ಯಕ್ಷಗಾನದ ಹಾಸ್ಯ

ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ||

ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ

ಸಭಾಲಕ್ಷಣ, ಪಾವಂಜೆ ಪ್ರತಿ, ಪುಟ 13.

7.1 ಹಾಸ್ಯದ ಸ್ಥಾನಮಾನ ಮತ್ತು ಪ್ರಭೇದಗಳು

ರಸಾಸ್ವಾದನೆಯ ಸಂದರ್ಭದಲ್ಲಿ ವಿಮರ್ಶಾಪ್ರಜ್ಞೆ ಜಾಗೃತವಾಗಿರುವಂತೆ ನೋಡಿ ಕೊಳ್ಳುವುದು ಅತ್ಯಂತ ಅಗತ್ಯವೆಂದು ಹೇಳುವ ಮೀಮಾಂಸಕಾರರು ಭಾರತದಲ್ಲೂ ಇದ್ದಾರೆ, =ಾಶ್ಚಾತ್ಯ ರಾಷ್ಟ್ರಗಳಲ್ಲೂ ಇದ್ದಾರೆ. ಖ್ಯಾತ
ನಾಟಕಕಾರ ಬ್ರೆಕ್ಟ್‌ ಅಂಥವರಲ್ಲೊಬ್ಬ. ಅವನ ಹೇಳಿಕೆ ಬ್ರೆಕ್ಟನ ತಂತ್ರವೆಂದು ಪಾಶ್ಚಾತ್ಯ ನಾಟಕರಂಗದಲ್ಲಿ ಪ್ರಸಿದ್ಧಿ ಪಡೆದಿದೆ. ಭಾರತೀಯ ಪ್ರದರ್ಶನ ಕಲೆಗಳಲ್ಲಿ ಭಾವದೊಂದಿಗೆ ವಿಚಾರವೂ ಜಾಗೃತವಾಗಿರಬೇಕೆಂಬ ಕಾರಣಕ್ಕಾಗಿ ಕೆಲವು ತಂತ್ರಗಳನ್ನು ಅಳವಡಿಸಲಾಗುತ್ತದೆ. ಯಕ್ಷಗಾನದ ಹಾಸ್ಯಪಾತ್ರಗಳ ಸುಪ್ತ ಉದ್ದೇಶ ಅದುವೇ. ಅದಕ್ಕಾಗಿ ಯಕ್ಷಗಾನದ ಹಾಸ್ಯಪಾತ್ರಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಲಾಗಿದೆ.

ಚೌಕಿ ಎಂಬ ಪ್ರಸಾಧನ ಗೃಹದಲ್ಲಿ ಹಾಸ್ಯಗಾರ ದೇವರಿಗೆ ಸರಿಯಾದ ವಿರುದ್ಧ ದಿಕ್ಕಿನಲ್ಲಿ ದೇವರತ್ತ ಮುಖ ಮಾಡಿ ಕುಳಿತುಕೊಳ್ಳುತ್ತಾನೆ. ಇದರ ಅರ್ಥ ವೇಷಧಾರಿಗಳು ಚೌಕಿಯಲ್ಲಿ ದೇವರ ಬಳಿಕ ಅತ್ಯಂತ ಹೆಚ್ಚು ಗೌರವ
ನೀಡಬೇಕಾದದ್ದು ಹಾಸ್ಯಗಾರನಿಗೇ ಎಂದು. ಯಕ್ಷಗಾನ ಮೇಳದಲ್ಲಿ ಭಾಗವತನ ಮತ್ತು ಮದ್ದಳೆಗಾರನ ಬಳಿಕ ಮೂರನೆಯ ಸ್ಥಾನದಲ್ಲಿರುವವನು ಹಾಸ್ಯಗಾರ.

ಆತನಿಗೆ ಭಾಗವತಿಕೆ ಮಾಡಲು ತಿಳಿದಿರಬೇಕು, ಚೆಂಡ ಮದ್ದಳೆ ನುಡಿಸಲು ಆತ ಅರಿತಿರಬೇಕು. ಪುರಾಣಜ್ಞಾನ, ಪ್ರಸಂಗಜ್ಞಾನ, ರಂಗಜ್ಞಾನ ಮತ್ತು ನೃತ್ಯಜ್ಞಾನ ಇರಬೇಕು. ಸಂದರ್ಭ ಒದಗಿದಾಗ ಯಾವುದೇ ಪಾತ್ರವನ್ನು ನಿಭಾಯಿಸುವ ಕೌಶಲ ಅವನಲ್ಲಿರಬೇಕು. ಯಕ್ಷಗಾನವು ಹಾಸ್ಯಗಾರನಿಂದ ಇವೆಲ್ಲವನ್ನು ನಿರೀಕಿಸುತ್ತದೆ ಎಂಬ ಅರಿವು ಅವನಿಗೂ ಇರಬೇಕು.

ಯಕ್ಷಗಾನದಲ್ಲಿ ಹಾಸ್ಯದ ಅಗತ್ಯವೇನು?

1. ಭಾವಬುದ್ಧಿ ಸಮನ್ವಯ : ಯಕ್ಷಗಾನವು ಒಂದು ನವ ರಸಭರಿತ ಸಾಂಪ್ರದಾಯಿಕ ಕಲೆಯಾಗಿದೆ. ಪೌರಾಣಿಕ ಪ್ರಸಂಗಗಳು ಯಕ್ಷಗಾನಕ್ಕೆ ಭಕ್ತಿಯ ಪರಿವೇಷೆಯನ್ನು ತೊಡಿಸಿ ಬಿಡುವುದಿದೆ. ಸಮರ್ಥನಾದ ಕಲಾವಿದನೊಬ್ಬ ರಂಗದಲ್ಲಿ ರಸವನ್ನು ಆಂಗಿಕವಾಚಿಕಆಹಾರ್ಯಗಳ ಮೂಲಕ ಅಭಿವ್ಯಕ್ತಿಸುವಾಗ ಪ್ರೇಕಕರು ಭಾವ ಜಗತ್ತಿನಲ್ಲಿ ಮುಳುಗಿ ಬಿಡುತ್ತಾರೆ. ವಿಮರ್ಶೆ ಇಲ್ಲದೆ ಯಾವುದೂ ಬೆಳೆಯುವುದಿಲ್ಲ. ಪ್ರೇಕಕರಲ್ಲಿ ಭಾವಬುದ್ಧಿ ಸಮನ್ವಯದಿಂದ ರಸಾಸ್ವಾದನೆ ಮಾಡಬೇಕೆನುನವುದು ಯಕ್ಷಗಾನದ ಸುಪ್ತ ಉದ್ದೇಶ. ಹಾಸ್ಯಗಾರ ಪ್ರೇಕಕರನ್ನು ಭಾವಪ್ರಪಂಚದಿಂದ ವಾಸ್ತವ ಪ್ರಪಂಚಕ್ಕೆ ಕರೆತರುತ್ತಾನೆ. ಈ ಕಾರಣಕ್ಕಾಗಿಯೇ ಹಾಸ್ಯಗಾರನಿಗೆ ಉಳಿದೆಲ್ಲಾ ಪಾತ್ರಗಳಿಗಿಂತ ಹೆಚ್ಚು ಸ್ವಾತಂತ್ರ್ಯ ದಕ್ಕಿರುವುದು.

2. ರಸ ನಿರ್ಮಾಣ : ‘ಹಾಸ್ಯ’ನವರಸಗಳಲ್ಲಿ ಅತ್ಯಂತ ಪ್ರಧಾನವಾದ ರಸ.

ಹಾಸ್ಯರಸ ನಿರ್ಮಾಣವು ಕೌಶಲವೂ ಹೌದು, ಪ್ರತಿಭೆಯೂ ಹೌದು. ಕುಶಲಿ ಹಾಸ್ಯಗಾರರ ಹಾಸ್ಯ ತಾತ್ಕಾಲಿಕ ಮನರಂಜನೆ ನೀಡುತ್ತದೆ. ಪ್ರತಿಭಾನ್ವಿತ ಹಾಸ್ಯಗಾರರು ಹಾಸ್ಯವನ್ನು ವೈಚಾರಿಕತೆಯ ಮಟ್ಟಕ್ಕೆ ಏರಿಸಬಲ್ಲರು.
ಹಾಸ್ಯವನ್ನು ಭಾವದ ಮಟ್ಟದಿಂದ ಬುದ್ಧಿಯ ಮಟ್ಟಕ್ಕೇರಿಸಿ ರಸನಿರ್ಮಾಣ ಮಾಡುವುದು ಅಸಾಧಾರಣ ಪ್ರತಿಭೆ. ಅದು ಹಾಸ್ಯಗಾರನೆದುರಿರುವ ದೊಡ್ಡ ಸವಾಲು.

