ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ
ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ||
ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು
ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು
ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ
ಕಣ್ಣ ನೀರ ತೊಡೆದು ಎಣ್ಣೆ ಹೊಯ್ದು ಜ್ವಾಲೆ ಉರಿಸಲು ||೧||
ಹರಕು ತೇಪೆ ಬಟ್ಟೆಗಳಿಗೆ ರಕ್ಷೆ ಕವಚ ಕೊಡಲಿಕೆ
ಒಡಕು ಗಡಿಗೆ ಗಂಜಿಯಗಳ ಅಕ್ಷಯಾನ್ನ ಮಾಡಲಿಕೆ
ಎಲುಬು ಗೂಡು ಸುಕ್ಕು ಚರ್ಮಗಳಲಿ ಶಕ್ತಿ ತುಂಬಲು
ಮಾಂಸ ಭಕ್ಷಕಾಸುರರನು ಮಸಣ ಮನೆಗೆ ನೂಕಲು ||೨||
ಆಕಳಂತೆ ಮೇಕೆಯಂತೆ ಹುಲಿಯು ತೋಳ ಮೆರೆದಿವೆ
ಮೊಲಗಳನ್ನು ಕಚ್ಚಿತಿಂಬ ಹದ್ದುಗದ್ದುಗೇರಿವೆ
ಮತ ಧರ್ಮದ ಮತ್ತಿನಲ್ಲಿ ಯುಗಯುಗಗಳೆ ಕಳೆದಿವೆ
ಕೊಳೆತ ಬಾವಿ ಹಳಸುನಾತ ಕುಡಿಯುತ ಕಾಲೆಳೆದಿವೆ ||೩||
ನಾಮ ಪಟ್ಟಿದಾರ ಜುಟ್ಟುಗಳನು ಒಗೆದು ಬನ್ನಿರೊ
ಕಾವಿ ಬಟ್ಟೆ ಗೂಗೆಗಳನು ದುಡಿವ ಹೊಲಕೆ ತನ್ನಿರೊ
ಪ್ರಜರ ರಾಜರಾಗಿ ಮೆರೆವ ಹದ್ದು ತೋಳ ಹುಲಿಗಳ
ಬಣ್ಣ ಬಯಲಿಗೆಳೆದು ಹರಕು ಗುಡಿಸಲುಗಳಿಗೆಳೆಯಿರೊ ||೪||
ಗಿಳಿಪಾಠದ ಓದು ಓದಿ ಕೂಚು ಭಟ್ಟರಾದೆವೂ
ಕಾಗದ ಕೈಯಲ್ಲಿ ಹಿಡಿದು ಅಲೆವ ತಿರುಕರಾದೆವೂ
ಕುರ್ಚಿಕಾಲು ಹಣದ ಪಾದ ಹಿಡಿದು ಹೊಟ್ಟೆ ಹೊರೆದೆವೊ
ಗಟ್ಟಿಯಾಗಿ ನಗಲು ಬರದೆ ಬೆದರುಗೊಂಬೆಯಾದೆವೊ ||೫||
ಧಮನಿಗಳಲಿ ಉಚ್ಚೆ ನೀರು ಹರಿವರೆಲ್ಲ ಬಿದ್ದಿರಿ
ಕೆಂಪುರಕ್ತ ನಿಮಗಿದ್ದರೆ ಕ್ರಾಂತಿ ಮಾಡಲೆದ್ದಿರಿ
ಕುಷ್ಠರೋಗದಂಥ ಕೊಳೆತ ಪರಂಪರೆಯ ಒದೆಯಿರಿ
ಸಾಕು ಸಾಕು ಹಣದ ಬದುಕು ಹೋರಾಟಕೆ ಕುದಿಯಿರಿ ||೬||
**********************
೧೧.೧೧.೮೬