ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ “ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?” ಎಂದಳು. “ಅಣ್ಣನ ಹೆಂಡತಿಯಾದ್ದರಿಂದ ನೀನು ಹಿರಿಯಳೇ” ಎಂದು ನನ್ನ ವಾದ. ಅಂದು ಶಾಲೆಗೆ ಒಂಭತ್ತು ಮೂವತ್ತಕ್ಕೆ ಹಾಜರಾದೆ. ಹೆಡ್ ಮಾಸ್ಟರ್ ಶ್ರೀ ಬೈಲೂರು ಮಾಸ್ತರರು. ಹಸನ್ಮುಖಿಯಾಗಿ ಬರಮಾಡಿಕೊಂಡರು. ನನ್ನಿಂದ ಸೇರ್ಪಡೆ ಪತ್ರ ತೆಗೆದುಕೊಂಡು ಅಭಿನಂದಿಸಿ ಅಲ್ಲೇ ಕೂರಿಸಿಕೊಂಡರು. ಬಳಿಕ ಎಲ್ಲ ಶಿಕ್ಷಕರನ್ನೂ ಪರಿಚಯಿಸಿದರು. ಶ್ರೀ ಡಿ.ಎಸ್.ಕಾರಂತ, ಶ್ರೀ ಜಿ.ಜಿ.ಹಳದೀಪುರ, ಶ್ರೀ ಜಿ.ವಿ.(ಗೌರೀಶ) ಕಾಯ್ಕಿಣಿ, ಶ್ರೀ ಎಸ್.ಆರ್. ಹಿರೇಗಂಗೆ, ಶ್ರೀ ಎಸ್.ಎಮ್.ಬರವಣಿ, ಕು.ರೋಹಿಣಿ ನಾಡಕರ್ಣಿ. ನಂತರ “ನಾನು ಎಸ್.ಜಿ.ಬೈಲೂರ, ಹೆಡ್ ಮಾಸ್ಟರ್” ಎಂದು ಚೆನ್ನಾಗಿ ಕೈ ಕುಲುಕಿದರು. ನಂತರ ನಾಗೇಶ, ಕೃಷ್ಣ ಇವರನ್ನು ಸಹಾಯಕರೆಂದು ಪರಿಚಯಿಸಿದರು.
ಸರಿ, ಮೊದಲ ದಿನದ ಬಗೆಗೆ ಹೇಳುತ್ತೇನೆ. ಹತ್ತೂ ಇಪ್ಪತ್ತೈದಕ್ಕೆ ಮೊದಲ ಗಂಟೆ. ಅದು ದೇವಸ್ಥಾನದ ದೊಡ್ಡ ಗಂಟೆಯ ಹಾಗಿದೆ. ಶಾಲೆಯ ಹೆಸರು ‘ಭದ್ರಕಾಳಿ ಪ್ರೌಢಶಾಲೆ’ ಎಂಬುದಕ್ಕೆ ಸರಿಯಾಗಿ ಭದ್ರಕಾಳಿಗೆ ನಿತ್ಯ ಘಂಟಾನಾದ ಎಂಬಂತೆ ಆ ಘಂಟೆ ಕಾಲಕ್ಕೆ ಸರಿಯಾಗಿ ದನಿಗೊಡುವುದು. ಸರಿ, ಶಾಲಾ ಪ್ರಾರಂಭದ ಪ್ರಾರ್ಥನೆ. ಎದೆಯಲ್ಲೂ ಘಂಟಾನಾದ! ದೇವತಾ ಪ್ರಾರ್ಥನೆಯೊಂದಿಗೆ ಜನಗಣಮನ. ಮೊದಲ ಮೂರು-ನಾಲ್ಕು ದಿನ ನನಗೆ ವಿಷಯ ಕೊಡಲಿಲ್ಲ. ಹಿರಿಯ ಶಿಕ್ಷಕರ ಪಾಠಗಳನ್ನು ನಿರೀಕ್ಷಿಸುವುದು. ಎಲ್ಲಾ ಎಂಟೂ ಪೀರಿಯಡ್ ಅವಧಿಗಲ್ಲ. ಎರಡೋ ಮೂರೋ ಶಿಕ್ಷಕರ ಪಾಠಗಳನ್ನು ಕೇಳಿಸಿಕೊಳ್ಳುವುದು. ಬಳಿಕ ಇತರ ಶಿಕ್ಷಕರೊಂದಿಗೆ ಆ ಮಾತು, ಈ ಮಾತು. ತೀರ್ಥಹಳ್ಳಿ, ಶಿವಮೊಗ್ಗಾ, ಬೆಂಗಳೂರು,ಮಠ,ಗುರುಗಳು… ನಮ್ಮ ಮನೆ ಬಗೆಗೆ ಎಲ್ಲರಿಗೂ ಗೊತ್ತು. ನನಗೆ ‘ಕೊಡ್ಲೆಕೆರೆ’ ಎಂದೇ ಕರೆದರೂ ವೇಳಾಪಟ್ಟಿಯಲ್ಲಿ ನನ್ನ ಹೆಸರು ಎಂ.ಏ.ಬಿ. (ಎಂ.ಎ.ಭಟ್ಟ) ಎಂದೇ. ನನ್ನ ಸರ್ಟಿಫಿಕೇಟುಗಳಲ್ಲಿ ‘ಕೊಡ್ಲೆಕೆರೆ’ ಇಲ್ಲ.
ನನ್ನ ಸೇವೆಯ ಮೊದಲ ವೇಳಾಪಟ್ಟಿ ತಯರಾಯಿತು. ನನಗೆ ಒಟ್ಟು ಇಪ್ಪತ್ತೆರಡು ಪೀರಿಯಡ್. ಗಣಿತ, ವಿಜ್ಞಾನ, ಇಂಗ್ಲೀಷ್. ಎಸ್.ಎಸ್.ಎಲ್.ಸಿ ಕ್ಲಾಸಿಗೆ ಯಾವ ವಿಷಯವನ್ನೂ ಕೊಡಲಿಲ್ಲ. ಮೊದಲ ವರ್ಷ ಎಂಟು ,ಒಂಭತ್ತನೇ ತರಗತಿಗಳಿಗೆ ಪಾಠ ಹೇಳಿ ಅನುಭವ ಪಡೆದುಕೊಳ್ಳಲಿ ಎಂಬುದು ಆಶಯ. ಇದನ್ನು ತುಂಬಾ ಸಂತೋಷದಿಂದ ಸ್ವಾಗತಿಸಿದೆ. ಹತ್ತನೇ ತರಗತಿಯ ಪಾಠಕ್ಕೆ ಯಾವುದಾದರೂ ಶಿಕ್ಷಕರು ಬರದಿದ್ದಾಗ ಬದಲಿಯಾಗಿ ಪಾಠ ಹೇಳಲು ಹೋದದ್ದುಂಟು. ನನ್ನ ನೆಚ್ಚಿನ ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳನ್ನು ವಿವರಿಸಿ ಹೇಳುತ್ತಿದ್ದೆ. ಆಗ ನಮ್ಮೂರುಗಳಲ್ಲಿ ಅದು ಅಷ್ಟು ಪರಿಚಿತವಾಗಿರಲಿಲ್ಲ. ನನಗದು ಅನುಕೂಲವೇ ಆಯಿತು! ಅದೇ ವರ್ಷ ಕುಮಟಾ ತಾಲೂಕು ಸ್ಪೋರ್ಟ್ಸಿಗೆ ನಾನು, ಜಿ.ಜಿ.ಹಿರೇಗಂಗೆ ನಮ್ಮ ಶಾಲೆಯ ಟೀಮನ್ನು ಒಯ್ದೆವು. ವಾಲೀಬಾಲ್‌ನಲ್ಲಿ ಗಣನೀಯವಾಗಿ, ಪ್ರೇಕ್ಷಣೀಯವಾಗಿ ಆಡಿದರು. ಖೊಖೋದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೆ.ಎಸ್.ಬೈಲಕೇರಿ ಹೀರೋ! ಎದುರು ಟೀಮಿನಲ್ಲಿ ಯಾರಿಗೂ ಇವನನ್ನು ಕಿಟ್ಟಲಾಗಲಿಲ್ಲ. ಇವನು ಔಟ್ ಆಗಲಿಲ್ಲ. ಇವನ ಝಿಗ್-ಝಾಗ್ ಓಟ ಎಲ್ಲರ ಮೆಚ್ಚುಗೆ ಗಳಿಸಿತು. ವಾಲೀಬಾಲ್‌ನಲ್ಲಿ ರಮೇಶಶೆಟ್ಟಿಯ ಶಾಟ್ ಪ್ರಸಿದ್ಧವಾಯಿತು. ಬಹುಮಾನಗಳು ಬರಲಿಲ್ಲ, ಆದರೆ ಹೋಗುವಾಗ ಇದ್ದ ಉಮೇದಿಯಲ್ಲೇ ಹಿಂತಿರುಗಿದೆವು. ಶಿಕ್ಷಕರೂ ಮಕ್ಕಳ ಉತ್ತಮ ಸಾಧನೆ ಬಗ್ಗೆ ಸಂತೋಷ ಪಟ್ಟರು.(ವೈಯಕ್ತಿಕ ಸಾಧನೆಗಾಗಿ.) ಪ್ರತಿ ಕ್ಲಾಸಿಗೆ ಪ್ರತಿ ಶನಿವಾರ ಚರ್ಚಾ ಕೂಟ. ಮನರಂಜನಾ ಕಾರ್ಯಕ್ರಮ. ಅಧ್ಯಕ್ಷತೆ ಒಂದೊಂದು ವಾರ ಒಬ್ಬೊಬ್ಬ ಶಿಕ್ಷಕರದು. ಒಟ್ಟಿನಲ್ಲಿ ಇಡೀ ಶಾಲೆ ಯಾವಾಗಲೂ ಚುರುಕಾಗಿ, ಉತ್ಸಾಹದಿಂದ ಕ್ರಿಯಾಶೀಲವಾಗಿತ್ತು, ಜೀವಕಳೆಯಿಂದ ನಳನಳಿಸುತ್ತಿತ್ತು.
ನನಗೆ ಮೊದಲ ತಿಂಗಳ ಪಗಾರ ಬಂದಾಗ ಪ್ರತಿ ರೂಪಾಯಿಯಲ್ಲಿ ನನ್ನ ಅನ್ನದಾತರು, ಶ್ರೀ ಗುರುಗಳು, ತಂದೆ, ತಾಯಿ ಕಾಣುತ್ತಿದ್ದರು. ತಂದು ದೇವರ ಮುಂದಿಟ್ಟು ಗಜಣ್ಣನ ಕೈಲಿ ಕೊಟ್ಟೆ. ದಿನವೂ ಮಧ್ಯಾಹ್ನದ ಆಸರಿಗೆ ಅವನೇ ಹಣ ಕೊಡುತ್ತಿದ್ದ. ಹೀಗೆ ದಿನಗಳು ಕಳೆದವು. ನನ್ನ ಕಲಿಸುವ ರೀತಿಯಲ್ಲಿ ಮೌಲ್ಯ ವರ್ಧನೆ ಆಯಿತು. ಹಿರಿಯ ಸಹೋದ್ಯೋಗಿ ಗುರುಗಳ ಸೂಕ್ತ ಮಾರ್ಗದರ್ಶನವೇ ಇದಕ್ಕೆ ಕಾರಣ.
ದಸರಾ ರಜೆ ಬಂತು. ಹೆಡ್ ಮಾಸ್ಟರ್ ಹತ್ತಿರ ನಾನು ತೀರ್ಥಹಳ್ಳಿಗೆ ಹದಿನೈದು ದಿನಗಳು ಹೋಗಿಬರುವುದಾಗಿ ಹೇಳಿದೆ. “ಅಲ್ಲಿ ನಿನ್ನ ತಂದೆ, ತಾಯಿ, ತಮ್ಮಂದಿರು ಇದ್ದಾರೆ, ಅಲ್ಲವೇ? ಹೋಗಿ ಬಾ” ಎಂದರು. ನಮ್ಮ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಡಿ.ವಿ.ಕಾಮತ, ಕಿಮಾನಿಕರರ ಹತ್ತಿರವೂ ಹೇಳಿದೆ. “ಒಳ್ಳೇದೇ ಮಾಡಿದೆ, ಹೆಡ್‌ಕ್ವಾರ್ಟರ್ ಬಿಡುವಾಗ ಸಂಬಂಧ ಪಟ್ಟವರಿಗೆ ಹೇಳಿ ಹೋಗಬೇಕಾದುದು ನಿಯಮ” ಎಂದರು.
