೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ ಅನುಭವಗಳು

ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ ಹೆಣೆದುಕೊಂಡ ಪುಸ್ತಕ ಸಂಸ್ಕೃತಿ ಇತ್ಯಾದಿಗಳ ಕುರಿತಾಗಿ ತಿಳಿದುಕೊಳ್ಳುವ ಪ್ರಯತ್ನವಾಗಿಯೇ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ನಿರ್ಧಾರ ಮಾಡಿದ್ದೆ. ಮಾಡಿದ್ದು ಪುಣೆಯಲ್ಲಿ. ಸಮ್ಮೇಳನ ನಡೆಯಲು ನಿರ್ಧಾರವಾಗಿದ್ದುದು ಬೀದರದಲ್ಲಿ. ವರ್ಷವೊಂದರ ಅಂತರದಲ್ಲಿ ನಡೆಯಲು ತೀರ್ಮಾನವಾಗಿದ್ದ ಈ ಸಮ್ಮೇಳನ ಸಾಹಿತ್ಯೇತರ ಕಾರಣಗಳಿಂದಾಗಿಯೇ ಎರಡು ಬಾರಿ ಮುಂದೂಡಲ್ಪಟ್ಟು ಕಡೆಯದಾಗಿ ಈ ವರ್ಷದ ಜನವರಿಗೆ ಮೂಹೂರ್ತ ನಿಗದಿಪಡಿಸಿಕೊಂಡಿತ್ತು. ಕಡೆಯವರೆಗೆ ಸಮ್ಮೇಳನದ ಜರುಗುವಿಕೆಯ ಸುತ್ತ ಹಬ್ಬಿಕೊಂಡಿದ್ದ ಅನಿಶ್ಚತತೆಯೇ, ಹಾಗೂ ವೃತ್ತಿಯಲ್ಲಿ ಎದುರಾಗುಬಹುದಾದ ಅಕಾಲಿಕ ಸಂದರ್ಭಗಳೇ ನನ್ನ ಪ್ರಯಾಣದ ಕುರಿತಾದ ಅನಿಶ್ಚಿತತೆಗೆ ಕಾರಣವಾಗಿದ್ದುವು. ಸಮ್ಮೇಳನ ನಡೆಯಲು ಮೊದಲು ನಿರ್ಧಾರವಾಗಿದ್ದ ಸಮಯದಲ್ಲಿ ನಾನಿದ್ದುದು ಪುಣೆಯಲ್ಲಿ . ಆಗಷ್ಟೆ ಹೊಟ್ಟೆಪಾಡಿಗೆ ಹುಟ್ಟಿ ಬೆಳೆದ ಬೆಂಗಳೂರು ನಗರವನ್ನು ತೊರೆದು ೩-೪ ತಿಂಗಳುಗಳಾಗಿದ್ದುವು. ಆಗಿನ ಆ ನಿರ್ಧಾರವನ್ನು ನೆನೆಸಿಕೊಳ್ಳುವುದಾದರೆ, ಆ ನಿರ್ಧಾರಕ್ಕೆ `ಕನ್ನಡ’ ಎಂಬ ಹುಂಬ ಆವೇಶಕ್ಕಿಂತ ಹೆಚ್ಚಿನ ಹಿನ್ನೆಲೆಯಿರಲಿಕ್ಕಿಲ್ಲ ಎಂಬುದು ನನ್ನ ಈಹೊತ್ತಿನ ಅನಿಸಿಕೆ. ಆದರೆ ಅದು ಕಡೆಗೂ ನಡೆದ ದಿನಮಾನದಲ್ಲಿ ನಾನು ನೆಲೆಸಿರುವುದು ಮುಂಬಯಿಯಲ್ಲಿ. ಈ ನಡುವಿನ ಅವಧಿಯಲ್ಲಿ ಒಂದಿಷ್ಟಾದರೂ ಪಕ್ವಗೊಂಡಿದ್ದೇನೆ ಎಂಬ ಭಾವನೆ.

