ನೀನಿಲ್ದೆ ಸಂಪತ್ತು ಶವದಲಂಕಾರಾ
ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ||
ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು
ಕುದಿವಂಥ ಎದೆಗುದಿ ಒಳಹೊರಗ
ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ
ತಣ್ಣೀರ ಸ್ನಾನವು ಏನ್ ಬೆರಗ ||೧||
ನೀನಿದ್ರೆ ತುಂಬಿದ ಮನೆಯೆಲ್ಲ ಬಿಕೋ ಬಿಕೊ
ಬಂಧು ಬಳಗ ಕೂಡ ವೈರಿಗಳು
ನೀನಿದ್ರೆ ಬರಿದಾದ ಮನೆತುಂಬ ಪ್ರೇಮವು
ಹರಿದಾಗ ಪರರೂ ಸಹಚಾರಿಗಳು ||೨||
ನೀನಿಲ್ದೆ ಆಕಾಶ ತಲೆಮ್ಯಾಲೆ ಬಿದ್ದಂತೆ
ಭೂಮಿಯು ಬಾಯ್ತೆರೆದು ತಿನ್ನುವಂತೆ
ನೀನಿದ್ರೆ ಜಗವೆಲ್ಲ ಹಗುರಾದ ಹೂವಂತೆ
ನಾನೋ ನಡೆಯುವೆ ಹಾರುವಂತೆ ||೩||
ನೀನಿಲ್ದೆ ನಾನೊಂದು ಮರುಭೂಮಿಯಲಿ ಬೆಳೆದ
ಒಂಟ್ಯಾದ ಈಚಲ ಮರದಂತೆ
ನೀನಿದ್ರೆ ನಂದನ ವನದಾಗೆ ಬೆಡಗಿನ
ಹೂಗಿಡ ಮುದ್ದಾಗಿ ಕರೆಯುವಂತೆ ||೪||
ನೀನಿಲ್ದೆ ಹಸಿವೇನ ಯಾ ಅನ್ನ ತುಂಬೀತು
ಮಣ್ಣೀನ ಗೊಂಬ್ಯಾಗೆ ಎಲ್ಲಿ ಜೀವಾ
ನೀನಿದ್ರೆ ಅಮೃತಾನೆ ಹೊಟ್ಯಾಗೆ ತುಂಬೀತು
ಹಸಿವಿಯ ಕಸಿವಿಸಿ ಎಲ್ಲಿ ನೋವಾ ||೫||
ನೀನಿಲ್ದೆ ಇರುವಾಗ ಗಂಡ್ಸತ್ತ ರಂಡ್ಮುಂಡೆ
ತಲಿಮ್ಯಾಲೆ ಕೆಂಪುಮುಸುಕು ಎಳಕೊಂಡಂಗೆ
ನೀನಿದ್ರೆ ಮುತ್ತೈದೆ ಹರಿಷಿಣ ಕುಂಕುಮ
ಎಲ್ಲಾ ಲಕ್ಷಣಗಳ ಪಡಕೊಂಡಂಗೆ ||೬||
***