ಹಿರಿ ಕಿರಿಯರು

“ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು.” ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು.

ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದಲ್ಲಿ ಸಾಗಿಸಿ ಸಹಸ್ರಮಖನಾದ ಜಗದೀಶ್ವರನಿಗೆ ವಾಙ್ಮಯ ಸೇವೆಯನ್ನು ಸಲ್ಲಿಸುವುದಕ್ಕೆ ಸಿದ್ಧನಾಗುವನು-
” ಲೌಕಿಕರು ತಿಳಕೊಂಡಂತೆ ವಯಸ್ಸಾದವರು ಹಿರಿಯರಲ್ಲ. ಅದರಂತೆ ವಯಸ್ಸಾಗದವರು ಕಿರಿಯರಲ್ಲ. ಮುಪ್ಪು ಹಿರಿತನದ ಕುರುಹಲ್ಲ. ಹರೆಯವು ಕಿರಿತನದ ಗುರುತಲ್ಲ. ಕೂದಲಿನ ಬೆಳುಪು ಹಿರಿಮೆಯ ಲಕ್ಷಣವಲ್ಲ. ಕೂದಲಿನ ಕಪ್ಪು ಕಿರಿಮೆಯ ದ್ಯೋತಕವಲ್ಲ.
ಆಜಕೋಟಿ ವರುಷದವರೆಲ್ಲರೂ ಹಿರಿಯರೇ?
ಹುತ್ತೇರಿ ಬೆತ್ತ ಬೆಳೆವ ತಪಸ್ವಿಗಳೆಲ್ಲರು ಹಿರಿಯರೇ?
ನಡು ಮುರಿದು ಗುಡಗೂರಿ ತಲೆ ನಡುಗಿ
ನರೆ ತೆರೆ ಹೆಚ್ಚಿ ಮತಿಗೆಟ್ಟು ಒಂದನಾಡ ಹೋಗಿ
ಒ೦ಬತ್ತನಾಡುವ ಅಜ್ಞಾನಿಗಳೆಲ್ಲರೂ ಹಿರಿಯರೇ?
ಅನುವರಿದು ಫನವ ಬೆರೆಸಿ ಹಿರಿದು ಕಿರಿದು ಎಂಬ
ಭೇದವ ಮರೆದು
ಕೂಡಲಚೆನ್ನಸಂಗಯ್ಯನಲ್ಲಿ ಬೆರಿಸಿ ಬೇರಿಲ್ಲದಿಪ್ಪ
ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯ್ತು.

ಹಿರಿಯತನದ ಕುರುಹುಗಳನ್ನೂ ಅದನ್ನು ಪಡೆದವರ ಲಕ್ಷಣಗಳನ್ನೂ ಇದರಿಂದ ತಿಳಿಯಬಹುದಲ್ಲವೆ ಅದಕ್ಕೊಂದು ಉದಾಹರಣೆಯನ್ನೂ ಇಲ್ಲಿ ಕಾಣಬಹುದು.

ಸುತ್ತಲಿನ ವಿಶ್ವವನ್ನು ಕಣ್ಣೆತ್ತಿ ನೋಡದೆ, ತನ್ನಂದವನ್ನು ಮಾತ್ರ ಕಂಡರೆ ಕಿರಿಯತನದ ಕಲ್ಪನೆ ಬರಲಾರದು. ವಿಶ್ವದ ಹಿರಿಮೆ ಹೆಚ್ಚುಹೆಚ್ಚು ಗೋಚರವಾದಂತೆ ತನ್ನ ಕಿರಿಮೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತದೆ.