ಇನ್ನು ಬೀದರದ ಸೆಲೆಯೂ ಇತ್ತೆನ್ನಬಹುದೇನೋ. ಬೆಂಗಳೂರಿನ ಬಳಿ ಹುಟ್ಟಿ ಬೆಳೆದ ನನ್ನ ತಂದೆ ತಮ್ಮ ವೃತ್ತಿ ಜೀವನದ ಪ್ರವಾಸ ಕಾಲದಲ್ಲಿ ಕಂಡ `ಆ ನಾಡಿನ’ ಅನುಭವಗಳನ್ನು ಹಂಚಿಕೊಳ್ಳುವಾಗ, ಅದು ನನಗೆ ಸ್ವಾರಸ್ಯಕರವಾಗಿದ್ದು, ನಂತರದ ದಿನಗಳಲ್ಲಿ ನನ್ನ ಒಡಹುಟ್ಟಿದ ತಮ್ಮನು ಇದೇ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಇಂಜಿನಿಯರಿಂಗ್ ಪದವಿ ಪಡೆದದ್ದು, ಮತ್ತು ಅವನು ಕಂಡ ಅಲ್ಲಿನ ಜೀವನದ ಕುರಿತಾದ ವರ್ಣನೆಗಳು, ನನಗೆ ಒಂದು ರೀತಿಯ ಪ್ರೇರಣೆಯಾಗಿದ್ದುವು.  `ಶರಣರ ನಾಡು’, `ಬಹುಸಂಸ್ಕೃತಿಯ ಪ್ರದೇಶ’ ವೆಂಬ ಕುತೂಹಲಗಳೂ ಇದ್ದುವು.

ಸಮ್ಮೇಳನದ ಹಿಂದಿನ ದಿನವೇ ಸೋಲಾಪುರ ನೋಡುವ ಉದ್ದೇಶವಿಟ್ಟುಕೊಂಡಿದ್ದೆ. ಮರಾಠೀ ಸಾಹಿತ್ಯ ಸಮ್ಮೇಳನವೂ ಇದೇ ಸಂದರ್ಭಕ್ಕೆ ಅಲ್ಲಿ ನಡೆಯುವ ಪೂರ್ವವಾರ್ತೆಯಿದ್ದುದರಿಂದ ಅದರತ್ತಲೂ ಕಾಲು ಬೆಳೆಸಿ ನೋಡುವುದೆಂದುಕೊಂಡಿದ್ದೆ. ಎಣಿಸಿದಂತೆಯೇ ಕೂಡಿಬಂದ ಸಂದರ್ಭಗಳಿಂದಾಗಿ ಅನುಭವಗಳು ಒಳ್ಳೆಯವೇ ಆಗಿ ಪರಿಣಮಿಸಿವೆ. ಕರ್ಮಯೋಗಿಯ ಕರ್ಮಭೂಮಿಯನ್ನು ನೋಡುವ ಸದವಕಾಶವೂ ಆಯಿತು. ಇಲ್ಲಿ ನನ್ನ ಗಮನಕ್ಕೆ ಬಂದ ಒಂದು ವಿಚಾರ ಹೇಳಿ ಬಿಡುವುದು ಸೂಕ್ತವೆನಿಸುತ್ತಿದೆ.  `ಸೊನ್ನಲಿಗೆಯ ಸಿದ್ಧರಾಮನೊಂದಿಗೆ’ ಬೆಳೆದು ಬಂದಿರುವ ಮರಾಠೀ-ಕನ್ನಡ ಸಂಸ್ಕೃತಿಯ ಸಾಮರಸ್ಯವನ್ನು ಕಂಡು ದಂಗಾದೆನೆಂದೇ ಹೇಳಬೇಕು.

