳು
ಅನೌಪಚಾರಿಕ ಶಿಕಣ = ನಿಗದಿತ ವೇಳಾಪಟ್ಟಿ, ಪಠ್ಯಕ್ರಮ, ಪರೀಕ್ಷಾ ಹಾವಳಿಗಳಿಲ್ಲದ ಶಿಕಣವ್ಯವಸ್ಥೆ.
ಔಪಚಾರಿಕ ಶಿಕಣ = ನಿಗದಿತ ವೇಳಾಪಟ್ಟಿ, ಪಠ್ಯಕ್ರಮ ಮತ್ತು ಪರೀಕೆ ಗಳಿರುವ ಶಿಕಣ ವ್ಯವಸ್ಥೆ
ಪಾಶ್ಚಾತ್ಯೀಕರಣ = ಪಾಶ್ಚಾತ್ಯ ಸಂಸ್ಕೃತಿಯ ಅನುಕರಣ
ಪ್ಲಸ್ ಟೂ ಹಂತ = ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ಹಂತ.