ಪಾತಾಳದಿಂದ ಕೆಳಗೆ ನಾದ, ಸುವರ್ಲೋಕದಿಂದ ಮೇಲೆ
ಉತ್ತಮಾಂಗ.
ಬ್ರಹ್ಮಾಂಡವೇ ಮುಕುಟ, ಗಗನವೇ ಮುಖ,
ಚ೦ದ್ರಾರ್ಕಾಗ್ನಿಗಳೇ ನೇತ್ರ, ದಶದಿಕ್ಕುಗಳೇ ಬಾಹುಗಳು,
ಮಹದಾಕಾಶವೇ ಶರೀರ, ತರುಗಳೇ ತನೂರುಹ
ಶೂನ್ಯವೇ ಕರಸ್ಥಲದ ಲಿ೦ಗ, ನಕ್ಷತ್ರಗಳೇ ಪುಷ್ಪ,
ನಿತ್ಯವೇ ಪೂಜೆ, ಮೇಘವೇ ಜಡೆ,
ಬೆಳದಿಂಗಳೇ ವಿಭೂತಿ, ಪರ್ವತಗಳೇ ರುದ್ರಾಕ್ಷಿ,
ಪ೦ಚಬ್ರಹ್ಮವೇ ಪಂಚಾಕ್ಷರ, ತತ್ವಂಗಳೇ ಜಪಮಾಲೆ,
ಮೇರುವೇ ದಂಡ, ಜಗವೇ ಕಂಥ,
ಅನಂತನೇ ಕೌಪೀನ, ತ್ರಿಗುಣ ಒಂದಾದುದೇ ಕರ್ಪೂರ,
ಚತುರ್ಯುಗಂಗಳೇ ಗಮನ, ಮಿಂಚೇ ಅ೦ಗರುಚಿ,
ಸಿಡಿಲೇ ಧ್ವನಿ, ವೇದಾಗಮವೇ ವಾಕ್ಯ,
ಜ್ಞಾನಮುದ್ರೆಯೇ ಉಪದೇಶ, ಪೃಥ್ವಿಯೇ ಸಿ೦ಹಾಸನ,
ದಿವರಾತ್ರಿಯೇ ಅರಮನೆ, ಶಿವಜ್ಞಾನವೇ ಐಶ್ವರ್ಯ,
ನಿರಾಳವೇ ತೃಪ್ತಿ, ಇ೦ಥ ಚೈತನ್ಯ ಜಂಗಮಕ್ಕೆ ನಾನು
ನಮೋನಮೋ ಎನುತಿರ್ದೆನಯ್ಯ ಸೌರಾಷ್ಟ್ರ ಸೋಮೇಶ್ವರಾ.

ಇಂಥ ವಿಶಾಲವ್ಯಕ್ತಿತ್ವದ ಮುಂದೆ, ಜೀವವ್ಯಕ್ತಿತ್ವವು ಅಣುವಿಗೂ ಅಣುವಾಗಿ ತೋರುವುದು ಸಹಜ. ವಿಶ್ವವ್ಯಕ್ತಿತ್ವವು ನೋಟ ಜೀವವ್ಯಕ್ತಿತ್ವವು ನೋಟಕವಾಗಿ ನಿಂತರೆ, ತನ್ನನುಳಿದು ಮಿಕ್ಕೆಲ್ಲವೂ ಹಿರಿಯದು. ಹಿರಿಯದರ ಮುಂದೆ ತಾನೊಂದು ಕಿರಿದು ತೀರ ಕಿರಿದು. ತಾನು ಕಿರಿಯನು, ತೀರ ಕಿರಿಯನು. ಈ ಎಚ್ಚರಿಕೆಯಲ್ಲಿಯೇ ನೆಲೆನಿಂತ ಜೀವವು ಹೀಗೆ ಅಂದು-ಕೊಂಡರೆ ಆಶ್ಚರ್ಯವೇನು?

ಎನಗಿಂತ ಕಿರಿಯರಿಲ್ಲ , ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನಸಾಕ್ಷಿ.
ಕೂಡಲಸ೦ಗಮದೇವಾ ಎನಗಿದೇ ದಿಬ್ಯ.

ಕಿರಿಯನೆಂವರೆ ಉಳಿದವೆಲ್ಲಕ್ಕಿಂತ ಅಲ್ಪನೆಂಬ ಭಾವನೆ, ಅಷ್ಟೇ.
ಉಳಿದವರು ಮಾವಿನಕಾಯಿಗಳಾದರೆ ತಾನೊಂದು ಎಕ್ಕಿಯಕಾಯಿ.

