ಡಾ|| ರಾಮಮನೋಹರ ಲೋಹಿಯಾ ಅವರನ್ನು ಕುರಿತು ಬರೆಯುವಾಗ ಹೆಮ್ಮೆ ಎನಿಸುತ್ತದೆ. ಮ್ಶೆಮನಗಳು ಮುದಗೊಳ್ಳುತ್ತವೆ. ಅನ್ಯಾಯದ ಎದುರು ಸೆಟೆದು ನಿಲ್ಲುವ ಅವರ ಸ್ವಾಭಿಮಾನದ ವ್ಯಕ್ತಿತ್ವ ಕಣ್ಮುಂದೆ ಕಟ್ಟುತ್ತದೆ. ನಿಷ್ಠುರ ವಿಚಾರಗಳು ನೆಲೆಗೊಂಡ ಹಸನ್ಮುಖ, ವಿಚಾರಗಳನ್ನು ಒಳಹೊಕ್ಕು ನೋಡುವ ಮಿಂಚಿನ ಕಣ್ಣುಗಳು ಯಾರ- ನ್ನಾದರೂ ಕ್ಷಣಕಾಲ ಸ್ಥಂಭೀಭೂತರನ್ನಾಗಿಸುತ್ತವೆ. ಕಬ್ಬಿಣದಂತೆ ಕಾಣುವ ಅವರ ಹೃದಯ ಮಲ್ಲಿಗೆಯಷ್ಟು ಮೃದು.
ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ಡಾ|| ಲೋಹಿಯಾ ೨೩-೩-೧೯೧೦ ರಂದು ಜನಿಸಿದರು. ತಂದೆ ಹಿರಾಲಾಲ್. ತಾಯಿ ಚಂದ್ರಿ. ಉಪ್ಪಿನ ಇಸತ್ಯಾಗ್ರಹ ಕುರಿತ ಅವರ ಅರ್ಥಶಾಸ್ತ್ರದ ಪ್ರೌಢಪ್ರಬಂಧಕ್ಕೆ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿತು. ಜರ್ಮನಿಯ ಮಾರ್ಕ್ಸ್ ಮತ್ತು ಹೆಗಲ್‌ರಿಗಿಂತ ಭಿನ್ನದೃಷ್ಟಿಯ ಇತಿಹಾಸದ ಅಧ್ಯಯನದಿಂದ ಪರಿಪುಷ್ಠಗೊಂಡ ಲೋಹಿಯಾ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ವಹಿಸಿದ ಮಹತ್ತರವಾದುದು. ಗಾಂಧೀಜಿಯ ಶಿಷ್ಯರಾಗಿ ನಂತರ ಅವರ ಒಲವು ನಿಲುವುಗಳನ್ನು ಅತ್ಯಂತ ಆರೋಗ್ಯಪೂರ್ಣ ದೃಷ್ಟಿಯಿಂದ ಟೀಕಿಸಿದವರು. ಲೋಕಸಭಾ ಸದಸ್ಯರಾಗಿ ಅವರು ನಿರ್ವಹಿಸಿದ ಪಾತ್ರ ಅರ್ಥ ಪೂರ್ಣವಾದುದು. ಅನ್ಯಾಯ ಸಹಿಸಲಾಗದೆ ನೆಹರೂ ಅಂಥವರೂ ನಡುಗುವಂತೆ ಗುಡುಗಿದವರು.