ಬೀದರಕ್ಕೆ ಪಯಣ
ಮುಂಬಯಿಯಿಂದ ಹೊರಟಾಗ ಸೊಲ್ಲಾಪುರದವರೆಗಿನ ಪ್ರಯಾಣದ ಸ್ಪಷ್ಟ ಕಲ್ಪನೆ ಇತ್ತಾದರೂ, ಮುಂದಕ್ಕಿನ ಪ್ರಯಾಣದ ಬಗೆಗಿನ ಜ್ಞಾನ(ಅಜ್ಞಾನ?) ಗೂಗಲ್ ಅರ್ಥನಿಂದ ಬಂದದ್ದು. ರಾತ್ರಿಯ ಪಯಣ. ಕರ್ನಾಟಕ ಪ್ರವೇಶಿಸುತ್ತಲೇ ಕುಲುಕುತ್ತಿದ್ದ ಬಸ್ಸಿನ ಅವಾಂತರಕ್ಕೆ ಅರೆನಿದ್ರೆಯಲ್ಲಿ ಎಚ್ಚರ….ನಡುವೆಯೇ ಹಾದು ಹೋದ ಊರುಗಳು ನೆನಪು ಅಷ್ಟಿಷ್ಟು….ಕಲ್ಯಾಣ, ಹುಲಸೂರ, ಭಾತಂಬ್ರ, ಭಾಲ್ಕಿ….. ಬೀದರ ತಲುಪಿದ್ದು ನಸುಕಿನ ಜಾವ ೫ರಲ್ಲಿ…..ನಂಬಲಾಗಲಿಲ್ಲ…ಬೀದರ್ ಬಸ್ಸು ನಿಲ್ದಾಣದಲ್ಲಿ ನಿಂತು ಬೆಂಗಳೂರಿನ ಚಳಿಯನ್ನು ವರ್ಷದ ನಂತರ ಅನುಭವಿಸುತ್ತಿದ್ದೆ. ಬೆಳಗಿನ ಮುಹೂರ್ತಕ್ಕೆ ಅಣಿಯಾಗಲು ಕಂಡುಕೊಂಡ ಸ್ಥಳ ಪ್ರಶಸ್ತವಾಗಿಯೂ ಮೂಲಭೂತ ಅನುಕೂಲತೆಗಳನ್ನೇನೋ ಒಳಗೊಂಡಿತ್ತು. ಬೀದರದ ನೆಹರೂ ಕ್ರೀಡಾಂಗಣದಲ್ಲಿ ಸಮ್ಮೇಳನದ ಪ್ರಥಮ ಕಾರ್ಯಕ್ರಮವಾದ ಮೆರವಣಿಗೆಯ ಉದ್ಘಾಟನೆಯಾಗುವುದಿತ್ತು. ಆ ಹೊತ್ತಿಗೆ ಕೆಲವೇ ಕೆಲವು ಪರಿಚಿತರು ಜೊತೆಗಾರರಾಗಿದ್ದರು.
೯೦ ವರ್ಷಗಳ ಸುದೀರ್ಘ ಇತಿಹಾಸದಲ್ಲಿ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಒಂದು ಸ್ವರೂಪವೇನೋ ಬಂದಿದೆ. ಆದರೆ ಅದರೊಳಗಿನ ಟೊಳ್ಳೆಷ್ಟು, ಗೆದ್ದಲು ಹತ್ತಿರುವ ಭಾಗಗಳೆಷ್ಟು ಅನ್ನೋದು ಅಲ್ಲಿಗೈತಂದಿದ್ದವರ ಹಾಗೂ ನನ್ನ ಅನುಭವಕ್ಕೂ ಬಾರದೇ ಇರಲಿಲ್ಲ. ನೆಪಮಾತ್ರಕ್ಕಾದರೂ ಆಯ್ದು ಕೊಳ್ಳಲಾಗಿದ್ದ ಪ್ರದರ್ಶನ ಕಲೆಗಳಲ್ಲಿ ಬೀದರ ಭಾಗದ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಮರೆಮಾಚಿದ್ದು ಉತ್ಸಾಹ ಹಾಗು ಜನರಿಗೆ ತಮ್ಮ ನಾಡಿನ ಬೇರೊಂದು ಪ್ರದೇಶದ ಕಲೆಗಳನ್ನು ಕಂಡ ಪುಳಕ. ಆಗಮಿಸಿದ್ದ ಪ್ರತಿನಿಧಿಗಳಗೆ ಬೀದರ ನಗರದ ಕಿರುದರ್ಶನವನ್ನಂತೂ ಇದು ಮಾಡಿಸಿತು. ಗವಾನನ ಮದರಸಾ, ಛೌಬಾರ ಗಡಿಯಾರದ ಗೋಪುರ, ನಯಾಕಮಾನ್ ಗಳು `ಬರ’ಚಿತ್ರದಲ್ಲಿಂದ್ದಂತೆಯೇ ಇಂದಿಗೂ ಇವೆ.