ಸರಿ,ದೇವತೆ ಜಯರಾಮಣ್ಣನ ಜೊತೆ ಹೊರಟೆ.ತೀರ್ಥಹಳ್ಳಿಯಲ್ಲಿ ಅಖಿಲ ಹವ್ಯಕ ಮಹಾಸಭೆಯನ್ನು ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳು ಕರೆದಿದ್ದರು. ನಮ್ಮ ಹೈಕೋರ್ಟಿನ ಉನ್ನತ ಉದ್ಯೋಗದಲ್ಲಿದ್ದ ಶ್ರೀ ಎಂ.ಎಸ್.ಹೆಗಡೆಯವರು ಅಧ್ಯಕ್ಷರು ಮತ್ತು ಬೆಳಗಾವಿ ಕಾನೂನು ವಿದ್ಯಾಲಯದ ಪ್ರಿ.ವಿ.ಆರ್.ಭಟ್ಟರು ಮುಖ್ಯ ಅತಿಥಿಗಳಾಗಿದ್ದರು. ಮೂರು ಪ್ರಾಂತಗಳಿಂದ (ಅಂದರೆ ಸಾಗರ, ಉತ್ತರ ಕನ್ನಡ, ಮಂಗಳೂರು) ಪ್ರತಿನಿಧಿಗಳು ಸಂಘಟನೆ ಬಗೆಗೆ ಮನೋಜ್ಞವಾಗಿ ಮಾತನಾಡಿದರು. ಸಾಗರದ ಯುವ ವಕೀಲ ಶ್ರೀ ಶ್ರೀನಿವಾಸ ಭಟ್ಟರು ಕಾರ್ಯದರ್ಶಿಯಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.
ಎರಡೂ ದಿನಗಳು ರಾತ್ರಿ ಮನರಂಜನಾ ಕಾರ್ಯಕ್ರಮಗಳು ನಡೆದವು. ದೇವರು ಹೆಗಡೆಯವರ ದುಷ್ಟಬುದ್ಧಿ, ಕೃಷ್ಣ ಹಾಸ್ಯಗಾರರ ಪ್ರೇತನೃತ್ಯ, ಸಿಂಹ ಇವೆಲ್ಲ ಒಂದಕ್ಕಿಂತ ಒಂದು ಸೊಗಸಾಗಿ ರಂಗ ಪ್ರದರ್ಶನಗೊಂಡವು. ಊರಿನವರು ಮತ್ತೂ ಒಂದು ದಿನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಮುಂದೆ ಬಂದರು. ಆದರೆ ಪಾತ್ರಧಾರಿಗಳು ಊರಿಗೆ ಹೊರಟಿದ್ದರು. ಶ್ರೀಶ್ರೀಗಳ ಆಶೀರ್ವಚನದೊಂದಿಗೆ ಎರಡು ದಿನಗಳ ಸಂಭ್ರಮದ ಕಾರ್ಯಕ್ರಮ ಯಶಸ್ವಿಯಾಯಿತು. ನಾನು ಏಳೆಂಟು ದಿನಗಳು ತೀರ್ಥಹಳ್ಳಿಯಲ್ಲಿದ್ದು ಸ್ನೇಹಿತರನ್ನು ಕಂಡು ಪುನಃ ಗೋಕರ್ಣಕ್ಕೆ ಬಂದೆ. ಎರಡನೇ ಅವಧಿಯ ಶಾಲಾ ಕಾರ್ಯಕ್ರಮ ಆರಂಭವಾಯಿತು.
ಇದೇ ಹೊತ್ತಿಗೆ ನನ್ನ ಮದುವೆ ಪ್ರಸ್ತಾಪಗೊಂಡು ನಿಶ್ಚಯದ ಹಂತಕ್ಕೆ ಬಂದಿತ್ತು. ಅಘನಾಶಿನಿಯ ಶ್ರೀ ವಿಷ್ಣು ಸಭಾಹಿತರ ಮಗಳು ಚಿ.ರಾಧೆಯೊಂದಿಗೆ. ಅವಳ ಹದಿನೇಳನೇ ವರ್ಷದೊಳಗೆ ಕೊಡ್ಲೆಕೆರೆ ಮಠಕ್ಕೆ ಏನಿಲ್ಲ ಎಂದರೂ ಇಪ್ಪತ್ತು-ಇಪ್ಪತ್ತೈದು ಸಲ ಬಂದು ಹೋಗಿರಬಹುದು. ಆದರೆ ಮದುವೆಯಾಗುವ ಭಾವನೆ ಇತ್ತಿತ್ತನದು. ಇರಲಿ, ಆ ವರ್ಷ ಮಳೆಗಾಲದಲ್ಲಿ ಹಂದೆಮಾವ ಬರ್ಗಿಗೆ ಬಂದಾಗ ಒಮ್ಮೆ ನಾವಿಬ್ಬರೂ ಹೋಗಿ ಬರುವುದೆಂದು ತೀರ್ಮಾನಿಸಿದರು. ಸರಿ, ಗೋಕರ್ಣದಿಂದ ಬೆಳಿಗ್ಗೆ ಬಸ್ಸಿಗೆ ತದಡಿಗೆ ಹೋಗಿ ದೋಣಿ ದಾಟಿದೆವು. ನಾವು ಬರುವೆವೆಂದು ವಿಷ್ಣು ಮಾವ ದೋಣಿಗೆ ಕಾಯುತ್ತಿದ್ದ. ಅವನು ಹೆಣ್ಣು ಕೊಡಲಿ, ಬಿಡಲಿ, ಹೆಣ್ಣು ಒಪ್ಪಲಿ ಬಿಡಲಿ, ನಾನೇ ಒಪ್ಪಲಿ ಬಿಡಲಿ – ಅವನು ಸೋದರ ಮಾವ. ಗಾಚ ಮಾವ (ಗಣೇಶ, ವಿಷ್ಣುವಿನ ತಮ್ಮ) ನಾವು ಬಂದ ಸುದ್ದಿ ಹೇಳಲು ಮುಂದೆ ಹೋದ. ನಾವು ಸಾವಕಾಶ ಹೊರಟೆವು. ಹಂದೆ ಮಾವನಿಗೆ ನಾವಡರ ಮನೆಯ ಬುಳ್ಳಜ್ಜಿ ಪರಿಚಯ. ‘ಹ್ವಾಯ್’ ಎಂದು ಮಾತನಾಡಿಸಿದ “ಬರ್ಲಕ್ಕಲಿ. ಚಹಾ ಕುಡ್ಕಂಡು ಹೋಗ್ಲಕ್ಕು” ಎಂದು ಒತ್ತಾಯಿಸಿದರು. “ಇಲ್ಲ, ಹೋಗಿ ಬತ್ತೋ” ಎಂದು ಹಂದೆ ಮಾವ ಭರವಸೆ ಕೊಟ್ಟ. ಸಭಾಹಿತರ ಮನೆ ದಣಪೆ ಪ್ರವೇಶಿಸಿ, ಒಳಗೆ ಹೋಗುವಾಗ ಕಾಲು ತೊಳೆದುಕೊಂಡು, ಕಂಬಳಿ ಮೇಲೆ ಕುಳಿತೆವು. ತಾಯಿಯಿಂದ ಉಡಿಸಿಕೊಂಡಿರಬೇಕು, ಅಂದವಾದ ಸೀರೆಯನ್ನುಟ್ಟು ನಮ್ಮೆದುರು ನೀರಿಟ್ಟು ನವ ವಧು ನಮಸ್ಕರಿಸಿದಳು. ಹಂದೆ ಮಾವನಿಗೆ (ಹಾಗೂ ನನಗೆ!) ಸಂತೋಷವಾಯಿತು. ಕಾಯಿ ಬರ್ಫಿಯನ್ನು ಒಂದು ಬಸಿಯಲ್ಲಿ ತಂದಿಟ್ಟಳು. ಹೆಣ್ಣನ್ನು ನೋಡಿದ ಶಾಸ್ತ್ರ ಮುಗಿಯಿತು. ಹಂದೆ ಮಾವ “ಏನು ಸಭಾಹಿತರೇ, ಮಗಳು ಅಕ್ಕು (ಆಗಬಹುದು) ಅಂತಾಳೋ ಆಗ(ಬೇಡ) ಅಂತಾಳೋ” ಎಂದು ಸೋಮಯ್ಯನ ಮನೆಗೆ ಕೇಳುವಂತೆ ಕೇಳಿದ. ಗಾಚ ಮಾವ “ಏನು,ಹೇಳೇ” ಎಂದ. ಅವನಿಗೆ ಬದಿಗೆ ಕರೆದು “ಹಾಗೆಲ್ಲ ಮಾತಾಡಡ” ಎನ್ನಬೇಕೆ? ಆಗಬಹುದು ಎನ್ನುವ ಸೂಚನೆ ಕನ್ಯಾಮಣಿ ಕೊಟ್ಟಳೆಂದು ತೋರುತ್ತದೆ. ‘ಒಪ್ಪಿದ್ದಾಳೆ. ನಿಮ್ಮದು?’ ಎಂದು ವಿಷ್ಣು ಮಾವ ಕೇಳಿದ.”ಒಪ್ಕೊಂಡೇ ಬಂದದ್ದು” ಅಷ್ಟೇ ದೊಡ್ಡಕ್ಕೆ ಹಂದೆ ಮಾವ ಹೇಳಿದ. “ಹಾಗಾದರೆ ಮುಂದೆ ನೀವುಂಟು, ಅನಂತ ಭಟ್ಟರು ಉಂಟು. ನವೆಂಬರೋ ಡಿಸೆಂಬರೋ ಎಂದು ನಿಶ್ಚಯಿಸಿ.” ಎಂದ.ಮಧ್ಯಾಹ್ನ ಬೇರು ಹಲಸಿನಕಾಯಿ ಹುಳಿ, ಚಿತ್ರಾನ್ನ, ಪರಮಾನ್ನ. “ರಾಧೇ, ನೀ ಬಡಿಸೇ ಪಾಯಸಾನ’ ಎಂದು ಅಲ್ಲೇ ನಿಂತಿದ್ದ ತೆಪ್ಪದ ಲಕ್ಷ್ಮಕ್ಕ ಹೇಳಿದಳು. ಪಾಯಸಕ್ಕೆ ಸೌಟು ತುಪ್ಪ ಬಡಿಸುವ ಸೌಟಿಗಿಂತ ರಾಶೀ ದೊಡ್ಡದು! “ಅಯ್ಯೋ ಸಾಸ್ಮೆ ಸೌಂಟನೇ” ಎಂದು ಸಣ್ಣತ್ತಿಗೆ ದೊಡ್ಡ ಹುಟ್ಟು ತಂದು ಕೊಟ್ಟಳು. ಅಂದು ಪಾಯಸ ತಣಿದು ಹೋಗಿತ್ತು. ಸರಿ, ಸಾಯಂಕಾಲ ಚಹಾ ಕುಡಿದು ಹೋಗಿ ಎಂದಳು ಬುಳ್ಳಜ್ಜಿ. “ಆಗ ಜನ ರಾಶಿ ಇಕ್ಕು ಹೇಳೋ” ಎಂದು ತಮಾಷೆ ಮಾಡಿ, ವೆಂಕಟನ ದೋಣಿ ಹತ್ತಿ ಬಸ್ಸು ಹಿಡಿದೆವು. ಬರ್ಗಿ ಮಾವ ಸಾಣೆಕಟ್ಟೆಯಲ್ಲಿ ಇಳಿದು ಬರ್ಗಿಗೆ ನಡೆದ. ನಾನು ಮನೆಗೆ ಹೋಗಿ ನಡೆದ ವಿಷಯ ಹೇಳಿ ಬೇಲೆಗೆ ವಾಕಿಂಗ್ ನಡೆದೆ. ಮಾರನೇ ಸೋಮವಾರ ಯಥಾ ಪ್ರಕಾರ ಶಾಲೆ. ಶಾಲೆಯಲ್ಲಿ ದಿವಾಕರ ಮಾಸ್ತರು “ಅಗಸೆಯಲ್ಲಿ ಏನು ವಿಶೇಷ?” ಎಂದರು.ಅಘನಾಶಿನಿಗೆ ಅಗಸೆ ಎನ್ನುವುದುಂಟು. ಮದುವೆ ವಿಷಯಕ್ಕೊಮ್ಮೆ ಅರ್ಧವಿರಾಮ.
