ಯಕ್ಷಗಾನ ವೇಷಗಳು

ವಿಶಿಷ್ಟ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಸಿದ್ಧಗೊಳ್ಳುವ ಯಕ್ಷಗಾನದ ಪಾತ್ರಗಳೇ ಯಕ್ಷಗಾನದ ವೇಷಗಳು. ಕಲಾವಿದನೊಬ್ಬ ಹೊರನೋಟಕ್ಕೆ ಯಕ್ಷಗಾನದ ಒಂದು ಪಾತ್ರವಾಗಿ ಪರಿವರ್ತನೆಗೊಳ್ಳುವ
ಪ್ರಕ್ರಿಯೆಗೆ ವೇಷ ನಿರ್ಮಾಣ ವೆಂದು ಹೆಸರು. ಯಕ್ಷಗಾನ ವೇಷವನ್ನು ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಪಾತ್ರವಾಗಿ ರೂಪಾಂತರಗೊಳ್ಳುವ ಯಕ್ಷಗಾನ ಕಲಾವಿದಎಂದು ವ್ಯಾಖ್ಯಾನಿಸಬಹುದು. ಉಡುಗೆ ತೊಡುಗೆಯನ್ನು
ವೇಷಭೂಷಣ ಮತ್ತು ಮುಖವರ್ಣಿಕೆಯನ್ನು ಬಣ್ಣಗಾರಿಕೆ ಎಂದು ಕರೆಯಲಾಗುತ್ತದೆ. ವೇಷ ನಿರ್ಮಾಣವನ್ನು ಪಾತ್ರದ ಬಿಂಬ ರಚನೆ ಅಥವಾ ಆಹಾರ್ಯ ಎನ್ನಲಾಗುತ್ತದೆ. ವೇಷವೆಂದರೆ ಸಾಮಾನ್ಯವ್ಯಕ್ತಿ ಪಾತ್ರವಾಗಿ ಪಡಿಮೂಡುವುದು. ಕಲಾವಿದ ವೇಷವಾಗಿ ರೂಪಾಂತರಗೊಳ್ಳಲು ಉಡುಗೆ ತೊಡುಗೆಗಳು ಮತ್ತು ಮುಖವರ್ಣಿಕೆಗಳು ನೆರವಾಗುತ್ತವೆ.

ಯಾವ ವೇಷಕ್ಕೆ ಯಾವ ಉಡುಗೆತೊಡುಗೆ ಮತ್ತು ಮುಖವರ್ಣಿಕೆ ಎಂಬ ಬಗ್ಗೆ ಸಾಮಾನ್ಯವಾದ ಖಚಿತ ನಿರ್ಣಯ ಯಕ್ಷಗಾನದಲ್ಲಿದೆ. ವೇಷಗಳನ್ನು ವರ್ಗೀಕರಿಸಿ ಅವುಗಳ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆ ನಿರ್ಣಯ ಮಾಡಲಾಗುತ್ತದೆ.

6.1 ಪೂರ್ವರಂಗದ ವೇಷಗಳು

ಕಥಾರಂಭಕ್ಕೆ ಮೊದಲಿನ ಯಕ್ಷಗಾನ ರಂಗಕ್ರಿಯೆಯನ್ನು ಪೂರ್ವರಂಗವೆಂದು ಕರೆಯಲಾಗುತ್ತದೆ. ರಾತ್ರಿ ಸುಮಾರು ಎಂಟು ಗಂಟೆಯಿಂದ ಹತ್ತು ಗಂಟೆಯವರೆಗೆ ಪೂರ್ವ ರಂಗದ ವೇಷಗಳು ರಂಗ ಚಟುವಟಿಕೆ ನಡೆಸುತ್ತವೆ.

ಪೂರ್ವರಂಗಕ್ಕೆ ಎರಡು ಉದ್ದೇಶಗಳಿವೆ.

ವ್ಯಕ್ತಿಯೊಬ್ಬನಿಗೆ ತಾಳ ಮತ್ತು ಹೆಜ್ಜೆಗಳ ಪರಿಚಯ ಮಾಡಿಸಿ ಆತನ್ನು ನೃತ್ಯ ಬಲ್ಲ ಸಮರ್ಥ ಕಲಾವಿದನನ್ನಾಗಿ ರೂಪಾಂತರಿಸುವುದು.  ಪ್ರೇಕಕರನ್ನು ಪ್ರಸಂಗ ಆಸ್ವಾದನೆಗೆ ಮಾನಸಿಕವಾಗಿ ಸಿದ್ಧಗೊಳಿಸುವುದು.

ಪೂರ್ವರಂಗದಲ್ಲಿ ಹಿಂದೆ ಅನೇಕ ವೇಷಗಳಿದ್ದವು. ಈಗ ಉಳಿದುಕೊಂಡಿರುವ ವೇಷಗಳು, ಕೋಡಂಗಿ ವೇಷ, ನಿತ್ಯವೇಷ, ಷಣ್ಮುಖ ಸುಬ್ಬರಾಯ, ಅರ್ಧನಾರೀಶ್ವರ, ಸ್ತ್ರೀ ವೇಷಗಳು ಮತ್ತು ಹಾಸ್ಯಗಾರ, ಪೀಠಿಕೆ ಸ್ತ್ರೀವೇಷಗಳು.
ಇತ್ತೀಚೆಗೆ ಷಣ್ಮುಖ ಸುಬ್ಬರಾಯ ಮತ್ತು ಅರ್ಧನಾರೀಶ್ವರ ವೇಷಗಳನ್ನು ಕೈಬಿಟ್ಟು ಸುಲಭಶೀಲತೆಗೆ ಮೇಳಗಳು ಶರಣಾಗಿವೆ.

1. ಕೋಡಂಗಿ ವೇಷಗಳು : ಇವು ಪೂರ್ವರಂಗದಲ್ಲಿ ಬರುವ ಮೊದಲ

ವೇಷಗಳು. ಇಬ್ಬರು ಬಾಲಕರು ಕೋಡಂಗಿಗಳಾಗಿ ರಂಗದಲ್ಲಿ ಕಾಣಿಸಿಕೊಂಡು

ದೇವತಾ ಸ್ತುತಿಗಳಿಗೆ ನರ್ತಿಸುವುದು ಕೋಡಂಗಿ ನೃತ್ಯ ಎನಿಸಿದೆ. ಕೋಡಂಗಿ ವೇಷವು ನೃತ್ಯಕಲಿಕೆಯ ಪ್ರಥಮ
ಹಂತ. ನೃತ್ಯ ಕಲಿಯಲೆಂದೇ ಮೇಳಕ್ಕೆ ಸೇರಿದ ಅಭ್ಯಾಸೀ ಹುಡುಗರಿಂದ ಕೋಡಂಗಿ ವೇಷವನ್ನು ಮಾಡಿಸುವುದು ರೂಢಿ. ಶಿವರಾಮ ಕಾರಂತರು ಕೋಡಂಗಿಯನ್ನುಆಟದಲ್ಲಿ ಮೊದಲಿಗೆ ಕುಣಿಯವವ, ಕುಣಿತದ ಅಭ್ಯಾಸಿ,
ಹಾಸ್ಯಗಾರ ಎಂದು ವ್ಯಾಖ್ಯಾನಿಸಿದ್ದಾರೆ. [ಸಿರಿಗನ್ನಡ ಅರ್ಥಕೋಶ, 1992 ಪುಟ 141][ ಕಿಟ್ಟಲ್‌ ಪದಕೋಶದ ಪ್ರಕಾರ ಕೋಡಂಗಿ ಎಂದರೆ ಕಪಿಮಾನವ, ಪ್ರಹಸನಗಳಲ್ಲಿ ಬರುವ ಹಾಸ್ಯಪಾತ್ರ ಅಥವಾ ಬಫೂನು ಕನ್ನಡಇಂಗ್ಲೀಷ್‌
ಡಿಕ್ಷ್‌ನರಿ 1994 ಪುಟ 497]

ಕೋಡಂಗಿ ವೇಷವು ಚಲ್ಲಣ ಮತ್ತು ಗಿಡ್ಡದ ನಿಲುವಂಗಿಯನ್ನು ತೊಟ್ಟು ತಲೆಗೆ ರುಮಾಲು ಸುತ್ತಿ ಮಾವಿನ ಸೊಪ್ಪುಪ ಸಿಕ್ಕಿಸಿಕೊಳ್ಳುತ್ತದೆ. ಮಾವಿನ  ಸೊಪ್ಪುಪ ಕಪಿಮಾನವನ ಸಂಕೇತವಿರಬಹುದು. ವಿಕಾಸವಾದದ ಪ್ರಕಾರ ಕಪಿಯು
ಮಾನವನಾಗುವ ಮಧ್ಯಸ್ಥತಿಯೇ ಕಪಿಮಾನವರೂಪ. ಯಕ್ಷಗಾನದಲ್ಲಿ ವ್ಯಕ್ತಿಯು ಕಲಾವಿದನಾಗುವ ಮಧ್ಯಸ್ಥತಿಯೇ ಕೋಡಂಗಿತನ. ಕೋಡಂಗಿ ವೇಷವು ಕುಣಿತಕ್ಕೆ ಅನುಕೂಲ ವಾಗಲೆಂದು ಸೊಂಟಕ್ಕೆ ಜಟ್ಟಿ ಬಿಗಿದುಕೊಳ್ಳುತ್ತದೆ. ಮುಖಕ್ಕೆ ಬಿಳಿ ಬಣ್ಣ ಅಥವಾ ಬಿಳಿನಾಮಧಾರಣೆ ಮಾಡುತ್ತದೆ. ಮಾವಿನ ಸೊಪ್ಪು ಕಟ್ಟಿಕೊಳ್ಳುವುದರಿಂದ ಸೊಪ್ಪಿನ ವೇಷವೆಂದೂ, ದವರು ನಿಲುವಂಗಿ ಧರಿಸುವುದರಿಂದ ದವರು, ಡೌರು ವೇಷದವರೆಂದೂ ಕೋಡಂಗಿಗಳನ್ನು
ಕರೆಯುವುಂಟು.

