ಏಕೆ ಕಣ್ಣು ಹೀಗೆ ತೇವಗೊಂಡಿತು,
ಏಕೆ ಮನವು ಕಳವಳದಲಿ ಮುಳುಗಿತು?
ಇದ್ದಕಿದ್ದ ಹಾಗೆ ಏನೋ ಮಿಂಚಿತು
ತಿಳಿಯದಿದ್ದರೇನು ಮನಕೆ ಹೊಳೆಯಿತು.
ಯಾರ ದನಿಯೊ ಎದೆಯ ಹಾದುಹೋಯಿತು
ಬಾನಿನಲ್ಲಿ ತಾರೆ ಸಂತೆ ಸೇರಿತು
ಶ್ರುತಿಗೊಂಡಿತು ವೀಣೆ, ತಾನೆ ದನಿಯಿತು
ಝೇಂಕಾರಕೆ ಕಾದ ಹೃದಯ ನೆನೆಯಿತು.
ಸಂಜೆ ಬಾನಿನಂಚು ಮಧ್ಯಮಾವತಿ
ಬಂದೆ ಬರುವ ಮತ್ತೆ ಅರುಣಸಾರಥಿ.
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.