ಇದೇ ಜೂನ್‌ದಲ್ಲಿ ಪ್ರೇಮಾಶೆಟ್ಟಿ, ಪ್ರೇಮಾ ಗಣಯನ್ ಇವರನ್ನು ಶಾಲೆಯವರೇ ಪರೀಕ್ಷೆ ನಡೆಸಿ ಪಾಸಾದರೆ ಎಂಟನೇ ಕ್ಲಾಸಿಗೆ ಎಡ್ಮಿಶನ್ ಮಾಡಬಹುದೆಂದು ಒಂದು ಸುತ್ತೋಲೆ ಬಂತು. ಹೆಡ್ ಮಾಸ್ತರರು “ಭಟ್ಟ ಮಾಸ್ತರರೇ ಪ್ರಶ್ನೆಪತ್ರಿಕೆ ತೆಗೆದು ಮೌಲ್ಯಮಾಪನ ಮಾಡಲಿ” ಎಂದರು. ನನಗೆ ಹೊಸ ಜವಾಬ್ದಾರಿ. ಆವರೆಗೆ ಪ್ರಶ್ನೆ ಪತ್ರಿಕೆ ತೆಗೆಯುವುದು ಹೇಗೆ ಎನ್ನುವುದು ಗೊತ್ತಿಲ್ಲ. ಪ್ರಶ್ನೆ ಉತ್ತರಿಸಬಲ್ಲೆ! ಅದಕ್ಕೇ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಮಾದರಿಗೆ ಇಟ್ಟುಕೊಂಡು ಪ್ರಶ್ನೆಪತ್ರಿಕೆ ತಯಾರಿಸಿ ಶ್ರೀ ಬೈಲೂರು ಮಾಸ್ತರರಿಗೆ (ಹೆಡ್ ಮಾಸ್ಟರ್) ತೋರಿಸಿ ಭೇಷ್ ಎನ್ನಿಸಿಕೊಂಡೆ. ಪರೀಕ್ಷೆ ನಡೆಯಿತು. ಪಾಸಾದರು. ಇವರಿಬ್ಬರೂ ಎಸ್.ಎಸ್.ಸಿ. ಆಗಿ ಒಬ್ಬರು ಶಿಕ್ಷಣ ಇಲಾಖೆ, ಇನ್ನೊಬ್ಬರು ವೈದ್ಯಕೀಯ ಇಲಾಖೆ ಸೇರಿದರು. ನಂತರ ಶಾಲೆಯಲ್ಲಿ ಪಾಣ್ಮಾಸಿಕ ಪರೀಕ್ಷೆ ನಡೆಯಿತು. ಮುಗಿಯಿತು. ನಂತರ ಟ್ರಿಪ್. ಎಲ್ಲಿಗೆ? ಜೋಗಾಕ್ಕೆ. ಮೊದಲು ಗೇರುಸೊಪ್ಪ ಚತುರ್ಮುಖ ಬಸ್ತಿಗೆ. ನಾನು,ಹಳದೀಪುರ ಮಾಸ್ತರು ಶಿಕ್ಷಕ ಮಾರ್ಗದರ್ಶಕರು. ಮೋಹನ ಗೋಕರ್ಣ ಬಲು ತಮಾಷೆ ಹುಡುಗ. ಒಂದು ದಿಗಂಬರ ಮೂರ್ತಿಗೆ ತನ್ನ ಕರವಸ್ತ್ರವನ್ನು ಕಚ್ಚೆಯಂತೆ ಉಡಿಸಿ “ಈಗ ಹೆಣ್ಣುಮಕ್ಕಳು ಬರುತ್ತಾರೆ. ಅವರು ಹೋಗುವವರೆಗೂ ಉಟ್ಟುಕೊಂಡಿರು.” ಎಂದು ಹೇಳಿದನಂತೆ! ಆ ಮೇಲೆ ಕರವಸ್ತ್ರ ತರಲು ಹೋದರೆ ಇನ್ಯಾರೋ ಅದನ್ನು ಒಯ್ದಿದ್ದರು! ನಾವು ಗೇರುಸೊಪ್ಪೆಯಲ್ಲಿ ಎಷ್ಟು ಕಾದರೂ ಐದಕ್ಕೆ ಬರಬೇಕಾದ ವೇಣುವಿನ ಗೂಡ್ಸ್ ಬರಲಿಲ್ಲ. ಕಡೆಗೆ ನಡೆದುಕೊಂಡೇ ಮಾವಿನಗುಂಡಿಗೆ ಹೊರಟೆವು.. ಮಧ್ಯೆ ಎಲ್ಲೋ ಒಂದು ಅಂಗಡಿ. ಬಾಳೆಹಣ್ಣು, ಹಾಲು ಕುಡಿದು ಪ್ರವಾಸ ಮುಂದುವರಿಸಿದೆವು. ಗುಡ್ಡೆ ಮಧ್ಯದ ಧರ್ಮಶಾಲೆಯಲ್ಲಿ ರಾತ್ರಿ ಬೆಳಗು ಮಾಡಿದೆವು. ಬೆಳಿಗ್ಗೆ ಚಾ ತಿಂಡಿ – ನಮ್ಮನ್ನು ನೋಡಿ ಇಷ್ಟೊಂದು ಜನರಿಗೆ ಚಹಾ ಮಾಡಬಹುದು ಎಂದ.ಸರಿ, “ಸೈಕಲ್ ಕೊಡು, ಸಮೀಪದ ಅಂಗಡಿಗೆ ಹೋಗಿ ರವೆ ತರ್ತೇನೆ” ಎಂದು ಸೈಕಲ್ ಸವಾರಿ ಮಾಡಿ ಹಳದೀಪುರ ಮಾಸ್ತರರು ಹೋಗಿ ರವೆ,ಬಾಳೆಹಣ್ಣು ತಂದರು. ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಮಾವಿನಗುಂಡಿಗೆ ಬಂದೆವು. ಅಲ್ಲಿ ಐನಕೈ ಅಂಗಡಿ ಹತ್ತಿರ ಊಟ ಮಾಡಿದೆವು. ಹೆಗಡೆಯವರ ವಿಶಾಲ ಅಂಗಳದಲ್ಲಿ ಮಲಗಿದೆವು. ಐದಕ್ಕೆ ಎಚ್ಚರ. ಅಲ್ಲಿಂದ ನಾಲ್ಕೈದು ಮೈಲಿ ನಡೆದು ಜೋಗಫಾಲ್ಸ್ ತಲುಪಿದೆವು. ರಾತ್ರಿ ಹೈಸ್ಕೂಲಲ್ಲಿ ಮಲಗಿ ಜೋಗ್ ಎಲೆಕ್ಟಿಕ್ ಉತ್ಪಾದನೆಯ ಯಂತ್ರಗಳನ್ನು ನೋಡಿದೆವು. ೧೨.೩೦ ಕ್ಕೆ ಜೋಗ ಬಿಟ್ಟು ಬಸ್ಸಿನಲ್ಲಿ ಊರಿಗೆ ಬಂದು ಮುಟ್ಟಿದೆವು. ಮಧ್ಯೆ ದೇವಾನಂದ ಪ್ರಸಂಗ. ಯಾರಿಗೂ ಕಾಣದಂತೆ ಕೆಳಗಿಳಿದು ಬಸ್ಸಿನ ಹಿಂದೆ ಬಾಳೆಹಣ್ಣು ತಿನ್ನುತ್ತಿದ್ದ, ಮಾಸ್ತರರಿಗೆ ಹೆದರಿ. ಬಸ್ಸು ಹೊರಟಿತು ದೇವಾನಂದ ಅಲ್ಲೇ! ಬಸ್ಸಿನಲ್ಲಿ ಲೆಕ್ಕ ಮಾಡಿದಾಗ ಒಬ್ಬ ಕಡಿಮೆ. ಬಸ್ಸು ನಿಲ್ಲಿಸಿ ನೋಡಿದರೆ ಹಿಂದಿನಿಂದ ಓಡಿ ಬರುತ್ತಿದ್ದಾನೆ. ಅಂತೂ ದೇವಾನಂದ ಬಾಳೆಹಣ್ಣು ತಿಂದದ್ದು ದೇವಾ, ಆನಂದ!
ವಾರ್ಷಿಕ ಪರೀಕ್ಷೆ ಆಯಿತು. ನನ್ನ ಪರೀಕ್ಷೆ ನನ್ನ ತಾತ್ಕಾಲಿಕ ಸೇವೆಯ ನಂತರ. ನನ್ನನ್ನು ಬಿ.ಎಡ್.ಗೆ ಶಾಲೆಯ ಸಮಿತಿ ತನ್ನ ಖರ್ಚಿನಲ್ಲಿ ಕಳಿಸುವುದೆಂದು ನಿರ್ಧಾರವಾಗಿತ್ತು. ಈಗಲೂ ಈ ಮಾತಿಗೆ ಬದ್ಧ, ಆದರೆ ಒಂದು ವರ್ಷ ಮುಂದಕ್ಕೆ- ಎಂದು ನಿರ್ಧಾರವಾಯಿತು. ಈ ವರ್ಷ ಶಿಕ್ಷಕನಾಗಿಯೇ ಮುಂದುವರಿಯುವುದು. ಪಗಾರ ಹೆಚ್ಚಳ ಮಾಡಿದರು. ನಾನು ಬಿ.ಎಡ್.ಗೆ ಹೋಗುವುದು ಆರ್ಥಿಕವಾಗಿ ಕಷ್ಟದ ಕಾರ್ಯವಾಗಿತ್ತು. ಏನೇ ಇರಲಿ, ಶಿಕ್ಷಕನಾಗಿ ಮುಂದುವರಿಯಲು ನಿರ್ಧರಿಸಿದೆ. ಮೊದಲನೇ ವರ್ಷದಂತೆ ಎರಡನೇ ವರ್ಷವೂ ಸುಸೂತ್ರವಾಗಿ ಕಳೆಯಿತು. ೫೭-೫೮ ರಲ್ಲಿ ನನ್ನನ್ನು ಶಾಲೆಯವರೇ ಬಿ.ಎಡ್.ಗೆ ಕಳಿಸಿದರು. ಬೆಳಗಾವಿ S.T.ಕಾಲೇಜ್ ಮಾಧ್ಯಮಿಕ ಶಾಲಾ ಶಿಕ್ಷಕರ ತರಬೇತಿ ವಿದ್ಯಾಲಯ.
ಬೆಳಗಾವಿಯ ಸರ್ಕಾರಿ ಮಾಧ್ಯಮಿಕ ಶಾಲಾ ಶಿಕ್ಷಕರ ಕಾಲೇಜಿನ ಪ್ರಿನ್ಸಿಪಾಲರು ನಮ್ಮ ಜಿಲ್ಲೆಯವರೇ. ಮೊದಲು ಅವರು ನಮ್ಮ ಜಿಲ್ಲೆಯಲ್ಲಿ ಡಿ.ಡಿ.ಪಿ.ಐ. ಇದ್ದರು.ಶಿಕ್ಷಣ ಕ್ಷೇತ್ರದಲ್ಲಿ ಅವರದು ದೊಡ್ಡ ಹೆಸರು. ವಿ.ಬಿ.ದೇಸಾಯಿ ಸಾಕಷ್ಟು ಸುಧಾರಣೆಗಳನ್ನು ಶಿಕ್ಷಣದಲ್ಲೂ, ಬೋಧನೆಯಲ್ಲೂ ಅಳವಡಿಸಿದವರು. ವೈಸ್ ಪ್ರಿನ್ಸಿಪಾಲ್ ಶ್ರೀ ವಿ.ಕೆ.ಜವಳಿ. ಪ್ರೊ.ರಘುರಾಮ, ಪ್ರೊ.ಬೆನ್ನೂರು, ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೇ ಹೆಸರು ಗಳಿಸಿದ ಪ್ರೊ.ಎಸ್.ಆರ್.ರೋಹಿಡೇಕರ್, ಪ್ರೊ.ಎಂ.ಎಚ್.ನಾಯಕ ಮುಂತಾದವರು ನಮ್ಮ ಶಿಕ್ಷಕರು. ಪ್ರೊ. ನಾಯಕರು ನಮ್ಮ ಜಿಲ್ಲೆಯವರು. ನಮ್ಮೆಲ್ಲರ ಹೆಮ್ಮೆಯ ಮಾಣಣ್ಣ. ಪ್ರೊ.ಉಮ್ಮಚಗಿ, ಪ್ರೊ.ಕಟ್ಟಿ, ಇವರೆಲ್ಲ ಹೆಸರುವಾಸಿ ಶಿಕ್ಷಣ ತಜ್ಞರು. ಹೆಡ್ ಕ್ಲರ್ಕ್ ನಮ್ಮ ಜಿಲ್ಲೆಯವರು.