ಜಗತ್ತಿನ ಹತ್ತೂ ಆಂಚಿನವರೆಗೆ ವಿಶ್ವವ್ಯಕ್ತಿಯ ನೆರಳು ಹಾಸಿರುವಾಗ, ಅದರಲ್ಲಿ ಅರಸಿದರೆ ತನ್ನ ನೆರಳೆಲ್ಲಿ ಕಂಡು ಬರುವದು? ಅತ್ತಿಯ ಹಣ್ಣನ್ನು ಹೊರಬದಿಯಲ್ಲಿಯೇ ಕಾಣಬೇಕು. ಒಳಗೆ ಹುರುಳಿಲ್ಲ. ಸುತ್ತಲಿನ ಸದ್ಗುಣ-ಮಹದ್ಗುಣಗಳ ಮಾನದಿಂದ ತನ್ನಲ್ಲಿರುವುದು ದುರ್ಗುಣಗಳ ಮೊತ್ತವೇ. ತಾನು ಕಟುಕ, ಕೊಲ್ಲುಗ, ಕಪಟಿ, ಕುಹಕಿ. ಅಂತೆಯೇ
ತಾನು ಕಿರಿಯ; ಎಲ್ಲರಿಗೂ ಕಿರಿಯ. ಎಲ್ಲಕ್ಕಿಂತಲೂ ಅಲ್ಪ. ಅರುಹಿನ ಅರಳುವಿಕೆಯಿ೦ದಲೇ ಹಿರಿದು-ಕಿರಿದುಗಳನ್ನು ನಿರ್ಣಯಿಸಲಿಕ್ಕಾಗದು. ಅರಿವೇ ಅಳೆಗೋಲಾಗಿ ನಿಲ್ಲುವುದು.

ಕಿರಿಯರಾದಡೇನು, ಹಿರಿಯರಾದಡೇನು?
ಅರಿವಿಂಗೆ ಹಿರಿದು ಕಿರಿದುಂಟೇ?
ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳು
ಉದಯವಾಗದಂದು ಗುಹೇಶ್ವರನ ಲಿಂಗದಲ್ಲಿ.
ನೀನೊಬ್ಬನೇ ಮಹಾಜ್ಞಾನಿಯೆ೦ಬುದು ಕಾಣಬಂದಿತ್ತು
ಕಾಣಾ ಚೆನ್ನಬಸವಣ್ಣ.

ತನ್ನಲ್ಲಿ ತಿಳಿಮೆ ಕಡಿಮೆ, ಬಲವು ಸಾಕಾಗದು, ಸದ್ದುಣದ ಸುಳುಹಿಲ್ಲ, ಪಾಂಡಿತ್ಯದ ಲೇಶವಿಲ್ಲ-ಎಂದು ತಿಳಕೊಳ್ಳುವುದೂ ಜ್ಞಾನದ ಲಕ್ಷ್ಣಣವೇ ಆಗಿದೆ. ನನಗೆ ಏನೂ ತಿಳಿಯದೆನ್ನುವ ಜ್ಞಾನೋದಯವಾಗುವುದು ಸಣ್ಣ
ಮಾತಲ್ಲ. ಅದೂ ಪುಣ್ಯದ ಫಲವೇ ಆಗಿದೆ. ಅಲ್ಲಿಯೇ: ಮೈಮನ ಪ್ರಾಣಗಳು ಮಿದುವಾಗಿ, ಕಣಕಿನ೦ತೆ ಮಾಡಿವ ಮೂರ್ತಿಯಾಗುವದಕ್ಕೆ ಅರ್ಹವಾಗುತ್ತವೆ. ತನ್ನಲ್ಲೇನೂ ಹುರುಳಿಲ್ಲವೆನ್ನುವ ಆನಿಸಿಕೆ ಬ೦ದ ದಿನವೇ ಪರಮಾಪ್ತನ, ಪರಮಾತ್ಮನ ಗುಪ್ತಹಸ್ತವು ಕಾಣದಂತೆ ವ್ಯಕ್ತಿಯನ್ನು ತಿದ್ದುಮಿದ್ದುವ ಕೆಲಸವು ಆರಂಭಗೊಳ್ಳುತ್ತದೆ. ಕಲಾಕುಸುರಿಯು ಮೂಡಿಬರತೊಡಗುತ್ತದೆ; ಕುಂದದ ಬಣ್ಣವು ಏರಿ ಬರತೊಡಗುತ್ತದೆ.