3. ಪಾತ್ರ ಪೋಷಣೆ : ಹಾಸ್ಯಗಾರನೇ ಪ್ರಧಾನ ಪಾತ್ರವಾಗಿರುವ ಪ್ರಸಂಗಗಳು ತೀರಾ ಅಪೂರ್ವ. ಚಂದ್ರಾವಳಿ ವಿಲಾಸದಂತಹ ಕಲ್ಪಿತ ಪ್ರಸಂಗದಲ್ಲಿ ಚಂದ್ರಾವಳಿಯ ಪತಿ ಚಂದಗೋಪನದ್ದು ಪ್ರಧಾನ ಪಾತ್ರ ಎನ್ನುವುದುಂಟು. ಪ್ರಸಂಗದಲ್ಲಿ ಕೃಷ್ಣನಿರುವುದರಿಂದ ಚಂದಗೋಪ ನಾಯಕನಾಗಲು ಸಾಧ್ಯವಿಲ್ಲ. ಅವನದು ಏನಿದ್ದರೂ ಪೂರಕ ಮತ್ತು ಪೋಷಕ ಪಾತ್ರ. ಪ್ರಸಂಗದ ಓಟಕ್ಕೆ ಅಥವಾ ಕಥೆಯನ್ನು ಮುಂದೊಯ್ಯಲು ಹಾಸ್ಯಗಾರನ ಅಗತ್ಯವಿರುತ್ತದೆ. ಅದು ದೂತನ ರೂಪದಲ್ಲೋ, ಸಖನ ರೂಪದಲ್ಲೋ, ಋಷಿಮುನ್ನಿಗಳ ರೂಪದಲ್ಲೋ, ಬ್ರಹ್ಮಚಿತ್ರಗುಪ್ತರ ರೂಪದಲ್ಲೋ ಇರಬಹುದು. ಇವುಗಳಲ್ಲಿ ಕೆಲವು ಪಾತ್ರಗಳಲ್ಲಿ ಅದ್ಭುತ ಹಾಸ್ಯ ಪ್ರದರ್ಶನಕ್ಕೆ ಅವಕಾಶವಿದೆ. ಬ್ರಹ್ಮ, ಬೃಹಸ್ಪತಿ, ಬಾಹುಕ,ಜಾಂಬವಂತ ಇತ್ಯಾದಿ ಪಾತ್ರಗಳು ಗಂಭೀರ ಭಾವದೊಳಗೆ ಹಾಸ್ಯರಸವನ್ನಿರಿಸಿ ಪ್ರೇಕಕರಿಗೆ ನೀಡಬೇಕು.
ಅತ್ತೆಮಂಥರೆಯಂತಹ ಪಾತ್ರಗಳು ಹಾವಭಾವಗಳಿಂದ ತಾವು ಬಜಾರಿಗಳು ಮತ್ತು ಘಟವಾಣಿಗಳೆಂಬುದನ್ನು ತೋರ್ಪಡಿಸಬೇಕು. ಸಖರು ದೂತರಂತೆ ವರ್ತಿಸದೆ ಹಾಸ್ಯಪ್ರಜ್ಞೆಯನ್ನು ಅಭಿವ್ಯಕ್ತಿಸಬೇಕು. ದೂತರಿಗೆ ತುಂಬಾ
ಸ್ವಾತಂತ್ರ್ಯವಿದ್ದರೂ ಭಾಷೆ, ಸಮಯಸಂದರ್ಭ ಮತ್ತು ಔಚಿತ್ಯಗಳ ಬಗ್ಗೆ ಎಚ್ಚರವಿರಬೇಕು.

4. ಮನರಂಜನೆ : ಯಕ್ಷಗಾನ ಪ್ರದರ್ಶನ ರಾತ್ರಿ ಇಡೀ ನಡೆಯುವಾಗ ಮಧ್ಯೆ ಮಧ್ಯೆ ಕಚಗುಳಿ ಇಡುವ ಪಾತ್ರಗಳು ಮತ್ತು ಸನ್ನಿವೇಶಗಳು ಇರಬೇಕಾಗುತ್ತವೆ. ಅವು ಹೊಸ ಉತ್ಸಾಹದಿಂದ ಪ್ರೇಕಕರನ್ನು ಮುಂದಿನ ಕಥಾಸ್ವಾದನೆಗೆ ಸಿದ್ಧಪಡಿಸುತ್ತವೆ. ಮನರಂಜನೆ ಎಂದರೆ ಅಗ್ಗದ ಮತ್ತು ಅಶ್ಲೀಲ ಹಾಸ್ಯ ಎಂದರ್ಥವಲ್ಲ. ಸಂತೋಷಂ ಜನಯತೇ ಪ್ರಾಜ್ಞಃ ಎಂಬ ಮಾತಿದೆ. ಹಾಸ್ಯಗಾರನು ಉನ್ನತ ಮಟ್ಟದ ಸಂತೋಷವನ್ನು ನೀಡಬೇಕೆಂದು ಯಕ್ಷಗಾನ ಬಯಸುತ್ತದೆ. ಹಾಗೆಂದರೆ ವಿಚಾರಪ್ರಚೋದಕ ಮನರಂಜನೆ ನೀಡಲು ಹಾಸ್ಯಗಾರನಿಂದ ಸಾಧ್ಯವಾಗಬೇಕು ಎಂದರ್ಥ.

5. ಉದ್ದೇಶ ಸಾಧನೆ : ಯಕ್ಷಗಾನವು ಸುಸಂಸ್ಕೃತ ಸಮಾಜವೊಂದರ ನಿರ್ಮಾಣ ವನ್ನು ಬಯಸುವ ಕಲೆ. ಅದು ಹಿರಿಯರಿಗೆ, ಗುರುಗಳಿಗೆ, ಸ್ತ್ರೀಯರಿಗೆ ಅಪಾರ ಗೌರವ ಇರುವ ವ್ಯವಸ್ಥೆಯೊಂದನ್ನು ರೂಪಿಸ ಬಯಸುತ್ತದೆ. ಅದಕ್ಕೆ
ಸಮಾಜ ಸುಧಾರಣೆಯ ಸುಪ್ತ ಉದ್ದೇಶವಿದೆ. ಇದರ ಅರಿವಿಲ್ಲದ ಹಾಸ್ಯಕಲಾವಿದರು ಜಾತೀಯತೆ, ಮತೀಯತೆ, ವರ್ಣ ವ್ಯವಸ್ಥೆ, ಊಳಿಗಮಾನ್ಯ ವ್ಯವಸ್ಥೆ, ಅಸಮಾನತೆ ಮತ್ತು ಸ್ತ್ರೀ ಶೋಷಣೆಗಳನ್ನು ಸಮರ್ಥಿಸಿ ಪ್ರತಿಗಾಮಿ ಮೌಲ್ಯಗಳ ಹರಿಕಾರರಾಗುವುದಿದೆ. ಸಂಸ್ಕಾರವಂತ ಹಾಸ್ಯಗಾರ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ನಿವಾರಣೆಗೆ ತನ್ನ ಮಿತಿಯಲ್ಲಿ ಪ್ರಯತ್ನ ಪಡುತ್ತಾನೆ, ಪಡಬೇಕು. ತೀರಾ ಬಡತನದಿಂದ ಬಂದ ಯಕ್ಷ ಕಲಾವಿದರಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ನಿವಾರಣೆಗೆ ರಂಗದಿಂದ ಪ್ರಯತ್ನಿಸಬೇಕಾದ ಬದ್ಧತೆ ಇರುವುದು ಸಹಜವೂ ಕೂಡಾ.

ಯಕ್ಷಗಾನದಲ್ಲಿ ಅನೇಕ ಹಾಸ್ಯವೇಷಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸಾಂಪ್ರದಾಯಿಕ ಹಾಸ್ಯವೇಷಗಳು, ಆರೋಪಿತ ಹಾಸ್ಯವೇಷಗಳು ಮತ್ತು ಕಲ್ಪಿತ ಹಾಸ್ಯವೇಷಗಳೆಂದು ವರ್ಗೀಕರಿಸಬಹುದು [ ಚಿತ್ರ 7.1]

1. ಸಾಂಪ್ರದಾಯಿಕ ಹಾಸ್ಯವೇಷಗಳು :ಇವುಗಳು ಮಾಮೂಲು ಹಾಸ್ಯವೇಷಗಳಾಗಿವೆ. ಕಾವಲು ದೂತ, ಡಂಗುರ ದೂತ, ಕುದುರೆ ದೂತ, ಓಲೆದೂತ, ಮಹಾರಾಣಿಯರ ದೂತಿ ಯರು ತೀರಾ ಸಾಂಪ್ರದಾಯಿಕ ಹಾಸ್ಯವೇಷಗಳು. ಕೃಷ್ಣನ ಸಖರು, ಕೀಚಕನ ಸಖ, ರಾವಣನ ಸಖ, ಅಂಬೆ, ಚಿತ್ರಾಂಗದೆಸುಭದ್ರೆ, ದಮಯಂತಿ ಮುಂತಾದ ಪಾತ್ರಗಳ ಸಖಿಯರು ಕೂಡಾ ಹಾಸ್ಯವೇಷಗಳೆಂದು ಪರಿಗಣಿತರಾಗಿದ್ದಾರೆ. ರಾಜರುಗಳು ಮೃಗಯಾ ವಿಹಾರವನ್ನು ಮತ್ತು ಜೂಜನ್ನು ಕ್ಷತ್ರಿಯ ಧರ್ಮ ಎಂದು ಪರಿಗಣಿಸಿದ್ದರು. ಮೃಗಬೇಟೆ ನೃತ್ಯ ವೈವಿಧ್ಯಕ್ಕೆ ತುಂಬಾ ಅವಕಾಶ ಕಲ್ಪಿಸುವ ಸನ್ನಿವೇಶವಾದುದರಿಂದ ಯಕ್ಷಗಾನದ ಅನೇಕ ಪ್ರಸಂಗಗಳಲ್ಲಿ ಅದಕ್ಕೆ ಸಂದರ್ಭ ನಿರ್ಮಿಸಲಾಗಿದೆ. ಮೃಗಬೇಟೆಗಾರರು ಮತ್ತು ಅವರ ನಾಯಕ ಮುದಿಯಪ್ಪಣ್ಣ ಹಾಸ್ಯವೇಷಗಳಾಗಿವೆ. ಸಾಂದರ್ಭಿಕವಾಗಿ ಬರುವ ವೈದ್ಯ, ಮಂತ್ರವಾದಿ, ಬ್ರಾಹ್ಮಣ, ಪುರೋಹಿತ, ಜೋಯಿಸ ಇತ್ಯಾದಿ ಪಾತ್ರಗಳು ಕೂಡಾ ಸಾಂಪ್ರದಾಯಿಕ ಹಾಸ್ಯಗಳಾಗಿವೆ. ನಕಲಿವೈದ್ಯ, ಮತ್ತು ಮೂಢನಂಬಿಕೆಗಳ ಅನಾಹುತಗಳ ಬಗ್ಗೆ ಪ್ರೇಕಕರಲ್ಲಿ ಅರಿವು ಮೂಡಿಸಲು ಈ ಪಾತ್ರಗಳನ್ನು ಪ್ರತಿಭಾವಂತ ಹಾಸ್ಯಗಾರ ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿದೆ.