ಕೋಡಂಗಿಗಳು ಸಭಾಲಕ್ಷಣದಿಂದ ಆರಂಭಿಸಿ ಅರ್ಧನಾರಿ ವೇಷದವರೆಗೆ ರಂಗದಲ್ಲಿರುವ ವೇಷಗಳು. ಅವು ನಿಲ್ಲುವ ಸ್ಥಾನಕ್ಕನುಗುಣವಾಗಿ ಕೋಡಂಗಿಗಳನ್ನು ಬಲದ ಕೋಡಂಗಿ ಮತ್ತು ಎಡದ ಕೋಡಂಗಿ ಎಂದು ಕರೆಯಲಾಗುತ್ತದೆ. ‘ಸ್ತುತಿ ಪದ್ಯಗಳಿಗೆ ಕುಣಿಯುವುದು, ಮಧ್ಯೆ ಆಹಾ, ಭಾಲಾ, ಶಾಭಾ ಎಂದು ಒತ್ತುಕೊಡುವುದು, ಷಣ್ಮುಖ ಸುಬ್ಬರಾಯ, ಅರ್ಧನಾರಿ ಮುಂತಾದ ವೇಷಗಳನ್ನು ಮಾತಾಡಿಸುವುದು ಇವರ ಕೆಲಸ.’ [ಯಕ್ಷಗಾನ ಪದಕೋಶ, 1994, ಪುಟ 53]

2. ಬಾಲಗೋಪಾಲ ವೇಷಗಳು : ಇವು ಕೋಡಂಗಿಗಳ ಬಳಿಕ ರಂಗಕ್ಕೆ ಬರುವ ವೇಷಗಳು. ಇವುಗಳನ್ನು ನಿತ್ಯವೇಷಗಳು ಎಂದು ಕರೆಯಲಾಗುತ್ತದೆ.

ಪ್ರತಿನಿತ್ಯವೂ ರಂಗಕ್ಕೆ ಬರಲೇಬೇಕಾದ ಪಗಡಿ ವೇಷಗಳಿವು. ಹಾಗಾಗಿ ನಿತ್ಯವೇಷಗಳೆಂದು ಹೆಸರು. ಈ ವೇಷ ಗಳನ್ನು ಪ್ರಸಂಗದಲ್ಲಿ ಪೀಠಿಕೆವೇಷಗಳ ಅಥವಾ ರಾಜವೇಷಗಳ ಬಲಗಳಾಗಿ ಬಳಸಿಕೊಳ್ಳ ಲಾಗುತ್ತದೆ. ಪಾಂಡವರ
ಒಡ್ಡೋಲಗದಲ್ಲಿ ಇವರು ನಕುಲ ಸಹದೇವರಾಗುತ್ತಾರೆ. ಸಭಾ ಲಕ್ಷಣದ ಸ್ತ್ರೀವೇಷಗಳು ಮತ್ತು ಕೋಡಂಗಿಗಳೂ ಕೂಡಾ ವಿಶಾಲಾರ್ಥದಲ್ಲಿ ನಿತ್ಯವೇಷದ ಪರಿಧಿಯೊಳಗೆ ಬರುತ್ತವೆ. ಆದರೆ ಬಾಲಗೋಪಾಲ ವೇಷಗಳನ್ನೇ ಹೆಚ್ಚಾಗಿ
ನಿತ್ಯವೇಷ ಎಂದು ಕರೆಯುವುದು ರೂಢಿ. ಬಾಲಗೋಪಾಲ ವೇಷಗಳು ಪಗಡಿ ವೇಷಗಳಂತಿರುತ್ತವೆ.

ಸಪೇತವೆಂಬ ಬಿಳಿ ಬಣ್ಣಕ್ಕೆ ಹಳದಿ ಮತ್ತು ಕೆಂಪು ಸೇರಿಸಿ ಮೂಲಲೇಪ ಸಿದ್ಧಪಡಿಸಿ ಅದನ್ನು ಮುಖಕ್ಕೆ ಹಚ್ಚಲಾಗುತ್ತದೆ. ಹಣೆಯಲ್ಲಿ ವಿಷ್ಣುನಾಮ ಅಥವಾ ಉದ್ದನಾಮ ಹಾಕಲಾಗುತ್ತದೆ. ಹಿಂದೆ ಮೂಲ ಲೇಪಕ್ಕೆ ಅರದಾಳವೆಂಬ ಕಲ್ಲು ಬಳಕೆಯಾಗುತ್ತಿತ್ತು. ಭೂತ ನರ್ತಕರೂ ಕೂಡಾ ಹಿಂದೆ ಅರದಾಳವನ್ನು ಮುಖವರ್ಣಿಕೆಗೆ ಮೂಲಲೇಪವಾಗಿ ಬಳಸುತ್ತಿದ್ದರು.

3 ಷಣ್ಮುಖ ಸುಬ್ಬರಾಯ : ಶಿವನ ಪುತ್ರನಾದ ಕುಮಾರಸ್ವಾಮಿ ಯಕ್ಷಗಾನ ಪೂರ್ವರಂಗದಲ್ಲಿ ಈ ಹೆಸರಲ್ಲಿ ಕಾಣಿಸಿಕೊಳ್ಳುತ್ತಾನೆ. ಅವನಿಗೆ ಆರು ತಲೆಗಳಿವೆ ಎಂಬ ಕಾರಣಕ್ಕೆ ಆತ ಷಣ್ಮುಖ. ಆತನ್ನು ತುಳುನಾಡಿನಲ್ಲಿ ನಾಗನ
ರೂಪದಲ್ಲಿ ಪೂಜಿಸುವುದರಿಂದ ಆತ ಸುಬ್ಬರಾಯ. ಬಾಲಗೋಪಾಲರ ನಿರ್ಗಮನವಾದ ಬಳಿಕ ಈ ವೇಷ ರಂಗಕ್ಕೆ ಬರುತ್ತದೆ.

ಷಣ್ಮುಖ ಸುಬ್ಬರಾಯನ ಬಗ್ಗೆ ಪ್ರಭಾಕರ ಜೋಷಿಯವರು ದಾಖಲಿಸಿರುವ ವಿವರಗಳಿವು: [ಯಕ್ಷಗಾನ ಪದಕೋಶ, 1994, ಪುಟ 148]

ಈ ವೇಷವು ಗಣಪತಿ ಕೌತುಕವಾದೊಡನೆ ಬಾಲಗೋಪಾಲ ನೃತ್ಯದ ಕೊನೆಯ ಪದ್ಯದಿ ಬರುವುದು. ಜತೆಗೆ ಕೋಡಂಗಿಯೂ ಇರವನು. ತಾರಕನ ಕೊಲಲೆಂದು……..ಎಂಬ ಭಾಮಿನಿಗೆ ತೆರೆಯಲ್ಲಿ ಷಣ್ಮುಖ ಸುಬ್ಬರಾಯನ
ಪ್ರವೇಶವಾಗುವುದು. ಆ ಪದ್ಯಗಳಿಗೆ ಕುಣಿತವಾದ ಬಳಿಕ ಸುಬ್ಬರಾಯ ಕೋಡಂಗಿಯೊಡನೆ ಸಂಭಾಷಣೆ ನಡೆಸುತ್ತಾನೆ. ಆಮೇಲೆ ನಾಲ್ಕು ಪದ್ಯಗಳಿಗೆ ಕುಣಿದು ‘ಬಂದ ಹಾಗೆ ಹಿಂದೆ ಹೋಗೊ ಸುಬ್ಬರಾಯ’ ಎಂಬ ಪದ್ಯಕ್ಕೆ
ನಿರ್ಗಮನ. ನಾಗರಹಾವು ಕಾಣಿಸಿಕೊಂಡರೆ ನಾಗಾರಾಧಕರಾದ ಕರಾವಳಿ ಜನರು ಅದನ್ನು ಕೊಲ್ಲದೆ ಹಿಂದೆ ಹೋಗು ಎಂದು ಪ್ರಾರ್ಥಿಸುತ್ತಾರೆ. ಷಣ್ಮುಖ ಸುಬ್ಬರಾಯ ನಿಸ್ಸಂಶಯ ವಾಗಿ ನಾಗಾರಾಧಕನೆಯ ಸಂಕೇತವಾಗಿದೆ.

ಷಣ್ಮುಖ ಸುಬ್ಬರಾಯ ರಾಜವೇಷದಂತೆ ಕಿರೀಟ ಕಟ್ಟಿದ, ಆದರೆ ಮೀಸೆ ಇಲ್ಲದ ವೇಷ. ಈ ವೇಷದ ಮೊದಲ ಪದ್ಯ ‘ಕುಂಡಲ ಮಣಿ ಭೂಷಣಾ’ಇದಕ್ಕೆ ಸರ್ಪನ ಹೆಡೆಯಂತೆ ಎರಡೂ ಕೈಗಳನ್ನು ಕಿರೀಟದ ಮುಂದೆ ತಂದು ಅಭಿನಯ
ಮಾಡಲಾಗುತ್ತದೆ. ಈ ವಿಶಿಷ್ಟ ವೇಷ ಈಗ ಯಕ್ಷಗಾನದಿಂದ ಕಣ್ಮರೆಯಾಗಿದೆ.

4. ಅರ್ಧ ನಾರೀಶ್ವರ : ಎಲ್ಲಾ ಮನುಷ್ಯರು ಪುಂಸ್ತ್ರೀಗಳೇ. ಹೆಣ್ಣುಗಳಲ್ಲಿರುವ ಪುರುಷ ಸ್ವಭಾವವನ್ನು ಮತ್ತು ಗಂಡುಗಳಲ್ಲಿರುವ ಸ್ತ್ರೀ ಸ್ವಭಾವವನ್ನು ‘ಅರ್ಧ ನಾರೀಶ್ವರ’ ಸಂಕೇತಿಸುತ್ತದೆ. ದೇಹದ ಬಲಭಾಗವನ್ನು
ಈಶ್ವರನಂತೆ, ಎಡಭಾಗವನ್ನು ಪಾರ್ವತಿಯಂತೆ ವೇಷಭೂಷಣ ಮತ್ತು ಮುಖವರ್ಣಿಕೆಯಿಂದ ಸಿದ್ಧಗೊಳಿಸಿದಾಗ ಅರ್ಧನಾರೀಶ್ವರ ರೂಪು ಗೊಳ್ಳುತ್ತಾನೆ. ಆತ ಸ್ತ್ರೀಪುರುಷ ಸಮಾನತೆಯ ಸಂಕೇತವೂ ಹೌದು.