ಸಮ್ಮೇಳನ, ಗೋಷ್ಟಿಗಳು…ಸಾಹಿತ್ಯದ ಓಗರ…
`ಸಾಹಿತ್ಯ ಸಮ್ಮೇಳನಗಳೊಂದಿಗೆ’ ತಳುಕು ಹಾಕಿಕೊಂಡಿರುವ ರಾಜಕಾರಣಿಗಳ ಅನುಪಸ್ಥಿತಿ, ಈ ಸಲದ ಸಮ್ಮೇಳನಕ್ಕೆ ಹೆಚ್ಚಿನ ವ್ಯತ್ಯಾಸವನ್ನೇನು ಉಂಟುಮಾಡಲಿಲ್ಲ. ಆಡಳಿತಶಾಹಿಯ ಬಾಹುಗಳು ಅಷ್ಟು ಭದ್ರವಾಗಿ ಈ ವರ್ಗದವರನ್ನು ಅಪ್ಪಿಕೊಂಡಿವೆ. ದೀರ್ಘಗೊಂಡ `ಸಾಂಸ್ಕೃತಿಕ ನಡೆ’ ಯ ನಂತರ ನಡೆದ ಉದ್ಘಾಟನಾ ಸಮಾರಂಭವು `ಸಾವಕಾಶ’ವಾಗಿ ಸಾಗಿತು. ಪ್ರಸ್ತಾವನಾ ಭಾಷಣ ಮಾಡಿದ ಪರಿಷತ್ತಿನ ಅಧ್ಯಕ್ಷ ಚಂಪಾರವರಿಗಂತೂ ತಾವು ಹಾಗು ತಮ್ಮ ಪರಿಷತ್ತು ಆಯೋಜಿಸಿದ್ದ ಈ ಹಕೀಕತ್ತು ಯಾವ ಸ್ವರೂಪದ್ದಾಗಿರಬೇಕೆಂಬ ಕಲ್ಪನೆಯಿದ್ದಂತೆ ಇತ್ತು. ಅದೇ ಮುಖ್ಯ…ಇಲ್ಲದೇ ಹೋದರೆ ಬೀದರನಲ್ಲಿ ನಡೆದದ್ದು ಒಂದು ಅಸಂಗತ ಜಾತ್ರೆ ಅನಿಸಿದರೆ ಆಶ್ಚರ್ಯವಿಲ್ಲ. ಅವರು ಹೇಳಿದ್ದಿಷ್ಟು. ಸಾಹಿತ್ಯ ಪರಿಷತ್ತು ಸಾಹಿತ್ಯೇತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡಿಗರಿಗೆ ತಾನೇ ಪ್ರತಿನಿಧಿ ಎಂದು. ಹಾಗಾಗಿ ಅದು ಕನ್ನಡದ `ಉರುಸ್’ ಹೌದು.  ಇದೇ ಸಮರ್ಥನೆಯೇ ಇರಬಹುದೇನೋ. ಇರಲಿ. ಆದರೆ ನಂತರ ಮಾತನಾಡಿದ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಕಮಲಾ ಹಂಪನಾರವರು ಸಭಾಗೌರವಕ್ಕೆ ತಕ್ಕಂತೆ ಆಡಿದರು. ಯಾವುದೇ ಸಾಹಿತ್ಯ ಸಮ್ಮೇಳನದ ಬಹುಮುಖ್ಯ ಸಂದರ್ಭ ಸಮ್ಮೇಳನಾಧ್ಯಕ್ಷರ ಭಾಷಣ. ದಶಕದ ನಂತರ ಹೈದರಾಬಾದ ಕರ್ನಾಟಕ ಭಾಗದಲ್ಲಿ ನಡೆದ ಈ ಸಮ್ಮೇಳನದಲ್ಲಿ ಈ ಭಾಗದ ಹಿಂದುಳಿದಿರುವಿಕೆಯನ್ನೇ ಮತ್ತೆ ಆಡಳಿತವರ್ಗದ ಗಮನಕ್ಕೆ ತರಲು ಬೇಕಾದ ಘನತೆಪೂರ್ಣ ಮಾತುಗಳನ್ನು ಶಾಂತರಸರು ಆಡಿದರು….೨ ಗಂಟೆಗಳಷ್ಟು ವಿಸ್ತಾರ ಸಮಯದ ಹರವಿನಲ್ಲಿ ಅವರಾಡಿದ್ದು ಅವರ `ಕೃತಿ'(ಇಲ್ಲಿ ಸಾಹಿತ್ಯ ಕೃತಿ ಎಂಬರ್ಥವಲ್ಲ ಕರ್ಮವೆಂದು ವಿಧಿತ)ಗೆ ಕನ್ನಡಿ ಹಿಡಿದಂತಿತ್ತು. ಹೈದರಾಬಾದ ಕರ್ನಾಟಕದ ಬದುಕಿನ ಮಾತುಗಳನ್ನೊಳಗೊಂಡು ಸಮಗ್ರ ಕನ್ನಡ ಜನ ಈ ಹೊತ್ತು ಎದುರಿಸುತ್ತಿರುವ ಬಹುಮುಖ್ಯ ಸವಾಲುಗಳ ಕುರಿತಾಗಿ ಅವರ ವಿಚಾರಗಳು ಹರಿದಾಡಿದವು.

