ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ” ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ, ಬೆಂದು ಬಳಲಿದವರಿಗೆ ಬೆಳಕಾಗಿ ನಿಂದವರು. ಅಂತಹ ಮಹಾನುಭಾವರನ್ನು ಈಗ ಒಂದು ವರ್ಗ ಕಿತ್ತು ತಿನ್ನುತ್ತಿದ್ದರೆ ಮತ್ತೊಂದು ವರ್ಗ ಶವಪರೀಕ್ಷೆಗೆ ತೊಡಗಿರುವುದು ಇತಿಹಾಸದ ದುರಂತ.

ಭಾರತೀಯ ಮನಸ್ಸು ಒಂದು ವಿಚಿತ್ರ ರೀತಿಯದು. ಮೇಲೆ ಸೌಮ್ಯವಾಗಿ ಕಂಡರೂ ಅಂತರಂಗದಲ್ಲಿ ಕ್ರೌರ್ಯವನ್ನು ಹಿಡಿದಿಟ್ಟುಕೊಂಡಿದೆ. ಜಗತ್ತಿಗೆ ಬಂದ ಧಾರ್ಶನಿಕರ,ಮಹಾನ್ ನಾಯಕರ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದವರ ಗತಿಯೇ ಡಾ|| ಅಂಬೇಡ್ಕರ್ ಅವರಿಗೂ ಸಂದಿದೆ. ಇದು ಮನುಕುಲದ ವ್ಯಂಗ್ಯ

ಜಾತಿ ಈ ದೇಶದ ದೊಡ್ಡ ಜಾಡ್ಯ. ಈ ದೇಶದ ರಾಜಕೀಯ ಅಂಬೇಡ್ಕರ್, ಜಗಜೀವನರಾಂ ಅವರನ್ನು ಆಯಾ ಜಾತಿಯ ನಾಯಕರನ್ನಾಗಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ..ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹರಾಜು ಹಾಕಿದರೆ ಬಿಜೆಪಿ ಅವರ ಶವಪರೀಕ್ಷೆಗೆ ಹೊರಟಿದೆ.

‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ’ ಎಂದ ಸರ್ವಜ್ಞನ ನುಡಿಬೆಳಕು ಭಾರತೀಯರ ಹೃದಯದಾಳಕ್ಕೆ ಇಳಿಯಲಿಲ್ಲ. ಕೆಳಜಾತಿ ಎಂಬ ಒಂದೇ ಕಾರಣಕ್ಕೆ ಅಂಬೇಡ್ಕರ್ ಅವರ ವಿದ್ವತ್ತನ್ನು ಕಡೆಗಣಿಸಲಾಯ್ತು. ಅವರ ಪ್ರತಿಭೆಯನ್ನು ಗುರುತಿಸಿ ಡಾಕ್ಟರೇಟ್ ನೀಡಿ ಗೌರವಿಸಿದವರು ಅಮೇರಿಕಾದವರು. ಭಾರತದ ಯಾವ ವಿಶ್ವವಿದ್ಯಾಲಯಗಳೂ ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಲಿಲ್ಲ. ಅವರು ಬದುಕಿದ್ದಾಗ ಅಪಮಾನದ ಅಂಚಿಗೆ ತಳ್ಳಿದರು. ನಗುನಗುತ್ತಲೇ ನಾಡಿ ಆಡದಂತೆ ಮಾಡಿದರು.