ಅರ್ಧನಾರೀಶ್ವರ ಕುಣಿತದಲ್ಲಿ ಶಿವನ ಪದ್ಯ ಬರುವಾಗ ಶಿವನ ಭಾಗ ಮಾತ್ರ ಕಾಣುವಂತೆ, ಪಾರ್ವತಿಯ ಪದ್ಯ ಬರುವಾಗ ಪಾರ್ವತಿಯ ಭಾಗ ಮಾತ್ರ ಕಾಣುವಂತೆ ನರ್ತಿಸಲಾಗುತ್ತದೆ. ಈ ಪಾತ್ರ ಕೋಡಂಗಿಯೊಡನೆ ಶಿವನಾಗಿ ಸಂಭಾಷಣೆ ನಡೆಸುತ್ತದೆ. ಎಪ್ಪತ್ತೈದು ದಾಟಿನ ಕೋಳ್ಯೂರು ರಾಮಚಂದ್ರರಾಯರು ಈಗಲೂ ಅರ್ಧನಾರೀಶ್ವರ ವೇಷ ಹಾಕಿ ರಂಗ ಪ್ರದರ್ಶನ ಮಾಡುತ್ತಾರೆ.

ಮಾನವನ ದ್ವಯಾತ್ಮಕತೆಗೆ ಇಷ್ಟೊಂದು ಸಮರ್ಪಕ ಸಂಕೇತ ಬೇರೆ ದೊರೆಯಲು ಸಾಧ್ಯವಿಲ್ಲ.

5. ಪೂರ್ವರಂಗದ ಸ್ತ್ರೀ ವೇಷಗಳು : ಪೂರ್ವರಂಗದಲ್ಲಿ ಚಂದ ಭಾಮಾಸ್ತ್ರೀ ವೇಷ, ಮುಖ್ಯ ಸ್ತ್ರೀ ವೇಷ ಮತ್ತು ಕಚ್ಚೆ ಸ್ತ್ರೀ ವೇಷವೆಂಬ ಮೂರು ಪ್ರಕಾರಗಳು ಕಾಣಿಸಿಕೊಳ್ಳುತ್ತವೆ. ಚಂದಭಾಮಾ ಸ್ತ್ರೀ ವೇಷಗಳು ಉಡುಗೆಯ ವೇಷಗಳಾಗಿವೆ. ಬಲಿಪ ನಾರಾಯಣ ಭಾಗವತರು ಚಂದ ಭಾಮಾ ಸ್ತ್ರೀ ವೇಷಗಳನ್ನು  ಮರಾಠಾ ದೇಶದ ಹೆಂಗಸರ ಉಡುಗೆಯಂತೆ ಸೀರೆಯನ್ನು ಕಚ್ಚೆ ಹಾಕಿ ಉಟ್ಟಿರುವ ಎರಡು ಸ್ತ್ರೀ ವೇಷಗಳು  ಎಂದು ಬಣ್ಣಿಸಿದ್ದಾರೆ [ಯಕ್ಷಗಾನ ಮಕರಂದ, ಪುಟ 327] ಮುಖ್ಯ ಸ್ತ್ರೀ ವೇಷವು ರಾಣಿಯಂತೆ ಗಾಂಭೀರ್ಯವುಳ್ಳ ವೇಷ. ಸ್ತ್ರೀ ವೇಷಕ್ಕೆ ಸಂಭಾಷಣೆಯಿಲ್ಲ. ಸ್ತ್ರೀವೇಷ ಕುಣಿತದ ಒಂದು ಭಾಗವಾಗಿ ಪೀಠಿಕೆ ಹಾಸ್ಯಗಾರನ ಹೊಗಳಿಕೆ ಇರುತ್ತದೆ. ಪೀಠಿಕೆ ಹಾಸ್ಯಗಾರನ ನಿರ್ಗಮನದ ಬಳಿಕ ಪೀಠಿಕೆ ಚೆಂಡೆವಾದನವಾಗಿ ಎರಡು ಪೀಠಿಕೆ ಸ್ತ್ರೀ ವೇಷಗಳ ಕುಣಿತವಿರುತ್ತದೆ. ಅವು ಪ್ರಮೀಳೆಯಂತಹ ಕಸೆ ವೇಷಗಳು. ಪೀಠಿಕೆ ಸ್ತ್ರೀವೇಷಗಳ ಕುಣಿತದ ಬಳಿಕ ‘ಅಂಬು ರುಹ ದಳ ನೇತ್ರೆ…….. ‘ ಎಂಬ ಭಾಮಿನಿ ಹಾಡಿದ ಬಳಿಕ ಪೀಠಿಕೆ ವೇಷದ ಪ್ರವೇಶವಾಗುತ್ತದೆ. ಅದುವೇ ಪ್ರಸಂಗದ ಆರಂಭ.

6.2 ಕಥಾಪ್ರಸಂಗದ ವೇಷಗಳು

ಯಕ್ಷಗಾನ ಕಥಾಪ್ರಸಂಗದ ವೇಷಗಳನ್ನು ಕೋಲು ಕಿರೀಟ ವೇಷಗಳು, ಪಗಡಿ ವೇಷಗಳು, ಬಣ್ಣದ ವೇಷಗಳು, ಹಾಸ್ಯ ವೇಷಗಳು ಮತ್ತು ವಿಶಿಷ್ಟ ವೇಷಗಳೆಂದು ವರ್ಗೀಕರಿಸಲಾಗುತ್ತದೆ.

1. ಕೋಲು ಕಿರೀಟ ವೇಷಗಳು : ರಾಜ ಮತ್ತು ರಾಜಸ ಸ್ವಭಾವದ ಪಾತ್ರಗಳು ಧರಿಸುವ ಉದ್ದನೆಯ ಕಿರೀಟಕ್ಕೆ ಕೋಲು ಕಿರೀಟವೆಂದು ಹೆಸರು. ಕೋಲು ಕಿರೀಟದ ಮಧ್ಯದಲ್ಲಿ ಕಲಶ, ತುದಿಯಲ್ಲಿ ನವಿಲು ಗರಿಗಳು ಮತ್ತು ಎಡ ಬಲಗಳಲ್ಲಿ ಆಂಗ್ಲ ವರ್ಣ ಮಾಲಿಕೆಯ ಎಸ್‌ (s) ಅಕರದ ರಚನೆಗಳಿವೆ. ಕೋಲು ಕಿರೀಟ ವೇಷಗಳಲ್ಲಿ ರಾಜವೇಷ, ಪೀಠಿಕೆ ವೇಷ ಮತ್ತು ಎದುರು ವೇಷವೆಂದು ಮೂರು ವಿಧ. ಪೀಠಿಕೆ ವೇಷವು ಪ್ರಸಂಗದ ಆರಂಭದಲ್ಲಿ ಬರುವ ವೇಷವಾಗಿದೆ. ರಾಮಾಯಣದಲ್ಲಿ ದಶರಥ, ರಾಮ, ಮಹಾಭಾರತ ದಲ್ಲಿ ಪಾಂಡವರು, ಪಾಂಡವಾಶ್ವ ಮೇಧದಲ್ಲಿ ಅರ್ಜುನ, ರಾಮಾಶ್ವಮೇಧದಲ್ಲಿ ಶತ್ರುಘ್ನ,

ಬಹುತೇಕ ಪ್ರಸಂಗಗಳಲ್ಲಿ ದೇವೇಂದ್ರ  ಪೀಠಿಕೆ ವೇಷಗಳು. ಇವು ಕಿರೀಟ ಇಟ್ಟು ಮಿಸೆ ಕಟ್ಟುವ ಕಟ್ಟು ವೇಷಗಳು. ಇವುಗಳ ಮುಖ ವರ್ಣಿಕೆ ಸೌಮ್ಯವಾಗಿರುತ್ತದೆ ಮತ್ತು ಇವು ಬಹುತೇಕವಾಗಿ ವೈಷ್ಣವ ನಾಮದ ವೇಷಗಳಾಗಿವೆ. ರಾಜವೇಷ ಮತ್ತು ಪೀಠಿಕೆ ವೇಷಗಳ ಆಹಾರ್ಯದಲ್ಲಿ ತುಂಬಾ ವ್ಯತ್ಯಾಸಗಳಿರುವುದಿಲ್ಲ.

ಎದುರು ವೇಷಗಳೂ ಕೂಡಾ ಕೋಲು ಕಿರೀಟ ವೇಷಗಳೇ. ಪೀಠಿಕೆ ವೇಷಗಳು ನಾಯಕನ ವೇಷಗಳಾದರೆ, ಎದುರು ವೇಷಗಳು ಪ್ರತಿ ನಾಯಕನ ವೇಷಗಳಾಗಿವೆ. ಅತಿಕಾಯ, ಇಂದ್ರಜಿತು, ತಾಮ್ರಧ್ವಜ, ಕರ್ಣಪರ್ವದ ಕರ್ಣ, ಗದಾಯುದ್ಧದ ಕೌರವ, ಕಾರ್ತವೀರ್ಯ, ಭದ್ರಸೇನ, ದಕ, ಕೌಂಡ್ಲಿಕ,ಇತ್ಯಾದಿ ಪಾತ್ರಗಳು ಎದುರು ವೇಷಗಳಾಗಿವೆ. ನಾಯಕನಿಗೆ ಎದುರಾಗಿ ನಿಲ್ಲುವ ಕಾರಣ ಇವು ಎದುರು ವೇಷಗಳು. ಎದುರು ವೇಷದ ಮುಖ ವರ್ಣಿಕೆಗಳು ಪ್ರಖರವಾಗಿರುತ್ತವೆ. ಎದುರು ವೇಷಗಳ ಹಣೆಯ ನಾಮದಲ್ಲಿ ಅವುಗಳ ಸ್ವಭಾವದ ಸಂಕೇತಗಳಿರುತ್ತವೆ.