ಬಿ.ಎಡ್.ನಲ್ಲಿ ಎಲ್ಲಾ ವಿಷಯಗಳ ಜೊತೆ ನಮ್ಮದೇ ಆದ ಎರಡು ಬೋಧನಾ ವಿಷಯ ಇರಬೇಕು. ನಾನು ವಿಜ್ಞಾನ ಶಿಕ್ಷಕನಾದ್ದರಿಂದ ಗಣಿತ, ವಿಜ್ಞಾನ ಆಯ್ದುಕೊಂಡೆ. ಗಣಿತಕ್ಕೆ ಪ್ರೊ.ರಘುರಾಮ, ವಿಜ್ಞಾನಕ್ಕೆ ಪ್ರೊ.ಎಮ್.ಎಚ್.ನಾಯಕ. ಕಾಲೇಜು ಗೇದರಿಂಗ್‌ಗೆ ಎರಡು ನಾಟಕ. ಪ್ರೊ.ರೊಹಿಡೇಕರರ ಮಗ, ೧೦-೧೧ವರ್ಷದವನು, ಪ್ರಹ್ಲಾದನ ಪಾತ್ರ ವಹಿಸಿದ್ದ. ತಂದೆ ಹಿರಣ್ಯಕಶಿಪು ಪಾತ್ರ ವಹಿಸಿದ್ದರು. ಇನ್ನೊಂದು ನಾಟಕ ‘ಅಳಿಯ ದೇವರು’ ನನ್ನದು ಮೂರು ಹೆಣ್ಣು ಮಕ್ಕಳ ತಂದೆಯ ಪಾತ್ರ. ಹೆಸರು ಚಿಂತಾಮಣಿರಾಯ. ಇಡೀ ನಾಟಕಕ್ಕೆ ನರಸಿಂಹಯ್ಯನ ಪಾತ್ರ ಮತ್ತು ನನ್ನ ಪಾತ್ರ ಕಳೆ ತಂದಿತು ಎಂಬುದು ನನ್ನ ಅಭಿಪ್ರಾಯ ಮಾತ್ರವಲ್ಲ, ಪ್ರೇಕ್ಷಕರದೂ. ಗೋಕರ್ಣದಲ್ಲಿ ನಾವು ಶಿಕ್ಷಕರು ಮೂರು ಸಲ ನಾಟಕ ಆಡಿದೆವು. ನಾಟಕದಯ್ಯ ನರಸಿಂಹನ ಪಾತ್ರದಲ್ಲಿ ಶ್ರೀ ಜಿ.ಎಚ್.ಅದ್ಭುತ ಅಭಿನಯ. ಡಾ.ಬೈಲಕೇರಿ, ದಿ.ಮಾಸ್ಕೇರಿ, ದಿ.ಬರವಣಿ ಮಾಸ್ತರು ಎಲ್ಲರೂ ಪಾತ್ರ ವಹಿಸಿದ್ದರು.ಬೆಳಗಾವಿಯಲ್ಲಿ ಒಂದು ಸಾಧನೆ ಎಂದರೆ ಲಾ ಕಾಲೇಜಿನಲ್ಲಿ ಡಿಬೇಟಿನಲ್ಲಿ ನಾನು, ವಾಮನರಾಯ (ಮುಂದೆ ಇವರು ಐದಾರು ವರ್ಷ ಬಾಡದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಮುಂದೆ ಶಿವಮೊಗ್ಗ ಬಿ.ಎಡ್. ಕಾಲೇಜ್ ಪ್ರಿನ್ಸಿಪಾಲ್ ಆದರು.) ನಮ್ಮ ಕಾಲೇಜನ್ನು ಪ್ರತಿನಿಧಿಸಿ ಶೀಲ್ಡ್ ಗೆದ್ದು ತಂದೆವು. ಕಾಲೇಜಿನ ಶಿಕ್ಷಕರೆಲ್ಲರೂ ಸಂತೋಷಪಟ್ಟರು.
ಇದೇ ಸಮಯದಲ್ಲೇ ಹಿಂದೀ ಟ್ರೈನಿಂಗ್ ನಡೆಯಿತು. ಅದಕ್ಕೆ ನಮ್ಮ ಹೈಸ್ಕೂಲ್‌ನಿಂದ ಶ್ರೀಎಸ್.ಎಮ್.ಬರವಣಿ ಮಾಸ್ತರರು ಟ್ರೈನೀ ಆಗಿ ಬಂದಿದ್ದರು. ನನ್ನ ರೂಮಿನಲ್ಲೇ ವಾಸವಾಗಿದ್ದರು. ಇದೊಂದು ಅನನ್ಯ ಲಾಭ. ಪರಸ್ಪರರು ಸಮೀಪದಲ್ಲಿ ಅರಿಯುವಂತಾಯಿತು.ನಂತರ ಅವರೊಬ್ಬರೇ ಅಲ್ಲಿದ್ದು ಟ್ರೈನಿಂಗನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿ ಶಾಲೆಗೆ ಹೆಮ್ಮೆ ತಂದರು.
ಅವರೊಡನೆ ಕಡೋಲಿ ಪ್ರವಾಸ. ಅಲ್ಲಿ ಗೋಕರ್ಣದ ‘ಚಚ್ಚು ಆಯಿ’- ಪಂಡಿತ ಸರಸ್ವತಿಬಾಯಿ, ನನ್ನ ಒಂದನೇ ಇಯತ್ತೆ ಶಿಕ್ಷಕರಾಗಿದ್ದ ಪರಮೇಶ್ವರಿ ಪಂಡಿತರ ಮಗಳು. ಕ.ಬಾ.ಶಿಬಿರ. ಕಸ್ತೂರಿ ಬಾ ಆಶ್ರಮದಲ್ಲಿಮುಖ್ಯ ಮೇಲ್ವಿಚಾರಕಿ. ನಮ್ಮನ್ನು ಎರಡು ದಿನ ಉಳಿಸಿಕೊಂಡರು. ನನಗೆ ಮಾತ್ರ ಎಂದೂ ಕಡೋಲಿ ನೆನಪಿರುವಂತೆ ಆಯಿತು. ಆಚೆ ಈಚೆ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು ಜಾರು ಬಂಡೆಯಲ್ಲಿ ಜಾರಬೇಕೆ? ನನ್ನ ಗ್ರಹಚಾರ. ಬಿದ್ದ ಪೆಟ್ಟು ಒಂದೆಡೆ. ಚಚ್ಚು ಆಯಿ ಬೇರೆ ನಗಬೇಕೇ? ಅವರು ಅಲ್ಲೇ ಗಿಡಗಳ ಮಧ್ಯ ಕಸಿ ಮಾಡುತ್ತಿದ್ದರಂತೆ. “ಯಾರೂ ಇಲ್ಲ ಎಂದುಕೊಂಡರೆ ನೀವು ಇಲ್ಲಿ”ಎಂದೆ. “ಏನು ವಿಷಯ” ಎಂದರು. “ನಾನು ಬಿದ್ದದ್ದು ನೋಡಿದರಷ್ಟೆ?” ಎಂದೆ. ” ಇಲ್ಲವಲ್ಲ. ಏನೋ ಬಿದ್ದಂತಾಯಿತು. ನೀವೋ ” ಎಂದು ಎಲ್ಲರನ್ನೂ ಕರೆದು ಹೇಳಿ ಜೋರಾಗಿ ನಕ್ಕರು.
ಬಿ.ಎಡ್. ದ್ವಿತೀಯ ಶ್ರೇಣಿಯಲ್ಲಿ ಪಾಸಾದೆ. ನಾನು ಓದಲು ಬೆಳಗಾವಿಗೆ ಹೋದ ಅವಧಿಯಲ್ಲಿ ಬಾಡದ ಶ್ರೀ ಕೆ.ಎ.ಭಟ್ಟ ಎನ್ನುವವರನ್ನು ಶಿಕ್ಷಕರನ್ನಾಗಿ ತೆಗೆದುಕೊಂಡಿದ್ದರು(ತಾತ್ಕಾಲಿಕವಾಗಿ). ಶ್ರೀ ಬೈಲೂರು ಮಾಸ್ತರರು (ಹೆ.ಮಾ.) ರಾಜೀನಾಮೆ ನೀಡಿ ಮುಂಬೈಗೆ ಹೋದರು. ನಂತರ ಕಲ್ಮಡಿ ಎಂಬ ಬಿಜಾಪುರದ ನಿವೃತ್ತ ಹೆಡ್ ಮಾಸ್ಟರು ಒಂದು ವರ್ಷ ಹೆಡ್ ಮಾಸ್ಟರಾಗಿ ಸೇವೆ ಸಲ್ಲಿಸಿದರು. ಅವರ ಬಳಿಕ ಶ್ರೀ ಎಚ್.ಬಿ.ರಾಮರಾವ್ ಬಂದರು. ಇವರು ಐದಾರು ವರ್ಷ ಹೆಡ್ ಮಾಸ್ಟರ್ ಆಗಿದ್ದರು. ಉತ್ಸಾಹಿ ಯುವಕರಾದ ಇವರು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾಲುಗೊಂಡರು. ಇವರ ಕಾಲದಲ್ಲೇ ಕಿಮಾನಿಕರ ಸಹೋದರರು – ಬಾಲಕೃಷ್ಣ ಮತ್ತು ರಾಜಾರಾಮ, ೬೦-೬೧ ಹಾಗೂ ೬೧-೬೨ ರಲ್ಲಿ ಇಡೀ ಮುಂಬೈ ಕರ್ನಾಟಕದ ಲಕ್ಷ್ಯವನ್ನು ಬಿ.ಎಚ್.ಎಸ್.ನತ್ತ ಸೆಳೆದರು. ಇದೇ ಸಮಯದಲ್ಲಿ ಇವರ ಅಕ್ಕ ತಾರಾ ಕಾಮತ ಶಿಕ್ಷಕಿಯಾಗಿ ಗಣನೀಯ ಸೇವೆ ಸಲ್ಲಿಸಿದರು. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪ್ರವಾಸಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿರಿಯಕ್ಕನಂತೆ ನೋಡಿಕೊಳ್ಳುತ್ತಿದ್ದರು. ಉತ್ತಮ ಶಿಕ್ಷಕಿ. ನನ್ನ ತಮ್ಮ ಈಶ(ವಿಶ್ವನಾಥ)ನದು ನನ್ನ ಹಾಗೇ ಕಾಕಲಿಪಿ. ಅವನ ಹತ್ತಿರ ತಮಾಷೆ ಮಾಡಿದ್ದರಂತೆ:”ನಿನಗೆ ಅಕ್ಷರ ಕಲಿಸಿದವರು ಭಟ್ಟಮಾಸ್ತರರೋ ಹೇಗೆ?”. ರಾಮರಾಯರ ಕಾಲ ವಿಜಯದ ಕಾಲವಾಗಿತ್ತು.