2. ಆರೋಪಿತ ಹಾಸ್ಯವೇಷಗಳು : ಬ್ರಹ್ಮ, ನಾರದ, ಬಾಹುಕ, ಬೃಹಸ್ಪತಿ, ಜಾಂಬವಂತ, ಮಂಥರೆ, ಕಿರಾತ, ಋಷಿ, ಮಂತ್ರಿಇತ್ಯಾದಿ ವೇಷಗಳನ್ನು ಆರೋಪಿತ ಹಾಸ್ಯವೇಷಗಳೆಂದು ಕರೆಯಬಹುದು. ಇವು ಸ್ವಭಾವತಃ ಹಾಸ್ಯ ಪಾತ್ರಗಳಲ್ಲದ ಬದಲಾಗಿ ಹಾಸ್ಯಗಾರರು ಮಾಡುವ ಪಾತ್ರಗಳು. ಈ ಪಾತ್ರಗಳ ನಿರ್ವಹಣೆ ತುಂಬಾ ಕಷ್ಟ. ಹಾಸ್ಯಗಾರರು ಎಂತಹ ಪಾತ್ರಗಳನ್ನಾದರೂ ನಿರ್ವಹಿಸಬಲ್ಲರೆಂಬ ಕಾರಣಕ್ಕೆ ಅವರಿಗೆ ಈ ವೇಷಗಳನ್ನು ನೀಡುತ್ತಿದ್ದಿರಬೇಕು. ಅಥವಾ ಪೀಠಿಕೆ, ಎದುರು ಮತ್ತು ಬಣ್ಣದ ವೇಷಧಾರಿಗಳ ಮನೋ ಧರ್ಮಕ್ಕೆ ಒಗ್ಗದ ವೇಷಗಳಾದ ಕಾರಣ ಇವನ್ನು ಹಾಸ್ಯಗಾರರಿಗೆ ನೀಡಿರಲೂಬಹುದು. ಇವುಗಳಲ್ಲಿ ಬ್ರಹ್ಮ, ನಾರದ, ಬೃಹಸ್ಪತಿ, ಮಂತ್ರಿ ಮತ್ತು ಋಷಿಗಳು ಬುದ್ಧಿ ಜೀವಿಗಳಾ ದುದರಿಂದ ಅವರನ್ನು ದೂತರ ಮಟ್ಟದಲ್ಲಿ ಚಿತ್ರಿಸುವಂತಿಲ್ಲ. ಅಲ್ಲದೆ ಈ ಐದು ಪಾತ್ರಗಳು ಕೆಲವೊಮ್ಮೆ ಸಾಮಾಜಿಕ ಅಥವಾ ತಾತ್ವಿಕ ಸಂಘರ್ಷಗಳಿಗೆ ಪರಿಹಾರ ನೀಡಬೇಕಾಗಿ ಬರಬಹುದು. ಅದು ಅಸಾಮಾನ್ಯ ಕಲಾವಿದನಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ಇವನ್ನು ಹಾಸ್ಯ ಆರೋಪಿತ ಅಥವಾ ಹಾಸ್ಯಗಾರರು
ನಿರ್ವಹಿಸುವ ಪಾತ್ರವೆಂದು ಪರಿಗಣಿಸಬೇಕೇ ಹೊರತು ಹಾಸ್ಯವೇಷಗಳೆಂದು ಹೇಳುವಂತಿಲ್ಲ.

3. ಕಲ್ಪಿತ ಹಾಸ್ಯವೇಷಗಳು : ಪ್ರಸಂಗದಲ್ಲಿ ಇಲ್ಲದ, ಅನುಕೂಲತೆಗಾಗಿ ಸೃಷ್ಟಿಸಿ ಕೊಂಡ ಹಾಸ್ಯವೇಷಗಳು ಕಲ್ಪಿತ ಹಾಸ್ಯವೇಷಗಳಾಗಿವೆ. ಪೂರ್ವರಂಗದಲ್ಲಿ ಸಿಂಗಿಸಿಂಗ, ಬ್ರಾಹ್ಮಣ ಪುರೋಹಿತ, ಆಚಾರಿಭಟ್ಟ, ಒತ್ತೆ ಬೈರಾಗಿ, ಹಿಂಡು ಬೈರಾಗಿ, ರಾಂ ಬೈರಾಗಿ, ಮಡಿವಾಳ, ಗಾಣಿಗ, ಕುಂಬಾರ, ಬೋಯಿ ಬ್ರಾಹ್ಮಣ, ರಂಗಾರಂಗಿ, ಕೊರವಂಜಿ, ಅಂಡುಕುಟ್ಟಿ, ಚಪ್ಪರ ಮಂಚ, ಏಕಪಾತ್ರ, ಒಕ್ಕಣ್ಣ, ಕಳ್ಳಕಳ್ಳಿ, ಕೊಕ್ಕೆ ಚಿಕ್ಕ, ಉರ್ದು ಸಾಯಿಬ, ಮಲೆಯಾಳೀ ಮಾಪಿಳ್ಳೆ, ಕೊಂಕಣಿ ಕಿರಿಸ್ತಾನ್‌, ಹಾಲಕ್ಕಿ ನರ್ಸಣ್ಣ ಇವು ಕಟ್ಟು ಹಾಸ್ಯಗಳಾಗಿವೆ. ಈಗ ಇವು ರಂಗದಲ್ಲಿ ಬಳಕೆಯಲ್ಲಿ ಇಲ್ಲ [ಯಕ್ಷಗಾನ ಪದಕೋಶ, ಪುಟ 35]

ಅಪಶಕುನದ ವೇಷಗಳೆಂದು ಪರಿಗಣಿತವಾದ ಸೌದೆ ಹೊರುವವರು, ಮಡಿಕೆ ಹೊರುವವರು, ವಿಧವೆ, ಒಂಟಿ ಬ್ರಾಹ್ಮಣ ಮುಂತಾದವುಗಳನ್ನು ಕಲ್ಪಿತ ಹಾಸ್ಯವೆಂದು ಪರಿಗಣಿಸಲಾಗಿದೆ. ಕೆಲವು ಪಾತ್ರಗಳನ್ನು ಮುಖ್ಯ ಪಾತ್ರಗಳು
ತಮ್ಮ ಪಾತ್ರ ಪೋಷಣೆಗೆ ಸೃಷ್ಟಿಸಿಕೊಳ್ಳುವುದುಂಟು. ಬಪ್ಪನಾಡು ಕೇತ್ರದ ಬಪ್ಪಬ್ಯಾರಿಯ ಜತೆಗಾರ ಉಸ್ಮಾನ್‌, ಕಾಯಕಲ್ಪದ ಚಾರ್ವಾಕನೊಡನಿರುವ ನಾರ್ವಾಕ ಇದಕ್ಕೆ ಉದಾಹರಣೆಗಳು. ಆಟ ಆಡಿಸು ವವರು ಭೂಮಾಲಿಕರು ಮತ್ತು ಮೇಲ್ವರ್ಗದವರಾದುದರಿಂದ ಅವರು ಹಾಸ್ಯ ಪಾತ್ರಗಳಾಗಲಿಲ್ಲ. ಆಶ್ಚರ್ಯವೆಂದರೆ ಅಸ್ಪೃಶ್ಯರನ್ನು ಹಾಸ್ಯ ಪಾತ್ರಗಳನಾನಗಿಸಿ ರಂಗಕ್ಕೆ ತರಲು ಯಾರೂ ಪ್ರಯತ್ನಿಸ ದಿರುವುದು. ಹಾಸ್ಯರೂಪದಲ್ಲಿ ಬಂದರೂ ರಂಗಕ್ಕೆ ಮೈಲಿಗೆಯಾಗುತ್ತದೆಂಬ ಭಾವನೆ ಈಗಲೂ ಇದೆಯೆಲ್ಲ ಅಥವಾ ಜಾತಿನಿಂದನೆಯ ಕೇಸು ಎದುರಿಸಬೇಕಾದೀತೆಂಬ
ಭೀತಿಯೆ?