ಯಕ್ಷಗಾನ ಕವಿ ಅಮೃತ ಸೋಮೇಶ್ವರರ ಪ್ರಕಾರ ರಾಜವೇಷಕ್ಕೆ ಪಂಚವರ್ಣದ ರೇಖೆಗಳು ಇರಬೇಕೆಂಬ ಹೇಳಿಕೆ ಇದೆ. ಪೀಠಿಕೆ ವೇಷವು ವಿಷ್ಣು ಭಕ್ತನಾದರೆ, ವೈಷ್ಣವ ದ್ಯೋತಕವಾದ ಊರ್ಧ್ವ ಪುಂಡ್ರಮುದ್ರೆಗಳಾಗಲಿ, ಚಕ್ರಗೀರು
ಗಂಧಗಳಾಗಲಿ, ಇರಬಹುದು. ರಾಜವೇಷಕ್ಕೆ ಕಪ್ಪಾದ ಗಡ್ಡದ ರೇಖೆಯನ್ನು ಮೂಡಿಸಬೇಕೆಂಬ ನಿಯಮವಿದೆ. ಇಂದ್ರ, ಅರ್ಜುನ ಮೊದಲಾದವು ಶೃಂಗಾರ ವೇಷ ಎಂಬುದಕ್ಕಾಗಿ ಶೃಂಗಾರ ಸೂಚಕವಾದ ಚಿಕ್ಕ ಹಸಿರು ವರ್ತುಲವನ್ನು
ಕಣ್ಣಿನ ಕೆಳಗಡೆ ಬರೆಯುವ ಪದ್ಧತಿಯಿದೆ. ಧೀರೋದ್ಧತ ಪಾತ್ರಗಳಿಗೆ ಕಣ್ಣಿನ ಕೆಳಗಡೆ ಕೆಂಪುಬಿಳಿ ರೇಖೆಗಳನ್ನೆಳೆದು, ಆ ರೇಖೆಗಳು ಸಂಧಿಸುವಲ್ಲಿ ಪುಟ್ಟ ಚುಟ್ಟಿ ಗಳನ್ನು ಬರೆದು ಔದ್ಧತ್ಯವು ಪ್ರಕಟವಾಗುವಂತೆ ಮಾಡುತ್ತಾರೆ. ಪ್ರತಿನಾಯಕ ಪಾತ್ರಗಳಿಗೆ ಕಣ್ಣಿನ ಕೆಳಗಡೆ ಹಾಗೂ ಕೆಳತುಟಿಯ ಕೆಳಗೆ ಪ್ರತಿ ನಾಯಕತ್ವವನ್ನು ಬಿಂಬಿಸುವ ಪ್ರಖರ ರೇಖೆಗಳನ್ನು ಬಿಡಿಸುತ್ತಾರೆ. ಸೌಮ್ಯ ರಾಜಸ ವೇಷವಾದರೆ ಕಣ್ಣಿನ ಕೆಳಗಡೆ ಮಾತ್ರ ಕೆಂಪು ಬಣ್ಣ ಲೇಪಿಸುತ್ತಾರೆ.
ಭೀಕರವೇಷವಾದರೆ ಕಣ್ಣಿನ ಮೇಲು ಭಾಗಕ್ಕೂ ಕೆಂಪು ಲೇಪನವಾಗು ತ್ತದೆ. ಇಂದ್ರಜಿತುವಿನ ಹಣೆಯಲ್ಲಿ ಕಳಾವರ್‌ ಅಥವಾ ಆಟೀನ್‌ ಆಕೃತಿಯನ್ನು ಬರೆದು ಬಿಳಿ, ಕೆಂಪು, ಕಪ್ಪುಪ ರೇಖೆಗಳಿಂದ ಹುಬ್ಬುಗಳನ್ನು ಪ್ರಖರವಾಗಿಸಲಾಗುತ್ತದೆ.
ಶಿಶುಪಾಲ ಮೊದಲಾದ ಬೆಳಗಿನ ಜಾವದ ಕೆಲವು ವಿಶಿಷ್ಟವೇಷಗಳಿಗೆ ಪಚ್ಚೆ ಬಣ್ಣ ಹಾಕಲಾಗುತ್ತದೆ. [ಯಕ್ಷಗಾನ ಮಕರಂದ, ಪುಟ 263-264] ಕದ್ರಿ ವಿಷ್ಣು, ಕೇದಗಡಿ ಗುಡ್ಡಪ್ಪ ಗೌಡ, ಸೂರಿಕುಮೇರಿ ಗೋವಿಂದ ಭಟ್್‌,
ಕಲ್ಲು ಗುಂಡಿ ಶೀನಪ್ಪ ರೈ, ಶಿವರಾಮ ಜೋಗಿ, ಕೆರೆಮನೆ ಮಹಾಬಲ ಹೆಗಡೆ ಮತ್ತು ಶಂಭು ಹೆಗಡೆಕಿರೀಟ ವೇಷಧಾರಿಗಳಾಗಿ ಪ್ರಸಿದ್ಧಿ ಪಡೆದ ಪ್ರಮುಖರು.

2. ಪಗಡಿ ವೇಷಗಳು : ಇವುಗಳನ್ನು ಪುಂಡುವೇಷಗಳೆಂದು ಕರೆಯಲಾಗುತ್ತದೆ. ಲವಕುಶರು, ವಿಭೀಷಣ, ನಕುಲಸಹದೇವರು, ಅಭಿಮನ್ಯು, ಬಬ್ರುವಾಹನ, ಚಿತ್ರಕೇತಚಿತ್ರಧ್ವಜ, ಶ್ರೀಕೃಷ್ಣ ಇತ್ಯಾದಿ ವೇಷಗಳು ಪಗಡಿ ವೇಷಗಳಾಗಿವೆ. ಶಲ್ಯನದು ದೊಡ್ಡ ಪಗಡಿ ವೇಷವಾದರೆ, ಕಿರಾತನದು ಓರೆ ಪಗಡಿ ವೇಷವಾಗಿರುತ್ತದೆ. ಪಗಡಿ ವೇಷಗಳು ಪೂರ್ವರಂಗದ ಬಾಲಗೋಪಾಲ ವೇಷಗಳಂತಿರುತ್ತವೆ. ಬಬ್ರುವಾಹನ ನಂತಹ ವೇಷಗಳು ಅರ್ಧಚಂದ್ರಾಕೃತಿಯ ನಾಮ ಹಾಕುವುದಿದೆ. ಇವು ಮೀಸೆ ಇಲ್ಲದ ವೇಷಗಳು. ಬಡಗಿನಲ್ಲಿ ಪಗಡಿಯ ಬದಲು ಕೇದಗೆ
ಮುಂದಲೆಯನ್ನು ಬಳಸುತ್ತಾರೆ. ಪಗಡಿ ವೇಷಗಳನ್ನು ಏರು ಜವ್ವನದ ತರುಣರೇ ಬಹುತೇಕವಾಗಿ ಮಾಡುತ್ತಾರೆ. ತೆಂಕುತಿಟ್ಟಿನಲ್ಲಿ ಪಗಡಿವೇಷದವರು 50 ಗುತ್ತುಗಳನ್ನು ಲೀಲಾಜಾಲವಾಗಿ ತೆಗೆಯುತ್ತಾರೆ. ಪಗಡಿ ವೇಷದಲ್ಲಿ ಬಹಳ
ಖ್ಯಾತಿ ಪಡೆದ ಪುತ್ತೂರು ಶ್ರೀಧರ ಭಂಡಾರಿಯವರು ಒಂದು ಕಾಲದಲ್ಲಿ ಇನ್ನೂರಕ್ಕೂ ಮಿಕ್ಕು ಗುತ್ತು ಹಾರುವ ಹೊಂತಕಾರಿಯಾಗಿದ್ದರು. ಅರುವತ್ತನ್ನು ದಾಟಿದ ಇವರು ಈಗಲೂ ನೂರಕ್ಕಿಂತ ಹೆಚ್ಚು ಗಿರಕಿ ಹಾಕುತ್ತಾರೆ.

3. ಬಣ್ಣದ ವೇಷಗಳು : ತಾಮಸ ಸ್ವಭಾವದ ವೇಷಗಳನ್ನು ಬಣ್ಣದ ವೇಷಗಳೆಂದು ಕರೆಯಲಾಗುತ್ತದೆ. ಬಣ್ಣದ ವೇಷಗಳನ್ನು ರಾಜಬಣ್ಣ ಮತ್ತು ಕಾಟುಬಣ್ಣಗಳೆಂದು ವರ್ಗೀಕರಿಸಲಾಗುತ್ತದೆ. ರಾಜ ಬಣ್ಣದಲ್ಲಿ ರಾವಣ,
ತಾರಕಾಸುರ, ಶೂರಪದ್ಮ, ಶುಂಭ, ಬಾಣಾಸುರ, ಮಾಗಧ, ನರಕಾಸುರ, ಮೊದಲಾದ ಪಾತ್ರಗಳು ಬರುತ್ತವೆ. ಕಾಟುಬಣ್ಣದ ಸಾಲಲ್ಲಿ ಕಿಮ್ಮಮೀರ, ಜಟಾಸುರ, ಹಿಡಿಂಬ, ವಿದ್ಯುಲ್ಲೋಚನಮುಂತಾದ ಪಾತ್ರಗಳು ಸೇರುತ್ತವೆ.
ಯಮ, ಭೀಮ, ವೀರಭದ್ರ, ವರಾಹ, ನರಸಿಂಹ, ವಾಲಿಸುಗ್ರೀವ, ಹನುಮಂತಇತ್ಯಾದಿ ವೇಷಗಳನ್ನೂ ಬಣ್ಣದ ವೇಷಗಳೆಂದು ಕರೆಯಲಾಗುತ್ತದೆ. ಅಜಮುಖಿ, ತಾಟಕಿ, ಶೂರ್ಪನಖಿ, ವೃತ್ರಜ್ವಾಲೆ, ಲಂಕಿಣಿ, ಪೂತನಿಮುಂತಾದ
ರಾಕ್ಷಸಿ ಪಾತ್ರಗಳು ಹೆಣ್ಣು ಬಣ್ಣದ ವೇಷಗಳಾಗಿವೆ.

