ಸ್ವಾಮಿ ವಿವೇಕಾನಂದ-ವಿಶ್ವಸನ್ಯಾಸಿ’

ಜಾಗತೀಕರಣದ ಜಾಲದಲ್ಲಿ ಇಡೀ ವಿಶ್ವ ಸಿಲುಕಿದೆ. ಕೋಮುವಾದ ಪ್ರಪಂಚವನ್ನೇ ಕಬಳಿಸುತ್ತಿದೆ. ಭಯೋತ್ಪಾದನೆ ನಿರ್ಭಯವಾಗಿ ನೆಲೆಯೂರುತ್ತಿದೆ. ಇವುಗಳ ಕಪಿ ಮುಷ್ಠಿಗೆ ಸಿಲುಕಿ ಮನುಕುಲ ತತ್ತರಿಸುತ್ತಿದೆ. ಇಂಥ ಅಪಾಯದ ಕಾಲದಲ್ಲಿ ಇಡೀ ವಿಶ್ವಕ್ಕೆ ವಿವೇಕಾನಂದರ ವಿಚಾರಗಳು ಹಿಂದೆಂದಿಗಿಂತ ಪ್ರಸ್ತುತವಾಗಿವೆ.

ಧರ್ಮ: ಧರ್ಮವನ್ನು ಕುರಿತು ತಮ್ಮ ಧರ್ಮವೇ ಸರ್ವ ಶ್ರೇಷ್ಠವಾದುದು ಎಂಬ ಭ್ರಮೆಯಲ್ಲಿ ಎಲ್ಲ ಧರ್ಮಗಳೂ ಇಡೀ ಪ್ರಪಂಚವನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲುಯತ್ನಿಸುತ್ತಿವೆ. ಇಂತಹ ಭಾವನೆಗಳಿಗೆ ಕಾರಣ ಧರ್ಮಾಂಧತೆ. ಧರ್ಮವನ್ನು ಸರಿಯಾಗಿ ಅರಿಯದೆ ಕಾರಣ ಧರ್ಮಾಂಧರಿಂದ ಸಂಕಷ್ಟಗಳು ಸೃಷ್ಟಿಯಾಗುತ್ತವೆ. ಅಂಥ ಧರ್ಮಾಂಧರಿಗೆ ವಿವೇಕಾನಂದರು ಹೇಳಿದ “ಧರ್ಮ ಬಾಯಿ ಮಾತಲ್ಲ, ನಂಬಿಕೆಯಲ್ಲ, ಸಿದ್ದಾಂತವಲ್ಲ ಅಥವಾ ಅದು ಕೋಮುವಾರು ಭಾವನೆಯೂ ಅಲ್ಲ. ಧರ್ಮ ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ, ಸಾಮಾಜಿಕ ಪೂಜೆಗೆ ಹೋಗು ವುದರಲ್ಲಿಯೂ ಇಲ್ಲ, ಅದು ಗ್ರಂಥದಲ್ಲಿ ಇಲ್ಲ, ಸಂಸ್ಥೆಯಲ್ಲಿ ಇಲ್ಲ, ಅದು ಆತ್ಮನಿಗೂ ದೇವರಿಗೂ ಇರುವ ಸಂಬಂಧ. ಧರ್ಮವೆಂದರೆ ಸಾಕ್ಷಾತ್ಕಾರ” ಎಂದಿದ್ದಾರೆ. ಧರ್ಮಮಾರ್ಗದಲ್ಲಿ ನಡೆದು ಅದನ್ನು ಜೀವನದಲ್ಲಿ ಸಾಕ್ಷಾತ್ಕಾರ ಮಾಡುವ ಯತ್ನದಲ್ಲಿ ಇಂದು ಯಾವ ಧರ್ಮಗಳು ನಿರತವಾಗಿವೆ? ಅಲ್ಲದೆ ವಿವೇಕಾನಂದರು “ತಾನು ಹುಟ್ಟಿದ ಧರ್ಮವಲ್ಲದೆ ಬೇರಾವ ಧರ್ಮವೂ ಸತ್ಯವಲ್ಲ ಎಂಬ ಭಾವನೆ ಹತ್ತೊಂಭತ್ತನೇ ಶತಮಾನದ ಅಂತ್ಯ ಭಾಗದಲ್ಲಿ ಇರುವುದು ನಮ್ಮ ದುರ್ಬಲತೆಗೆ ಸಾಕ್ಷಿ” ಎಂದಿದ್ದಾರೆ. ಅದು ಈ ಇಪ್ಪತ್ತೊಂದನೇ ಶತಮಾನದಲ್ಲಿ ಇರುವುದು ಮನುಕುಲದ ದುರಂತವಲ್ಲದೆ ಮತ್ತೇನು?