ಕಿರಿಯೆನೆಂದರೆ ವಿಶ್ವದ ಮುಂದೆ ಕಿರಿಯ. ತನ್ನ ಮಟ್ಟಿಗೆ ತಾನು ಅಲ್ಪನಲ್ಲ. “ತಿಳಕೊಳ್ಳುವುದಕ್ಕೆ ಅರುಹಿಲ್ಲ, ಅಳುಪುದಕ್ಕೆ ಬಲವಿಲ್ಲ; ಸೋಲು ನನ್ನ ಹಣೇಬರೆಹ; ಹೇಡಿತನ ಜನ್ಮದ ಗಂಟು. ನಾನು ನೆಲದ ಹುಡಿ. ಹುಡಿಯೊಳಗೆ ಹೊರಳಾಡುವ ಹುಳು. ಕುಡಿಯಾಗಿ ಮೇಲೇಳಲಿಕ್ಕೆ ನನ್ನಲ್ಲೇನಿವೆ?”-ಈ ಮೊದಲಾದ ವಿಚಾರಗಳು “ಕಿರಿಯ”ನ ಲಕ್ಷಣವನ್ನು ತೋರ್ಪಡಿಸುವದಿಲ್ಲ. ಅಲ್ಪನ ಬಣ್ಣವನ್ನು ಬರೆದು ತೋರಿಸುತ್ತವೆ.

ಕಿರಿಯನು ದೇವಶಿಶು. ಅಲ್ಪನು ಹೇಡಿ ಹುಳು. ಕಿರಿಯನು ಮರವಾಗಿ ಫಲಿಸುವ ಬೀಜ. ಅಲ್ಪನು ಆತ್ಮಘಾತಕ್ಕೆ ನಿಂತ ಕುಲಕುಠಾರ. ಕಿರಿಯನು ಕೆದರಿದ ಕಿಡಿ- ಅಲ್ಪನು ಹುದುಗಿದ ಹುಡಿ. ಕಿರಿಯನು ಅನಿಮಿಷ ನೇತ್ರನು. ಅಲ್ಬನು ಮುಚ್ಚಿಬಿಗಿದ ರೆಪ್ಪೆಯವನು. ಕಿರಿಯನ ಕಣ್ಣಿಗೆ ನಿದ್ರೆ ಸುಳಿಯದು. ಅಲ್ಪನ ಕಣ್ಣಿಗೆ ಎಚ್ಚರ ತಗುಲದು.