ಬಣ್ಣದ ವೇಷಗಳಲ್ಲಿ ರಾವಣನಿಗೆ ಪ್ರಥಮ ಸ್ಥಾನ. ಆತನ ಹಣೆಯಲ್ಲಿ ವಿಶೇಷ ಸುಳಿಯೊಂದನ್ನು ಬರೆಯಲಾಗುತ್ತದೆ. ಅದು ಇತರ ಯಾವುದೇ ಬಣ್ಣದ ವೇಷಗಳಿಗಿಲ್ಲ. ಪಾತ್ರಗಳ ಸ್ವಭಾವಕ್ಕನುಗುಣವಾಗಿ ಬಣ್ಣದ ವೇಷಗಳ ವರ್ಣರೇಖಾ ವಿನ್ಯಾಸ ಮತ್ತು ಚುಟ್ಟಿ ಇಡುವ ಕ್ರಮ ಬದಲಾಗುತ್ತದೆ. ಬಹುತೇಕ ಬಣ್ಣದ ವೇಷಧಾರಿಗಳು ಅಕ್ಕಿಹಿಟ್ಟು ಮತ್ತು ಸುಣ್ಣದ ಮಿಶ್ರಣದಿಂದ ಮಾಡಿದ ಚುಟ್ಟಿ ಇಟ್ಟು ರೌದ್ರ ರಸ ಪೋಷಣೆ ಮಾಡುತ್ತಾರೆ.

ದೈತ್ಯ ಪಾತ್ರದ ಕಲ್ಪನೆ ಉಂಟುಮಾಡಲು ಮೂಗಿನ ಮೇಲೆ ಹತ್ತಿಯ ಉಂಡೆ ಇಡಲಾಗು ತ್ತದೆ. ಹೆದರಿಕೆ ಹುಟ್ಟಿಸುವ ಗಡ್ಡಮೀಸೆ, ಕ್ರೂರ ದಂತ, ಭಯಾನಕ ಕಣ್ಣುಗಳನ್ನು ಬಿಡಿಸಿ ಪ್ರೇಕಕರನ್ನು ಅತಿಮಾನುಷ ಲೋಕಕ್ಕೆ ಒಯ್ಯಲಾಗುತ್ತದೆ. ವಾಲಿಸುಗ್ರೀವರಿಗೆ ಹತ್ತಿಯ ಬತ್ತಿಗಳನ್ನು ಚುಟ್ಟಿಯಾಕಾರದಲ್ಲಿ ಇರಿಸಲಾಗುತ್ತದೆ. ಹನುಮಂತನ ಕಣ್ಣಿನ ಸುತ್ತ ಐದು
ಅಥವಾ ಏಳು ಚೇಳುಕೊಂಡಿ ಸುಳಿ ಬರೆಯಲಾಗುತ್ತದೆ. ಬಣ್ಣದ ಕುಟ್ಯಪ್ಪುಪ, ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಗಂಗಯ್ಯ ಶೆಟ್ಟಿ, ಜಗದಾಭಿರಾಮ, ಪಕಳಕುಂಜ, ಬಣ್ಣದ ಕುಷ್ಟ, ಮುಂತಾದವರು ಬಣ್ಣದ ವೇಷಧಾರಿಗಳಾಗಿ
ತುಂಬಾ ಖ್ಯಾತಿ ಪಡೆದವರು.

ಬಣ್ಣದ ವೇಷಗಳ ರುದ್ರ ಸ್ವಭಾವವನ್ನು ಬಿಂಬಿಸಲು ವಿಶಿಷ್ಟವಾದ ಕಿರೀಟವನ್ನು ಬಳಸಲಾಗುತ್ತದೆ. ರಾಜ ಮತ್ತು ಕಾಟು ಬಣ್ಣಗಳು ಕೇಶಭಾರ ತಟ್ಟೆ ಎಂಬ ಬಟ್ಟಲು ಕಿರೀಟವನ್ನು ಬಳಸುತ್ತವೆ. ಭೀಮ, ದುಶ್ಶಾಸನ, ಕಂಭಕರ್ಣ, ವೀರಭದ್ರ ಮುಂತಾದವುಗಳು ಭೀಮನ ಮುಡಿ ಎಂಬ ಕಿರೀಟವನ್ನು ಬಳಸುತ್ತವೆ. ಹೆಣ್ಣು ಬಣ್ಣದ ಕಿರೀಟಕ್ಕೆ ಹೀಲಿ ಕಿರೀಟ, ಶೂರ್ಪನಖಿ ಕಿರೀಟ ಅಥವಾ ಕುತ್ತರಿ ಕಿರೀಟವೆಂದು ಹೆಸರು. ಹನುಮಂತನ ಕಿರೀಟ ಒಂದು ವಿಶಿಷ್ಟ ಬಗೆಯದು. ಅದೊಂದೇ ವೇಷಕ್ಕೆ ಮೀಸಲಾದುದು. ಬಣ್ಣದ ವೇಷವೆಂದೂ ಬಟ್ಟಲು ಕಿರೀಟವನ್ನು ಜನಸಾಮಾನ್ಯರು ತಡ್ಪೆ ಕಿರೀಟವೆಂದೂ ಹೆಣ್ಣು ಬಣ್ಣದ ಕಿರೀಟವನ್ನು ಬಾಲ್ದಿ ಅಥವಾ ಬಕೆಟ್ಟು ಕಿರೀಟವೆಂದೂ ಕರೆಯುವುದುಂಟು. ಬಣ್ಣದ ವೇಷಗಳು ದೊಡ್ಡ ಬಟ್ಟಲ ಕಿರೀಟವನ್ನು ಧರಿಸಿದರೆ, ಧರ್ಮರಾಜ, ಮಯೂರ ಧ್ವಜ, ವೃದ್ಧ ದಶರಥ ಮುಂತಾದ
ಪಾತ್ರಗಳು ಅದೇ ಮಾದರಿಯ ಸಣ್ಣ ಬಟ್ಟಲು ಕಿರೀಟವನ್ನು ಧರಿಸುತ್ತವೆ. ಸುಲಭಶೀಲತೆಗಾಗಿ ಅಥವಾ ಆರೋಗ್ಯದ ಕಾರಣಕ್ಕಾಗಿ ಕೆಲವು ಕಲಾವಿದರು ಬಣ್ಣದ ವೇಷಗಳನ್ನು ನಾಟಕೀಯ ವೇಷಭೂಷಣ ಗಳಿಂದ ಪ್ರಸ್ತುತಪಡಿಸುತ್ತಾರೆ. ಯಕ್ಷಗಾನದ ವೈಶಿಷ್ಟ್ಯವಿರುವುದೇ ಬಣ್ಣದ ವೇಷಗಳಲ್ಲಿ. ಭೀಮನಂತಹ ಪಾತ್ರ ನಾಟಕೀಯವಾಗಿ ಕಾಣಿಸಿಕೊಂಡರೆ ಅದು ಬಫೂನಿನಂತೆ ಕಾಣುತ್ತದೆ.

4. ಸ್ತ್ರೀ ವೇಷಗಳು : ಸ್ತ್ರೀ ಪಾತ್ರಗಳಿಗೆ ಯಕ್ಷಗಾನದಲ್ಲಿ ಸ್ತ್ರೀ ವೇಷಗಳೆಂದು ಹೆಸರು. ನಾಯಕಿ ಪಾತ್ರವನ್ನು ಮುಖ್ಯ ಸ್ತ್ರೀವೇಷವೆಂದೂ ಇತರ ಪಾತ್ರಗಳನ್ನು ಎರಡನೇ ಸ್ತ್ರೀ ವೇಷವೆಂದೂ ಕರೆಯುವುದು ರೂಢಿ.

ಸ್ತ್ರೀ ವೇಷಗಳ ಬಗ್ಗೆ ಪ್ರಭಾಕರ ಜೋಷಿಯವರು ಹೀಗೆ ದಾಖಲಿಸಿದ್ದಾರೆ: ‘ಹಿಂದೆ ಸ್ತ್ರೀ ವೇಷಗಳೆಲ್ಲವೂ ಕಚ್ಚೆ ಉಡುತ್ತಿದ್ದವು. ಹಣೆಗೆ ಅಡ್ಡನಾಮ ಅಥವಾ ಉದ್ದನಾಮ ವಿರುತ್ತಿತ್ತು. ಉರುಟು ಬೊಟ್ಟು ಇಡುವ ಪದ್ಧತಿ ಬಂದುದು ಪ್ರಾಯಃ 1920ರಿಂದ ಈಚೆಗೆ. ಕಾಲಿಗೆ ಗೆಜ್ಜೆ, ಪಾಡಗ, ಸೊಂಟಕ್ಕೆ ಡಾಬು, ಉಡಿಗೆಜ್ಜೆ, ಕೈಗೆ ಕೈಕಟ್ಟು, ತೋಳ್ಕಟ್ಟು, ಕೊರಳಿಗೆ ಹವಳಸರ, ತ್ರಿಸರ, ಮೋಹನ ಮಾಲೆ, ಅಡ್ಡಿಗೆ, ಪದಕಮಾಲೆ, ಪಂಚಮಾಲೆ