ಯಾವಾಗ ಎಂದು ನೆನಪಿಲ್ಲ. ನಾನು, ಹಳದಿಪುರ ಮಾಸ್ತರರು, ಎಂ.ಡಿ.ಕಾಮತರು-ಬಾಲಕೃಷ್ಣ, ರಾಜಾರಾಮ, ಪ್ರಕಾಶರ ಅಣ್ಣ, ತಾರಾಮೇಡಂರ ತಮ್ಮ -ಕೇಂಪ್ ಫೈರಿನಲ್ಲಿ “ಶಂಗ್ಯಾ-ಬಾಳ್ಯಾ” ಯಕ್ಷಗಾನ ಆಡಿದ್ದೆವು.ನನ್ನದು ಗಂಗೆ, ಮಾಧವ ಕಾಮತರದು ಶಂಗ್ಯಾ, ಹಳದೀಪುರ ಮಾಸ್ತರದು ಬಾಳ್ಯಾ. ಗಂಗೆ ಪಾತ್ರದಲ್ಲಿ ನನ್ನ ರೂಪ ಅಪರೂಪದ್ದು. ಎಂ.ಡಿ.ಕಾಮತರು ಅಂದೇ ಹೆಣ್ಣು ಮಕ್ಕಳ ಬಗ್ಗೆ ಜಿಗುಪ್ಸೆ ತಾಳಿದವರು ನಿಜ ಜೀವನದಲ್ಲೂ ಮದುವೆ ಆಗಲಿಲ್ಲ! ಗಂಗೆ ರೂಪಕ್ಕೆ ಹೆದರಿಯೋ, ಬೆದರಿಯೋ ಅಂದೇ ಆಜನ್ಮಬ್ರಹ್ಮಚರ್ಯದ ಶಪಥ ಮಾಡಿರಬೇಕು. ಆ ಶಪಥ ಪಾಲಿಸಿದರು.ನಂತರ ನಾನು ಹೆಣ್ಣು ಪಾತ್ರ ವಹಿಸುವುದು ಸಹಸಾ ಅಲ್ಲಗಳೆದೆ. ಅದಕ್ಕೆ ನನ್ನ ಪತ್ನಿಯೇ ಕಾರಣ. ಬ್ರಹ್ಮಚಾರಿಗಳ ಸಂಖ್ಯೆ ಹೆಚ್ಚಾಗಬಹುದೆಂಬ ಭಯ! ಇರಲಿ. ಕೇಂಪ್ ಫೈರ್ ನೂರಕ್ಕೆ ನೂರು ಸಕ್ಸಸ್ ಎಂದು ಗಂಗೆ ರಾಮಣ್ಣ ಹೇಳಿದರು. “ನಾನು ಇನ್ನು ಮುಂದೆ ಹಿರೇಗಂಗೆ ರಾಮಣ್ಣ” ಎಂದು ಘೋಷಿಸಿದರು. ಕೇಂಪ್ ಫೈರ್ ಎಂದ ಕೂಡಲೇ ಶ್ರೀ ರಾಮಶೆಟ್ಟರ ನೆನಪಾಗುತ್ತದೆ. ಮೊದಲು ಬೆಂಕಿ ಹಚ್ಚಿ ಕೊನೆಯ ಕೆಂಡ ಆರುವವರೆಗೂ ಅದರ ಶಿಕ್ಷಾ ರಕ್ಷೆ ಅವರದೇ. ಎರಡನೆ ಕೇಂಪ್ ಫೈರ್ ನಲ್ಲಿ ಎಂ.ಡಿ.ಕಾಮತರು ಭಾಗವಹಿಸಲಿಲ್ಲ. ನಾನು, ಹೆಡ್‌ಮಾಸ್ತರರು “ಪತ್ರಿ ಭೀಮಣ್ಣನ ಶವಯಾತ್ರೆ” ಹೆಣ ಹೊರಲು ತಂದೆ ಅಥವಾ ತಾಯಿ ಇಲ್ಲದ ಹುಡುಗರನ್ನೇ ಆಯಬೇಕಿತ್ತು. ಕಷ್ಟದ ಕೆಲಸ! ಈಗ ‘ಕೇಂಪ್ ಫೈರ್’ ಮಾಡುವುದಿಲ್ಲ. ಆಟದ ಮೈದಾನದಲ್ಲಿ ಮಧ್ಯೆ ಕಟ್ಟಿಗೆ, ಕಾಯಿಸಿಪ್ಪೆ, ಬೆರಣಿ ಹಾಕಿ ಅಷ್ಟು ಹೊತ್ತು ಬಿಟ್ಟು ಜನರೆಲ್ಲಾ ನೆಲದ ಮೇಲೆ ಕೂರಬೇಕು. ಅದಕ್ಕೂ ಹಿಂದೆ ಕೆಲವು ಖುರ್ಚಿ. ರಾಮ ಶೆಟ್ಟರು (ನಮ್ಮ ಶಾಲೆಯಲ್ಲಿ) ಈ ಉರುವಲು ರಾಶಿಗೆ ೨-೩ ಬಾಟಲಿ ಚಿಮಣಿ ಎಣ್ಣೆ ಸುರಿಯುತ್ತಾರೆ. ಕೇಂಪ್ ಫೈರಿನ ಅಧ್ಯಕ್ಷರು, ಅತಿಥಿಗಳು ನಿಗದಿತ ವೇಳೆಯಲ್ಲಿ ದೀಪ ಹಚ್ಚುತ್ತಾರೆ. ಅದು ಬೆಳಗುತ್ತದೆ. ಅದರದೇ ಬೆಳಕಿನಲ್ಲಿ ಮುಂದಿನ ಮನರಂಜನೆಯ ಇಪ್ಪತ್ತು ಇಪ್ಪತ್ತೈದು ಕಾರ್ಯಕ್ರಮಗಳು. ಗ್ಯಾಸ್ ಲೈಟೂ ಇಲ್ಲ, ಹಿಲಾಲೂ ಇಲ್ಲ.
ನನ್ನ ಹೆಸರನ್ನು ನಾಟಕದ ಟ್ರೇನಿಂಗಿಗೆ ಶ್ರೀ ರಾಮರಾವ್ (ಹೆ.ಮಾ) ಸೂಚಿಸಿ ಇಲಾಖೆಗೆ ಕಳುಹಿಸಿದರು. ಅದು ಒಪ್ಪಿತವಾಗಿ ಎರಡು ತಿಂಗಳು ತರಬೇತಿಗಾಗಿ ಹೊರಟೆ. ಅಲ್ಲೇ ನನಗೆ ಶ್ರೀ ವಿ.ಜೇ. ನಾಯಕರ ಹೆಚ್ಚಿನ ಪರಿಚಯ ಆಯಿತು. ನಾವಿಬ್ಬರೂ ತರಬೇತಿ ಪಡೆದೆವು. ಗುಬ್ಬಿ ವೀರಣ್ಣನವರ ಕಿರಿ ಮಗ ಶಿವಾನಂದ ನಮಗಿಂತ ಕಿರಿಯವ. ಶ್ರೀನಿವಾಸಮೂರ್ತಿ ,ವೆಂಕಟರಾವ್ ಎಂಬ ಕೈಲಾಸಂರ ಆತ್ಮೀಯ ಗೆಳೆಯರು (ಮುಖ್ಯಸ್ಥರು). ಬೀಳ್ಕೊಡುವ ದಿನ ಎರಡು-ಮೂರು ನಾಟಕಗಳು ಇದ್ದವು. ಅವುಗಳಲ್ಲಿ ಒಂದು ಲ್ಯಾಂಪ್ ಪೋಸ್ಟ್. ಈ ಲ್ಯಾಂಪ್ ಪೋಸ್ಟ್ ಮತ್ತು ಉದ್ದಿನ ಹಪ್ಪಳ ನಾನು ಬಿಟ್ಟರೂ ಅವು ನಮ್ಮನ್ನು ಬಿಡುವುದಿಲ್ಲ! ಉದ್ದಿನ ಹಪ್ಪಳ ನಂತರ ಹೇಳುವೆ. ನಾನು ಚಿಕ್ಕವನಾಗಿದ್ದಾಗ ಪನ್ನಿ ತಾತಿ ‘ನೀನು ದೊಡ್ಡವನಾದ ಮೇಲೆ ಯಾವ ಕೆಲಸ ಮಾಡುವೇ’ ಎಂದಾಗ ಚಿಮಣಿ ರಾಮನ ಕೆಲಸ ಎನ್ನುತ್ತಿದ್ದೆ. ದಿನಾ ಬೆಳಿಗ್ಗೆ ಒಂದು ಚಿಕ್ಕ ಏಣಿ ಹೆಗಲ ಮೇಲೆ ಇಟ್ಟುಕೊಂಡು, ಕೈಯಲ್ಲಿ ಚಿಮಣಿ ಎಣ್ಣೆ ಡಬ್ಬ ಹಿಡಿದು, ಬಟ್ಟೆ ಚೂರು ಇಟ್ಟುಕೊಂಡು ಎಲ್ಲ ದೀಪದ ಕಂಬಗಳ ಹತ್ತಿರ ಹೋಗಿ ದೀಪಕ್ಕೆ ಎಣ್ಣೆ ಹಾಕಿ ಬುರುಡೆಯ ಮಸಿ ತೆಗೆಯುವುದು, ದೀಪ ಹಚ್ಚುವುದು, ಮುಂದಿನ ಕಂಬಕ್ಕೆ ಹೋಗುವುದು. ನಮ್ಮ ಎದುರು ಒಂದು ದೀಪದ ಕಂಬ ಇತ್ತು. ಇದೇ ನನಗೆ ಪ್ರೇರಣೆ! ದಿನವೂ ಕಾಳೆರಾಮನ ಜೊತೆ ಐದಾರು ಕಂಬಗಳ ಕೆಲಸ ಆಗುವವರೆಗೂ ಅವನೊಟ್ಟಿಗಿರುತ್ತಿದ್ದೆ.ಈ ಬಯಕೆ ನಾನು ಹೈಸ್ಕೂಲ್ ಶಿಕ್ಷಕನಾದ ಮೇಲೆ ಈಡೇರಿತು! ಅದೂ ರಾಜ್ಯದ ರಾಜಧಾನಿಯಲ್ಲಿ. lamp post ನಾಟಕದಲ್ಲಿ ನನ್ನದು ದೀಪ ಸ್ವಚ್ಛಗೊಳಿಸಿ ಬೆಳಗುವ ಕೆಲಸ.
ಹಪ್ಪಳದ ಬಗ್ಗೆ ಈಗಲೇ ಹೇಳಿ ಮುಗಿಸುವೆ. ನಾವು ಶಾಲೆಗೆ ಹೋಗಿ ಬಂದ ಮೇಲೆ (ಏಳರಿಂದ ಹನ್ನೆರಡು ವರ್ಷದ ವರೆಗೆ) ಬಾಯಿ ಬೇಡಿ ಅಂದರೆ ತಿನ್ನಲು ಹಪ್ಪಳ ಕೊಡುತ್ತಿದ್ದರು.ಭಾನುವಾರವೂ ಬಾಯಿ ಬೇಡಿಗೆ ರಜ ಇಲ್ಲ. ಒಂದು ದಿನ ನನ್ನ ತಪ್ಪೋ, ಅಬ್ಬೆ ತಪ್ಪೋ ಗೊತ್ತಿಲ್ಲ – ನನಗೆ ಹಪ್ಪಳ ಸಿಗಲಿಲ್ಲ. ಸಂಜೆ ಬೇರೆ. ಊಟ,ಓದು ಯಾವುದೂ ತಪ್ಪಲಿಲ್ಲ. ಆದರೆ ರಾತ್ರಿಯಾಗುತ್ತಿದ್ದಂತೆ ಹಪ್ಪಳ ತಪ್ಪಿದ್ದು ನೆನಪಾಯಿತು. ಎಚ್ಚರ ಆದಾಗಲೆಲ್ಲಾ ‘ಅಬೇ ಹಪ್ಪಳ’ ಎನ್ನುತ್ತಿದ್ದೆನಂತೆ. ಪನ್ನಿ ತಾತಿಗೆ ಈ ವಿಷಯ ಹೇಳಿದೆ. ಪುನಃ ‘ಅಬೇ ಹಪ್ಪಳ’. ಅವಳಿಗೆ ಕರಕರೆ ಅನ್ನಿಸಿತು. ” ಈ ಸುಟ್ಟ ಮಾಣಿ ಹಪ್ಪಳ ಸುಟ್ಟಕೊಟ್ಟಂತೂ ಮನಿಕತ್ನಿಲ್ಲೆ. ಎರಡು ಹಪ್ಪಳ ಕೊಡು.”ಅಬ್ಬೆ ಕೊಟ್ಟಳು.ಕರಾರು ಏನೆಂದರೆ ಈಗ ಕೈಯಲ್ಲಿ ಹಿಡಿದುಕೊಳ್ಳುವುದು.ಬೆಳಿಗ್ಗೆ ಸುಟ್ಟುಕೊಡುವುದು. ಹೂಂ ಎಂದೆ. ರಾತ್ರಿಯಿಡೀ ಕೈಯಲ್ಲಿ ಹಿಡಿದಿಟ್ಟುಕೊಂಡು ಬೆಳಿಗ್ಗೆ ಬಚ್ಚಲೊಲೆಯಲ್ಲಿ ಸುಟ್ಟುಕೊಂಡು ತಿಂದೆನಂತೆ. ನನ್ನ ದೊಡ್ಡಣ್ಣ ಹೇಳಿದ್ದು. “ಅಬೇ, ರಾತ್ರಿ ನೀನು ಹಪ್ಪಳ ಕೊಡದಿದ್ದರೆ ಇಷ್ಟು ಹೊತ್ತಿಗೆ ಅವನಿಗೆ ಎಚ್ಚರ ಅಲ್ಲ! ಎಚ್ಚರ ತಪ್ಪುತ್ತಿತ್ತು!! ಆ ಮೇಲೆ ಬಾರೀನೂ (ಪೂಜೆ) ಮಾಡುತ್ತಿರಲಿಲ್ಲ.”