ಅಲ್ಪನ ನಿದ್ರೆಯು ದಣುವಿನಿಂದ ಬಂದ ಬೇಸರವಲ್ಲ. ಎಚ್ಚರಿಕೆಯ ಬೆಳಕಿಗೆ ಕುಕ್ಕಿ ಬಡಿಯುನ ಕಣ್ಣುಬಡಿತವಲ್ಲ. ಮೈಮಲಗಿಲ್ಲವಾವರೂ ಪ್ರಾಣ ಆಸತ್ತಿದೆ, ಬುದ್ಧಿಬೇಸತ್ತಿದೆ; ಆತ್ಮ ನಿದ್ರೆ ಹೋಗಿವೆ. ಎಚ್ಚರಿದ್ಧ ಮೈಗಾಗುವ
ಗೋಚರವೇ ಆಲ್ಪತೆ. ಜಗದಗ್ನಿಲಿಂಗವೇ ತಾನೆಂಬ ಅರಿವು ಅದಕ್ಕೆ ಲ್ಲಿಂದ ಬಂದೀತು? ತಾನು ತಿಮಿರಗರ್ಭದಿಂದ ಹೊರಬಿದ್ಧ ಮುಸಿಗೂಸೆಂದೇ ಅದರೆಣಿಕೆ; ಆದಕೆ ತಿಮಿರಗರ್ಭದ ಅರ್ಭಕನಾದನನು ಬೆಳಕಿನ ಕುಡಿಯಾದ
ಸೂರ್ಯನೆಂಬುದು ಆದಕ್ಕೆಲ್ಲಿ ಗೊತ್ತು? ಅಂಥ ಸಾವಿನ ಕೈಯಡಿಗೆಯಾದ ಅಲ್ಪನು, ಗಟ್ಟಿಗಟ್ಟಿಸಿ ಕೂಗಿ ಮಲಗಿದ ಸಂಗಡಿಗರನ್ನು ಎಬ್ಬಿಸುವದಕ್ಕೆ ಆದೆಷ್ಟು ಶೀಘ್ರವಾಗಿ ಎತ್ತುಗಡೆ ನಡಿಸಿದರೂ ಒಳ್ಳೆಯದೇ. ಸತ್ತಿರದಿದ್ಧರೂ
ಸತ್ತ೦ತೆ ಬಿದ್ದಿರುವ ಆತ್ಮವು ತನ್ನದೇ ಇರಲಿ, ಆನ್ಯರದೇ ಇರಲಿ ಅದನ್ನು ಎಚ್ಚರಿಸುನ೦ಥ ಮಹತ್‌ಕಾರ್ಯಪು, ಮಹತ್ವದ ಕಾರ್ಯವು ಭೂಮಿಯ ಮೇಲೆ ಇನ್ನೊಂದಿರಲಾರದು ಅಂಥ ಸಂಜೀವಿನೀ ಮಂತ್ರ ಯಾವುದೆಂದರೆ-

ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ
ಏಳು ಏಳು! ಜಗದಗ್ನಿ ಲಿಂಗನೆ ದೇವಕಿರಣದ೦ದ||
ಎತ್ತು ನಿನ್ನ ಮನ ಎತ್ತು! ಹೃದಯಧನ ಏರು ಯಶವ ತೆ೦ಗು
ತಿಮಿರಗರ್ಭದರ್ಭಕನೆ ಸೂರ್ಯನೆ ತತ್ವಮಸಿಯ ನುಂಗು||
ಏಕವಿಶ್ವಸರ್ವಾತ್ಮ ಸೃಷ್ಟಿಯೇ ಏಳು ಯೋಗದಿ೦ದ
ಜಡಪ್ರಕೃತಿಯಲಿ ಏಕೆ ಹೊರಳುತಿಹೆ ಮೂಕಚಕ್ರದಂದ||
ದೇವಜನಿತ ನೀನೆನಿಸಿ ಏಳು ತಿಳಿ ನೀನು ಮರಣರಹಿತ
ಕಾಲ ಮೀರಿ ನೀ ಮರಳು ನಿನಗಹುದು ಅಮರಪಟ್ಟ ವಿಹಿತ||

ತನ್ನನ್ನು ತಾನು ಎಚ್ಚರಗೊಳಿಸುವ ಸಂಜೀವನೀಗೀತೆಯನ್ನು ಉದಯ ರಾಗದಲ್ಲಿ ಹಾಡುವುದಾದರೂ ಎಲ್ಲಿಯ ವರೆಗೆ? ಎಚ್ಚರಾಗುವ ವರೆಗೆಂದು ಯಾರಾದರೂ ಪಡಿನುಡಿಯಬಹುದು. ಆದರೆ ಎಚ್ಚತ್ತ ಲಕ್ಷಣವೇನು?

ನಾ ದೇವನಲ್ಲದೆ ನೀ ದೇವನಾದರೆ
ಎನ್ನನೇಕೆ ಸಲಹೆ?
ಅರೈದು ಒಂದು ಕುಡಿತೆ ನೀರನೆರೆದೆ.
ಹಸಿದಾಗ ಒಂದು ತುತ್ತು ಓಗರನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ.