ಈ ಪೈಕಿ ಕೆಲವನ್ನು, ಗಂಟಲಿನ ಕಂಠಿಮಣಿಯನ್ನು ಮುಚ್ಚಲು ಚಿಂತಾಕು ಎಂಬ ಪಟ್ಟಿ. ಮೂಗಿಗೆ ನತ್ತುಬುಲಾಕು ಅಥವಾ ಉದ್ದ ಮೂಗುತಿ, ಕಿವಿಗೆ ಗಿಳಿಯೋಲೆ, ಕೊಪ್ಪುಪ, ಬುಗುಡಿ, ಸರಪಳಿ, ಬೆಂಡೋಲೆಗಳನ್ನು ಅಥವಾ ಕಿವಿಯನ್ನು ಮುಚ್ಚುವ ಓಲೆಕುಚ್ಚು ಎಂಬ ಕರ್ಣಪಾತ್ರ, ಹಣೆಗೆ ಮುಂದಲೆ ಪಟ್ಟಿ, ಬೈತಲೆ ಸರ, ಮುಡಿಗೆ ಅಡ್ಡ ಕೇದಗೆ, ತಿರುಪಿನ ಹೂವು, ಚೂಡಾಮಣಿ ಅಥವಾ ಬಂಗಾರ ಇವು ಸಾಂಪ್ರದಾಯಿಕ ಸ್ತ್ರೀವೇಷದ ಆಭರಣಗಳು. ಹುಬ್ಬಿನ ಮೇಲಿನಿಂದ ಮುತ್ತರಿಗಳ ಸಾಲು, ಕೆನ್ನೆಗೆ ಮುದ್ರೆ, ಮಕರ ರೇಖೆ ಗಳನ್ನು ಬರೆಯುತ್ತಿದ್ದರು. ಸೆರಗನ್ನು ಸೊಂಟದ ಪಟ್ಟಿಯ ಒಳಗೆ ಸೇರಿಸಿ ಎಳೆದು ಬಿಡುತ್ತಿ ದ್ದರು. [ಯಕ್ಷಗಾನ ಪದಕೋಶ, ಪುಟ 158] ಕೋಳ್ಯೂರು ರಾಮಚಂದ್ರ ರಾವ್‌, ಪಾತಾಳ ವೆಂಕಟ್ರಮಣ ಭಟ್‌, ಕೋಟ ವೈಕುಂಠ, ಮಂಟಪ ಪ್ರಭಾಕರ ಉಪಾಧ್ಯಾಯ, ಕೊಕ್ಕಡ ಈಶ್ವರ ಭಟ್‌, ತೊಡಿಕಾನ
ವಿಶ್ವನಾಥ, ಸಂಜಯ ಕುಮಾರ್‌, ಅಂಬಾಪ್ರಸಾದ, ಜಯರಾಮ  ಮುಂತಾದವರು ಪ್ರಸಿದ್ಧ ಸ್ತ್ರೀ ವೇಷಧಾರಿಗಳು.

5. ಹಾಸ್ಯ ಮತ್ತು ವಿಶೇಷ ವೇಷಗಳು : ಹಾಸ್ಯ ವೇಷವು ನೋಡಿದಾಗಲೇ ಹಾಸ್ಯ ಉಕ್ಕಿಸುವಂತಿರಬೇಕು. ಅದೊಂದನ್ನು ಬಿಟ್ಟರೆ ಹಾಸ್ಯ ವೇಷಗಳಿಗೆ ವಿಧಿ ನಿಯಮಗಳೇನೂ ಇಲ್ಲ. ವಿಟ್ಲಗೋಪಾಲಕೃಷ್ಣ ಜೋಷಿ, ಕುಂಜಾಲು
ರಾಮಕೃಷ್ಣ, ಪೆರುವೋಡಿ ನಾರಾಯಣ ಭಟ್‌, ನಯನ್‌ ಕುಮಾರ್‌, ಮಿಜಾರು ಅಣ್ಣಪ್ಪ, ಮುಖ್ಯಪ್ರಾಣ, ಬಂಟ್ವಾಳ ಜಯರಾಮ ಆಚಾರ್ಯ ಮುಂತಾದವರು ಹಾಸ್ಯವೇಷಗಳನ್ನು ಸೃಜನಶೀಲ ಬಿಂಬಗಳಾಗಿ ಪರಿವರ್ತಿಸಿ ದ್ದಾರೆ.
ಜೋಷಿಯವರ ರಕ್ಕಸದೂತ, ಒಂದು ಅದ್ಭುತ ಸೃಷ್ಟಿ. ಹಾಸ್ಯವೇಷಗಳು ಯಾವುದೇ ರೀತಿಯ ಕಿರೀಟ ಬಳಸುವುದಿಲ್ಲ.

ಹಾಸ್ಯ ವೇಷಧಾರಿಯನ್ನು ಹಾಸ್ಯಗಾರ ಎಂದು ಕರೆಯುವುದು ರೂಢಿ. ಭಾಗವತ, ಮದ್ದಲೆಗಾರನ ಬಳಿಕ ಹಾಸ್ಯಗಾರನಿಗೆ ಮೇಳದಲ್ಲಿ ಮೂರನೆಯ ಸ್ಥಾನ. ಆತನಿಗೆ ಭಾಗವತಿಕೆ ಮತ್ತು ಮದ್ದಳೆ ಗೊತ್ತಿರಬೇಕೆಂಬ ನಿಯಮ ಹಿಂದೆ ಇತ್ತು. ಎಲ್ಲಾ ಬಗೆಯ ದೂತರ ಪಾತ್ರಗಳು, ನಾರದ, ದೂರ್ವಾಸ, ಬ್ರಹ್ಮ, ಬೃಹಸ್ಪತಿ, ಶುಕ್ರ, ವಸಿಷ್ಠ ಇತ್ಯಾದಿ ಪಾತ್ರಗಳು, ಪುರೋಹಿತ, ಜ್ಯೋತಿಷಿ, ಮಂತ್ರವಾದಿ, ಅಪಶಕುನ ವೇಷಗಳು, ವನಪಾಲಕ, ಮುದಿಯಪ್ಪಣ್ಣ, ಬಾಹುಕ,
ಕೊರವಂಜಿ, ಚಿತ್ರಗುಪ್ತ, ದಾರುಕ, ಜಾಂಬವಂತ, ಗುಹ, ದಾಶರಾಜ, ಅಧಿರಥ ಇತ್ಯಾದಿಗಳನ್ನು ಹಾಸ್ಯವೇಷಕ್ಕೆ ಸೇರಿಸಲಾಗುತ್ತದೆ. ಮಂಥರೆ, ಚಂದ್ರಾವಳಿಯ ಅತ್ತೆ, ಮುದುಕಿ, ದೂತಿ, ಕೊರವಂಜಿ, ವಿಧವೆ, ಮುಂತಾದ ಸ್ತ್ರೀವೇಷಗಳು ಕೂಡಾ ಹಾಸ್ಯವೇಷದ ವ್ಯಾಪ್ತಿಯಲ್ಲಿ ಒಳಗೊಳ್ಳುತ್ತವೆ. ಪೂರ್ವರಂಗದ ಕಟ್ಟು ಹಾಸ್ಯ ಮತ್ತು ಹೊಗಳಿಕೆ ಹಾಸ್ಯಹಾಸ್ಯವೇಷಗಳಾಗಿವೆ. ಹಾಸ್ಯವೇಷಗಳು ಬಗೆಬಗೆಯ ಚಲ್ಲಣ, ಪಟ್ಟೆ ಅಂಗಿ, ಬಣ್ಣಬಣ್ಣದ ಅಂಗಿ, ಮೇಲಂಗಿ,
ಮುಂಡಾಸು ಇತ್ಯಾದಿಗಳನ್ನು ಧರಿಸುತ್ತವೆ.

ಈಶ್ವರನ ಮತ್ತು ಋಷಿಗಳ ವೇಷಗಳನ್ನು ಮುಡಿವೇಷಗಳೆಂದು ಕರೆಯಲಾಗುತ್ತದೆ. ವನವಾಸದ ಶ್ರೀರಾಮ ಲಕ್ಮಣರು, ವಶಿಷ್ಠ, ವಿಶ್ವಾಮಿತ್ರ, ದೂರ್ವಾಸಮುಂತಾದ ಪಾತ್ರಗಳು ಮುಡಿ ಬಿಟ್ಟು ವೇಷ ಮಾಡುವುದುಂಟು. ಆದುದರಿಂದ ಮುಡಿವೇಷ ಎಂಬ ಹೆಸರು ಬಂದಿದೆ. ಕಿರೀಟ ಧರಿಸದ ವೇಷಗಳು ಬಿಡುಮಂಡೆ ವೇಷಗಳು ಅಥವಾ ಬೋಳು ಬೋಡು ವೇಷಗಳೆಂದು ಕರೆಯಲ್ಪಡುತ್ತವೆ.

ಗಣಪತಿ, ವರಾಹ, ನರಸಿಂಹ, ಮಹಿಷ, ಗರುಡ, ಜಟಾಯು, ಶುಕ, ಹಂಸ, ದುಂಬಿ, ಮತ್ಸ್ಯವಾನರ, ಮತ್ಸ್ಯಾವತಾರ, ಕೂರ್ಮಾವತಾರ, ತಕಕ ಇತ್ಯಾದಿಗಳನ್ನು ವಿಶೇಷ ವೇಷಗಳೆಂದು ಕರೆಯಲಾಗುತ್ತದೆ. ಈ ವೇಷಗಳನ್ನು ಮುಖವರ್ಣಿಕೆಯಲ್ಲಿ ಸಂಕೇತಗಳನ್ನು ಬಿಡಿಸುವ ಮೂಲಕ ರೂಪಿಸಲಾಗುತ್ತದೆ. ಮಹಿಷನಿಗೆ ಕೊಂಬುಗಳು, ಗರುಡನಿಗೆ ಕೊಕ್ಕು, ದುಂಬಿಗೆ ರೆಕ್ಕೆ ಸಂಕೇತಗಳಾಗಿವೆ. ಗಣಪತಿಗೆ ಮೂಗಲ್ಲಿ ಸೊಂಡಿಲು ಬಿಡಿಸುವುದು, ತಕಕನಿಗೆ ಹಣೆಯಲ್ಲಿ ನಾಗರ ಹಾವಿನ ಹೆಡೆಯ ಕೆಳಭಾಗದ ಬಿಳಿಹಳದಿ ಗೀರುಗಳನ್ನು ಬಿಡಿಸುವುದು ಸಂಕೇತವಾಗಿದೆ.