ದೇವರು: ದೇವರನ್ನು ಕುರಿತ ಅರಿವು ಇನ್ನೂ ಸ್ಪಷ್ಟತೆಗೆ ಬಂದಿಲ್ಲ. ಭಯದ ಹಿನ್ನೆಲೆಯಲ್ಲೆ ದೇವರನ್ನು ಆರಾಧಿಸುವ ಅಸಹಾಯಕ ಸ್ಥಿತಿಯಲ್ಲೇ ಮನುಷ್ಯನ ಮನಸ್ಸು ಇಂದೂ ಮುಂದುವರೆದಿದೆ. ಆ ಅವ್ಯಕ್ತ ಶಕ್ತಿಯನ್ನು ಅರಿಯುವಲ್ಲಿ ಸಂಪ್ರದಾಯ ನಿಷ್ಠತೆಯೇ ಬಲಗೊಳ್ಳುತ್ತಿದೆ. ವೈಜ್ಞಾನಿಕ ದೃಷ್ಟಿ ಇನ್ನೂ ಕಣ್ಣು ತೆರೆದಿಲ್ಲ, “ಅತಿಶ್ರೇಷ್ಟವಾದುದೆಲ್ಲ ಭವ್ಯವಾದುದೆಲ ನಾಯಸಮ್ಮತವಾದುದೆಲ್ಲ ಮಾನವರಲಿ ಪ್ರೀತಿಗೆ ಯೋಗ್ಯವಾದುದೆಲ್ಲ, ಮಹತ್ವಪೂರ್ಣವಾದುದೆಲ್ಲ ವೈಭವಯುಕ್ತವಾದುದೆಲ್ಲ ‘ದೇವರು’ ಎಂಬ ಪದದೊಂದಿಗೆ ಮಾನಸಿಕ ಸಂಬಂಧವನ್ನು ಪಡೆದಿರುವುದು ….. .. ಅವನೇ ಸೂರ್ಯ ನಕ್ಷತ್ರಗಳಂತೆ ರಾರಾಜಿಸುತ್ತಿರುವನು. ಅವನೇ ಭೂಮಿ, ಸಾಗರ. ಬೀಳುವ ಮಳೆ, ಉಸಿರಾಡುವ ಗಾಳಿ ಎಲ್ಲ ಅವನೆ. ಅತಿ ಕ್ಷುದ್ರ ಜೀವಾಣುವಿನಲ್ಲಿ ಅವಿಕಸಿತನಾಗಿರುವವನು ಅವನು” ಎಂದು ವಿವೇಕಾನಂದರು ದೇವರ ವಿಶ್ವ ವ್ಯಾಪಕತೆಯನ್ನು ಸಾರಿದ್ದಾರೆ. “ಅಣುರೇಣು ತೃಣಕಾಷ್ಠದೊಳಗೆಲ್ಲ ಅವನನ್ನು ಕಾಣುವ ಉಪನಿಷದ್ ದೃಷ್ಟಿ, ಅದ್ವೈತ ದೃಷ್ಟಿ ಮಾನವನ ಬದುಕಿಗೆ ಹಿತಕರವಾದುದು ಎಂಬ ಅರಿವು ಮನುಷ್ಯನಿಗೆ ಎಂದು ಬಂದೀತು?