7.2 ಹಾಸ್ಯದ ಅಪಮೌಲ್ಯ

ಯಕ್ಷಗಾನದಲ್ಲಿ ‘ಹಾಸ್ಯ’ ಒಂದು ಅವಶ್ಯಕ, ಅನಿವಾರ್ಯ ಅಂಗ. ಅದರ ಮಹತ್ತ್ವದ ಹೊರತಾಗಿಯೂ ಹಾಸ್ಯದ ಮೌಲ್ಯ ಕುಸಿಯುತ್ತಿದೆ. ಹಾಸ್ಯವನ್ನು ಆಂಗಿಕ, ವಾಚಿಕ ಮತುಆಹಾರ್ಯ ರೂಪದಲ್ಲಿ ಕಲಾರಸಿಕರಿಗೆ ಉಣಬಡಿಸುವುದು ವಾಡಿಕೆ. ಆಂಗಿಕ ಮತ್ತು ವಾಚಿಕ ದಲ್ಲಿ ಅಸಂಬದ್ಧ ಮತ್ತು ಅಶ್ಲೀಲ ಹಾಸ್ಯ ಸೇರಿಕೊಂಡರೆ ವೇಷಭೂಷಣ ಮತ್ತು ಮುಖವರ್ಣಿಕೆ ಯಕ್ಷಗಾನದ ಹಾಸ್ಯವನ್ನು ಸರ್ಕಸ್ಸಿನ ಬಫೂನನ ಮಟ್ಟಕ್ಕೆ ಇಳಿಸಿಬಿಟ್ಟಿದೆ. ‘ಹಾಸ್ಯ’ವು ಅಪಹಾಸ್ಯ ಕ್ಕೀಡಾಗಿದೆ.

ಹಾಸ್ಯಪ್ರಜ್ಞೆಯ ಕೊರತೆ ಹಾಸ್ಯಗಾರರುಗಳನ್ನು ಹಾಸ್ಯಾಸ್ಪದ ಪಾತ್ರಗಳನ್ನಾಗಿ ಮಾಡಿದೆ. ರಸ ನಿರ್ಮಾಣ ಮಾಡಬೇಕಾದ ಹಾಸ್ಯವು ರಸಾಭಾಸಕ್ಕೆ ಕಾರಣವಾಗಿರುವುದು ಆತಂಕ ಹುಟ್ಟಿಸುವ ವಿದ್ಯಮಾನವಾಗಿದೆ.

ಹಾಸ್ಯವು ಅಪಮೌಲ್ಯಕ್ಕೆ ಒಳಗಾಗಲು ಏನು ಕಾರಣ?

1. ಸಂಸ್ಕಾರದ ಕೊರತೆ : ಹಿಂದೆ ವೇಷಧಾರಿಗಳ ತೇರ್ಗಡೆಯ ಕ್ರಮ ಹೀಗಿತ್ತು: ಸಾಮಾನ್ಯವಾಗಿ ಕೋಡಂಗಿಯಿಂದ ತೊಡಗಿ, ಬಾಲಗೋಪಾಲ, ಸಖೀವೇಷ, ಎರಡನೇ ಪುಂಡುವೇಷ, ಪುಂಡುವೇಷಃಸ್ತ್ರೀವೇಷ, ಪೀಠಿಕೆವೇಷ, ಎದುರುಃಎರಡನೇ ವೇಷ, ಹಾಸ್ಯ ಅಥವಾ ಬಣ್ಣ, ಹಿಮ್ಮೇಳ ಮತ್ತು ಭಾಗವತ ಹೀಗೆ[ ಹಿಮ್ಮೇಳ, 102]

ಬಾಲ ಕಲಾವಿದನೊಬ್ಬ ಹಾಸ್ಯಗಾರನಾಗಿ ರೂಪುಕೊಳ್ಳುವುದು ಒಂದು ನಿಧಾನ ಪ್ರಕ್ರಿಯೆ. ಕೋಡಂಗಿಯಿಂದ ಆರಂಭಿಸಿ ಹಾಸ್ಯಕ್ಕೆ ಮುಟ್ಟುವ ಮಧ್ಯದಲ್ಲಿ ಕನಿಷ್ಠ ಆರು ಹಂತಗಳಿವೆ. ಕೋಡಂಗಿಯಾದವ ಬಾಲಗೋಪಾಲನಾಗಿ, ಸಖೀ ವೇಷಧಾರಿಯಾಗಿ, ಪುಂಡು ವೇಷದವನಾಗಿ, ಪೀಠಿಕೆ ಮತ್ತು ಎದುರು ವೇಷಧಾರಿಯಾದ ಬಳಿಕವಷ್ಟೇ ಹಾಸ್ಯಗಾರನಾಗ ಬೇಕಿತ್ತು. ವಸ್ತುಶಃ ಹಾಸ್ಯಗಾರನದು ಏಳನೆಯ ಜನ್ಮ! ಅಲ್ಲಿಗೆ ಮುಟ್ಟುವಾಗ ಹಿಂದಿನ ಆರು ಜನ್ಮಗಳ ಸಂಸ್ಕಾರದಿಂದ ಆತ ಪುಟಕ್ಕಿಟ್ಟ ಚಿನ್ನವಾಗುತ್ತಾನೆ.

ಹೀಗೆ ಹಾಸ್ಯಗಾರ ರೂಪುಗೊಳ್ಳುವ ಪ್ರಕ್ರಿಯೆ ಈಗ ಇಲ್ಲವಾಗಿದೆ. ಕಾಡುಹರಟೆ ಗಳಲ್ಲಿ ಅಲ್ಪಮತಿಗಳನ್ನು ನಗಿಸಬಲ್ಲವರು ‘ಹಾಸ್ಯಗಾರ’ ಎಂಬ ಹಣೆಪಟ್ಟಿ ಹೊತ್ತು ಮೇಳ ಗಳಿಗೆ ಸೇರ್ಪಡೆಯಾಗಿಬಿಡುತ್ತಾರೆ. ಪುಸ್ತಕ ಓದುವ ಅಭ್ಯಾಸವೇ ಇಲ್ಲದ, ಅಂತಸ್ಸತ್ತ್ವ ವಿಲ್ಲದ ಸರ್ವ ವ್ಯಸನಭೂಷಣರು ಮಂದಿಗಳು ಯಕ್ಷಗಾನದ ಹಾಸ್ಯ ಪ್ರಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ.

2. ಔಚಿತ್ಯ ಪ್ರಜ್ಞೆಯ ಕೊರತೆ : ಮನೆಯಲ್ಲಿ ಒಳ್ಳೆಯ ಸಂಸ್ಕಾರ ದೊರೆಯದೆ ಪುಂಡಪೋಕರಿಗಳೊಡನೆ ಬೆಳೆದವರು ಹಾಸ್ಯ ಕಲಾವಿದರಾದಾಗ ಈ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಅಂಥವರಿಗೆ ಯಾವ ಸಂದರ್ಭದಲ್ಲಿ ಹೇಗೆ ಮಾತಾಡಬೇಕೆಂಬ ಔಚಿತ್ಯಪ್ರಜ್ಞೆ ಇರುವುದಿಲ್ಲ. ಕುಲವ ನಾಲಿಗೆ ಯರ’ಹಿತ’ ಎಂಬ ಮಾತಿದೆ. ಕುಲವೆಂದರೆ ಜಾತಿಯಲ್ಲದ ಮನೆಯಲ್ಲಿ ಸಿಕ್ಕಿದ ಸಂಸ್ಕಾರ ಅಥವಾ ಗೆಳೆಯರಿಂದ ಪಡೆದ ಸಂಸ್ಕಾರವೆಂದರ್ಥ. ಬ್ರಹ್ಮಹಾಸ್ಯ ವೇಷವಾದರೂ ಹಾಸ್ಯವೇಷದ ಕುಣಿತ ಬ್ರಹ್ಮನಿಗಿಲ್ಲ. ಈ ಮಾತು ಬೃಹಸ್ಪತಿ, ಶುಕ್ರಾಚಾರ್ಯ, ಆಸ್ಥಾನ ಪುರೋಹಿತ, ಮಂತ್ರಿ ಇತ್ಯಾದಿ ಪಾತ್ರಗಳಿಗೂ ಅನ್ವಯಿಸುತ್ತದೆ. ದೂತ ಅಥವಾ ಬೇಟೆಗಾರನ ಬಾಯಲ್ಲಿ ಬರುವ ಮಾತುಗಳು ಋಷಿಮುನ್ನಿಗಳ, ಮಂತ್ರಿಪುರೋಹಿತರ ಬಾಯಲ್ಲಿ ಬರಬಾರದು. ಹಾಸ್ಯವೇಷಗಳು ಅನೇಕ ಇವೆ. ಹಾಸ್ಯಗಾರ ಅವುಗಳು ವಿಶಿಷ್ಟ ಪಾತ್ರಗಳು ಎನ್ನುವುದನ್ನು ಅರಿತಿರಬೇಕು. ಪ್ರತಿ ಪಾತ್ರಕ್ಕೂ ಒಂದು ಪಾತ್ರ ಗೌರವವಿರುತ್ತದೆ. ಅದು ಹಾಸ್ಯಗಾರರಿಂದಾಗಿ ರಂಗದಲ್ಲಿ ಮಾಯವಾಗುತ್ತಿರುವುದು ಕಳವಳಕಾರೀ ಸಂಗತಿಯಾಗಿದೆ.