ದಗಲೆ ಅಥವಾ ಅಂಗಿಗಳ ಬಣ್ಣಗಳು ವೇಷಗಳ ಗುಣಧರ್ಮವನ್ನು ಸೂಚಿಸುವುದುಂಟು. ಹಸಿರು ದಗಲೆ ಸಾತ್ವಿಕ ಅಥವಾ ಶೃಂಗಾರ ವೇಷಗಳಿಗೆ, ಕೆಂಪು ದಗಲೆ ರಾಜಸ ಸ್ವಭಾವದ ವೀರ ಪಾತ್ರಗಳಿಗೆ, ಕಪ್ಪು ದಗಲೆ ತಾಮಸ ಸ್ವಭಾವದ ವೇಷಗಳಿಗೆ ಬಳಕೆಯಾಗುತ್ತದೆಎಂದು ಅಮೃತ ಸೋಮೇಶ್ವರರು ದಾಖಲಿಸಿದ್ದಾರೆ. [ಯಕ್ಷಗಾನ ಮಕರಂದ, ಪುಟ 267] ಕೈಯ ಆಯುಧಗಳ ಮೂಲಕವೂ ಪಾತ್ರಗಳ ವೈಶಿಷ್ಟ್ಯವನ್ನು ಸಂಕೇತಿಸಬಹುದು. ಕಾರ್ತವೀರ್ಯ ಸಹಸ್ರಬಾಹು ಎಂಬುದನ್ನು ಸೂಚಿಸಲು ಎರಡೂ ಕೈಗಳಲ್ಲಿ ಬಿಲ್ಲುಗಳನ್ನು ಹಿಡಿದುಕೊಂಡು ಪ್ರವೇಶಿಸುತ್ತಾನೆ. ಕಪಿವೀರರ ಕೈಗಳಲ್ಲಿ ಮಾವಿನ ಸೊಪ್ಪುಪಗಳಿರುತ್ತವೆ.

6.3 ಯಕ್ಷಗಾನ ಮತ್ತು ಭೂತಾರಾಧನೆ

ತುಳುನಾಡಿನ ಆರಾಧನಾ ಸಂಪ್ರದಾಯವಾದ ಭೂತಾರಾಧನೆಯು ಯಕ್ಷಗಾನದ ಮೇಲೆ ಪ್ರಭಾವವನ್ನು ಬೀರಿದೆ. ಯಕ್ಷಗಾನದ ವೇಷಗಳು ಮತ್ತು ಭೂತಗಳು ಬಳಸುವ ಬಣ್ಣ ಒಂದೇ. ಕೈಯ ಆಯುಧಗಳೂ ಸಾಂಕೇತಿಕವೇ. ಭೂತಾರಾಧನೆಯಲ್ಲಿ ಜಾಲಾಟವೆಂಬ ಒಂದು ಸಂಪ್ರದಾಯವಿದೆ. ಅದರಲ್ಲಿ ಪೂರ್ವರಂಗದ ಹಾಸ್ಯವನ್ನು ಹೋಲುವ ಕಟ್ಟು ಹಾಸ್ಯವಿದೆ ಮತ್ತು ಬಣ್ಣದ ವೇಷಗಳ ತೆರೆ ಪೊರಪ್ಪಾಡು ಇದೆ. ಭೂತಾರಾಧನೆಯಲ್ಲಿ ಪ್ರಾರಂಭಿಕ ವಿಧಿಗಳಿವೆ. ಅದಕ್ಕೆ ಸಂವಾದಿಯಾಗಿ ಯಕ್ಷಗಾನದಲ್ಲಿ ಪೂರ್ವರಂಗವಿದೆ. ಭೂತಗಳಿಗೆ ನೆಲದ ಸತ್ಯಗಳನ್ನು ಕಾಪಾಡುವ ಜವಾಬ್ದಾರಿಯಿದೆ. ಯಕ್ಷಗಾನಕ್ಕೆ ಮೌಲ್ಯ ಪ್ರಸಾರದ ಉದ್ದೇಶವಿದೆ. ಆದರೆ ಭೂತಾರಾಧನೆ ಒಂದು ಪ್ರದರ್ಶನ ಕಲೆಯಲ್ಲ ಮತ್ತು ಅದಕ್ಕೆ ಮನರಂಜನೆಯ ಉದ್ದೇಶ ಇರುವುದಿಲ್ಲ.

ಯಕ್ಷಗಾನವು ಒಂದು ಪ್ರದರ್ಶನ ಕಲೆಯಾಗಿದ್ದು ಅದಕ್ಕೆ ಮನರಂಜನೆಯ ಉದ್ದೇಶವಿದೆ.

ಚುಟ್ಟಿ, ಮುದ್ರೆ, ನಾಮ, ಸರಳರೇಖೆ ವಕ್ರರೇಖೆಗಳ ವಿನ್ಯಾಸ, ಗಡ್ಡ ಮೀಸೆಗಳ ರಚನೆಯಲ್ಲಿ ಭೂತಾರಾಧನೆಗೂ ಯಕ್ಷಗಾನಕ್ಕೂ ಸಾಮ್ಯವಿರುವುದನ್ನು ಅಮೃತ ಸೋಮೇಶ್ವರರು ಗುರುತಿಸಿದ್ದಾರೆ. ಅವರ ಪ್ರಕಾರಭೂತವೇಷದ ಮುಖವರ್ಣಿಕೆಗೆ ಬಳಸುತ್ತಿದ್ದ ಅರದಾಳ, ಇಂಗಳೀಕ, ಎಣ್ಣೆಮಸಿ, ಸುಣ್ಣ, ಜೇಡಿಮಣ್ಣು, ಅಕ್ಕಿ ಹಿಟ್ಟು, ಕುಂಕುಮ, ಹಲಸಿನ ಮೇಣಗಳನ್ನು ಯಕ್ಷಗಾನ ಪ್ರಸಾಧನಕ್ಕೆ ಬಳಸುತ್ತಿದ್ದರು. ಈಗ ಪೇಟೆಯಲ್ಲಿ ಸಿಗುವ ಬಣ್ಣದ ಪುಡಿಗಳನ್ನು ಬಳಸುತ್ತಾರೆ. ಬಣ್ಣಗಾರಿಕೆಯಲ್ಲಿ ಹಳದಿ, ಕೆಂಪು, ಬಿಳಿ, ಕಪ್ಪುಪ ಬಣ್ಣಗಳೇ ಎರಡೂ ರಂಗಗಳಲ್ಲಿ ಪ್ರಧಾನ. ವಿವಿಧ ಬಣ್ಣಗಳ ಬಿಂದು, ರೇಖೆಗಳ ವ್ಯವಸ್ಥಿತ ಮತ್ತು ಕಲಾತ್ಮಕ ಜೋಡಣೆಯಿಂದ ಎರಡೂ ವಿಧಾನಗಳಲ್ಲಿ ಮೂಡಿ ಬರುವ ಬಿಂಬಗಳ ಬೆಡಗು ಅನ್ಯಾದೃಶ್ಯವಾದುದು [ಯಕ್ಷಾಂದೋಳ 176]

ಯಕ್ಷಗಾನ ಮತ್ತು ಭೂತಾರಾಧನೆಗಳಲ್ಲಿ ಬಳಕೆಯಾಗುವ ಪ್ರಸಾಧನ ಸಾದೃಶ್ಯ ವನ್ನು ಕೋಷ್ಟಕ 6.1 ತೋರಿಸುತ್ತದೆ.

ಕೋಷ್ಟಕ 6.1 ತ ಪ್ರಸಾಧನ ಪರಿಕರಗಳ ಸಾದೃಶ್ಯ

ಯಕ್ಷಗಾನ ಭೂತಾರಾಧನೆ ಯಕ್ಷಗಾನ ಭೂತಾರಾಧನೆ

ಮುಂದಲೆ ಮುಂದಲೆ ಪಟ್ಟಿ ಕಸೆ ಕಚ್ಚೆ

ಕರ್ಣಪಾತ್ರ ಕೆಬಿನ ಕಾಲಕಡಗ ಗಗ್ಗರ

ತಾವರೆ ತಾಮರೆ ಗೆಜ್ಜೆ ಗೆಜ್ಜೆ

ಹೂವಿನಚೆಂಡು ಪೂ ಚೆಂಡ್‌ ಕೈ ಕಟ್ಟು ಕೈ ಕಟ್ಟ್

ಕೊರಳಡ್ಡಿಗೆ ಕೊರಳ್‌ ದಾಡೆ ಕೇಶಭಾರ ತಟ್ಟೆ ತಟ್ಟಿದ ಅಣಿ

ಮುಡಿಕೇದಗೆ ತಲೆಪಟ್ಟಿ ಸಿರಿಮುಡಿಃಪಗಡಿ ತಿರಿಮುಡಿ

ಎದೆಕಟ್ಟು ಎದೆಪಟ್ಟಿ ಭೀಮನಮುಡಿ ಕದಿರ್ಮುಡಿ

ಮೊಲೆಕಟ್ಟು ಮಿರೆಕಟ್ಟ್‌ ಹುಲ್ಲುಜಡೆ ಜೊಂಕುಉದುರಿ

ಸೊಂಟ ಪಟ್ಟಿ ಸೊಂಟತ ಪಟ್ಟಿ ಲಾಡಿ ಲಾಡಿ

ಭುಜಕೀರ್ತಿ ಭುಜಪತ್ತ್‌ ಗೊಂಡೆಜರಿ ಜರಿಗೊಂಡೆ

ತೋಳ ಬಾಪುರಿ ತೋಳದಂಡ್‌ ಖಡ್ಗ ಕಡ್ತಲೆ

ಕೈ ಚಿನ್ನ ಕೈ ಬಂಗಾರ್‌ ದೊಂದಿ ಸೂಟೆ

ಆಧಾರ : ಡಾ. ಚಿನ್ನಪ್ಪ ಗೌಡ, ಭೂತಾರಾಧನೆ ಒಂದು ಜಾನಪದೀಯ

ಅಧ್ಯಯನ, ಪುಟ 228

ಭೂತಗಳು ಸೊಂಟಕ್ಕೆ ಸುತ್ತಿಕೊಳ್ಳುವ ತೆಂಗಿನ ಎಳೆಗರಿಯನ್ನು ಯಕ್ಷಗಾನದ ಬಾಲ್‌ ಮುಂಡಿಗೆ ಮತ್ತು ಕಲ್ಲುರ್ಟಿ ದೈವದ ತೆಂಗಿನ ಗರಿಯ ಕಿರೀಟವನ್ನು ಹೆಣ್ಣು ಬಣ್ಣದ ಬಕೆಟ್ಟು ಕಿರೀಟಕ್ಕೆ ಅಮೃತರು ಹೋಲಿಸಿದ್ದಾರೆ. ಅವರ ಪ್ರಕಾರ ಭೂತಗಳು ಬಳಸುವುದು ಯಕ್ಷಗಾನದ ಒಂದನೆ ಮತ್ತು ಎರಡನೆ ಹೆಜ್ಜೆಗಳನ್ನು. ಯಕ್ಷಗಾನದ ರಂಗಸ್ಥಳಕ್ಕೆ ಮತ್ತು ಭೂತದ ಚಪ್ಪರಕ್ಕೆ ಹೋಲಿಕೆ ಇರುವುದನ್ನು ಕೂಡಾ ಅವರು ಗುರುತಿಸಿದ್ದಾರೆ. [ಯಕ್ಷಾಂದೋಳ 177]

ಯಕ್ಷಗಾನ ಮತ್ತು ಭೂತರಾಧನೆ ಮೂಲತಃ ಜಾನಪದ ಪ್ರಕಾರಗಳು. ಇವೆರಡನ್ನೂ ಬೆಳೆಸಿ ಉಳಿಸಿದವರು ಕೆಳವರ್ಗದ ಶೂದ್ರರು ಮತ್ತು ಶೂದ್ರಾತಿಶೂದ್ರರು. ಅವರೆಡರ ನಡುವೆ ಹಾಗಾಗಿ ಸಹಜ ಸಾದೃಶ್ಯವಿದೆ. ಆದರೆ ಕೆಲವು ವೈದೃಶ್ಯಗಳೂ ಇವೆ.