ವೇದಾಂತದ ಮಿದುಳು, ಇಸ್ಲಾಮಿನದೇಹ: ಹಿಂದೂ ಮುಸ್ಲಿಂ ಎಂಬ ಪ್ರತ್ಯೇಕತಾ ಬಾವನೆ ಇಂದು ಇಡೀ ಭರತ ಖಂಡವನ್ನು ನುಂಗಿ ನೊಣೆಯುತ್ತಿದೆ. ಗುಜರಾತಿನಲ್ಲೂ ಇಂದು ನಿರ್ಮಾಣವಾಗಿರುವ ಸ್ಥಿತಿ ಭಾರತದ ಕಪ್ಪು ಅಧ್ಯಾಯ, ಜನಾಂಗೀಯ ದ್ವೇಷ ಎಲ್ಲರನ್ನೂ ಆತಂಕದಲ್ಲಿ ಸಿಲುಕಿಸಿದೆ. ದೇಶದ ಯಾವ ಮೂಲೆಯಲ್ಲಿ ಯಾವ ಕ್ಷಣದಲ್ಲಿ ಏನುಘಟಿಸಬಹುದೋ ಎಂಬ ಆತಂಕ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಜನಾಂಗೀಯ ಭೇದವಳಿದು ನಿಷ್ಕಳಂಕ ಭಾರತದ ನೆಲೆಗಟ್ಟಿಗೆ ವಿವೇಕಾನಂದರು ನೀಡಿರುವ ಸೂತ್ರ ಅತ್ಯಂತ ಆಪ್ಯಾಯಮಾನವಾದುದಾಗಿದೆ. ಅವರು ನೈನಿತಾಲಿನಿಂದ ಮಹಮ್ಮದೀಯನಿಗೆ ಬರೆದ ಪತ್ರದಲ್ಲಿ

“ನಮ್ಮ ಮಾತೃ ಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರೆಡೂ ಮಿಲನವಾಗಬೇಕು. ವೇದಾಂತದ ಮಿದುಳು. ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ದಾರಿ”

ಒಂದು ಸ್ಪಟಿಕದಷ್ಟು ಸ್ಪಷ್ಟವಾಗಿ ಹೇಳಿದ್ದಾರೆ. ವಿದ್+ಅಂತ=ವೇದಾಂತ. ವಿದ್ ಎಂದರೆ ತಿಳಿ, ಅಂತ ಬಂದರೆ ಕೊನೆ. ಸೃಷ್ಟಿಯ ಆದಿಯನ್ನು ಅರಿಯುವ ಮಾರ್ಗವೇ ವೇದಾಂತ. ಇದೇ ವಿಶ್ವದ ಮುಂದಿನ ಧರ್ಮವೂ ಆಗಬೇಕಾಗಿದೆ.  ಇಸ್ಲಾಮಿನ ಅಂದರೆ ಸೋದರ ಭಾವನೆ. ಮನುಷ್ಯ ಮನುಷ್ಯರ ನಡುವೆ ಭೇದವಿರದ ಸಮಾನತಾ ದೃಷ್ಟಿ .

ಯಾವ ಅರಬನೂ ಅರಬನಲ್ಲವನಿಗಿಂತ ಮೇಲಲ್ಲ ಯಾವ ಅರಬನಲ್ಲದವನೂ ಅರಬನಿಗಿಂತ ಮೇಲಲ್ಲ; ಯಾವ ಬಿಳಿಯನೂ ಕರಿಯನಿಗಿಂತ ಮೇಲಲ್ಲ, ಯಾವ ಕರಿಯನೂ ಯಾವ ಬಿಳಿಯನಿಗಿಂತ ಮೇಲಲ್ಲ. ಅವರ ಉತ್ತಮ ನಡವಳಿಕೆಯನ್ನುಳಿದು”

ಎಂದು ಪೈಗಂಬರರು ಮಾನವ ಮಾನವರಲ್ಲಿ ಇರಬೇಕಾದ ಸಮಾನತೆಯನ್ನು ಕುರಿತು ಹೇಳಿದ್ದಾರೆ. ವೇದಾಂತದ ಮಿದುಳನ್ನು ಇಸ್ಲಾಮಿನವರೂ, ಇಸ್ಲಾಮಿನ ಸಮಾನತೆಯನ್ನು ಹಿಂದೂಗಳೂ ಪರಸ್ಪರ ಅಳವಡಿಸಿಕೊಳ್ಳಬೇಕಾಗಿದೆ. ಈ ಎರಡೂ ಧರ್ಮಗಳ ಶ್ರೇಷ್ಟತೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ವಿಶಾಲ ಮನೋಧರ್ಮ ಈ ಮಣ್ಣಿನಲ್ಲಿ ಎಂದು ಕಣ್ಣು ತೆರೆದೀತು?