ಹಿಂದೂ ಕೋಡ್ ಬಿಲ್ ಅವರ ಅಂತರಂಗದ ಹಿರಿದಾಸೆ. ಪಟ್ಟಭದ್ರ ಹಿತಾಸಕ್ತಿಗಳ ಒಳಸಂಚಿನಿಂದ ನೆಹರೂ ನೇತೃತ್ವದಲ್ಲಿ ಅದನ್ನು ತಿರಸ್ಕರಿಸಿ ಅವರ ಹೃದಯವನ್ನು ಈಟಿಯಿಂದ ಇರಿಯಲಾಯ್ತು. ಗಂಧದ ಮಾತನಾಡುತ್ತಲೇ ಒಳಗೊಳಗೆ ಮೆಣಸಿನ ಹೊಗೆ ಹಾಕಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ತಳ್ಳಲಾಯ್ತು. ಈಗ ರಾಜಕೀಯ ಪಕ್ಷಗಳು ಮಾಡುತ್ತಿರುವ ಅವರ ಗುಣಗಾನ ಒಂದು ಮೋಸ, ಆತ್ಮವಂಚನೆಯದು. ಸರ್ಕಾರ ಅಂಬೇಡ್ಕರ್ ಆವರ ಜನ್ಮದಿನಾಚರಣೆ ಮಾಡುತ್ತಿರುವುದು ಹರಿಜನರ ಅನುಕಂಪಕ್ಕಾಗಿ.

ಅಂಬೇಡ್ಕರ್ ಅವರದು ನಿರಂತರ ಹೋರಾಟ. ಸ್ವಪ್ನ ನಿಲುವನ್ನು ಹೊಂದಿದ್ದ ಅವರು ಪ್ರತ್ಯೇಕ ದಲಿತರಾಜ್ಯಕ್ಕಾಗಿ ಒತ್ತಾಯಿಸಿದರು. ಕಾರಣ ಈ ದೇಶದ ಜಾತಿಯ ಕ್ರೌರ್ಯದ ಆಳ, ಅಗಲ, ವಿಸ್ತಾರಗಳನ್ನು ಅವರು ಬಲ್ಲವರಾಗಿದ್ದರು. ಅವರ ಭೇಡಿಕೆ ಈಡೇರಲಿಲ್ಲ. ದಲಿತರಿಗೆ ಎರಡು ಓಟಿನ ಹಕ್ಕಿಗಾಗಿ ಪ್ರತಿಪಾದಿಸಿದರು. ಅದೂ ಈಡೇರಲಿಲ್ಲ. ಕಡೆಗೆ ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸುವಲ್ಲಿ ಯಶಸ್ವಿಯಾದರು. ಅವರೆ ಸ್ವತಂತ್ರ ಭಾರತದಲ್ಲಿ ಈ ಮೀಸಲಾತಿಯೂ ರಾಜಕೀಯ ತಿರುವನ್ನು ಪಡೆಡುಕೊಂಡು ಸಂಘರ್ಷಕ್ಕೆ ಕಾರಣವಾಯ್ತು. ಮೀಸಲಾತಿ ಪಡೆದ ಹಿಂದುಳಿದ ವರ್ಗದವರೂ ಅದನ್ನು ದುರುಪಯೋಗ ಪಡಿಸಿಕೊಂಡರು. ತಮ್ಮ ಹಿನ್ನೆಲೆಯನ್ನು ಮರೆತರು. ಸವರ್ಣೀಯರಿಗಿಂತ ಕ್ರೂರವಾಗಿ ತಮ್ಮ ಜನರನ್ನು ತಾವೇ ಶೋಷಿಸುತ್ತಾ ಸ್ವಾರ್ಥ ಸಾಧಿಸಿಕೊಳ್ಳುವ ಕೀಳುತನಕ್ಕೆ ಇಳಿದರು. ಈಗ ಮೀಸಲಾತಿ ಒಳಸಂರ್ಫರ್ಷಕ್ಕೆ ಕಾರಣವಾಗಿದೆ.