ದೇವರ ಬಾರಿ ಅಂದರೆ ಮನೆದೇವರ ಪೂಜೆ. ಉಪನಯನ ಆದವರು ಸರತಿಯಂತೆ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನಕ್ಕೆ ದಿನವೂ ಪೂಜೆಗೆ ಹೋಗುವುದು ಉಪನಯನವಾದ ಎಲ್ಲರಿಗೂ ಕಡ್ಡಾಯ. ಯಾರದು ಮನೆ ಪೂಜೆ ಬಾರಿಯೋ, ಅವರಿಗೆ ಮೊದಲು ಸ್ನಾನ. ನಮಗೆ ನಾವೇ ಹೆಸರಿಟ್ಟುಕೊಂಡಿದ್ದೆವು: ಹಿರೇಭಟ್ಟರು, ಅಡಿಗಳು, ಉಪಾಧ್ಯರು ಎಂದು. ಇವು ಮೂರೂ ಗೋಕರ್ಣದ ಪ್ರಸಿದ್ಧ ವೈದಿಕ ಮನೆತನಗಳು. ನಮ್ಮ ಮನೆ ಮಟ್ಟಿಗೆ ಹಿರೇ ಭಟ್ಟರು ಎಂದರೆ ನಮ್ಮ ಹಿರಿ ಅಣ್ಣ, ಶಿವರಾಮ. ‘ಅಡಿಗಳು’ – ಅಡಿಗಡಿಗೂ ಸಿಟ್ಟು ಮಾಡುತ್ತಿದ್ದ ಗಜಣ್ಣ. ‘ಉಪಾಧ್ಯರು’- ವಿಘ್ನೇಶ್ವರ ಉಪಾಧ್ಯರ ಗಳಸ್ಯಕಂಠಸ್ಯ ನಾನು. ಪೂಜೆ ತಪ್ಪದೇ ಮಾಡುತ್ತಿದೆವು. ನಂತರ ಗಂಜಿ ಊಟ. (ಹಾಲು, ತುಪ್ಪ, ಉಪ್ಪು. ಒಮ್ಮೊಮ್ಮೆ ಕಾಯಿಚೂರು). ಬಳಿಕ ಶಾಲೆಗೆ. ಲಕ್ಷ್ಮೀನಾರಾಯಣ (ಅಕ್ಕಿ ಮಾಣಿ), ಜಯರಾಮ (ದೊಳ್ಳೊಟ್ಟೆ), ನರಸಿಂಹ (ಅಚ್ಚುಮ) ಕೆಳಗಿನ ಶಾಲೆಗೆ ಒಟ್ಟು ಆರು, ಶಾಲೆಗೆ ಹಾರು! ಅಬ್ಬೆಗೆ ಬೇಜಾರು! ಪನ್ನಿ ತಾತಿ ಬಟ್ಟೆ ಒಟ್ಟು ಮಾಡಿ ಕೋಟಿತೀರ್ಥಕ್ಕೆ ಪಾರು! ಸಂಜೆ ಐದಕ್ಕೆ ಅವಳ ದರ್ಶನ. ನಂತರ ಶಾಲೆಯಿಂದ ಮಕ್ಕಳ ಆಗಮನ. ಅಬ್ಬೆಗೆ ಬಿನ್ನಗಿದ್ದ ಮನೆಗೆ ಜೀವ ಬಂತು ಎಂಬ ಆನಂದ. ‘ಮಾತೃ ಹೃದಯಂ ನ ಪಶ್ಯತಿ’! ಅಬ್ಬೆಯ ಕೊನ್ನುಗುಲೂ ನಪಶ್ಯತಿ!
ಹೆಡ್ ಮಾಸ್ಟರ್ ರಾಮರಾವ್ ದಾಂಡೇಲಿಗೆ ಜನತಾ ವಿದ್ಯಾಲಯಕ್ಕೆ ಹೆಡ್ ಮಾಸ್ಟರ್ ಆಗಿ ಹೋದರು. ನಮಗೆ ಹೆಡ್ ಮಾಸ್ಟರ್ ಜಾಗ ಖಾಲಿ. ಧಾರವಾಡದಿಂದ ಎನ್.ಜಿ.ಗುಡಿ ಎಂಬುವರು ಹೆ.ಮಾ.ಆಗಿ ಬಂದರು. ಶ್ರೀ ರಾಮರಾಯರ ಅವಧಿಯಲ್ಲೇ ನಮಗೆ ಎಸ್.ಎಸ್.ಎಲ್.ಸಿ . ಪರೀಕ್ಷಾ ಕೇಂದ್ರ ಮಂಜೂರು ಆಗಿತ್ತು. ಈ ವರ್ಷ ಶ್ರೀ ಗುಡಿ ಚೀಫ್ ಕಂಡಕ್ಟರ್ ಆಗಬೇಕಿತ್ತು. ಆದರೆ ಏಕೋ, ಏನೋ-ನನ್ನನ್ನೇ ಚೀಫ್ ಕಂಡಕ್ಟರ್ ಮಾಡಿದರು. ನಮ್ಮ ಕೇಂದ್ರದಲ್ಲಿ ನಮ್ಮ ಶಾಲೆಯಲ್ಲದೆ ಆನಂದಾಶ್ರಮ ಶಾಲೆ, ಬಂಕಿಕೊಡ್ಲ, ನಿತ್ಯಾನಂದ ಪ್ರೌಢಶಾಲೆ ಸಾಣೆಕಟ್ಟಾ ಮತ್ತು ಸೆಕಂಡರಿ ಹೈಸ್ಕೂಲ್ ಹಿರೇಗುತ್ತಿ – ಒಟ್ಟು ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಬೇಕಿತ್ತು. ಶ್ರೀ ಹಿರೇಗಂಗೆಯವರ ಸಹಾಯದೊಂದಿಗೆ ಎಸ್.ಎಸ್.ಎಲ್.ಸಿ . ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು. ಶ್ರೀ ಗುಡಿಯವರು ತಾವು ರಾಜೀನಾಮೆ ಕೊಡುವುದಾಗಿ ಹೇಳಿ ಕೊಟ್ಟರು. ಇದು ಮೂರು ಹೆಡ್ ಮಾಸ್ಟರರ ಸೃಷ್ಟಿಗೆ ಕಾರಣವಾಯಿತು. ಒಬ್ಬರು ಹೆಡ್ ಮಾಸ್ಟರ್ ಬೇಕೆಂದಾಗಲೇ ಸಮಸ್ಯೆ ಇತ್ತು. ಈಗ ಮೂವರು! ಸಮಸ್ಯೆ ಪರಿಹಾರ – ಅರ್ಚಕರು (ಭಟ್ಟರು), ದೇವಾಲಯ (ಗುಡಿ)ಮತ್ತು ಮೂರ್ತಿ (ದೇವರ ಮೂರ್ತಿ) ಬೇರೆ ಬೇರೆಯಾಗಿ ಸೃಷ್ಟಿ ಆದರು. ಮೂರೂರಿಗೆ ದೇವರಗುಡಿ, ಹಿರೇಗುತ್ತಿಗೆ ಅರ್ಚಕ ಭಟ್ಟರು, ಗೋಕರ್ಣಕ್ಕೆ ಮೂರ್ತಿ (ಚಿದಂಬರ ಮೂರ್ತಿ) ಹೀಗೆ ಒಮ್ಮೆಲೇ ಮೂವರು ಹೆ.ಮಾ.ರು ಜೂನ್ ೧,೨,೩ಕ್ಕೆ ಪದಗ್ರಹಣ ಮಾಡಿದರು. (ಪ್ರಾಣಪ್ರತಿಷ್ಠೆ ಆಯಿತು). ಯಾರ, ಯಾವ ಪ್ರತಿಷ್ಠೆಯೂ ಅಡ್ಡಿ ಬರಲಿಲ್ಲ. ಈ ಮೂವರೂ ಮಧುರ ಬಾಂಧವ್ಯದಿಂದ ತಮ್ಮ ಪೂರ್ಣಾವಧಿಯನ್ನು ಅಲ್ಲಲ್ಲೇ ಮುಗಿಸಿದರು.
ನನಗೆ ಹಿರೇತನವನ್ನು ಕೊಟ್ಟು ಎತ್ತಿದ ತಾಯಿ ಹಿರೇಗುತ್ತಿ. ನನ್ನನ್ನು ಹೆತ್ತ ತಾಯಿ ಸುಬ್ಬಮ್ಮ. ಹೊತ್ತ ತಾಯಿ ಗೋಕರ್ಣ. ನನ್ನನ್ನು ಸಮಾಜದಲ್ಲಿ ಕೈಹಿಡಿದು ಎತ್ತಿದ ತಾಯಿ ಹಿರೇಗುತ್ತಿ. ದಿಗಂಬರನಾದ ನನ್ನ ಮಾನ ಮುಚ್ಚಿ ಆಡಲು, ಓಡಲು ಓದಲು ಕಲಿಸಿದ ತಾಯಿ ಅಬ್ಬೆ. ನನಗೆ ಅಕ್ಷರಾಭ್ಯಾಸವನ್ನು ಕೊಟ್ಟು ಅಜ್ಞನಾದ ನನ್ನನ್ನು ಸುಜ್ಞನನ್ನಾಗಿ ಮಾಡಿ ನಿನ್ನ ಧೀಶಕ್ತಿಯಿಂದ ನೀನು ಬೆಳೆ ಎಂದು ಆಶೀರ್ವದಿಸಿದವಳು ಗೋಕರ್ಣ ಮಾತೆ. ನನ್ನ ಏಳು ಬೀಳುಗಳನ್ನು ನೋಡಿ ನಲಿಯುತ್ತಾ, ಅಳುತ್ತಾ ನುಗ್ಗಿ ನಡೆ ನುಗ್ಗಿ ನಡೆ ಎಂದು ಬೆನ್ನೆಲುಬಾಗಿ ನಿಂತ ಈ ತಾಯಿಯರು, ನನಗೆ ಮೂರನೇ ಮರು ಹುಟ್ಟು ಕೊಟ್ಟು ಹಿರೇಗುತ್ತಿ ತಾಯಿಯನ್ನು ಕೊಟ್ಟರು. ಈ ಮೂರು ಐದೆಯರು ಐದು ಐದೆಯರಂತೆ ಕಾಪಾಡುತ್ತಿದ್ದಾರೆ. ಯಾರಿಗೂ ಇಲ್ಲದ ನನ್ನ ಭಾಗ್ಯ ಹಿರೇಗುತ್ತಿ ತಾಯಿಯ ಆಸರೆ – ಹೆಡ್ ಮಾಸ್ಟರ್ ಆಗಿಯೇ. ಈಶ್ವರ ದೇವಾಲಯದ ಚಂದ್ರಪೌಳಿಯಲ್ಲಿ ಶಾಲೆ. ವಾರ್ಷಿಕ ತಪಾಸಣೆಗೆ ಬಂದ ಡಿ.ಡಿ.ಪಿ.ಐ. ಕಲಾದಗಿಯವರು ಶಾಲೆಯ ಸ್ಥಿತಿ ನೋಡಿ ಅಸಮಾಧಾನಗೊಂಡರು. ನಮ್ಮ ಗ್ರಹಚಾರಕ್ಕೆ ಮಳೆಯೂ ಬರುತ್ತಿತ್ತು. ಅವರ ಮೂಗಿನ ಮೇಲೆ ಮಳೆ ನೀರ ಹನಿ ಬಿತ್ತು! ಕಲಾದಗಿಯವರು ಕೆಂಡಾಮಂಡಲವಾದರು. ಇನ್‌ಸ್ಪೆಕ್ಷನ್ ಆದ ಮೇಲೆ ಹೆಡ್ ಮಾಸ್ಟರು, ಮ್ಯಾನೇಜರ್, ಹೊಸಬಣ್ಣ ನಾಯಕರು ಬಂಕಿಕೊಡ್ಲ ಹೈಸ್ಕೂಲಿಗೆ ಸಾಯಂಕಾಲ ನಾಲ್ಕಕ್ಕೆ ಬರಲು ಹೇಳಿದರು. ಹೊರಡಲು ಕಾಲೇಳದು. ಆ ವೇಳೆಗೆ ಬಸ್ಸಿಲ್ಲ. ಒಳ ರಸ್ತೆಯಲ್ಲಿ ಹೋದೆವು. ಬಹಳ ಉಪಯುಕ್ತವಾದ ಸಲಹೆ ಕೊಟ್ಟರು. ನನ್ನ ಹತ್ತಿರ ‘ನೀವೂ ಬರುವ ವರ್ಷ ಹೋಗುವವರೋ? ಹಾಗೆ ಮಾಡಬೇಡಿ’ ಎಂದರು. “ಬದುಕಿದೆಯಾ ಬಡಜೀವ” ಎಂದುಕೊಂಡೆ. ಬಂಕಿಕೊಡ್ಲದಿಂದ ಹಿರೇಗುತ್ತಿಗೆ ಹೋಗಲಿಲ್ಲ, ಮನೆಗೆ ಹೋದೆ. ಏನೂ ಆಗದವರಂತೆ ಇದ್ದೆ.