ಎಂಬ ನುಡಿಯನ್ನು ಜೀವವು ತಾನಾಗಿ ಹೇಳಿಕೊಳ್ಳುವಂತಾಗಬೇಕು. ನಿದ್ರೆಯಲ್ಲಿ ಅಂಥ ಕನಸನ್ನು ಕಾಣುತ್ತಿರಬೇಕು. ದೇಹದೊಳಗೆ ದೇವಲಯ ಕಾಣಿಸಿಕೊಳ್ಳುವುದಾಗಲಿ, “ದೇವಾ ನೀನು ಕಲ್ಹಾದರೆ ನಾನೇನಪ್ಪೆನಯ್ಯ’ ಎಂದು ಕೇಳಿಕೊಳ್ಳುಪುದಾಗಲಿ ಹಾಗೆ ಎಚ್ಚತ್ತವರಿಗೆ ಮಾತ್ರ ಸಾಧ್ಯ.

ಕರ್ಪೂರದ ಗಿರಿಯನುರಿ ಹಿಡಿದ ಬಳಿಕ ಇದ್ದಿಲುಂಟೇ?
ಮಂಜಿನ ಶಿವಾಲಯಕ್ಕೆ ಬಿಸಿಲಕಲಶವು೦ಟೇ?
ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ
ಮರಳಿ ಬಾಣನನರಸಲು೦ಟೇ?
ಗುಹೇಶ್ವರ ಲಿಂಗನನರಿದ ಬಳಿಕ ದೇವರೆಂದು
ಆರಸಲುಂಟೇ?

ಮುಗಿಲಿಗೂ ಎತ್ತರನಾಗಿ ನಿಂತ ಬ್ರಹ್ಮಾಂಡಕ್ಕೂ ಹರಹಾಗಿ ಕುಳಿತ, ಪಾತಾಳಕ್ಕೂ ಕಾಲುಚಾಚಿದ ಮಹಾಲಿಂಗವು ಮಹಾ-ದೇವನು ತನ್ನ ಜಗದ್ ವ್ಯಾಪಕತೆಯನ್ನೂ ಜಗದ್ಭರಿತತ್ವವನ್ನೂ ಕಳೆದೊಗೆದು “ಕಿರಿಯ”ನ ಕಿರುಗೈಯಲ್ಲಿ, ಪುಟ್ಟ ಅಂಗೈಯಲ್ಲಿ ಕುಳಿತು ಆಡಗಿಕೊಳ್ಳುವಷ್ಟ್ರು ಕಿರಿಯನಾಗಿ ಕಾಣಿಸಿ ಕೊಂಡರೆ ಆಶ್ಚರ್ಯವೇನು? ಕಿರಿಯನಿಗೂ ಆತ್ಯ೦ತ ಕಿರಿಯನಾಗುವ ಕಲೆ ಅವನಿಗಠಿದಲ್ಲ. ಕಿರಿಯನಿಗೂ ಕಿರಿಯನಾಗಿ ನಿಲ್ಲುವ ಮಾಟ ಅವನಿಗೆ ಬೆರಗಿನದಲ್ಲ. ಕಿರಿಯನಿಗೂ ಕಿರಿಯೆನೇ.

ಅಯ್ಯಾ ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ,
ಬ್ರಹ್ಮಾಂಡವಿತ್ತಿತ್ತ, ಮಣಿ ಮುಕುಟವತ್ತತ್ತ,
ಅಯ್ಯ ದಶದಿಕ್ಕು ಇತ್ತಿತ್ತ, ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜನಯ್ಯ, ನೀನೆನ್ನ ಕರಸ್ಥಳಕ್ಕೆ ಬಂದು
ಚುಳುಕಾದಿರಯ್ಯ.”

ಸಂಗಮಶರಣನ ಮಾತಿಗೆ ಒಂದಿಷ್ಟು ವಿರಾಮವೊದಗಿಸಿ, ಜಗದೀಶ್ವರೀ ಮಾತೆಯು ಅಕ್ಕರೆಯಿಂದ ಮೌನಮುರಿದು ಮುತ್ತಿನಂಥ ಒಂದು ಮಾತನ್ನು. ಸುರಿ ಜೀವಜಂಗುಳಿಯ ಉತ್ಸಾಹವನ್ನು ನಾಲ್ಮಡಿಗೊಳಿಸಿದಳು. ಆ ಮಾತು
ಏನಂದರೆ–