3. ಅಗ್ಗದ ಜನಪ್ರಿಯತೆಯ ಹಂಬಲ : ಇದು ಎಂಥಾ ಕಲಾವಿದರನ್ನೂ ದಿಕ್ಕು ತಪ್ಪಿಸುತ್ತದೆ. ಹಾಸ್ಯಗಾರನೂ ಇದಕ್ಕೆ ಹೊರತಲ್ಲ. ರಂಗಕ್ಕೆ ಕೋಳಿ, ಹಂದಿ, ಎಮ್ಮೆ, ನಾಯಿ, ಆಡುಗಳನ್ನು ಹಾಸ್ಯ ಕಲಾವಿದರು ತಂದ ಉದಾಹರಣೆಗಳಿವೆ. ಹಾಗೆ ನೋಡಿದರೆ ಸಮುದ್ರ ಮಥನದ ದೇವೇಂದ್ರ ಆನೆಯ ಮೇಲೇರಿ ಬರುವುದು ಬಹಳ ದೊಡ್ಡ ಅಧ್ವಾನ. ಇವೆಲ್ಲ ಚಪಲ ಚಿತ್ತರ ಲಹರಿಯ ಪರಿಣಾಮಗಳು. ಇವು ಯಾವುವೂ ರಂಗಕ್ಕೆ ಒಗ್ಗುವುದಿಲ್ಲ. ಶ್ರೀಕೃಷ್ಣ ಬಾಲಲೀಲೆಯ ಮಕರಂದ ಬಾಳೆಹಣ್ಣುಮುಂಡಕ್ಕಿ ತಿನ್ನಲಿ. ಚಕ್ಕುಲಿ ಮಾಲೆ ಹಾಕಿಕೊಂಡು ತಿನ್ನುತ್ತಾ, ಪ್ರೇಕಕರತ್ತ ಎಸೆಯುವುದು ಸರಿಯಲ್ಲ.
ಅಗ್ಗದ ಜನಪ್ರಿಯತೆ ಗಾಗಿ ಹಂಬಲಿಸುವ ಹಾಸ್ಯಗಾರರು ರಂಗದಲ್ಲಿ ಅಶ್ಲೀಲ ಮಾತಾಡಿ ಕಲೆಯ ಬೆಲೆ ಕಳೆಯು ತ್ತಾರೆ. ಇನ್ನು ಕೆಲವು ಹಾಸ್ಯ ವೇಷಧಾರಿಗಳು ಬಣ್ಣದ ವೇಷಗಳ ಮೂಲೆ ಸಂಚಾರ ಮತ್ತು ಪಗಡಿ ವೇಷಗಳ ನಮೂನೆವಾರು ಕುಣಿತವನ್ನು ಅಣಕಿಸಿ ಕುಣಿದು ಕಲಾ ಅರಸಿಕರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ನಿರ್ದಿಷ್ಟ ವೇಷಗಳಿಗೆ ನಿರ್ದಿಷ್ಟ ಕುಣಿತವೆಂದಿರುವಾಗ ಚಪಲಕ್ಕಾಗಿ ಬೇಕೆಂದೇ ತಪ್ಪು ಮಾಡಬಾರದು. ಕುಂಟರನ್ನು, ಕುರುಡರನ್ನು, ಮೂಗರನ್ನು ಅಣಕಿಸುವ ಹಾಸ್ಯಗಾರರು ಗಳನ್ನು ಕಂಡಾಗ ಇವರಿಗೆ ಮಾನವೀಯತೆ ಎನ್ನುವುದೂ ಇಲ್ಲವೇ ಎಂಬ ವಿಷಾದ ಮೂಡುತ್ತದೆ.

4. ಕಲೆಯ ಬಗ್ಗೆ ಅಜ್ಞಾನ : ಯಕ್ಷಗಾನ ಕಲೆಯ ಜ್ಞಾನವಿಲ್ಲದ ಹಾಸ್ಯಗಾರರು ರಂಗದಲ್ಲಿ ತಾವು ಮಾಡುವುದೆಲ್ಲವೂ ಹಾಸ್ಯವೇ ಎಂಬ ಭ್ರಮೆಯಲ್ಲಿರುತ್ತಾರೆ. ಕೆಲವು ಯುವಹಾಸ್ಯ ಕಲಾವಿದರು ಹಿಮ್ಮೇಳಕ್ಕೆ ತಕ್ಕಂತೆ ಬ್ರೇಕು ಡ್ಯಾನ್ಸ್‌ ಮಾಡಿ
ಅದನ್ನು ಕಲೆ ಎಂದು ತಪ್ಪು ತಿಳಿದುಕೊಳ್ಳುವುದುಂಟು. ಬ್ರೇಕು ಡ್ಯಾನ್ಸ್‌ ಪ್ರಕಾರ ಯಕರಂಗಕ್ಕೆ ಒಗ್ಗುವುದಿಲ್ಲ. ಬ್ರೇಕುಡ್ಯಾನ್ಸನ್ನು ಯಕ್ಷಗಾನದ ಒಳಗೆ ತಂದು ತುರುಕಬೇಕಾದ ದುಸ್ಥತಿ ಯಕ್ಷಗಾನಕ್ಕಿಲ್ಲ. ಒಂದು ಸಾಂಪ್ರದಾಯಿಕ ಕಲೆ ಯಾರಿಂದಾಗಿ ಹೇಗೆ ಬೆಳೆಯಿತು ಎಂಬ ಅರಿವಿಲ್ಲದ ಮಂದಿ ಇಂತಹ ಅಚಾತುರ್ಯಕ್ಕೆ ಕಾರಣರಾಗುತ್ತಾರೆ. ಯಕ್ಷಗಾನ ಅನ್ಯಕಲೆಯಿಂದ ಏನನ್ನೂ ಪಡೆಯಬಾರದು ಎಂದು ಇದರ ಅರ್ಥವಿಲ್ಲ. ಸಾಂಪ್ರದಾಯಿಕ ಕಲೆಗಳಿಗೆ ಒಂದು ಚೌಕಟ್ಟು ಇರುತ್ತದೆ. ಅದರೊಳಗೆ ಆವಿಷ್ಕಾರಕ್ಕೆ ಬೇಕಾದಷ್ಟು ಅವಕಾಶವಿರುವಾಗತಕ್ಕುದೇ ಬೆರೆಸಲ್ಕೆ ಘೃತ ಮುಮಂ, ತೈಲ ಮುಮಂ!

5. ಕಲಾವಿದನ ಅಜ್ಞಾನ : ಅಜ್ಞಾನಿ ಹಾಸ್ಯ ಕಲಾವಿದ ಅನೇಕ ತಲೆನೋವುಗಳಿಗೆ ಕಾರಣನಾಗುತ್ತಾನೆ. ಈ ಅಜ್ಞಾನ ಮುಖ್ಯವಾಗಿ ಕಲೆಯ ಉದ್ದೇಶಕ್ಕೆ, ಕಲಾಪಾತ್ರಕ್ಕೆ ಮತ್ತು ಪ್ರೇಕಕರ ಜ್ಞಾನದ ಮಟ್ಟಕ್ಕೆ ಸಂಬಂಧಿಸಿದ್ದು. ಯಕ್ಷಗಾನದ ಉದ್ದೇಶ ಸುಸಂಸ್ಕೃತ ಸಭ್ಯ ಸಮಾಜವೊಂದರ ನಿರ್ಮಾಣ. ಅದು ಗೊತ್ತಿದ್ದರೆ ಹಾಸ್ಯ ಕಲಾವಿದ ಅಸಭ್ಯಅಶ್ಲೀಲ ಮಾತುಗಳನ್ನಾಡಲು, ಹಾವಭಾವ ತೋರಲು ಸಾಧ್ಯವಿಲ್ಲ. ಯಕ್ಷಗಾನ ಪಾತ್ರಗಳಿಗೆ ಒಂದು ಹಿನ್ನೆಲೆಯಿರುತ್ತದೆ. ಅದನ್ನು ತಿಳಕೊಳ್ಳದ ಹಾಸ್ಯ ಕಲಾವಿದ ಪಾತ್ರಗಳ ಗೌರವ ಕಳೆಯುತ್ತಾನೆ. ತಾವು ಕೊಟ್ಟದ್ದನೆನಲ್ಲಾ ಪ್ರೇಕಕರು ಸ್ವೀಕರಿಸುತ್ತಾರೆ ಎಂಬ ಮೂಢನಂಬಿಕೆಯ ಹಾಸ್ಯ ಕಲಾವಿದರು ತಮ್ಮ ಬುದ್ಧಿಮಟ್ಟ ಪ್ರೇಕಕರದಕ್ಕಿಂತ ಮೇಲಿನದು
ಎಂದು ತಿಳಿದುಕೊಳ್ಳುತ್ತಾರೆ. ಇದು ಹಾಸ್ಯವನ್ನು ಅಪಹಾಸ್ಯಗೊಳಿಸಿದೆ.