ಮೀಸಲಾತಿ ಭಿಕ್ಷೆ ಅಲ್ಲ. ಭಾರತೀಯ ಸಮಾಜದ ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಅಮಾನವೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಂಡು ಭಾರತೀಯರು ಒಂದು ಜನಾಂಗವಾಗಿ ಹೊರಹೊಮ್ಮಲು ಬೇಕಾಗಿರುವ ಮೀಸಲಾತಿಯ ಅಗತ್ಯವನ್ನು ಒತ್ತಿ ಹೇಳಿದವರು ಸ್ವಾಮಿ ವಿವೇಕಾನಂದರು. ಮಹಾರಾಷ್ಟ್ರದ ಸಾಹುಮಹಾರಾಜರಂತೆ ತಮ್ಮ ಆಳ್ವಿಕೆಯಲ್ಲಿ ೧೯೧೭ ರಷ್ಟು ಹಿಂದೆಯೇ ಮೀಸಲಾತಿಯನ್ನು ಜಾರಿಗೊಳಿಸಿದವರು ಮೈಸೂರು ಅರಸರಾದ ನಾಲ್ಪಡಿ ಕೃಷ್ಣರಾಜ ಒಡೆಯರ್ ಅವರು. ನಂತರ ಅದನ್ನು ಸಂವಿಧಾನದಲ್ಲಿ ಅಳವಡಿಸಿದವರು ಡಾ|| ಅಂಬೇಡ್ಕರ್. ಮೀಸಲಾತಿಯ ಈ ತತ್ವ ಕಾಂಗ್ರೆಸ್‌ನ ದುರಾಡಳಿತದಿಂದಾಗಿ ರಾಜಕೀಯಗೊಂಡು ಈಗ ಅಪಹಾಸ್ಯಕ್ಕೆ, ವ್ಯಂಗಕ್ಕೆ ತುತ್ತಾಗಿದೆ.

ಅಂಬೇಡ್ಕರ್ ಅವರ ಆಶಯ ಭಾರತದ ಮಣ್ಲಿನಲ್ಲಿ ಅರಳಲಿಲ್ಲ. ಅಂತರಂಗದಲ್ಲಿ ಅಸಮಾನತೆಯನ್ನು ತುಂಬಿಕೊಂಡ ರಾಜಕೀಯ ಪಕ್ಷಗಳು ಬಹಿರಂಗದಲ್ಲಿ ಆಲಂಗಿಸುವ ನಾಟಕವಾಡಿದುವು. ಈ ರಾಜಕೀಯ ನಾಟಕಕ್ಕೆ ಕಾನ್ಸಿರಾಂ, ಮಾಯಾವತಿ, ರಾಂವಿಲಾಸ್‌ಪಾಸ್ವಾನ್, ಚಾರ್ಜ್ ಫರ್ನಾಂಡೀಸ್ ಅಂಥವರು ಬಲಿಯಾದದ್ದು ದೊಡ್ಡ ದುರಂತ.

ಈಗ ದಲಿತರ ಹೆಸರು ಹೇಳಿಕೊಂಡು ಹುಟ್ಟಿಕೊಂಡ ರಾಜಕೀಯ ಪಕ್ಷಗಳು, ವ್ಯಕ್ತಿಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಂಬೇಡ್ಕರ್ ಅವರನ್ನು ಮುಂದು ಮಾಡಿಕೊಂಡು ಆವರ ಹೆಸರನ್ನು ಹೇಳಿ ಕಿತ್ತು ತಿನ್ನುತ್ತಿವೆ. ದೇಶದ ಕೆಳಹಂತದಿಂದ ಮೇಲಿನವರೆಗೆ ಈ ರೋಗ ಉಲ್ಬಣಿಸಿದೆ. ಯಾವ ಅಜ್ಞಾನದಿಂದ, ಗಾಡಾಂಧಕಾರದಿಂದ, ಅಸಹ್ಯದ ಕೊಳಚೆಯಿಂದ ಆನಂದದ ಸ್ವಚ್ಛ ವಿಹಾರಕ್ಕೆ ಅಂಬೇಡ್ಕರ್ ಕೈ ಬೀಸಿ ಕರೆದರೋ ಅದರ ಕಿಂಚಿತ್ ಗಂಧ ಗಾಳಿಯನ್ನು ಅರಿಯದೆ ಕೊಚ್ಚೆಯೇ ಮೆಚ್ಚಿಗೆ ಎನ್ನುವಂತೆ ವರ್ತಿಸುತ್ತಿರುವುದನ್ನು ನೋಡಿದರೆ ಕತ್ತಲೆ ದಾರಿ ದೂರ ಎನ್ನುವ ಕರಾಳ ಅನುಭವವಾಗುತ್ತಿದೆ.