“ಮ್ಯಾನ್‌ಕೈಂಡ್” ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಅದು ಇಂದಿಗೂ ವಿಶ್ವಪತ್ರಿಕಾರಂಗದ ಗೈಡ್ ಇದ್ದ ಹಾಗೆ. ಅವರ ಕೃತಿಗಳು ಭಾರತಕ್ಕಷ್ಟೇ ಅಲ್ಲ, ಮನುಕುಲದ ಮುನ್ನಡೆಗೆ ಮಾರ್ಗದರ್ಶಿಗಳಾಗಿವೆ. ನಿಶ್ಶಸ್ತ್ರೀಕರಣ ಹಾಗೂ ವಿಶ್ವಮಾನವತ್ವ ಅವರ ಗುರಿಯಾಗಿತ್ತು. ೧೨=೧೦=೧೯೬೭ ರಂದು ಇಲ್ಲವಾದರು. ಅವರದು ಸಹಜಸಾವಲ್ಲ. ಶಸ್ತ್ರಕ್ರಿಯೆ ಮಾಡಿದ ವೈದ್ಯರ ನಿರ್ಲಕ್ಷ್ಯ, ಕಾಣದ ಕೈಗಳ ಕೈವಾಡವಿರುವುದು ಈ ದೇಶದ ದುರಂತ.
ನನಗೆ ಶಾಲಾಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು. ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ ಬೆಳೆಸಿದ್ದಾರೆ ಎ೦ದು ಅರಿವಾದದ್ದು; ದೀನ ದಲಿತರ ಉದ್ಧಾರಕ್ಕೆ ದೇಶದ ಉದ್ದಗಲ ನಾಲಗೆ ಚಾಚುವ ದೇಶಭಕ್ತರ ಹುಂಬತನ ಅರ್ಥ- ವಾದದ್ದು. ಧರ್ಮದ, ಮಾನವ ಕಲ್ಯಾಣದ ಹೆಸರಿನಲ್ಲಿ ಜಾತಿಯ ವಿಷಬೀಜ ಬಿತ್ತುತ್ತ ಮಾನವತೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ಮಠಮಾನ್ಯಗಳ, ಮಠಾಧೀಶರ, ಮಸೀದಿ ಚರ್ಚುಗಳ, ರಾಜಕೀಯ ಪಕ್ಷಗಳ ಅಂತರಂಗದ ಅರಿವಾದದ್ದು; ಬರವಣಿಗೆ, ಭಾಷಣ, ಚರ್ಚೆ, ಗೋಷ್ಠಿ ವಿಚಾರಸಂಕಿರಣ ಇತರ ತೀಟೆ ತೀರಿಸಿಕೊಳ್ಳುವ ಕೋಣೆ- ಯೊಳಗಿನ ಕಾದಾಟದಲ್ಲಿಯೇ ಕಮರಿಹೋಗದೆ ನಾಡಿನ ಮೂಲೆ ಮೂಲೆಯಲ್ಲೂ ಮಾಡಬೇಕಾಗಿರುವ ಅಗತ್ಯ ಕೆಲಸದತ್ತ ದೃಷ್ಟಿ ಹರಿದದ್ದು; ಸತ್ಯ, ಧರ್ಮ, ಪ್ರಾಮಾಣಿಕತೆ ಬಂದರೆ ಗಾಂಧಿ, ನೆಹರೂ ಎ೦ದು ತಿಳಿದಿರುವ ಶೇ.೯೯ ಜನರೊಳಗೆ ಒಂದಾಗಿದ್ದ ನನಗೆ ಸತ್ಯ, ಧರ್ಮ ಪ್ರಾಮಾಣಿಕತೆಯ ವಾಸ್ತವ ಸ್ವರೂಪದ ಅರಿವಾದದ್ದು, ಸಾಮಾಜಿಕ- ವಾಗಿ, ರಾಜಕೀಯವಾಗಿ ಯಾರೊಬ್ಬರ ಪ್ರಭಾವಕ್ಕೂ ಒಳಗಾಗದೆ ಮತ್ತೊಬ್ಬನ ನೆರಳಾಗದೆ ಬಾಲಬಡುಕನಾಗದೆ ಒಳಚೈತನ್ಯದ ಜಾಗೃತಿಯಿಂದ ಸ್ವಂತ ವ್ಯಕ್ತಿತ್ವದ ದೃಷ್ಟಿ ಬೆಳೆದದ್ದು; ತನ್ಮೂಲಕ ಆಕಾಶದಲ್ಲಿ ಹಾರಾಡುತ್ತಿದ್ದ ಬದುಕು ನೆಲದಲ್ಲಿ ಬೇರುಬಿಟ್ಟು ಹತ್ತಿರವಾಗಿ ಜೀವಂತವಾದದ್ದು, ಪ್ರಿಯವಾದದ್ದು; ಎಲ್ಲಕ್ಕಿಂತ ಮುಖ್ಯವಾಗಿ ನಾನು ಮನುಷ್ಯನಾಗಿಯೆ ಮುಂದುವರಿಯಲು ಕಾರಣವಾದದ್ದು ಲೋಹಿಯಾ ಹಾಗೂ ಬೆಳಕಿನ ದಾರಿಯಲ್ಲಿ ಕೈ ಹಿಡಿದು ಕರೆದುಕೊಂಡು ಹೋಗುವ ಅವರ ಬರವಣಿಗೆ.
