ಊರ ದಾರಿಯಲಿವಳು ಒಯ್ಯಾರದಿಂದ
ನೀರನ್ನು ಹೊರುತಿಹುದೆ ಬಲು ಚೆಂದ ಚೆಂದ
ಆಕಾಶ ದಾರಿಯಲಿ ಗಾಂಭೀರ್ಯದಿಂದ
ಮೋಡಗಳು ಹೋಗುತಿವೆ ನಾಚಿಕೆಯ ಅಂದ ||
ಹೂವಿನಂತಹ ಮೈಯ ಇವಳು ಮುಚ್ಚಿಹಳು
ಹಚ್ಚನೆಯ ಸೀರೆಯಲಿ ಚೆಲುವ ಮೆರೆದಿಹಳು
ಹದವಾದ ಮೈಯನ್ನು ನೆಲದಮ್ಮ ನಾಚಿ
ಗಿಡಮರದ ಹಸಿರಿನಲಿ ಒಲಿದು ಮುಚ್ಚಿಹಳು ||
ಇವಳ ಹೆಚ್ಚಿಯ ಗೆಜ್ಜೆ ನಾದವನು ಕೇಳಿ
ಹಕ್ಕಿಗಳು ಕಲಿತು ಚಿಲಿಪಿಲಿಯೆಂದು ಹಾಡಿ
ಪ್ರಿಯನ ನೋಡುತ ಇವಳ ಕೆನ್ನೆ ಕೆಂಪಾಗಿ
ಕೆಂಬಣ್ಣ ಸಂಜೆಯಲಿ ಚೆಲುವಾಯ್ತು ಕೂಡಿ ||
***