ಡಾ|| ಅಂಬೇಡ್ಕರ್ ಅತ್ಯಂತ ಜವಾಬ್ದಾರಿಯಿಂದ ಸಂವಿಧಾನವನ್ನು ರಚಿಸಿದ್ದಾರೆ. ಪ್ರಪಂಚದ ಎಲ್ಲ ರಾಷ್ಟ್ರಗಳ ಸಂವಿಧಾನದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಭಾರತೀಯ ಸಂಸ್ಕೃತಿಯ ಹಿನ್ನೆಲೆಯನ್ನರಿತು ಸಮಾನತೆಯನ್ನು ಹುಟ್ಟು ಹಾಕುವ, ಸರ್ವರ ಏಳ್ಗೆಗೆ ಪೂರಕವಾದ ಜಾತ್ಯಾತೀತ ಧರ್ಮನಿರಪೇಕ್ಷ ತತ್ವಗಳನ್ನು ಅದರಲ್ಲಿ ಅಳವಡಿಸಲಾಗಿದೆ. ಮನುಷ್ಯ ಮನುಷ್ಯರಲ್ಲಿ, ಸ್ತ್ರೀ-ಪುರುಷರಲ್ಲಿ ಅಸಮಾನತೆಯನ್ನು ಸೃಶ್ಯ-ಅಸ್ಪೃಶ್ಯತೆಯನ್ನು ಸುಟ್ಟು ಸಮಾನತೆಯ, ಸಹೋದರ ಭಾವನೆಯನ್ನು ಬಿತ್ತುವ ಸಂವಿಧಾನವನ್ನು ನೀಡಿದರು. ವರ್ಗ, ವರ್ಣ, ಜಾತಿ, ಅಸ್ಪೃಶ್ಯತೆಯನ್ನು ಮಾನ್ಯ ಮಾಡುವ ಬಿಜೆಪಿ ಈ ಸಂವಿಧಾನ ಪರಾಮರ್ಶೆ ಮಾಡಲು ಹೊರಟಿದೆ. ಬಿಜೆಪಿಯ ಈ  ಸಂವಿಧಾನ ಪರಾಮರ್ಶೆ ಎನ್ನುವುದು ಅಂಬೇಡ್ಕರ್ ಅವರ ಶವಪರೀಕ್ಷೆ ಮತ್ತೇನೂ ಅಲ್ಲ.

ತನ್ನವರಿಂದಲೇ ಕಿತ್ತು ತಿನ್ನಲ್ಪಡುತ್ತಿರುವ. ಕೋಮುವಾದಿಗಳ ಕ್ರೂರ ಕತ್ತಿಗೆ ಗುರಿಯಾಗಿ ಶವಪರೀಕ್ಷೆಗೆ ಒಳಗಾಗಿರುವ ಅಂಬೇಡ್ಕರ್ ಅವರಿಗೆ ಬಿಡುಗಡೆ ಎಂದಿಗೆ? ಅವರ ಆಶಯಗಳು ಈ ಮಣ್ಣಿನಲ್ಲಿ ಅರಳುವ ಬಗೆ ಹೇಗೆ? ಅವರ ಜೀವನ ಹೋರಾಟದ ಫಲವನ್ನು ಭಾರತೀಯರು ಸಾಕಾರಗೊಳಿಸಿಕೊಳ್ಳುವ ಮಾರ್ಗ ಯಾವುದು? ಈ ಪ್ರಶ್ನೆಗಳು ನಿಮ್ಮಂತೆ ನನ್ನನ್ನೂ ಕಾಡುತ್ತಿವೆ.
-೨೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನದ ಹಾಸ್ಯ
Next post ಬಯ್ಯುವಿ ಯಾಕೆ

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…