ದೇವನಾಲಯದಿ೦ದ ಬ೦ದವ ನಾನು ಸೋಲೆನಗೆಲ್ಲಿದೆ?
ದೇವನಾರಿಸಿಕೊಂಡ ಅಮೃತದ ಪುತ್ರನಿಗೆ ಗೆಲುವಲ್ಲದೆ||
ನನಗೆ ನನ್ನೊಡನಲ್ಲದಾ ಪರಮೇಶನೊಡೆಯದೆಂದಿಗು
ಘನಯಥಾರ್ಥತೆಯಿಂದ ಬಾಳುವುದೊಂದೆ ಗುರಿ ತಾನಿಂದಿಗು’||
ಒಮ್ಮೆ ತಪ್ಪಿದ ಹೆಜ್ಜೆಯಲಿ ನಾನೆಂತೋ ಬೀಳುವೆನಾದರೆ
ಒಮ್ಮೆಲೇ ನಾನೆದ್ದು ನಿಲ್ಲುವೆ ಮರಳಿ ನಸು ಹಿಂಜರಿವರೆ?”

ಜೀವಜಂಗುಳಿಯ ಕುತೂಹಲವು ಮತ್ತೂ ಕೆರಳಿದ್ದನ್ನು ಕಂಡು, ಸಂಗಮಶರಣನು ತನ್ನ ವಿಷಯವನ್ನು ಮುಂದುವರಿಸಿದ್ದು ಹೇಗೆಂದರೆ-

ಕಿರಿಯನೆಂದರೆ ಲಿಂಗ. ಕಿರಿಯನ ಅಂಗವೂ ಲಿಂಗವೇ. ಕಲ್ಪತರುವಿನ ಬೀಜವಾದ ಅಂಗನೇ ಲಿ೦ಗ. ಅಂಥ ಲಿಂಗಬೀಜವೇ ಮೊಳೆತು ಪಲ್ಲವಿಸಬಲ್ಲದು. ಹೂತುಕಾತು ಫಲಿಸಬಲ್ಲದು. ಲಿಂಗಸೆ೦ದರೆ ಕಲ್ಲಿನ ಗೋಲವಲ್ಲ.
ಲಿಂಗವೆಂದರೆ ಮರದ ಗುಂಡಲ್ಲ; ಲಿ೦ಗವೆಂದರೆ ಮಣ್ಣಿನ ಉಂಡೆಯಲ್ಲ. ಲಿ೦ಗವೆಂದರೆ ಮುಗಿಲುದ್ಧದ ಕೊಂಬೆಗಳನ್ನು ಹೊಟ್ಟೆಯಲ್ಲಿರಿಸಿಕೊಂಡ ಅದ್ಭುತ. ಲಿಂಗನೆಂದರೆ ಕೋಟಿಕೋಟಿ ಫಲಗಳನ್ನು ಒಡಲಲ್ಲಿ ಧರಿಸಿದ ಮೋಡಿ. ಲಿಂಗ ವೆಂದರೆ ಪಾತಾಳದವರೆಗೆ ಬೇರಿಳಿಸಿ ಸಢಿಲಿಸುವ ಗಾರುಡಿ. ಚುಳಕವಾಗಿ ಕಂಡರೂ ವಿಶ್ವವಿಸ್ತಾರವಾಗಿ ನಿಲ್ಲಬಲ್ಲ ಶಕ್ತಿಯನ್ನು ಒಳಗೊಂಡರೆ ಲಿಂಗ, ‘ಕಿರಿಯ’ನ ಅ೦ಗನೇ ಆ ಲಿಂಗ.

ಕಲ್ಲು ಲಿ೦ಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು,
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದು ವಸ್ತುವಿಪ್ಪ ಎಡೆಯಾವುದೆಂದಡೆ,
ಕಂಡವರೊಳಗೆ ಕೈಕೊಂಡಾಡದೆ,
ಕೊ೦ಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸಗ್ರಹಿಸಿ ನಿಂದಲ್ಲಿ, ಆ ನಿಜಲಿಂಗನಲ್ಲದೆ
ಮತ್ತೊಂದ ಪೆರತನರಿಯದೆ ನಿಂದಾತನೇ
ಸರ್ವಾಂಗಲಿಂಗಿ ವೀರ ಬೀರೇಶ್ವರ ಲಿಂಗ-
ದೊಳಗಾದ ಶರಣ.