ಕೆಲವು ಪುಟಗಳು ಮಾತ್ರ: ಧರ್ಮಗ್ರಂಥಗಳೇ ಸರ್ವಸ್ವ ಎಂದು ಎಲ್ಲ ಧರ್ಮಗಳೂ ಗ್ರಂಥಗಳ ಆರಾಧನೆಯಲ್ಲಿ ತೊಡಗಿವೆ. ಹಿಂದೂಗಳಿಗೆ ವೇದ, ಗೀತೆ; ಕ್ರಿಶ್ಚಿಯನ್ನರಿಗೆ ಬೈಬಲ್; ಮುಸಲ್ಮಾನರಿಗೆ ಕುರಾನ್; ಸಿಖ್ಖರಿಗೆ ಗ್ರಂಥ್‌ಸಾಹೇಬ್ ಹೀಗೆ ಅವರವರ ಧರ್ಮ ಗ್ರಂಥಗಳೇ ಸರ್ವಶ್ರೇಷ್ಟವಾದುದೆಂದು ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಹೊಸ ಬೆಳಕು ಒಳಗೆ ಬರದಂತೆ ಕವುಚಿಕೊಂಡಿವೆ. ಅಂತಹ ಸಂಕುಚಿತ ದೃಷ್ಟಿವುಳ್ಳ ಮನಸ್ಸುಗಳಿಗೆ ವಿವೇಕಾನಂದರು

“ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟುಮಾಡಿವೆ. ಹಲವು ದೋಷಯುಕ್ತ ಸಿದ್ಧಾಂತಗಳಿಗೆ ಅವೇ ಕಾರಣ. ಸಿದ್ಧಾಂತಗಳೆಲ್ಲ ಗ್ರಂಥದಿಂದ ಬರುವುವು. ಮತಾಂಧತೆ-ಅನ್ಯ ಧರ್ಮೀಯರನ್ನು ಹಿಂಸಿಸುವುದು ಇವಕ್ಕೆಲ್ಲ, ಗ್ರಂಥಗಳೇ ಕಾರಣ”

ಎಂದು ಗ್ರಂಥಗಳ ಮಿತಿಯನ್ನು, ಅವು ಹುಟ್ಟುಹಾಕುತ್ತಿರುವ ಸಂಘರ್ಷಗಳನ್ನು ಮನವರಿಕೆ ಮಾಡಿದ ವಿವೇಕಾನಂದರು ಬಿಡುಗಡೆಯ ಮಾರ್ಗವನ್ನು ಸೂಚಿಸುತ್ತಾ

“ಭಗವಂತನ ಗ್ರಂಥ ಅಂತ್ಯವಾಯಿತೇನು? ಅಥವಾ ನಿರಂತರ ದರ್ಶನ ಇನ್ನೂ ಆಗುತ್ತಿದೆಯೋ? ಪ್ರಪಂಚದ ಆಧ್ಯಾತ್ಮಿಕ ದರ್ಶನಗಳು ಒಂದು ಅಮೋಘ ಶಾಸ್ತ್ರ. ಬೈಬಲ್ಲು, ವೇದ, ಕುರಾನ್ ಮತ್ತು ಇತರ ಧರ್ಮಶಾಸ್ತ್ರಗಳೆಲ್ಲ ಕೆಲವು ಪುಟಗಳು ಮಾತ್ರ. ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ “

ಎಂದು ಅನಂತ ಅರಿವಿನ ಕಡೆಗೆ ಹೃನ್ಮನಗಳನ್ನು ತೆರೆಯಬೇಕೆಂದು ಕರೆಕೊಡುತ್ತಾರೆ. ಆ ಕರೆಗೆ ಮನುಕುಲ ತನ್ನ ಹೃದಯದ ಬಾಗಿಲನ್ನು ಎಂದು ತೆರೆದೀತು?