ಇನ್ನುಳಿದಂತೆ ನನ್ನ ಗಮನಸೆಳೆದ/ಪಾಲ್ಗೊಳ್ಳಲು ಸಾಧ್ಯವಾದ ಕೆಲವಾರು ಗೋಷ್ಟಿಗಳ ಕುರಿತಾಗಿ ಬರೆಯುತ್ತೇನೆ. ಮೊದಲ ಗೋಷ್ಟಿ `ಹೈದ್ರಾಬಾದ ಕರ್ನಾಟಕದ ಸಮಸ್ಯೆಗಳು’.  ನೀರಸವಾಗಿದ್ದ ಗೋಷ್ಟಿಗೆ ಜೀವಕಳೆ ಕೊಟ್ಟಿದ್ದು ಗುಲಬರ್ಗಾದ ಕನ್ನಡ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿಯವರ `ಸೊಗಡಿನ’ ಮಾತುಗಳು. ಆ ಭಾಗದ ಜಮೀನ್ದಾರಿ ಪದ್ಧತಿಯ ಪುನರಾವತಾರ, ಸಾಂಸ್ಕೃತಿಕ ಶೂದ್ರತನ ಇವುಗಳ ಸುತ್ತಲೇ ಅವರು ಆಡಿದ್ದು ಕೇಂದ್ರೀಕೃತವಾಗಿತ್ತು.

`ಭೇಷ್ ಯವ್ವಾ’ ಎಂದಷ್ಟೇ ಉದ್ಗಾರ ತೆಗೆಯಬೇಕು…..  ಅದು ಅವರ ವಾಕ್ಚಾತುರ್ಯಕ್ಕೆ ತಲೆದೂಗಿ ಬರೆದದ್ದು.   ಹೌದು ಕಾಲೇಜು ದಿನಗಳ ಆ ಉಪನ್ಯಾಸಗಳ ಸವಿನೆನಪುಗಳನ್ನು ತಂದದ್ದು…ಇಳಕಲ್ಲಿನ ಮಹಾಂತೇಶ ಕಾಲೇಜಿನ ಪ್ರಾಧ್ಯಾಪಕ ಶಂಭು ಬಳಿಗಾರ ಅವರ ಜಾನಪದ ಸಾಹಿತ್ಯ ಕುರಿತಾದ ಉಪನ್ಯಾಸ….ಗುನುಗುತ್ತಿವೆ ಅವರ್‍ಹಾಡಿದ ಪದಗೋಳು…..
ನಡೆಸಲೇ ಬೇಕಾದ ಅನಿವಾರ್ಯತೆಗೆ ನಡೆಸಿದ್ದು ಹನಿಗವನ ಗೋಷ್ಟಿ ……ಸರಿಹೊತ್ತಿನಲ್ಲಿ….

ದಿನ ೨ :
ಬೆಳ್ಳಂಬೆಳಗ್ಗೆ ಇಂಗ್ಲಿಷ್ ದೈನಿಕವೊಂದನ್ನು ಹಿಡಿದಿದ್ದ ನೆರೆಯ ವ್ಯಕ್ತಿಯನ್ನು ದಿಟ್ಟಿಸುತ್ತಿದ್ದಾಗ ಗೋಚರಿಸಿದ್ದು ದೊಡ್ಡ ಕಪ್ಪು ಅಕ್ಷರಗಳಲ್ಲಿ ಅಚ್ಚಾಗಿದ್ದ `ಕನ್ನಡ ಮೀಟ್ ಓಪನ್ಸ್ ಇನ್ ಗುಲ್ಬರ್ಗಾ’ ಎಂಬ ತಲೆಬರಹ ಹಾಗೂ ಹಿಂದಿನ ದಿನ ಸಮ್ಮೇಳನದ ಉದ್ಘಾಟನೆಯಾದಾಗಿನ ಒಂದು ಚಿತ್ರ.