ಅನ್ಯಾಯದ ವಿರುದ್ದ ಸದಾ ಸುಡುತ್ತಿದ್ದ ಸೂರ್ಯ, ಪ್ರಾಮಾಣಿಕತೆಯ ಸಾಕಾರ ಮೂರ್ತಿ, ಮೋಸ, ವಂಚನೆ, ಅನ್ಯಾಯ, ಅಸಮಾತೆಗಳು ಕಂಡಲ್ಲೆ ಕಿಡಿತಾಗಿದ ಮದ್ದಿನಂತೆ ಸಿಡಿದ ಬಾಂಬು, ವಿಶ್ವಮಾನವತೆಯಲ್ಲಿ ಅಗಲವರಿಯದ ಅನ೦ತ ಆಕಾಶ ಲೋಹಿಯಾ.
೧೯೨೯ ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ‘ಲಂಡನ್ ಅಥವಾ ಬರ್ಲಿನ್’ ಎಂಬ ಪ್ರಶ್ನೆ ಬಂದಾಗ ನಮ್ಮನ್ನು ಗುಲಾಮರ- ನ್ನಾಗಿಸಿಕೊಂಡು ಅಳಿದ ಲಂಡನ್ನಿನಲ್ಲಿ ಕಲಿಯುವುದೆಂದರೆ ಮಾನಸಿಕ ಗುಲಾಮೀಯತೆ ಎ೦ದು ತಿರಸ್ಕರಿಸಿದವರು; ನೆಹರು ಸ್ತ್ರೀ ಸಮಾನತೆಯ ಕಾಯಿದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ‘ಹಳ್ಳಿಗಳಲ್ಲಿ ವಾಸಿಸುತ್ತಿರುವ ಕೊಟ್ಯಾಂತರ ಭಾರತೀಯ ಸ್ತ್ರೀಯರ ಅಗತ್ಯ ಸಮಾನತೆಯ ಬರಿಯ ಕಾಯಿದೆಯಲ್ಲ. ಬದಲಿಗೆ ಕುಡಿಯುವ ನೀರು, ಮಲಮೂತ್ರ ವಿಸರ್ಜನೆಗೆ ವ್ಯವಸ್ಥೆ’ ಎ೦ದು ಖಂಡತುಂಡವಾಗಿ ಖಂಡಿಸಿದವರು.