ಕೊಳು ಕೊಡುಗೆ: ಪ್ರಪಂಚದ ಎರಡು ಜನಾಂಗಗಳು ಎರಡು ಭಾಗಗಳಲ್ಲಿ ಎರಡು ದಿವ್ಯ ಶಕ್ತಿಗಳನ್ನು ಗಳಿಸಿಕೊಂಡಿವೆ. ಅವೆ ಬಾಹ್ಯ ಮತ್ತು ಆಂತರಿಕ ಪ್ರಕೃತಿಯನ್ನು ನಿಗ್ರಹಿಸಿ ಹಿಡಿದಿಟ್ಟುಕೊಂಡಿರುವುದು. ಪಾಶ್ಚಾತ್ಯರು ಬಾಹ್ಯ ಪ್ರಕೃತಿಯನ್ನು ನಿಗ್ರಹಿಸಿರುವಂತೆ ಪೌರಾತ್ಯರು ಆಂತರಿಕ ಪ್ರಕೃತಿಯನ್ನು ನಿಗ್ರಹಿಸಿರುವರು. ಈ ನಿಗ್ರಹದ ಯಾತ್ರೆಯಲ್ಲಿ ಸಾವಿರಾರು ವರ್ಷಗಳ ಸತತ ಹೋರಾಟವಿದೆ, ಸಾಧನೆಯಿದೆ. ಜನಾಂಗ ಜನಾಂಗಗಳ ಕೊಡುಗೆಯಿದೆ, ತಲೆಮಾರುಗಳ ತ್ಯಾಗವಿದೆ. ಪ್ರಪಂಚದಲ್ಲಿ ಈಗ ಆಗಬೇಕಾಗಿರುವುದು ಇದರ ವಿನಿಮಯ. ಅದರ ಅಗತ್ಯವನ್ನು
ಕುರಿತು ವಿವೇಕಾನಂದರು

“ಭಾರತೀಯರು ಯೂರೋಪಿಯನ್ನರಿಂದ ಬಾಹ್ಯ ಪ್ರಕೃತಿಯನ್ನು ಹೇಗೆ ನಿಗ್ರಹಿಸಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಯೂರೋಪಿಯನ್ನರು ಭಾರತೀಯರಿಂದ ಆಂತರಿಕ ಪ್ರಕೃತಿಯನ್ನು ಹೇಗೆ ನಿಗ್ರಹಿಸಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಆಗ ಹಿಂದುವೂ ಇರುವುದಿಲ್ಲ, ಯೂರೋಪಿಯನ್ನರೂ ಇರುವುದಿಲ್ಲ; ಬಾಹ್ಯ ಮತ್ತು ಆಂತರಿಕ ಪ್ರಕೃತಿಯನ್ನು ಗೆದ್ದ ಆದರ್ಶ ಜನಾಂಗ ಒಂದು ಇರುವುದು”

ಎಂದಿದ್ದಾರೆ. ಈ ಒಂದು ಆದರ್ಶಸ್ಥಿತಿ ಸ್ಥಾಪನೆ ಎಂದು ಅದೀತು? ನಿಜವಾದ ಜಾಗತೀಕರಣ ಎಂದರೆ ಇದು. ಅದರೆ ವ್ಯಾಪಾರಿಕರಣವೆ ಜಾಗತೀಕರಣದ ಅಂತರಂಗವಾಗಿರುವುದು ಮನುಕುಲದ ದುರಾದೃಷ್ಟವಾಲ್ಲದೆ ಮತ್ತೇನು?

ನಾನು ಸಮತಾವಾದಿ: ದೀನದಲಿತರಿಗಾಗಿ ವಿವೇಕಾನಂದರಷ್ಟು ಕರುಳು ಮಿಡಿದವರು ವಿರಳ. ಬಂಡವಾಳ ಶಾಹಿಗಳ ಹಿಡಿತದಲ್ಲಿ ಪುರೋಹಿತರ ಉಪಟಳದಲ್ಲಿ ನಲುಗಿದ ಬಡವರ ಬಗ್ಗೆ ಅನುಕಂಪ ತೋರಿದ ಅಪರೂಪದ ಸನ್ಯಾಸಿ. ಬಡವರ ಬೆವರನ್ನು ಬಸಿದುಕೊಳ್ಳುವವರನ್ನು ಕಂಡು ಕುದಿದರು. ಅಸಹಾಯಕರ ದೀನ ಸ್ಥಿತಿಯನ್ನು ಕಂಡು ಕನಿಕರ ಪಟ್ಟರು.