`ಪುತಿನ’ ಬಗ್ಗೆ ಮಾತನಾಡಿದವರು ಶ್ರೀ ನರಹಳ್ಳಿ ಬಾಲಸುಬ್ರಹ್ಮಣ್ಯ, `ಆ. ನೇ. ಉಪಾಧ್ಯೆ’ ಯವರ ಬಗ್ಗೆ ಡಾ. ಶುಭಚಂದ್ರ, ಹಾಗೂ ಸಿಂಪಿ ಲಿಂಗಣ್ಣನವರ ಬಗೆಗೆ ಡಾ.ಎಂ.ಎಸ್. ಮದಭಾವಿಯವರು…ಎಲ್ಲರೂ ಡಾ. ವಿವೇಕ ರೈಯವರ ಅಧ್ಯಕ್ಷತೆಯಡಿ ನಡೆದ `ಶತಮಾನೋತ್ಸವ ಸಾಹಿತಿಗಳು’ ಗೋಷ್ಟಿಯಲ್ಲಿ. ಮುಂದೆ ಸಾಗಿ ಉಪನ್ಯಾಸ ಮಾಡಿದವರು ಪ್ರೊ.ಬಿ.ಆರ್.ಕೊಂಡಾ ಅವರು.

ಸಮ್ಮೇಳನಕ್ಕೆ ಅಂಗಣವಾಗಿದ್ದ ಬಿವಿಬಿ ಕಾಲೇಜಿನ ಮಾಜಿ ಪ್ರಾಂಶುಪಾಲರು. ಬೀದರಿನ ಇತಿಹಾಸದ ಮೆಲುಕು ಹಾಕಿದರು…. ಎಷ್ಟೋ ಹೊಸ ಸಂಗತಿಗಳಿದ್ದವು…..ವಿಕ್ರಮಾದಿತ್ಯ ೩ ಇವನ ಆಡಳಿತದ ರಾಜಧಾನಿಯಾಗಿದ್ದು ಕಲ್ಯಾಣ ನಗರ…. `ಮಿತಾಕ್ಷರ’ ಬರೆದ ವಿಜ್ಞಾನೇಶ್ವರ ಜನಿಸಿದ್ದು ಭಾಲ್ಕಿ ತಾಲೂಕಿನ ಮಾಸೆಮಡುವಿನಲ್ಲಿ….. ೧೬ನೇ ಶತಮಾನದ ಹೊತ್ತಿಗೇ ಬೀದರವು ಅಲೆಸೆ ನಿಕೆಟಿನ್ ಎಂಬ ರಷ್ಯನ್ ಪ್ರವಾಸಿಯ ಡೈರಿಯಲ್ಲಿ ಸ್ಥಾನ ಪಡೆದದ್ದು. ಹೀಗೆ ಮತ್ತೂ ಹಲವು. ವಚನ ಸಾಹಿತ್ಯ ಪರಂಪರೆಯ ಬಗ್ಗೆ ಪ್ರೊ. ಕಿ. ರಂ. ನಾಗರಾಜರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿಯಲ್ಲ ಕಿರಂ ರ ಮಾತುಗಳು ಮತ್ತೆ ಮತ್ತೆ ಕೇಳಬೇಕೆನಿಸಿದ್ದವು. ಅತ್ಯಂತ ಕಳೆಹೀನವಾಗಿದ್ದು ಮಾತ್ರ ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು ಕುರಿತಾದ ಶ್ರೀಮತಿ ಗೀತಾ ನಾಗಭೂಷಣರವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಗೋಷ್ಟಿ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೇಳಲು ಅವಕಾಶವಿದ್ದದ್ದು ಒಂದೊಂದು ಪ್ರಶ್ನೆ ಮಾತ್ರ…..ಈ ಸಂವಾದದಲ್ಲಿ ಶಾಂತರಸರ ವೈಚಾರಿಕ ಗಟ್ಟಿತನ ಮತ್ತಷ್ಟು ಬೆಳಕಿಗೆ ಬಂತು. ಹೊತ್ತಲ್ಲದ ಹೊತ್ತಿನಲ್ಲಿ ನಡೆದದ್ದು ಮಕ್ಕಳ ಕವಿಗೋಷ್ಟಿ… ಮಕ್ಕಳ ಸಾಹಿತ್ಯ ಗೋಷ್ಟಿ ಎಂದಿರಬೇಕಿತ್ತೇನೋ… ಈ ನಡುವೆ ಈ ಹೊತ್ತಲ್ಲದ ಹೊತ್ತು ಆಗಲು ಕಾರಣ ನಡುವೆ ಕಾರ್ಯಕ್ರಮ ಪಟ್ಟಿಯಲ್ಲಿಲ್ಲದ ಜನಪ್ರಿಯ ನಟರುಗಳಾದ `ಉಪೇಂದ್ರ’ ಹಾಗೂ `ರಮೇಶ’ ರ ರಸಮಂಜರಿ ಹೆಸರಿನ `ವಿಸಿಟ್’.