ದೇಶದ ಸಾಮಾನ್ಯ ಪ್ರಜೆಯೊಬ್ಬ ದಿನ ಒಂದಕ್ಕೆ ೮ ಆಣೆಯಿಂದ ೫ ರೂ. ನಲ್ಲಿ ಬದುಕುತ್ತಿದ್ದರೆ ಅದೇ ದೇಶದ ಪ್ರಧಾನಿ ನೆಹರೂ ಒ೦ದು ದಿನಕ್ಕೆ ೨೫ ರಿಂದ ೩೦ ಸಾವಿರದವರೆಗೆ ಖರ್ಚು ಮಾಡುವುದು ಅನ್ಯಾಯದ ಪರಮಾವಧಿ ಎ೦ದು ಲೋಕಸಭೆಯಲ್ಲಿ ನೆಹರೂ ವಿರುದ್ದ ನೆಹರೂ ಸಮ್ಮುಖದಲ್ಲೇ ಸಿಡಿದು ನಿಂತವರು. ೧೯೪೭ ರ ಮು೦ಚಿನ ಮನುಷ್ಯನನ್ನಾಗಿಸುವ ಅವಕಾಶ ನನಗೆ ಸಿಗುತ್ತದೆ, ಆದ್ದರಿಂದ ನೀವು ಹೆಚ್ಚು ವರ್ಷ ಬದುಕಿ ಎ೦ದು ದಾಕ್ಷಿಣ್ಯಕ್ಕೆ ಬಸಿರಾಗದೆ ನೆಹರೂವಿಗೆ ನೇರವಾಗಿ ಬರೆದವರು.
ಜನರನ್ನು ಸಕ್ರಿಯವಾಗಿ ತೊಡಗಿಸುವುದರ ಮೂಲಕ ಕೇವಲ ಒಂದು ಲಕ್ಷ ರೂ.ಗಳ ಸದಸ್ಯರ ಚಂದಾಹಣದಲ್ಲಿ ಪ್ರಬಲ ಕಾಂಗ್ರೆಸ್‌ಗೆ ಪ್ರತಿಯಾಗಿ ಇಡೀ ಭಾರತದಲ್ಲಿ ಸಮಾಜವಾದ ರಾಜಕೀಯ ಪ್ರತಿಪಕ್ಷ ಕಟ್ಟಿದವರು. ಗಣರಾಜ್ಯ ಭಾರತದ ಅಧ್ಯಕ್ಷರಾದ ಡಾ|| ಬಾಬು ರಾಜೇಂದ್ರಪ್ರಸಾದ್ ಕಾಶಿ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ೨೧೦ ಜನ ಬ್ರಾಹ್ಮಣರ ಪಾದಪೂಜೆ ಮಾಡುತ್ತಿದ್ದಾಗ ಬ್ರಾಹ್ಮಣನ ಕಾಲು ತೊಳೆಯುವ ಅಧ್ಯಕ್ಷರ ನಾಡಿನಲ್ಲಿ ಪುರೋಹಿತ, ಚಮ್ಮಾರ, ಅಗಸ, ಶಿಕ್ಷಕ ಇವರ ಮಧ್ಯೆ ಮುಕ್ತ ಸಂವಾದದ ಸಾಧ್ಯತೆ ಕಡಿದು ಹೋಗುತ್ತದೆ ಎಂದು ಈ ಜಾತೀ ಗುಲಾಮಗಿರಿಯ ವಿರುದ್ದ ಆಟಂ ಬಾಂಬಿನಂತೆ ಸಿಡಿದವರು. ಒಂದು ದೇಶಕ್ಕೆ ಒಂದೇ ಸಿವಿಲ್ ಕೋಡ್ (ಸಮಾನ ನಾಗರಿಕ ಕಾಯ್ದೆ ಇರ- ಬೇಕೆಂದು ಹೇಳಿಕೆ ಕೊಟ್ಟಾಗ ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಓಟು ಕೊಡುವುದಿಲ್ಲ ಎಂದ ಮುಸ್ಲಿಮರಿಗೆ ತಮ್ಮ ನಿಲುವನ್ನು ಮನವರಿಕೆ ಮಾಡಿ ಸಮಾನ ಕಾಯ್ದೆಯನ್ನು ಸಮರ್ಥಿಸಿಕೊಂಡು ಗೆದ್ದು ಆಯ್ಕೆಯಾದರು.