ಹೊಸಬಣ್ಣ ಲಿಂಗಣ್ಣ ನಾಯಕರು ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಚೆಅರಮನ್‌ರು. ಹಿರೇಗುತ್ತಿಗೆ ಶಿಕ್ಷಣ ಕ್ಷೇತ್ರದ ನಕಾಶೆಯಲ್ಲಿ ಒಂದು ಸ್ಥಾನವನ್ನು, ಹೊಸದೊಂದು ಬಣ್ಣವನ್ನು ಕೊಟ್ಟವರು ಶ್ರೀಯುತರು. ಅಂಬೆಗಾಲು ನಡಿಗೆಯಿಂದ ಸರಿಯಾದ ನಡಿಗೆವರೆಗೆ ಕರೆತಂದವರು ಅವರು. ಊರಿನವರ ಸಹಕಾರದಿಂದ ಸಾರಥ್ಯ ಇವರದೇ. ಪ್ರತಿವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಸೂಚನೆ ಇರುತ್ತಿತ್ತು: “ಪದವೀಧರ ಹೆಡ್ ಮಾಸ್ಟರ್ ಬೇಕು, ಇಲ್ಲವಾದರೆ ಮನ್ನಣೆ ರದ್ದು ಮಾಡುತ್ತೇವೆ.” ಶ್ರೀ ಹೊಸಬಣ್ಣ ನಾಯಕರು ಗೋಕರ್ಣದ ನಮ್ಮ ಮನೆಗೆ ಬಂದು “ನೀವು ಬರಲೇಬೇಕು, ನಿಮಗೆ ಅನುಕೂಲ ಮಾಡಿಕೊಡುತ್ತೇವೆ” ಎಂದು ಒತ್ತಾಯಿಸಿದರು. ಆ ಸಂದರ್ಭದಲ್ಲಿ ನಾನು ಹ್ಞೂಂ ಎಂದೆ. ಅವರಿಗೆ ಹೆ.ಮಾ. ಬೇಕು,ನನಗೂ ಹೆ.ಮಾ. ಬೇಕು. ಏನೇ ಇರಲಿ, ಒಂದು ವರ್ಷ ‘ಲೆಂಟ್’ ಆಗಿ ಹೋದೆ. ಅಲ್ಲೇ ಇಪ್ಪತ್ತೇಳು ವರ್ಷ ಉಳಿದೆ. ಈ ಉಳಿಕೆಯೇ ನನ್ನ ಗಳಿಕೆ. ಈ ವರೆಗೆ ಬೇರೆಲ್ಲೂ ಇಷ್ಟು ಕಾಲ ಉಳಿಯಲಿಲ್ಲ. ಈ ವರ್ಷಗಳೇ ನನ್ನ ಜೀವನದಲ್ಲಿ ಉಳಿದದ್ದು.
ಶ್ರೀ ಹೊಸಬಣ್ಣ ನಾಯಕರು ಸುಮ್ಮನೆ ಕೂಡ್ರುವಂತಿಲ್ಲ ಅಂದೇ ಬೆಳಿಗ್ಗೆ ಆಪದ್ಬಾಂಧವ ಶ್ರೀ ಆರ್.ಬಿ.ನಾಯಕ ವಕೀಲರಲ್ಲಿ ಹೋಗಿ ಸಂಕಷ್ಟ ವಿವರಿಸಿದರು. ಅವರು “ನಾಳೆ ಸಂಜೆ ಬರುತ್ತೇನೆ, ಊರಿನ ಪ್ರಮುಖರಿಗೆ ಹೇಳಿ” ಎಂದರು. ಸರಿ, ಬಂದರು, ಸಭೆ ನಡೆಸಿದರು, ಶಾಲೆ ಕಟ್ಟಲು ತೀರ್ಮಾನಿಸಿದರು. (ಅದು ಶ್ರೀ ಆರ್.ಬಿ.ನಾಯಕರ ಕರ್ತೃತ್ವ, ವ್ಯಕ್ತಿತ್ವ) . ಹಣ ಕೂಡಿಸಲು ಆರಂಭ. ಗೋಕರ್ಣ ಅರ್ಬನ್ ಬ್ಯಾಂಕಿನಿಂದ ಸಾಲ ಪಡೆದರು. ಶುಭ ಮುಹೂರ್ತದಲ್ಲಿ ಶ್ರೀ ಬೀರಣ್ಣಜ್ಜನವರಿಂದ (ಶ್ರೀ ಆರ್.ಬಿ.ನಾಯಕರ ತಂದೆ) ಕೋನ ಶಿಲಾ ಸ್ಥಾಪನೆ ಆಯಿತು, ೧೦ ಅಕ್ಟೊಬರ್ ೧೯೬೨. ಮುಂದೆ ಜುಲೈ ೧೯೬೩ಕ್ಕೆ ನೂತನ ಶಾಲೆ ಪ್ರಾರಂಭವಾಯಿತು. ಆ ವರ್ಷ ಇನ್‌ಸ್ಪೆಕ್ಷನ್‌ಗೆ ಶ್ರೀ ಗುರಾಣಿಯವರು ಬಂದಿದ್ದರು. ಅವರು ಹೇಳಿದರು “ಶ್ರೀ ಆರ್.ಬಿ.ನಾಯಕರಿಗೆ ಹೇಳಿರಿ,ನೀವು ಕಟ್ಟಿದ್ದು ಬರೀ ಶಾಲೆಯ ಕಟ್ಟಡ ಅಲ್ಲ, ದೇವಾಲಯ”. ನಾನೆಂದುಕೊಂಡೆ, ಸರಿ, ಭಟ್ಟರಿಗೊಂದು ದೇವಾಲಯ ಸಿಕ್ಕಿತು! ಗುರಾಣಿಯವರು ನನಗೆ ಹೆ.ಮಾ. ಆಗಿ ಕೆಲಸ ಮುಂದುವರಿಸಿಕೊಂಡು ಹೋಗಲು ಪ್ರೋತ್ಸಾಹಿಸಿದರು. ಮಾರನೇ ವರ್ಷವೂ ಅವರೇ ತಪಾಸಣೆಗೆ ಬಂದಿದ್ದರು.
ಶಾಲೆಯ ನೆಲ, ಜಲ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಇರುವ ಜಾಗ. ಪ್ರತಿ ಇಂಚಿಗೂ ಮಹತ್ವವಿದೆ. ಇಂಥ ಎರಡು ಎಕರೆ ಜಮೀನನ್ನು ಶ್ರೀಮತಿ ನಾಗಮ್ಮ ನಾರಾಯಣ ನಾಯಕ, ಕೆಂಚನ್ ಶಾಲೆಗೆ ದಾನವಾಗಿ ಕೊಟ್ಟರು. ಈ ದಾನ ಬರೀ ಭೂದಾನ ಅಲ್ಲ, ವಿದ್ಯಾದಾನ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ, ಕುಮಟಾ, ಬಂಕಿಕೊಡ್ಲ, ಗೋಕರ್ಣಕ್ಕೆ ಹೋಗಲಾರದವರಿಗೆ ವರದಾನವಾಯಿತು ಇಂದಿಗೆ ಸಹಸ್ರಾರು ಕುಟುಂಬಗಳು ನೆಮ್ಮದಿಯಿಂದ ಇದ್ದರೆ ಅದರ ಶ್ರೇಯಸ್ಸು ಓದಿದ, ಓದುತ್ತಿರುವ ಮಕ್ಕಳ ಮಹಾತಾಯಿ ನಾಗಮ್ಮ ಅವರದು. ಇವರ ಹಿಂದೆ ಶ್ರೀ ನಾರಾಯಣ ನಾಯಕರು, ಮಾವ ಬೀರಜ್ಜಣ್ಣ, ಭಾವ ಶ್ರೀ ಆರ್.ಬಿ.ನಾಯಕರು ಇವರೆಲ್ಲರ ಪ್ರೇರಣೆ.ಜಲ: ಪಕ್ಕದ ಗೋಕರ್ಣದ ರಾಮ ಪೈರ ಜಮೀನನ್ನು ಆಟದ ಮೈದಾನವಾಗಿ ಪಡೆದು ಅಲ್ಲಿ. ಊರಿನ ಪಂಚಾಯತ, ತಾಲೂಕು ಪಂಚಾಯತ ಇವರ ಸಹಾಯ. ಬಲ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು.ಅಂದಿಗೂ, ಇಂದಿಗೂ ಉಕ್ಕಿನ ಬಲ. ಶಾಲಾ ಕಾಂಪೌಂಡ್, ಬಯಲು ನಾಟಕ ಮಂದಿರ, ಇಂದಿನ ಊಟದ ವ್ಯವಸ್ಥೆ… ಒಂದೇ ಎರಡೇ? ಅಭೇದ್ಯವಾದ ಈ ಬಲಗಳೊಂದಿಗೆ ಸಬಲವಾಗಿ ಬೆಳಗಲಿ, ಬೆಳೆಯುತ್ತಿರಲಿ. ನಾ ಕಂಡಂತೆ ನನ್ನ ಮೊದಲ ಚೇಅರಮನ್ ಶ್ರೀ ಹೊಸಬಣ್ಣ ಲಿಂಗಣ್ಣ ನಾಯ್ಕ ಕೊಂಯನ್ ಒಂದು ಪೂರ್ಣ ದರ್ಜೆಯ ಹೈಸ್ಕೂಲನ್ನು ಒಂದು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಅಡೆ ತಡೆಗಳ ಮಧ್ಯದಲ್ಲೂ ಕಟ್ಟಿ ನಿಲ್ಲಿಸಿದ ಮಹಾನ್ ಶಕ್ತಿಯ ಧೀಮಂತ ವ್ಯಕ್ತಿ. ಬಿಲ್ಡಿಂಗ್ ಇಲ್ಲ, ಸ್ಟಾಫ್ ಇಲ್ಲ, ಸಲಕರಣೆಗಳಿಲ್ಲ, ಇದ್ದದ್ದು ಊರಿಗೆ ಒಂದು ಹೈಸ್ಕೂಲು ಬೇಕು. ಮಕ್ಕಳ ಮಾಧ್ಯಮಿಕ ವಿದ್ಯಾಭ್ಯಾಸದ ದಾಹ ನೀಗಬೇಕು. ನಿಮಗೆ ಕೇಳಲು ಆಶ್ಚರ್ಯ. ನನಗೆ ಬರೆಯಲು ಹೆಮ್ಮೆ. ನಾನು ಭದ್ರಕಾಳಿ ಹೈಸ್ಕೂಲಿನ ಶಿಕ್ಷಕ. ಒಬ್ಬ ಮಹಾನ್ ವ್ಯಕ್ತಿ ನಮ್ಮ ಶಾಲೆಗೆ ಬಂದರು. ಅವರಿಗೆ ಪ್ರಯೋಗಾಲಯದ ಕೆಲವು ಉಪಕರಣ, ಪಾದರಸ, ರಂಜಕ ಬೇಕಿತ್ತು. ಮಾರನೇ ದಿನ ಅವರ ಹೈಸ್ಕೂಲಿನ ವಾರ್ಷಿಕ ತಪಾಸಣೆ: ಮೂಲಭೂತ ಸಲಕರಣೆಗಳೇ ಇಲ್ಲ. ನಮ್ಮ ಶಾಲೆಯ (ಅಂದರೆ ಗೋಕರ್ಣದ) ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಇವನ್ನು ಒಯ್ದರು. ಒಂದು ಹೈಸ್ಕೂಲಿಗಾಗಿ ಈ ವ್ಯಕ್ತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾಲೆಗೆ ಕ್ಲರ್ಕ್ ಇಲ್ಲ. ಸಂಘದ ವೈಸ್ ಚೇಅರಮನ್ ನಾರಾಯಣ ನಾಯಕರ ಮಗ ಮಾಧವನನ್ನು ಒಂದು ದಿನದ ಮಟ್ಟಿಗೆ ಕ್ಲರ್ಕ್ ಆಗಿ ತಂದ ಸಾಹಸಿ! ಮುಂದೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಸರಿತೂಗಿಸಿದ ಶ್ರೀ ಹೊಸಬಣ್ಣ ಊರಿಗೆ ವರದಾನ.