“ಚಿನ್ನ ಅಥವಾ ಬೆಳ್ಳಿ ಪ್ರಮಾಣದ (Standard) ಕಷ್ಟಗಳೆಲ್ಲಾ ನನಗೆ ತಿಳಿಯದು. (ಇದರ ವಿಚಾರವಾಗಿ ಯಾರಿಗೂ ಹೆಚ್ಚು ತಿಳಿದಂತೆ ಕಾಣುವುದಿಲ್ಲ). ಅದರೆ ಇಷ್ಟನ್ನು ಮಾತ್ರ ನಾನು ನೋಡಬಲ್ಲೆ ಚಿನ್ನದ ಪ್ರಮಾಣ ಬಡವನನ್ನು ಅತಿ ಬಡವನನ್ನಾಗಿಯೂ, ಹಣಗಾರರನ್ನು ಹೆಚ್ಚು ಹಣಗಾರರನ್ನಾಗಿಯೂ ಮಾಡಿದೆ ….. .. ನಾನು ಸಮತಾವಾದಿ (Socialist) ಏಕೆಂದರೆ ಅದು ಒಂದು ಸಂಪೂರ್ಣವಾದ ಸಂಸ್ಥೆ ಎಂದು ತಿಳಿದಿರುವೆನು ಎಂದಲ್ಲ. ಆದರೆ ಒಂದು ಚೂರು ರೊಟ್ಟಿ, ಏನೂ ಇಲ್ಲದೆ ಇರುವುದಕ್ಕಿಂತ ಮೇಲು ….. ಎಂದು ವಿವೇಕಾನಂದರು ಕನಸಿದ, ಏನೂ ಇಲ್ಲದೆ ಇರುವುದಕ್ಕಿಂತ ಒಲಿದು ಚೂರು ರೊಟ್ಟಿ ಮೇಲು ಎನ್ನುವ ಸಮತಾ ಸಿದ್ಧಾಂತ ಪ್ರಪಂಚದಾದ್ಯಂತ ಹಸಿದ ಹೊಟ್ಟೆಯಲ್ಲಿ ನರಳುತ್ತಿರುವ ಕೊಟ್ಯಾಂತರ ಜೀವಿಗಳ ಪಾಲಿಗೆ ಸಹಕಾರಿಯಾಗಿ ಎಂದು ಬಂದೀತು?

ಮೂರು ವಿಷಯಗಳು ಆವಶ್ಯಕ: ವ್ಯಕ್ತಿಯನ್ನು, ಜನಾಂಗವನ್ನು ಮುಂದೆ ತರುವುದಕ್ಕೆ ಮೂರು ವಿಷಯಗಳು ಅವಶ್ಯಕ ಎಂದು ವಿವೇಕಾನಂದರು ಪ್ರತಿಪಾದಿಸುತ್ತಾರೆ. ಅವು ಇಂದಿನ ನಮ್ಮ ಸಂಕಷ್ಟಗಳಿಗೆ ಸಂಜೀವಿನಿಯಂತಿವೆ. ಅವುಗಳೆಂದರೆ.

೧. ಸತ್ಯದ ಶಕ್ತಿಯಲ್ಲಿ ದೃಢವಾದ ನಂಬಿಕೆ
೨. ಅಸೂಯೆ ಅನುಮಾನಗಳು ಇಲ್ಲದೆ ಇರುವುದು
೩. ಯಾರು ಒಳ್ಳೆಯವರಾಗುವುದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನ
ಪಡುವರೋ ಅವರಿಗೆಲ್ಲಾ ಸಹಾಯ ಮಾಡುವುದು.

ವಿವೇಕಾನಂದರು :ಹೇಳಿದ ಈ ಹಾದಿಯಲ್ಲಿ ಇನ್ನು ಮುಂದಾದರೂ ಸಾಗುವ ಕನಿಷ್ಟ ಪ್ರಯತ್ನವನ್ನು ಸರ್ಕಾರ- ಗಳಾಗಲೀ, ಸುಧಾರಕರುಗಳಾಗಲೀ ಪ್ರಾಮಾಣಿಕವಾಗಿ ಮಾಡುವರು ನಾಶದ ದವಡೆಗೆ ಸಿಕ್ಕಿರುವ ಭಾರತ ತನ್ನೆಲ್ಲಾ ಬಂಧನಗಳಿಂದ ಬಿಡುಗಡೆಗೊಂಡು ಅದು ಮತ್ತೊಮ್ಮೆ ವಿಶ್ವದ ಮಾರ್ಗದರ್ಶಿಯಾಗಲು ಯತ್ನಿಸುವುದೇ? ಅದಕ್ಕಾಗಿ ನಾವು ನೀವು ಮಾಡಬೇಕಾದ ತ್ಯಾಗ ಯಾವುದು?