ನೆಹರು ಸತ್ತ ದಿನ ಅಮೆರಿಕದ ಜಾಕ್‌ಸನ್‌ನ ಒ೦ದು ಹೋಟೆಲ್‌ನಲ್ಲಿ ಕರಿಯರನ್ನು ಒಳಗೆ ಬಿಡುವುದಿಲ್ಲ ಎಂದ ಕ್ಷಣಾರ್ಧದಲ್ಲಿ ಬಣ್ಣ ಮತ್ತು ಅಸಮಾನತೆಯ ವಿರುದ್ದ ನಿಂತ ಜಾಗದಲ್ಲೆ ಸಿಡಿದು ದಸ್ತಗಿರಿಯಾಗಿ ಅವರ ತಪ್ಪನ್ನು ಅವರಿಗೆ ಅರಿವು ಮಾಡಿ ಕ್ಷಮಾಪಣೆ ಕೇಳುವಂತೆ ಮಾಡಿದವರು.
ನಿಮ್ಮ ಮಾನವ ವಿನಾಶದ ಅಣ್ವಸ್ತ್ರಕ್ಕೆ ಬದಲಾಗಿ ಮಾನವ ಕಲ್ಯಾಣದ ಸಂಶೋಧನೆಯ ಸಿದ್ಧಿ ಏನಾದರೂ ಆಗಿದೆಯೇ ಎಂದು ಆಲ್ಬರ್ಟ್ ಐನ್‌ಸ್ಟೀನ್‌ರನ್ನು ಆಲಂಗಿಸಿಕೊಂಡವರು. ಹೀಗೆ ಡಾ|| ಲೋಹಿಯಾ ಅವರ ವಿಶ್ವಮಾನವ ಹೃದಯದ ತುಡಿದ ಮಿಡಿತಗಳು ಒಂದೇ ….. ..ಎರಡೇ …… .!
ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಗೆ ಬ್ರಿಟೀಷರು ಕೊಟ್ಟ ಹಿಂಸಾಚಾರವನ್ನು ಕುರಿತು ಹೀಗೆ ಬರೆಯುತ್ತಾರೆ
“ಒಂದಲ್ಲ ಒಂದು ವಿಧದಲ್ಲಿ ನಾಲ್ಕು ತಿಂಗಳ ಕಾಲ ನನಗೆ ಚಿತ್ರಹಿಂಸೆ ಕೊಡಲಾಯಿತೆಂದು ಇಲ್ಲಿ ಹೇಳಬಯಸುತ್ತೇನೆ. ದಿನದಿಂದ ದಿನಕ್ಕೆ, ರಾತ್ರಿಯಿಂದ ರಾತ್ರಿಗೆ ನನ್ನನ್ನು ಸ್ವಲ್ಪವೂ ಮಲಗಲು ಬಿಡದಂತೆ ನೋಡಿಕೊಳ್ಳತ್ತಿದ್ದರು. ಈ ರೀತಿ ನಾನು ಹತ್ತು ದಿನಗಳವರೆಗೆ ಸಂಪೂರ್ಣ ಎಚ್ಚರಗೊಂಡಿದ್ದೆ. ಬಳಲಿದ ನನ್ನನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ಪೋಲೀಸರಿಗೆ ನಾನು ತಡೆಯೊಡ್ಡುವಾಗ ಕೋಳ ಹಾಕಿದ ಕೈಗಳ ಸಮೇತ ಒರಟು ನೆಲದ ಮೇಲೆ ವರ್ತುಲಾ- ಕಾರವಾಗಿ ದರದರ ಎಳೆದರು. ”
ಸ್ವಾತಂತ್ರ್ಯಾನಂತರವಾದರೂ ಲೋಹಿಯಾ ನೆಮ್ಮದಿಯಾಗಿ ಬದುಕಿದರೆ ಎಂದರೆ ಅದಕ್ಕೂ ಅವಕಾಶವಾಗಲಿಲ್ಲ ಬ್ರಿಟಿಷರಿಗಿಂತ ಕ್ರೂರವಾಗಿ ಅವರನ್ನು ಸ್ವತಂತ್ರ ಭಾರತ ನಡೆಸಿಕೊಂಡಿತು. ಲಖ್ನೋ ಜಿಲ್ಲಾ ಬಂಧೀಖಾನೆಯಿಂದ ೧೦-೧೨-೧೯೫೭ ರಂದು ಬಂಧೀಖಾನೆ ಸಚಿವರಿಗೆ ಬರೆದ ಪತ್ರ ‘ವಸಿಷ್ಠರು ಮತ್ತು ವಾಲ್ಮೀಕಿಗಳು’ ಸವಿವರವಾಗಿ ಎಲ್ಲವನ್ನೂ ತಿಳಿಯಪಡಿಸುತ್ತದೆ.