ದಿನ ೩ :
ಹಿರಿಯ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗಯ್ಯನವರು ಗಮನಸೆಳೆದರು. ಈ ದಿನ ಮುಖ್ಯಮಂಟಪದಲ್ಲಿ ನಡೆದ ಇನ್ಯಾವುದೇ ಕಾರ್ಯಕ್ರಮದಲ್ಲಿ ಹಾಜರಿರಲು ನನಗೆ ಸಾಧ್ಯವಿರಲಿಲ್ಲ. ಎರಡು ದಿನಗಳಿಂದಲೂ ಭೇಟಿ ನೀಡದಿದ್ದ, ಪುಸ್ತಕ ಮಳಿಗೆಗಳಿಗೆ ಹೋದೆ…ಒಂದೆರಡು ಕೆಲವಾದರೂ ಅಪರೂಪದ ಪುಸ್ತಕಗಳು ಸಿಕ್ಕಾವೇನೋ ಎಂದು. ಕನ್ನಡ ಪುಸ್ತಕಗಳನ್ನು ಚಾಪಿಸುವವರು, ಮಾರುವವರ ಒಂದು ದೊಡ್ಡದಲ್ಲದಿದ್ದರು ಗಮನ ಸೆಳೆಯುವ ವಾತಾವರಣವನ್ನು ಕಂಡೆ. ಅಲ್ಲಿ ಸೇಡಬಾಳ, ಅಥಣಿ ಯಂತಹ ಕರ್ನಾಟಕದ ಮೂಲೆಗಳಲ್ಲಿ ಧಾರ್ಮಿಕವಲ್ಲದ ಸೃಜನಶೀಲ ಕೃತಿಗಳನ್ನು ಪ್ರಕಟಿಸಿ ಮಾರುವ ಸಂಸ್ಥೆಗಳನ್ನು ಕಂಡೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಸಹ ಕೆಲವೇ ಕೆಲವು ಅಂಗಡಿಗಳಿಗೆ ಸೀಮಿತಗೊಂಡಿರುವ ಕನ್ನಡದ ಗಂಭೀರ ಸಾಹಿತ್ಯ ಕೃತಿಗಳನ್ನು ಮಾರುವ ಬುಕ್ ಸ್ಟಾಲ್ ಗಳು ಅಷ್ಟೇನು ಅಭಿವೃದ್ಧಿಯನ್ನೇನು ಕಾಣದ ಕೊಪ್ಪಳದಲ್ಲೂ, ಗಡಿ ಪ್ರದೇಶಗಳಾದ ಭಾಲ್ಕಿ, ಬೀದರ ಇವುಗಳಲ್ಲಿಯೂ ಇರುವುದು ಮಹತ್ವದ ಆರೋಗ್ಯಕರ ಸಂಗತಿ ಎನಿಸಿತು. ಆ ಕಾರಣಕ್ಕೇನೇ, `ಸಂಸ್ಕೃತಿ ಕಥನ’ ವನ್ನು ಅಂಥಹ ಒಂದು ಮಳಿಗೆಯಲ್ಲೇ ಖರೀದಿ ಮಾಡಿ ಅವರಿಗೂ `ಲಾಭ’ ಮಾಡಿದೆ!.