6. ಓದುಚಿಂತನೆಯ ಕೊರತೆ : ಬಹುತೇಕ ಕಲಾವಿದರ ಬಹುದೊಡ್ಡ ಕೊರತೆ ಯಿದು. ಒಮ್ಮೆ ಯಕ್ಷರಂಗಕ್ಕೆ ಬಂದಮೇಲೆ ಓದಬೇಕಾದ, ಚಿಂತಿಸಬೇಕಾದ, ಸಂವಾದಸ್ವವಿಮರ್ಶೆ ನಡೆಸಬೇಕಾದ ಅಗತ್ಯವಿಲ್ಲವೆಂದು ಅವರು ತಿಳಿದುಕೊಳ್ಳುತ್ತಾರೆ. ಎರಡನೇ ಹೆಜ್ಜೆ ಮತ್ತು ರಂಗಪ್ರವೇಶ ಬಲ್ಲವರು ತಾವಿನ್ನು ಕಲಿಯಬೇಕಾದುದು ಏನೂ ಇಲ್ಲವೆಂಬಂತೆ ಆಡುವ ಅನೇಕ ಕಲಾವಿದರಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ಗಮನವಿಟ್ಟು ಓದಿದವರು,
ಪುರಾಣಜ್ಞಾನ ಉಳ್ಳವರು, ಸಾಹಿತ್ಯ ಕೃತಿಗಳನ್ನು ಓದಿದವರು ರಸಾವಿಷ್ಕಾರದ ಸಂದರ್ಭ ಗಳನ್ನು ಸುಲಭವಾಗಿ ಗುರುತಿಸಬಲ್ಲರು. ಅಂತಹ ಜ್ಞಾನಾಧರಿತ ಹಾಸ್ಯಕ್ಕೆ ಘನತೆ ಮತ್ತು ತೂಕವಿರುತ್ತದೆ. ಕೋಳಿಜೂಜು, ಮದುವೆ ಮನೆ, ಜಾತ್ರೆಗಳ ಸಂದರ್ಭದಲ್ಲಿ ಜನರ ನಡುವೆ ಆಡಿದ ಮಾತುಗಳು ನಗುವುಕ್ಕಿಸಬಹುದು. ಆದರೆ ರಂಗಸ್ಥಳದಿಂದ ನಗುವುಕ್ಕಿಸು ವುದು ಅಷ್ಟು ಹಗುರದ ಮಾತಲ್ಲ. ಕವಿ ಬೇಂದ್ರೆಯವರು, ಖ್ಯಾತ ಸಾಹಿತಿ ಬೀಚಿಯವರು ನಾವು ಅಳುವನ್ನು ನುಂಗಿ ನಗುವನ್ನು ಕೊಡಬೇಕು ಎಂದಿದ್ದಾರೆ. ನಗುವಿನ ಹಿಂದೆ ಒಂದು ಅಳು ಇರುತ್ತದೆ ಎಂಬ ಪ್ರಜ್ಞೆ ಪ್ರತಿಯೊಬ್ಬ ಕಲಾವಿದನಲ್ಲೂ ಇರಬೇಕು.

7. ಸಾಧನೆಯ ಕೊರತೆ : ಬೊಗಳಿ ಬೊಗಳಿ ರಾಗ ಎಂಬ ಮಾತೊಂದಿದೆ. ಖ್ಯಾತ ಸಂಗೀತಗಾರರ ಜೀವನ ಮುಳ್ಳಿನ ಹಾಸಿಗೆಯಾಗಿರಲಿಲ್ಲ. ಭಾರತದ ಪ್ರಸಿದ್ಧ ಓಟದ ರಾಣಿ ಪಿ.ಟಿ. ಉಷಾ ಬೆಳಗ್ಗಿನ ಆರು ಗಂಟೆಯ ಬಳಿಕಿನ ಬೀದಿ ಕಾಮಣ್ಣರ ಕಾಟ ತಪ್ಪಿಸಲು ಮೂರು ಗಂಟೆಗೇ ಎದ್ದು ತಮ್ಮ ಓಟದ ಅಭ್ಯಾಸ ನಡೆಸುತ್ತಿದ್ದರು. ಹಾಸ್ಯಗಾರನಾಗಲು ಸಾಧನೆ ಬೇಕು. ಅದು ವೇಷಧಾರಿಯೊಬ್ಬ ಏರಬಹುದಾದ ಅತ್ಯುನ್ನತ ಹಂತವೆಂಬ ಅರಿವು ಕಲಾವಿದನಲ್ಲಿ ಇರಬೇಕು. ಆತ ಆಂಗಿಕ, ವಾಚಿಕ, ಆಹಾರ್ಯಗಳ ಬಗ್ಗೆ ಅರ್ಥಗರ್ಭಿತ ಆವಿಷ್ಕಾರಗಳನ್ನು ಮಾಡಿ ಬೆಳೆಯಲು ಯತ್ನಿಸಬೇಕು. ಪ್ರಯತನ ಶೀಲರಲ್ಲದ ಹಾಸ್ಯಗಾರರು ಯಕ್ಷಗಾನಕ್ಕೆ ಕೆಟ್ಟ ಹೆಸರು ತಂದಿದ್ದಾರೆ.

ಹಾಸ್ಯಗಾರರು ಮತ್ತು ಸಹನಟರು ಕೆಲವು ಅಂಶಗಳ ಬಗ್ಗೆ ಯೋಚಿಸಬೇಕೆಂದು ವಿಮರ್ಶಕ ಪ್ರಭಾಕರ ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ:

* ಹಾಸ್ಯ ಯಾವ ಪಾತ್ರದ್ದು ಮತ್ತು ಯಾವ ಪ್ರಮಾಣದ್ದು?

* ಸನ್ನಿವೇಶದಲ್ಲಿ ಒಳಗೊಂಡ ಪಾತ್ರಗಳು ಯಾವುವು? ಅವುಗಳ ಗುಣಧರ್ಮ ಹಾಗೂ ಯೋಗ್ಯತೆ ಏನು?

* ಅಲ್ಲಿ ಬರುವ ಪ್ರಶ್ನೋತ್ತರಗಳು ಆ ಪಾತ್ರಗಳಿಗೆ ಹೇಗೆ ಶೋಭೆಯನ್ನೀಯುತ್ತವೆ?

*ಕಥೆಯ ಕಾಲ ಮತ್ತು ಸ್ವರೂಪಕ್ಕೆ ಆ ಹಾಸ್ಯ ಹೊಂದಿಕೆಯಾಗುವುದೆ?  ಎಷ್ಟರಮಟ್ಟಿಗೆ ಅದನ್ನು ಬೆಳೆಸಬಹುದು?  ಇತ್ಯಾದಿ.

7.3 ಹಾಸ್ಯ ಪಾತ್ರಗಳ ಪುನರ್ನಿರ್ಮಾಣ

ಹಳಿ ತಪ್ಪಿದ ಹಾಸ್ಯವನ್ನು ಸರಿದಾರಿಗೆ ತರಬೇಕಾದುದು ನಮ್ಮೆಲ್ಲರ ಸಾಂಸ್ಕೃತಿಕ ಧರ್ಮ. ಸಂಸ್ಕೃತಿಗೆ ಅನನ್ಯತೆ ದೊರೆಯುವುದು ಕಲೆ ಮತ್ತು ಸಾಹಿತ್ಯದಿಂದ. ಯಕ್ಷಗಾನ ದಲ್ಲಿ ಹಾಸ್ಯ ಅತ್ಯಂತ ಪ್ರಮುಖ ಅಂಗವಾದುದರಿಂದ ಹಾಸ್ಯಪಾತ್ರಗಳನ್ನು ಮತ್ತೆ ಹಳಿಗೆ ತಂದು ನಿಲ್ಲಿಸಬೇಕಾಗಿದೆ. ಅದು ಹೇಗೆ?

1. ಮನೋಧರ್ಮ ಬದಲಾವಣೆ : ಹಾಸ್ಯಗಾರರುಗಳ ಮನೋಧರ್ಮ ಮೊದಲು ಬದಲಾಗಬೇಕಿದೆ. ಕೃತಕ ಹಾಸ್ಯ ಯಾವುದು ಮತ್ತು ಸಹಜ ಹಾಸ್ಯ ಯಾವುದು ಎನ್ನುವುದು ಅವರಿಗೆ ಮೊದಲು ಅರ್ಥ ಆಗಬೇಕಿದೆ. ಮಾಮೂಲು ಹಾಸ್ಯಗಳನ್ನು ಸಹಜಹಾಸ್ಯವಾಗಿ ಬದಲಾಯಿಸಲು ಅವರು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಹಾಸ್ಯಗಾರರಲ್ಲದವರು ಹೇಗೆ ಅಭಿವ್ಯಕ್ತಿಯಲ್ಲಿ ಹಾಸ್ಯರಸ ತುಂಬುತ್ತಾರೆ ಎನ್ನುವುದನ್ನು ಗಮನಿಸಬೇಕು. ಶೇಣಿಜೋಷಿಯವರ ಬಪ್ಪಉಸ್ಮಾನ್‌ ಜೋಡಿ, ಕುಂಬಳೆನಯನ ಕುಮಾರರ ಚಾರ್ವಾಕನಾರ್ವಾಕ ಜೋಡಿ, ಶೇಣಿಯವರ ಮಾಧವ ಭಟ್ಟ, ಸಾಮಗರ ಕಾಶೀಮಾಣಿ, ಶೇಣಿಯವರ ಉತ್ತರ ಮತ್ತು ಚಂದಗೋಪ, ಜೋಷಿಯವರ ಮಂಥರೆ ಮತ್ತು ಅತ್ತೆ ಪಾತ್ರಮುಂತಾದ ಪಾತ್ರಗಳು ಉತ್ಕೃಷ್ಟ ಹಾಸ್ಯ ರಸಾವಿಷ್ಕಾರಕ್ಕೆ ಮಾದರಿಗಳಾಗಿವೆ. ಹಾಸ್ಯವೆಂದರೆ ನಗು ಮಾತ್ರವಲ್ಲದ ಅದೊಂದು ರಸಾವಿಷ್ಕಾರವೆಂಬ ಅರಿವು ಹಾಸ್ಯಗಾರನಿಗೆ ಇರಬೇಕು.