ಅವನ್ನು ಕೋಷ್ಟಕ 6.2ರಲ್ಲಿ ತೋರಿಸಲಾಗಿದೆ.

ಕೋಷ್ಟಕ 6.2 : ಭೂತಾರಾಧನೆ vs ಯಕ್ಷಗಾನ

ಭೂತಾರಾಧನೆ                            ಯಕ್ಷಗಾನ

ಒಂದು ಆರಾಧನಾ ಕಲೆ                  ಒಂದು ಪ್ರದರ್ಶನ ಕಲೆ

ಜಾನಪದ ರೂಪದಲ್ಲೇ ಉಳಕೊಂಡಿದೆ  ‘ಮಾರ್ಗ’ ರೂಪ ಪಡಕೊಂಡಿದೆ

ದೈವಸ್ಥಾನ ಮೂಲ ಕಲೆ                  ದೇವಸ್ಥಾನ ಆಶ್ರಿತ ಕಲೆ

ಮುಖ ವರ್ಣಿಕೆಯಲ್ಲಿ ಆವಿಷ್ಕಾರವಿಲ್ಲ     ಮುಖವರ್ಣಿಕೆಯಲ್ಲಿ ಆವಿಷ್ಕಾರವಿದೆ.

ಮುಖವಾಡದ ‘ಮೊಗ’ಬಳಕೆಯಿದೆ   ಮುಖವಾಡದ ಬಳಕೆ ಇಲ್ಲ.

ಸಂಧಿಗಳನ್ನು ಆಧರಿಸಿದೆ                 ಪ್ರಸಂಗಗಳನ್ನು ಆಧರಿಸಿದ ಕತೆ ಇದೆ.

ಒರಟು ನರ್ತನ ವಿಧಾನ                 ಪರಿಷ್ಕೃತ ನರ್ತನ ವಿಧಾನ

ಕಲಿಸಲು ಶಿಕ್ಷಕರಿಲ್ಲ                      ಕಲಿಸಲು ಶಿಕ್ಷಕರಿದ್ದಾರೆ

ಜಾತಿ ಆಧರಿತವಾಗಿದೆ                   ಜಾತ್ಯತೀತವಾಗಿದೆ

ದೇಶೀಯವಾಗಿ ಉಳಿದಿದೆ                ಸಮುದ್ರೋಲ್ಲಂಘನ ಮಾಡಿದೆ.

ಕಲಾಪ್ರಕಾರವೊಂದು ಇತರ ಕಲೆಗಳ ಪ್ರಭಾವಕ್ಕೊಳಗಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಯಕ್ಷಗಾನವು ಭೂತ, ತೈಯ್ಯಂ, ಕಥಕ್ಕಳಿ, ನಾಗಮಂಡಲ, ಧಕ್ಕೆ ಬಲಿಗಳಿಂದ ಪ್ರಭಾವಿತವಾಗಿದೆ. ಅವುಗಳ ಮೇಲೂ ಪ್ರಭಾವ ಬೀರಿದೆ. ಕಲೆಯೊಂದು ವಿಕಸನಗೊಳ್ಳುವುದು ಇಂತಹ ಕೊಡುಕೊಳ್ಳವಿಕೆಗಳಿಂದಲೇ. ಯಕ್ಷಗಾನಕ್ಕೆ ಅನ್ಯ ಕಲೆಗಳಿಂದ ಪಡೆದುಕೊಳ್ಳುವ ಸ್ಥತಿಸ್ಥಾಪಕ ಗುಣವಿದೆ. ಆರಾಧನಾ ಕಲೆಯಾದ ಯಕ್ಷಗಾನಕ್ಕಿಲ್ಲ. ಆದರೆ ಚಲನಚಿತ್ರಗೀತೆಗಳನ್ನು ನುಡಿಸುವ ವಾದ್ಯದವರಿಂದಾಗಿ ಭೂತಗಳು ಚಿತ್ರಗೀತೆಗೆ ಹೆಜ್ಜೆ ಹಾಕಬೇಕಾಗಿ ಬಂದಿರುವುದನ್ನು ಮರೆಯುವಂತಿಲ್ಲ.

ಅಭ್ಯಾಸಾತ್ಮಕ ಪ್ರಶ್ನೆಗಳು

1. ಯಕ್ಷಗಾನದ ವೇಷಗಳೆಂದರೇನು ? ಅವುಗಳನ್ನು ಹೇಗೆ

ವರ್ಗೀಕರಿಸಲಾಗುತ್ತದೆ?

2. ಕೋಡಂಗಿ ವೇಷಗಳೆಂದರೇನು ?

3. ನಿತ್ಯವೇಷಗಳೆಂದರೇನು ?

4. ಷಣ್ಮುಖ ಸುಬ್ಬರಾಯ ಮತ್ತು ಅರ್ಧನಾರೀಶ್ವರ ವೇಷಗಳ

ವೈಶಿಷ್ಟ್ಯವೇನು?

5. ಪೂರ್ವರಂಗದ ಸ್ತ್ರೀವೇಷಗಳು ಯಾವುವು?

6. ಕೋಲು ಕಿರೀಟದ ವೇಷಗಳೆಂದರೇನು ? ಉದಾಹರಣೆ ಕೊಡಿ.

7. ಪಗಡಿ ವೇಷಗಳು ಯಾವುವು?

8. ಬಣ್ಣದ ವೇಷಗಳೆಂದರೇನು ? ಉದಾಹರಣೆ ಕೊಡಿ.

9. ಸ್ತ್ರೀ ವೇಷದ ಉಡುಗೆತೊಡುಗೆಗಳು ಯಾವುವು?

10. ಹಾಸ್ಯವೇಷಗಳು ಯಾವುವು?

11. ಯಕ್ಷಗಾನದ ವಿಶಿಷ್ಟವೇಷಗಳು ಯಾವುವು?

12. ಯಕ್ಷಗಾನ ಮತ್ತು ಭೂತಾರಾಧನೆಯ ಸಾದೃಶ್ಯಗಳೇನು?

13. ಯಕ್ಷಗಾನ ಮತ್ತು ಭೂತಾರಾಧನೆಯ ವೈದೃಶ್ಯಗಳೇನು ?

14. ಯಕ್ಷಗಾನವು ಭೂತಾರಾಧನೆಗಿಂತ ಹೇಗೆ ಭಿನ್ನವಾಗಿದೆ?

ಕಠಿಣ ಪದಗಳು

ಆಟೀನು = ಪ್ರೇಮ ಸಂಕೇತದ ಆಕಾರ, ಇಸ್ಪೀಟಿನ ಆಟೀನು

ಅಡ್ಡಿಗೆ = ಕೊರಳಿನ ಆಭರಣ.

ಅರದಾಳ = ಮುಖವರ್ಣಿಕೆಗೆ ಬಳಕೆಯಾಗುತ್ತಿದ್ದ ಮೂಲ ಲೇಪ

ಇಂಗಳೀಕ = ಕೆಂಪು ವರ್ಣದ್ರವ್ಯ

ಊಧ್ರ್ವಪುಂಡ್ರ = ವೈಷ್ಣವ ನಾಮ

ಕಳಾವರ್‌ = ಇಸ್ಪೀಟಿನ ಕ್ಲಲೋವರ್‌ ಆಕೃತಿ

ಚಲ್ಲಣ = ವೇಷಧಾರಿಯ ಒಳ ಪಾಯಜಾಮ

ಚುಟ್ಟಿ = ಅಕ್ಕಿಹಿಟ್ಟು ಸುಣ್ಣ ಮಿಶ್ರಮಾಡಿ ಮುಖದಲ್ಲಿ ಮೂಡಿಸುವ ಮುಳ್ಳಿನ ಆಕೃತಿ

ತಡ್ಪೆ ಕಿರೀಟ = ಬಣ್ಣದ ವೇಷಗಳ ಕಿರೀಟ

ದಗಲೆ = ವೇಷಗಳ ಒಳಅಂಗಿ

ಪೀಠಿಕೆ ಸ್ತ್ರೀವೇಷ = ಸಭಾಲಕ್ಷಣದ ಕೊನೆಯಲ್ಲಿ ಬರುವ ಹೆಣ್ಣುವೇಷ

ಬಕೆಟು ಕಿರೀಟ = ಹೆಣ್ಣು ಬಣ್ಣಗಳು ಬಳಸುವ ಕಿರೀಟ

ಬಾಲ ಮುಂಡು = ಸೊಂಟದ ಸುತ್ತ ಕಟ್ಟುವ ಬಟ್ಟೆ

ಬೋಳುಬೋಡು ವೇಷ = ಕಿರೀಟ ಇಲ್ಲದ ವೇಷ, ನಾಟಕೀಯ ವೇಷ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ
Next post ಮಾನವತಾವಾದಿ ಡಾ||ಅಂಬೇಡ್ಕರ್

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…