ಜನರ ಲೌಕಿಕಾಶಯಗಳ ತುಳಿದ
ಕಲ್ಲು ಕಲ್ಲುಗಳ ತಳಪಾಯ
ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು
ಶೋಷಣೆಯ ವೈಭವೀಕರಣದ ನವರಂಗಗಳು
ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ
ಮತಾಧಿಕ್ಯತೆಯ ಬೆರಗಿನ ಗೋಪುರ
ಅಜ್ಞಾನಕ್ಕಿಟ್ಟ ಕಳಸುಗಳು
ಮೆರೆದಿವೆ ಭವ್ಯ ಭಾರತದ ಭೂತದ ಹಿರಿಮೆಗಳು
ಕೆಲವರ ಕೀರ್ತಿಯ ಮೆರೆಸಲು
ಅಸಮಾನತೆಯ ಪರಂಪರೆಯ ಆಚಂದ್ರಾರ್ಕವುಳಿಸಲು
ಕೊಳ್ಳೆ ಲೂಟಿಗಳಿಂದ ಜನರ ಸುಲಿಗೆಯಿಂದ
ದುಡಿವವರ ಬೆವರು ರಕ್ತಗಳಿಂದ
ಕಟ್ಟಿಸಿದ ಸುಂದರ ಸುಲಿಗೆಯ ಮಂದಿರಗಳು
ಬದುಕಿಗೆಂದೂ ಬೆಂಬಲವಾಗದ ಕಲ್ಲು ಚಪ್ಪಡಿ ಹಂದರಗಳು
ಇಲ್ಲಿ ಸಿಗಲು ಸಾಧ್ಯವೇ ಇಲ್ಲದ ಇಷ್ಟಾರ್ಥಗಳನ್ನು
ಅಲ್ಲಿ ಕಂಡುಕೊಂಡು ಮೋಕ್ಷ ಪಡೆಯಲು
ಸೊನ್ನೆಯೊಳಗೇ ಸುತ್ತುತ್ತಾ
ಸುತ್ತಿ ಬಂದು ಅಡ್ಡ ಬೀಳಲು
ಇಹದಿಂದ ಪಲಾಯನವನೇ ಜೀವನ ಸಿದ್ದಿಯೆಂದು ತಿಳಿದು
ಮತ್ಯ೯ವ ಜರೆದು ಕುಗ್ಗಿ ಕುಸಿದು
ನೆಲ ಹತ್ತಲು
ನೆಲ ಹತ್ತುವುದೇ ಪರಮಾನಂದವಾಗಲು
ಇಷ್ಟಿಷ್ಟೇ ಇಡೀ ದೇಶದ
ಸಾಮೂಹಿಕ ಹತ್ಯೆ ಸಾಗಿ ಬಂದಿದೆ ನೂರಾರರು ವರ್ಷ
ಆಳುವ ವರ್ಗದ ಕೃಪಾ ಛತ್ರದಡಿಯಲ್ಲಿ
ಕೊಳಕು ಮಂಡಲಗಳಂಥ ಈ ಕ್ಷೇತ್ರಗಳಲ್ಲಿ
ಭಕ್ತಿಯ ಹೆಸರಿನ ಭಯ ಮೌಢ್ಯದ ಬಂಡವಾಳದ ಮೇಲೆ
ನಡೆದು ಬಂದಿದೆ ಭರ್ಜರಿ ಲಾಭೋದ್ಯಮ
ಅಲ್ಲೇ ದೇವರಿದ್ದಾನೆ, ಅಲ್ಲೇ ಪುಣ್ಯ ದೊರೆಯುವುದು
ಎಂದು ನಂಬಿ ಬೋರಲು ಬಿದ್ದ ಮೂರ್ಖರ ಸಂತೆಗಳು
ಜನ ಮರುಳಿನ ಜಾತ್ರೆಗಳು
ಇವು ಶತಮಾನಗಳಿಂದಲೂ ದೇಶದ ದೇಹದ ಮೇಲೆ
ಗಟ್ಟಿಯಾಗಿ ನೆಲೆಯೂರಿರುವ ಕೀವು ಹುಣ್ಣುಗಳು
ಇವುಗಳೂಳಗೆ ಹರಿದಾಡುತಿವೆ ಕ್ಷುದ್ರ ಹುಳುಗಳು
ಮಂತಾಂಧತೆಯು ದದ್ದುಗಟ್ಟಿದ ಗಟ್ಟಿ ಗಣ್ಣುಗಳು
ಭಿಕ್ಷುಕರನ್ನು ಸಾಲು ಸಾಲು ಬೆಳೆಸುವ
ಪಿಳ್ಳೆ ಜುಟ್ಟುಗಳ ಬೊಜ್ಜುಗಳನ್ನುಬ್ಬಿಸುವ
ಸಾಂಕ್ರಮಿಕ ರೋಗಗಳ ಪುಕ್ಕಟ್ಟೆ ಮಾರುವ
ಜನರ ಜೇಬು ತಲೆಗಳ ನುಣ್ಣಗೆ ಬೋಳಿಸುವ
ಮಣ್ಣ ಮಕ್ಕಳ ದೂರವಿಟ್ಟು ಕಣ್ಣು ಕೆಕ್ಕರಿಸಿ
ಅಧರ್ಮಿಗಳೆಂದು ನೋಡುವ
ಇವು
ಪುಣ್ಯ ಕ್ಷೇತ್ರಗಳಲ್ಲ ಪಣ್ಯ ಕ್ಷೇತ್ರಗಳು
ಶಿವ ಕ್ಷೇತ್ರಗಳಲ್ಲ ಶವ ಕ್ಷೇತ್ರಗಳು
*****