2. ಆಂಗಿಕ, ವಾಚಿಕ, ಆಹಾರ್ಯ ಸುಧಾರಣೆ : ಯಾವ ಪಾತ್ರಕ್ಕೆ ಎಂತಹ ಮಾತು, ಯಾವ ಅಭಿನಯ, ಯಾವ ರೀತಿಯ ವೇಷಭೂಷಣ ಎಂಬ ಒಂದು ಸಾಮಾನ್ಯ ತೀರ್ಮಾನ ಹಾಸ್ಯಗಾರನಲ್ಲಿರಬೇಕು. ಅವು ಯಕ್ಷಗಾನ ಚೌಕಟ್ಟಿಗೆ
ಒಪ್ಪುಪತ್ತವೆಯೇ ಎನ್ನುವುದನ್ನು ಆತ ಪ್ರಶ್ನಿಸಿಕೊಳ್ಳಬೇಕು. ಪಾತ್ರದ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಣೆ ಮಾಡಲು ಅವನಿಂದ ಸಾಧ್ಯವಾಗಬೇಕು. ವಿಟ್ಲ ಗೋಪಾಲಕೃಷ್ಣ ಜೋಷಿಯವರ ರಕ್ಕಸದೂತನ ಮುಖವರ್ಣಿಕೆ ಒಂದು ಅದ್ಭುತ ಸೃಷ್ಟಿ. ಹಾಗೆಯೇ ಪೆರುವಡಿ ನಾರಾಯಣ ಭಟ್ಟರ ಬಾಹುಕನ ಪಾತ್ರ. ಇಂತಹ ಮಾದರಿಗಳು ಹಾಸ್ಯ ಪಾತ್ರವನ್ನು ಹೊಸ ಎತ್ತರಕ್ಕೆ ಏರಿಸುತ್ತವೆ.

3. ಪಾತ್ರ ಬದಲಾವಣೆ : ಕೆಲವು ವೇಷಗಳನ್ನು ಹಾಸ್ಯಗಾರರಿಗೆಂದೇ ಮೇಳಗಳಲ್ಲಿ ಮೀಸಲಾಗಿಡಲಾಗುತ್ತದೆ. ಅದರ ಬದಲು ಪಾತ್ರಗಳನ್ನು ಬದಲಾಯಿಸುತ್ತಿರಬೇಕು. ಯಕ್ಷಗಾನ ಕಲಾವಿದ ಎಲ್ಲಾ ವೇಷಗಳನ್ನು ಮಾಡುವ ಚಾಕಚಕ್ಯತೆ ಹೊಂದಿರಬೇಕು. ಹಾಸ್ಯಗಾರನಿಗೆ ಹಾಸ್ಯವೆಂಬ ಹಣೆಪಟ್ಟಿ ಇಲ್ಲದ ವೇಷಗಳನ್ನು ನೀಡುವ ಪ್ರಯೋಗ ನಡೆಸಬೇಕು. ಇದು ಆತನಿಗೆ ಎಲ್ಲಾ ಪಾತ್ರಗಳ ಒಳತೋಟಿಯನ್ನು ತಿಳಿಸುತ್ತದೆ. ವಿವಿಧ ರಸಗಳನ್ನು ಅಭಿವ್ಯಕ್ತಿಸುವ ಸಾಮಥ್ರ್ಯವನ್ನು ನೀಡುತ್ತದೆ. ಉನ್ನತ ಮಟ್ಟದ ಹಾಸ್ಯವನ್ನು ಕಲಾಭಿಮಾನಿಗಳಿಗೆ ನೀಡಲು ಸಾಧ್ಯವಾಗುತ್ತದೆ. ಕೆಲವು ವರ್ಷಗಳ ಹಿಂದೆ ಸುಳ್ಯದ ತೆಂಕುತಿಟ್ಟು ಹಿತರಕಣಾ ವೇದಿಕೆ ಹಾಸ್ಯಗಾರರ ಗೋಷ್ಠಿ ನಡೆಸಿ ಹಾಸ್ಯಗಾರರಿಂದಲೇ ತಾಳಮದ್ದಳೆ- ಯೊಂದನ್ನು ಏರ್ಪಡಿಸಿತ್ತು. ಇಂತಹ ಪ್ರಯೋಗ ಎಲ್ಲೆಡೆ ನಡೆಯಬೇಕು. ಸೂರಿ ಕುಮೇರಿ ಗೋವಿಂದ ಭಟ್ಟರು, ರೆಂಜಾಳ ರಾಮಕೃಷ್ಣ, ಕರ್ಗಲ್ಲು ವಿಶ್ವೇಶ್ವರ ಭಟ್‌ ಹಾಸ್ಯವನ್ನೂ ಒಳಗೊಂಡಂತೆ ಎಲ್ಲಾ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಅಂಥವರ ಸಂಖ್ಯೆ ಹೆಚ್ಚಾಗಬೇಕು.

4. ಶಿಕಣ ಮತ್ತು ತರಬೇತಿ : ಹಾಸ್ಯಗಾರರಿಗೂ ಶಿಕ್ಷಣ ಮತ್ತು ತರಬೇತಿಯ ಅಗತ್ಯ ಇದೆ. ಹಾಸ್ಯದ ಉನ್ನತ ಮಾದರಿಗಳನ್ನು ಆಧಾರವಾಗಿಟ್ಟುಕೊಂಡು ಶಿಕ್ಷಣ ಮತ್ತು ತರಬೇತಿ ಕ್ರಮ ರೂಪುಗೊಳ್ಳಬೇಕು. ಹಾಸ್ಯ ರಸಾವಿಷ್ಕಾರಕ್ಕೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ನಡೆಸಬೇಕು. ಹಾಸ್ಯ ರಸಾವಿಷ್ಕಾರಕ್ಕೆ ಪ್ರಸಂಗಗಳಲ್ಲಿ ಹೆಚ್ಚಿನ ಆಸ್ಪದ ಸಿಗಬೇಕು. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಗುವಿನಂತಹ ಟಾನಿಕ್ಕು ಇನ್ನೊಂದಿಲ್ಲ. ಆದರೆ ಆ ಟಾನಿಕ್ಕಿ-
ನಲ್ಲಿರುವ ಧಾತುಗಳು ನಿರ್ದಿಷ್ಟ ಪ್ರಮಾಣದಲ್ಲೇ ಇರಬೇಕು ಎನ್ನುವುದನ್ನು ಮರೆಯುವಂತಿಲ್ಲ.

ಪೂರ್ವರಂಗ ಪ್ರಕಾರದ ಎರಡು ಹಾಸ್ಯ ಪ್ರಕಾರಗಳನ್ನು ಅವಲೋಕಿಸಿದಾಗ ಹಾಸ್ಯಕ್ಕೆ ವ್ಯವಸ್ಥೆಯನ್ನು ಬದಲಾಯಿಸುವ ಉದ್ದೇಶ ಇದೆಯೆನ್ನುವುದು ಸ್ಪಷ್ಟವಾಗುತ್ತದೆ. ಮೊದಲನೆ ಯದು ಕೋಡಂಗಿ ಹಾಸ್ಯ. ಎರಡನೆಯದು ಕೊಕ್ಕೆ ಚಿಕ್ಕನ ಹಾಸ್ಯ.

ಪೂರ್ವರಂಗದ ಬಾಲಗೋಪಾಲರು ಹರಿನಾರಾಯಣ ಗೋವಿಂದಾ ಎಂಬ ಪದ್ಯಕ್ಕೆ ಕುಣಿದಾದ ಮೇಲೆ ಕೋಡಂಗಿಗಳು ಬದನೆಕಾಯಿ ಗೋಯಿಂದಾ, ಅವರೆಕೋಡು ಗೋಯಿಂದಾ, ಕುಂಬಳಕಾಯಿ ಗೋಯಿಂದಾ ಎಂಬ ಪದ್ಯ ಹೇಳುತ್ತವೆ. ಷಣ್ಣುಖ ಸುಬ್ಬರಾಯಕೋಡಂಗಿ ಮಾತುಕತೆ ಸಂದರ್ಭದಲ್ಲಿ ಕೋಡಂಗಿ ಹಾಸ್ಯ ‘ಕಂಗಿತನತೇಯಿ, ಹಾಳೆಬಣ್ಣು, ಕಂಚಪಜ್ಜಾಯ, ಡುಲಾಹಿಂದೆ ಮುಂದೆ ಇಟ್ಟಿದ್ದೇನೆ. ದೇವರು ಒಪ್ಪಿಸಿಕೊಳ್ಳಿ’ ಎಂದು ಹೇಳಲಿಕ್ಕಿದೆ. ಇದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸೂಕ್ಮತೆಯನ್ನು ಗರ್ಭದಲ್ಲಿ ಹೊಂದಿರುವ ಮಾತಿನಂತೆ ಕಂಡುಬರುತ್ತದೆ.