ಉಳಿದಂತೆ ಆ ಮೂರು ದಿನಗಳನ್ನು ಇಂದಿನ ನನ್ನ ಈ ಕ್ಯುಬಿಕಲ್ ನಿಂದ ನೋಡುವುದೂ ಅಗತ್ಯವೆನಿಸುತ್ತಿದೆ. ಸಾಹಿತ್ಯ ಸಮ್ಮೇಳನದ ಒಂದು ಕಲ್ಪನೆ ಹುಟ್ಟಿಕೊಂಡಿರುವದು, ಹಿಂದಿನಿಂದಲೂ ಸಹೃದಯರೆನಿಸಿಕೊಂಡಿರುವ ಕನ್ನಡ ಮರಾಠಿಗರಲ್ಲಿ… ಉಳಿದಂತೆ ದಕ್ಷಿಣದ ಇತರ ಭಾಷೆಗಳಲ್ಲಿ ಈ ಪ್ರಮಾಣದ ಸಮ್ಮೇಳನಗಳು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ನಡೆಯುವುದು ನನ್ನ ಗಮನಕ್ಕಂತೂ ಬಂದಿಲ್ಲ.  ನಾವು ಹೆಮ್ಮೆ ಪಡಬಹುದಾದ ಕೆಲವೇ ನಮ್ಮತನಗಳಲ್ಲಿ ಇದೂ ಒಂದು! ಆದರೆ ಜಡ್ಡು ಹತ್ತಿರುವ ನಮ್ಮ ಒಟ್ಟೂ ವ್ಯವಸ್ಥೆಯ ಭಾಗವಾಗಿ ಇವು ರೂಪುತಳೆದಿರುವುದು ಮಾತ್ರ ವಿಪರ್‍ಯಾಸಕರ.  ಪ್ರತಿ ಸಾಹಿತ್ಯ ಸಮ್ಮೇಳನವಾದಾಗಲೂ ನಮ್ಮ ಪತ್ರಿಕೆಗಳು, ಪಿರಿಯಾಡಿಕಲ್ ಗಳು ಮಣಗಟ್ಟಳೆ ಲೇಖನಗಳನ್ನು ಅನಿಸಿಕೆ-ವಿಚಾರಗಳನ್ನು ಪ್ರಕಟಿಸುತ್ತವೆ. ಮತ್ತೂ ವಿಪರ್‍ಯಾಸವೆಂದರೆ, ಇಷ್ಟು ಕ್ರಾಂತಿಯಾಗಿರುವ ಮಾಧ್ಯಮ ಕ್ಷೇತ್ರದ ಬಗೆಗೆ ಒಂದೇ ಒಂದು ಗಂಭೀರ ಗೋಷ್ಟಿಯೂ ಇರದಿರುವುದು. ಈ ಸಮ್ಮೇಳನ ಕನ್ನಡಿಗರ ಹಬ್ಬವೆಂಬುದೇನೋ ಸರಿ…ಆದರೆ ಯಾವ ಕನ್ನಡಿಗರು ಎಂದು ಉತ್ತರಿಸಹೊರಟರೆ, ಆಡಳಿತವರ್ಗಕ್ಕೆ ಹತ್ತಿರವಾದವರೂ, ತಮ್ಮ ವಿಚಾರಹೀನತೆನ್ನೂ ಇಂತಹ ವೇದಿಕೆಗಳಿಂದಲೇ ಸಮರ್ಥಿಸಿಕೊಂಡು ಬಿಡುವವರು ಎಂದು ಸ್ಪಷ್ಟವಾಗಿ ಕಣ್ಣಿಗೆಕಟ್ಟಿದಂತೆ ಗೋಚರವಾಗುತ್ತದೆ. ಯಾವ ಗೋಷ್ಟಿಗಳು ಗಂಭೀರತೆಯ ತುಸುವೇ ಸನಿಹಕ್ಕೂ ಹೋಗುತ್ತಿಲ್ಲ. ಗಂಭೀರತೆಯಿಲ್ಲದ ಯಾವ ಚರ್ಚೆಯಿಂದಲೂ ಕ್ರಿಯಾಶೀಲವಾದದ್ದು ಏನೂ ನಡೆಯಲಾಗದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಳೆದಾಯಿ
Next post ಕುರುಬರ ಕುರಿತು ( ನೃತ್ಯ ರೂಪಕ )

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…