ಹೇ ಸಖೀ ಬೃಂದಾವನ
ಎಷ್ಟು ಚೆಂದವೇ!
ತೆತ್ತು ಕೊಂಡಿತಲ್ಲ ಇದು
ಹರಿಗೆ ತನ್ನನೇ
ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು
ತುಳಸಿವನಕೆ ತರುವಳು ನಿತ್ಯ ನೀರನು
ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ
ಹರಿನಾಮವ ಜಪಿಸುತಿಹಳು ಮಧುರ ದನಿಯಲಿ!
ಕಾಮಧೇನು ಹಿಂಡು ಹಿಂಡು ಅಲೆಯುವ ನೆಲ
ಹಾಲು ಮೊಸರ ಹಳ್ಳವಾಯ್ತು ನಂದಗೋಕುಲ
ಹಾಲಿಗಿಂತ ರುಚಿಯಾದ ಗಾನಸುಧೆಯನು
ಹರಿಸುವನೇ ಕ್ಟಷ್ಣ ತುಟಿಗೆ ಇಟ್ಟು ಕೊಳಲನು
ಗೋಪೀಜನ ಕೈ ಹೆಣೆದು ಸುತ್ತ ಕುಣಿಯುತ
ಮಧ್ಯ ನಿಂತು ಗಿರಿಧರ ನಗೆಯ ಬೀರುತ,
ಪಶು ಪಕ್ಷಿ ಪ್ರಕೃತಿಯೆಲ್ಲ ಲೋಕ ಮರೆಯುತ
ಸ್ವರ್ಗವಾಯ್ತು ಗೋಕುಲ ಇಲ್ಲೇ ಇರುತ
*****