ಆ ಮಹಾಲಿಂಗದ ಮುಂದೆ ಭಕ್ತನಾರು? ಭಕ್ತನಾರೂ ಅಲ್ಲ, ವೇಷ ಧಾರಿ. ಭಕ್ತನೆಂದುಕೊಳ್ಳುವುದೂ ನಾಚಿಕೆಯ ಕೆಲಸವೇ! ಮಹಾಲಿ೦ಗನ ಅಂಗೋಪಾಂಗಗಳಾಗಿ ಶರಣಸಂತತಿ ಪಸರಿಸಿಕೊಂಡಿದೆ. ಅವರು ಮಾತ್ರ ನಿಜವಾದ ಭಕ್ತರು. ಶರಣರ ಮನೆಯ ಮಗನಾದರೆ ಸಣ್ಣ ಮಾತಲ್ಲ. ಶರಣರ ಮನೆಯ ಆಳು ಆದರೆ ಸಣ್ಣದಾಗಲಿಲ್ಲ. ಶರಣರ ಮನೆಯ ಗಂಡುತೊತ್ತಾದರೂ ಸಣ್ಣದಲ್ಲ.

ಸಿಂಹದ ಮುಂದೆ ಜಿಗಿದಾಟವೇ?
ಪ್ರಳಯಾಗ್ನಿಯ.ಮುಂದೆ ಪತಂಗದಾಟವೇ?
ಸೂರ್ಯನ ಮುಂದೆ ಕೀಟದಾಟವೇ?
ನಿಮ್ಮ ಮು೦ದೆ ಎನ್ನಾಟವೇ ಕಲಿದೇವರ ದೇವಾ?

ಎಂದು ವಿನಯಿಸುವವನೇ ನಿಜವಾದ ಕಿರಿಯ. ಅವನೇ ಹಿರಿಯನ ನಿಜವಾದ ಮರಿ. ತಂದೆ ನೀನು, ತಾಯಿ ನೀನು-ಎ೦ದು ಬಾಯಿತು೦ಬ ಅವನೇ ದೇವನನ್ನು ಕರೆಯಬಲ್ಲನು. ಬಂಧು ನೀನು, ಬಳಗ ನೀನು ಎಂದು
ಅವನೇ ಎದೆ ತು೦ಬಿ ದೇವನನ್ನು ಕುರಿತು ಹಾಡಬಲ್ಲನು. ಅವನಿಗೆ ದೇವನಲ್ಲದೆ ಮತ್ತಾರೂ ಇಲ್ಲವೆಂದು ತೋರುವುದರಿಂದಲೇ “ಹಾಲಲ್ಲದ್ದು ನೀರಲದ್ದು)’ ಎ೦ದು “ನಂಬಿಗೆಯಿಡುವನು. ಹಾಗೆ ಮನಮುಟ್ಟಿ ನೆನೆಯ ಬಲ್ಲ
ಕಿರಿಯನ ತನುವು ದೇಹಾರವಾಗಬಲ್ಲದು. ಅವನ ಶಿರವೇ ದೇವನಡಿಯ ಸೊಂಕಿನಿಂದ ಕಾಯದ ಕಪಟವನ್ನೂ, ಮನದ ಕಾಳಿಕೆಯನ್ನೂ ಕಳಕೊಂಡು “ನಿಮ್ಮ ಶ್ರೀಪಾದದ ಬೆಳಗ ಕಂಡು ಎನ್ನಂಗದ ಕತ್ತಲೆ ತೊಡೆಯಿತ್ತು” ಎಂದು
ಅವನು ಹಿಗ್ಗಿನಿಂದ ಉಗ್ಗಡಿಸುತ್ತ ಕುಣಿದಾಡ ಬಲ್ಲನು. ಹಿರಿಯನಾಗುನ ಕುರುಹು ಹೊತ್ತವನೇ ಕಿರಿಯ.”

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನಿಲ್ಲದಾಗ-ಇದ್ದಾಗ
Next post ನಗೆಡಂಗುರ-೧೪೭

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…