ಕುಂದಾಪ್ರ ಕನ್ನಡದ ಕೊಕ್ಕೆ ಚಿಕ್ಕನ ಹಾಸ್ಯದಲ್ಲಿ ಜಾತಿ ವ್ಯವಸ್ಥೆಯನ್ನು ಗೇಲಿ ಮಾಡುವ ಸೂಕ್ಮತೆಯನ್ನು ಗಮನಿಸಬಹುದು. ಆ ಸಂಭಾಷಣೆ ಹೀಗಿದೆ:

ಭಾಗವತ : ಎಲಾ’ ನೀನು ಯಾವ ಜಾತಿಯವನೊ?

ಕೊಕ್ಕೆ ಚಿಕ್ಕ : ನಾವು ಬರಮರಲ್ದಾ!

ಭಾಗ : ಎಲಾ’ ಜನಿವಾರ ಇಲ್ಲದ ಶೂದ್ರ ಗಂಡಾ’

ಕೊಕ್ಕೆ : ಹೋಯ್‌, ಹೋಯ್‌! ಜನಿವಾರ ನನ್ನ ಸೊಂಟಕಿಲ್ದಾ? ನೂಲುಕದಾ ಮನೆಯಲ್ಲಿಲ್ದಾ?

ಭಾಗ : ಎಲಾ’ ಎಂಥಾ ನೂಲೊ’

ಕೊಕ್ಕೆ : ನಮ್ಮ ಜನಿವಾರಕ್ಕೆ ಸಣಬಿನ ನೂಲಲ್ದಾ!

ಭಾಗ : ನೀನು ಯಾವ ಕುಲದವನೋ?

ಕೊಕ್ಕೆ : ನಾವು ಭಟ್ರಲ್ದಾ?

ಭಾಗ : ಎಲಾ ಎಂಥ ಭಟ್ರು?

ಕೊಕ್ಕೆ : ನಾವು ಸೌಂದ್ರ ಭಟ್ರು

ಭಾಗ : ಹಾಗೆಂದರೆ?

ಕೊಕ್ಕೆ : ಮೂಡ್ಲಾಗಿ ಕಂಡು, ಪಡ್ಲಾಗಿ ಬೀಸೋ ಭಟ್ರು.

ಭಾಗ ; ಮೊಗೇರನೇನೊ?

ಕೊಕ್ಕೆ : ದಾರಿದ್ರ ಕೊಟ್ರೆ ನಾವು ಸೌಂದ್ರ ಭಟ್ರು. ಸೌಂದ್ರದಲ್ಲಿ ದಿನಾಲು ಮಿಂದು ಬಂದು ಬಲೆಯಿಂದ ತರ್ಪಣ ಕೊಡ್ತೇವಲ್ದಾ? ಸಂಜೆ ಹೊತ್ತಿಲಿ ನೀನು ಬರ್ಕು. ನಾನು ಬಾಳೆಕಾಯಿ ಕೊಡ್ಕು. ಆಗ ನಾವು ಬರಮರಲ್ದಾ?

[ಯಕ್ಷಗಾನ ಸಭಾಲಕ್ಷಣ, ಪಾವಂಜೆ ಪ್ರತಿ. ಪುಟ 34]

ಈ ಹಾಸ್ಯವನ್ನು ಬೋಯಿ ಬ್ರಾಹ್ಮಣ ವೇಷ ಎನ್ನುತ್ತಾರೆ. ಎಲ್ಲಾ ವೃತ್ತಿಗಳೂ, ಎಲ್ಲಾ ಜಾತಿಗಳೂ ಒಂದೇ ಎನ್ನುವುದನ್ನು ಈ ‘ಹಾಸ್ಯ’ ತನ್ನ ಮಾತಿನಲ್ಲಿ ಹೇಳುತ್ತದೆ. ಪರಶುರಾಮ ಪಶ್ಚಿಮ ಕರಾವಳಿ ತೀರಕ್ಕೆ ಕರೆತಂದ ಬ್ರಾಹ್ಮಣರು ಇಲ್ಲಿ ನಿಲ್ಲದೆ ಹಿಂದಕ್ಕೆ ಹೋದಾಗ, ಅನ್ಯ ದಾರಿ ಕಾಣದೆ ಬೆಸ್ತರನ್ನು ಬ್ರಾಹ್ಮಣರಾಗಿ ಪರಿವರ್ತಿಸಿ, ಬಲೆಯ ನೂಲನ್ನೇ ಜನಿವಾರ ಮಾಡಿ ಹಾಕಿದ ಐತಿಹ್ಯಕ್ಕೂ ಸರಿ ಹೊಂದುತ್ತದೆ. ಕೇಶವಕೃಷ್ಣ ಕುಡ್ವ: [ದಕ್ಷಿಣ ಕನ್ನಡದ ಇತಿಹಾಸ 1948 ಪುಟ 10] ಯಕ್ಷಗಾನದ ಹಾಸ್ಯ ಪಾತ್ರಗಳು ಸಮಾನತೆ ಮತ್ತು ಜಾತ್ಯತೀತತೆಗಳನ್ನು ಪ್ರತಿಪಾದಿಸಬೇಕೆಂಬುದನ್ನು ಬೋಯಿ ಬ್ರಾಹ್ಮಣ ಹಾಸ್ಯ ಸೂಚ್ಯವಾಗಿ ತಿಳಿಸುತ್ತದೆ. ಹಾಸ್ಯ ಪಾತ್ರಗಳು ಪ್ರತಿಪಾದಿಸಬೇಕಾದ ಮೌಲ್ಯಗಳು ಇವೇ.

ಅಭ್ಯಾಸಾತ್ಮಕ ಪ್ರಶ್ನೆಗಳು

1. ಹಾಸ್ಯ ವೇಷಗಳೆಂದರೇನು ?

2. ಯಕ್ಷಗಾನ ಹಾಸ್ಯದ ಪ್ರಭೇದಗಳು ಯಾವುವು?

3. ಸಾಂಪ್ರದಾಯಿಕ ಹಾಸ್ಯವೇಷಗಳು ಯಾವುವು?

4. ಆರೋಪಿತ ಹಾಸ್ಯವೇಷಗಳು ಯಾವುವು?

5. ಕಲ್ಪಿತ ಹಾಸ್ಯವೇಷಗಳು ಯಾವುವು?

6. ಯಕ್ಷಗಾನದಲ್ಲಿ ಹಾಸ್ಯದ ಸ್ಥಾನ ಅಥವಾ ಅಗತ್ಯವೇನು?

7. ಯಕ್ಷಗಾನದ ಹಾಸ್ಯ ಅಪಮೌಲ್ಯಗೊಳ್ಳಲು ಕಾರಣಗಳೇನು?

8. ಹಾಸ್ಯ ಪಾತ್ರಗಳ ಪುನರ್ನಿರ್ಮಾಣ ಮಾಡುವುದು ಹೇಗೆ?

9. ಕೊಕ್ಕೆ ಚಿಕ್ಕನ ಹಾಸ್ಯದ ಅಂತರಾರ್ಥವೇನು?

10. ಹಾಸ್ಯ ವೇಷಗಳು ಯಾವ ಮೌಲ್ಯಗಳನ್ನು ಪ್ರತಿಪಾದಿಸಬೇಕು?

ಕಠಿಣ ಪದಗಳು

ಅಂಡುಕುಟ್ಟಿ = ಮಲೆಯಾಳಿ ಬೆಸ್ತರ ಹಾಸ್ಯ. ಪೂರ್ವರಂಗದಲ್ಲಿ ಬಳಕೆ ಇತ್ತು.

ಅಪಶಕುನ ಹಾಸ್ಯ = ಮಡಿಕೆ ಸೌದೆ ಹೊತ್ತವ, ಒಂಟಿ ಬ್ರಾಹ್ಮಣ ಇತ್ಯಾದಿ

ಆಚಾರಿ ಭಟ್ಟ = ಪೂರ್ವರಂಗದ ಕಟ್ಟು ಹಾಸ್ಯ

ಕುಂದಾಪ್ರ ಕನ್ನಡ = ಕುಂದಾಪುರದ ಕುಂದಗನನಡ

ಕೊಕ್ಕೆ ಚಿಕ್ಕ = ಪೂರ್ವರಂಗದ ಒಂದು ಹಾಸ್ಯ

ಚಪ್ಪರ ಮಂಚ = ಕಟ್ಟು ಹಾಸ್ಯದ ಕೊನೆಯಲ್ಲಿ ಬರುತ್ತಿದ್ದ ಪೂರ್ವರಂಗದ ಒಂದು ಪ್ರಕಾರ.

ಬೋಯಿ ಬ್ರಾಹ್ಮಣ = ಪೂರ್ವರಂಗದ ಒಂದು ಕಟ್ಟು ಹಾಸ್ಯ

ಬ್ರೇಕು ಡ್ಯಾನ್ಸ್‌ = ಮೈಮುರಿಯುವಂತಹ ಪಾಶ್ಚಾತ್ಯ ನೃತ್ಯ

ಪ್ರತಿಗಾಮಿ ಮೌಲ್ಯಗಳು = ಜೀವವಿರೋಧಿ ಮೌಲ್ಯಗಳು, ಉದಾ :

ಅಸ್ಪೃಶ್ಯತೆ, ಮತೀಯತೆ, ಜಾತೀಯತೆ ಇತ್ಯಾದಿ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಬರುವ “ಶೌಚಾಲಯ”
Next post ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…