ಹೀಗೆ ವಿವೇಕಾನಂದರು ಜನಮನದ ಸ್ಥಿತಿಯನ್ನು ಅರಿತು ಜ್ಞಾನ-ವಿಜ್ಞಾನಗಳ ಅಗತ್ಯವನ್ನು ಮನಗಂಡು ಜ್ಯೋತಿಷ್ಯ ಮೂಢನಂಬಿಕೆಗಳಿಂದ ಮುಗ್ಧ ಜನರನ್ನು ಪಾರು ಮಾಡಿ, ಸ್ತ್ರೀ ಶಕ್ತಿಯನ್ನು ಮನಗಾಣುವಂತೆ ಮನಮಿಡಿದು ದೇಶ, ಸಮಾಜದ ಸೌಖ್ಯಕ್ಕಾಗಿ ಇಡೀ ಜೀವನವನ್ನು ತೇಯ್ದವರು. ಅವರ ಚಿಂತನೆಗಳು ಪ್ರಪಂಚದ ಎಲ್ಲ ಕ್ಲೇಶಗಳನ್ನು ಕಳೆದು ಮನುಕುಲ ನೆಮ್ಮದಿಯ ನೆಲೆಯಲ್ಲಿ ಬದುಕಲು ಸಹಕಾರಿಯಾಗಿವೆ.

ವಿಶ್ವಸನ್ಯಾಸಿ: ವಿವೇಕಾನಂದರನ್ನು ಹಿಂದೂ ಸನ್ಯಾಸಿ ಎಂದು ಕರೆಯುವುದು ವಾಡಿಕೆ. ಒಮ್ಮೆ ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಮಾತನಾಡುವಾಗ ಕುವೆಂಪು ಅವರು

“ವಿವೇಕಾನಂದರನ್ನು ಹಿಂದೂ ಸನ್ಯಾಸಿ ಬಂದು ಕರೆಯುವುದು ಉಚಿತವಲ್ಲ. ಅವರು ವಿಶ್ವ ಸನ್ಯಾಸಿ. ಅವರನ್ನು ವಿಶ್ವ ಸನ್ಯಾಸಿ ಎಂದೇ ಕರೆಯಬೇಕು.”

ಎಂದರು. ವಿವೇಕಾನರದರೂ ಸಹ:-

“ನಾನು ಭಾರತಕ್ಕೆ ಸೇರಿರುವಷ್ಟೇ ವಿಶ್ವಕ್ಕೂ ಸೇರಿದ್ದೇನೆ. ಅವರಲ್ಲಿ ಯಾವ ಆಷಾಡಭೂತಿತನವೂ ಇಲ್ಲ….. ನಾನು ಯಾವುದೇ ದೇಶದ ಗುಲಾಮನೆ? ……. .. ಮೂಢರೂ ನಿರಭಿಮಾನಿಗಳೂ, ಜಾತಿಭ್ರಾಂತರೂ ವಂಚಕರೂ, ಹೇಡಿಗಳೂ, ಕಟುಕರೂ ಅದ ಹಿಂದೂ ಪುರೋಹಿತರಂತೆ ಬದುಕಿ ಸಾಯಲು ನಾನು ಹುಟ್ಟಿರುವೆನೆಂದು ತಿಳಿದಿರುವೆಯಾ? ನಾನು ಹೇಡಿತನವನ್ನು ದ್ವೇಷಿಸುತ್ತೇನೆ..………… ಭರತ ಖಂಡವನ್ನು ಪ್ರೀತಿಸುತ್ತೇನೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ, ಅದರೆ ಪ್ರತಿದಿನ ನನ್ನ ದೃಷ್ಟಿ ಸ್ಪಷ್ಟವಾಗುತ್ತಿದೆ. ನಮಗೆ ಭರತ ಖಂಡವಾದರೇನು? ಇಂಗ್ಲೆಂಡ್ ಆದರೇನು? ಅಮೇರಿಕಾ ಆದರೇನು? ಅಜ್ಞಾನಿಗಳು ಮಾನವರೆಂದು ಕರೆಯುವ ನಾವೆಲ್ಲ ಆ ಭಗವಂತನ ಸೇವಕರು. ಯಾರು ಬೇರುಗಳಿಗೆ ನೀರೆರೆಯುವರೋ ಅವರು ಇಡೀ ಗಿಡಕ್ಕೆ ನೀರೆರೆಯುವರು “

ಸ್ವಾಮಿ ವಿವೇಕಾನಂದರ ಈ ವಿಶ್ವ ವ್ಯಾಪಕ ದೃಷ್ಟಿ ಅನುಕರಣೀಯವಾದುದು.
-೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನದ ಜಾಗತೀಕರಣ
Next post ಅರವಿಂದ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…