ಡಾ|| ಲೋಹಿಯಾ ಅವರು ಸತ್ತಾಗ?
ಬಡವರ, ದೀನದಲಿತರ, ನೊಂದವರ, ತುಳಿತಕ್ಕೆ ಒಳಗಾದವರ, ಅನಾಥರ ಹೃದಯದಲ್ಲಿದ್ದೇನೆ ಎನ್ನುವುದನ್ನು ಬಿಟ್ಟು ವಿಶ್ವದಗಲಕ್ಕೂ. ಬೆಳೆದವರಾಗಿಯೂ, ಮನೆ ಇಲ್ಲದೆ, ಕಾರಿಲ್ಲದೆ, ಬ್ಯಾಂಕಿನಲ್ಲಿ ಪೈಸೆ ಹಣವಿಲ್ಲದೆ, ಹೆಂಡತಿ ಮಕ್ಕಳಿಲ್ಲದೆ ಪ್ರಾಪಂಚಿಕವಾದ ಕೋರಿಕೆಗಳಾವುವೂ ಇಲ್ಲದೆ, ಮುಂದಿನ ಪೀಳಿಗೆಗೆ ಎ೦ದೆ೦ದಿಗೊ ಒರಿಜನಲ್ ಆಗೇ ಉಳಿಯುವ ವ್ಯಕ್ತಿತ್ವ ಒಂದನ್ನೇ ಬಿಟ್ಟು ತೆರಳಿದವರು ಡಾ|| ಲೋಹಿಯಾ ಒಬ್ಬರೇ.
ಹೀಗಾಗಿ ಇಂದಿನ ಯುವ ಜನತೆ ಡಾ|| ಲೋಹಿಯಾ ಅವರನ್ನು ಪರಿಚಯಿಸಿಕೊಳ್ಳದೆ ಹೋದರೆ ಅವರ ಬದುಕು ವೃರ್ಥ. ಅಷ್ಟೇ ಅಲ್ಲ, ಅದರಿಂದಾಗಿ ಅವರ ವಿಶ್ವ ಅರ್ಥ ಕಳೆದುಕೊಳ್ಳುತ್ತದೆ. ಆದ್ದರಿಂದ ವಿಶ್ವದ ಮನೆಮನೆಗೆ, ಮನಮನಕ್ಕೆ ಲೋಹಿಯಾ ಹಾಗೂ ಅವರ ಚಿಂತನೆ ಇಂದಿನ ತೀವ್ರ ಅಗತ್ಯ.
ಜೊತೆಗೆ ಲೋಹಿಯಾ ಆಚೆಗೆ ಚಿಂತಿಸಬಲ್ಲ ಲೋಹಿಯಾ ರೀತಿಯ ಸ್ವತಂತ್ರ ಮನಸ್ಸು, ಇನ್ನೂ ಹೆಚ್ಚಿನ ತೀವ್ರತಮ ಅಗತ್ಯ.
-೨೦೦೧