ಶಾಲೆಯ ಸಿಬ್ಬಂದಿ ವರ್ಗಕ್ಕಾಗಿ ಪಟ್ಟ ಶ್ರಮ, ಅವರಿಗೆ ಆಗ ಸಂಬಳ ವಿತರಣೆಗಾಗಿ ಹಣ ಹೊಂದಿಸಿದ ರೀತಿ ಅವರಿಗೇ ಗೊತ್ತು. ತಕ್ಕ ಮಟ್ಟಿಗೆ ನನಗೂ ಗೊತ್ತು. ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರಿಂದ ಸಾಲ ಪಡೆದದ್ದು, ಗ್ರಾಂಟ್ ಬಂದ ಮೇಲೆ ನಿಬಡ್ಡಿಯಿಂದ ಹಿಂತಿರುಗಿಸಿದ್ದು, ಇವಕ್ಕೆಲ್ಲಾ ಊರಿನವರ ಸಹಾಯ, ಸಹಕಾರ ಪಡೆದದ್ದು ಶ್ರೀಯುತರ ಕರ್ತೃತ್ವ ಶಕ್ತಿಯ ಮಹಾನ್ ದ್ಯೋತಕ. ಮನೆಯ ಜಮೀನಿನ ಸಾಗುವಳಿ (ದೊಡ್ಡ ಹಿಡುವಳಿ), ದೊಡ್ಡ ಸಂಸಾರ, ಮಕ್ಕಳ ವಿದ್ಯಾಭ್ಯಾಸ, ಕಾಲಕಾಲಕ್ಕೆ ನಡೆಯಬೇಕಾದ ಮಂಗಲಕಾರ್ಯಗಳು ಎಲ್ಲ ನಿರ್ವಹಣೆ, ಮೇಲಿಂದ ಶಾಲೆಯ ಸಾರಥ್ಯ, ಹೈಸ್ಕೂಲಿಗೆ ಕಟ್ಟಡ, ಪೂರ್ಣಪ್ರಮಾಣದ ಸಿಬ್ಬಂದಿ. ದೊಡ್ಡ ಪ್ರಮಾಣದ ಗ್ರ್ಯಾಂಟ್ ಬರುವುದನ್ನು ನೋಡಿ ಸಂತಸದಿಂದ ತಮ್ಮ ಚೇಅರಮನ್‌ಶಿಪ್ಪನ್ನು ಶ್ರೀ ಆರ್.ಬಿ. ನಾಯಕರ ಸಲಹೆ ಪಡೆದು ಶ್ರೀ ವೆಂಕಣ್ಣ ಕೃಷ್ಣ ನಾಯಕರಿಗೆ ವಹಿಸಿಕೊಟ್ಟರು. ಸದ್ದಿಲ್ಲದ, ಗದ್ದಲವಿಲ್ಲದ, ನಿಸ್ವಾರ್ಥ ಸೇವೆಗೆ ಮೂರ್ತ ಸ್ವರೂಪರಾದರು, ‘ಸ್ವಯಮೇವ ಮೃಗೇಂದ್ರ’ರೆಂಬ ಮಾತು ಇಂಥವರಿಗೆ ಭೂಷಣ. ಸಿಂಹಕ್ಕೆ ಕಿರೀಟವೇ! ಆನೆಗೆ ಅಲಂಕಾರವೇ!
ವೆಂಕಣ್ಣ ಕೃಷ್ಣ ನಾಯಕ ಗಾಂವಕರ: ನನ್ನ ಸೇವಾ ಅವಧಿಯಲ್ಲಿ ಎರಡನೇ ಚೇಅರಮನ್. ಒಬ್ಬ ಪರಿಪೂರ್ಣ ಸಭ್ಯಗೃಹಸ್ಥರು. ಹಸನ್ಮುಖಿ. ಇವರು ಅಧಿಕಾರ ವಹಿಸಿಕೊಳ್ಳುವಾಗ ಕಟ್ಟಡಕ್ಕೆ ಮಾಡಿದ ಸಾಲದ ಹೊರೆ ಇತ್ತು. ಈ ಹೊಣೆ ನೆರೆಹೊರೆಯವರಿತ್ತ ಸಾರ್ಥಕ ಸಹಾಯದಿಂದ ತೀರ್ಮಾನವಾಯ್ತು. ಅಷ್ಟೇ ಅಲ್ಲ ಪುನಃ ಶಾಲೆಯ ಕಟ್ಟಡದ ವಿಸ್ತರಣೆಯ ಕಾರ್ಯ ಕೈಗೊಂಡರು. ಇವರ ಕಾಲದಲ್ಲೇ ನಮ್ಮ ಆಟದ ಮೈದಾನಕ್ಕೆ ಕಾಂಪೌಂಡ್ ಆಯಿತು. ಈ ಕಾರ್ಯಕ್ಕೆ ಶ್ರೀ ಗೋವಿಂದ್ರಾಯ ಸಣ್ಣಪ್ಪ ನಾಯಕ ಹೆಚ್ಚಿನ ಶ್ರಮ ವಹಿಸಿದರು. ಶ್ರೀಯುತರು ನಮ್ಮ ಮ.ಗಾಂ.ವಿ.ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ನಮ್ಮ ಶಾಲಾ ಆಟದ ಮೈದಾನ ಸುಂದರವಾಗಿ ಮೈತಳೆದು ತಾಲೂಕಾ ಮಟ್ಟದ ಆಟದ ಕೂಟವನ್ನು ಹಿರೇಗುತ್ತಿ ಗ್ರಾಮಾಂತರದಲ್ಲಿ ಯಶಸ್ವಿಯಾಗಿ ನಡೆಸುವಂತಾಯಿತು. ಶ್ರೀ ವೆಂಕಣ್ಣ ನಾಯ್ಕ ಗಾಂವಕರರು ಶಾಲೆಯ ಅಧ್ವೈರ್ಯವನ್ನು ವಹಿಸಿ ಕೈಂಕರ್ಯವನ್ನು ಸಮರ್ಥವಾಗಿ ನಡೆಸಿದರು. ಇದಕ್ಕೆ ಅವರಿತ್ತ ವಿಸ್ತರಣೆಯೇ ಸಾಕ್ಷಿ.
ನನ್ನ ಮೂರನೆಯ ಚೆಅರಮನ್ ಶ್ರೀ ಲಕ್ಷ್ಮೀಧರ ಹೊನ್ನಪ್ಪ ಕೆರೆಮನೆ. ಬಹು ಸಣ್ಣ ವಯಸ್ಸಿನಲ್ಲೇ ಬಹು ದೊಡ್ಡ ಕಾರುಭಾರು ವಹಿಸಿಕೊಂಡ ಚೇತನ ಇವರದು. ಶಾಲೆಗೆ ಆರ್ಥಿಕ ಸ್ಥಿರತೆಯನ್ನು ವಹಿಸಲು ಗೋಕರ್ಣದಲ್ಲಿ ಶಿವರಾತ್ರಿಯಲ್ಲಿ ಬೆನಿಫಿಟ್ ಶೋ ವಹಿಸಿಕೊಂಡು ವಿಜಯಿ ಆದರು. ಊರಿನ ಉದ್ಯಮಿ ಆರ್.ಎನ್.ನಾಯಕರನ್ನು ಭೇಟಿಮಾಡಿ ಶಾಲೆಗೆ ಅಗತ್ಯ ಇರುವ ನಾಲ್ಕು ಭದ್ರವಾದ ಕೊಠಡಿಗಳನ್ನು ಕಟ್ಟಿಸಿದರು. ಬಹು ದೊಡ್ಡ ಅವಧಿಯ ಚೆಅರಮನ್‌ರಾಗಿ ಸಮರ್ಥರೆನಿಸಿದರು. ಇವರ ಕಾಲದಲ್ಲಿ ಹೆಚ್ಚಿನ ಶಿಕ್ಷಕರು ನೇಮಕಗೊಂಡರು.
ನನ್ನ ಸಹೋದ್ಯೋಗಿಗಳು: ನಾನು ಅಲ್ಲಿಗೆ ಹೋದಾಗ ನನ್ನ ಮೊದಲ ಸಹೋದ್ಯೋಗಿ ಶ್ರೀ ಹೊನ್ನಪ್ಪಯ್ಯ ಲಕ್ಷ್ಮಣ ನಾಯಕ. ನಮ್ಮ ಶಾಲೆ ಪ್ರಾರಂಭವಾದಂದಿನಿಂದ ಶ್ರೀ ಎಚ್.ಎಲ್.ಎನ್, ಶ್ರೀ ಬಿ.ಯು.ಗಾಂವಕರ ರಾಮಲಕ್ಷ್ಮಣರಂತೆ ಶಾಲೆಯ ಏಳ್ಗೆಗಾಗಿ ಶ್ರಮಿಸಿದರು. ಕಾರಣಾಂತರದಿಂದ ಶ್ರೀ ಬಿ.ಯು.ಗಾಂವಕರ ಕಪೋಲಿಗೆ ಹೋದರು. ಶ್ರೀ ಎಚ್.ಎಲ್.ನಾಯಕರು ಮಾತ್ರ ಹನೇಹಳ್ಳಿ-ಹಿರೇಗುತ್ತಿ ತಪ್ಪಿಸಿದವರಲ್ಲ. ಶಿಕ್ಷಣದ ವಿಷಯದಲ್ಲಿ ಶಿಸ್ತಿನ ಸಿಪಾಯಿ. ದೂರದಿಂದ ಬರುವವರಾದರೂ ಎಂದೂ ತಡವಾಗಿ ಬಂದವರಲ್ಲ. ಇಂಥದೇ ವಿಷಯ ಎಂದಿಲ್ಲ, ಯಾವ ವಿಷಯ ಕೊಟ್ಟರೂ ಅಧ್ಯಯನ ಮಾಡಿ ಮಕ್ಕಳಿಗೆ ಬೋಧನೆ ಮಾಡುವ ಕೌಶಲ್ಯ ಇತ್ತು. ಇಂಗ್ಲಿಷ್, ಇತಿಹಾಸ, ಸಮಾಜ ಶಾಸ್ತ್ರ, ದೈಹಿಕ ಶಿಕ್ಷಣ ಇವರ ನೆಚ್ಚಿನ ವಿಷಯಗಳು.
ಎರಡನೆಯವರು, ಅದ್ವಿತೀಯರು ಶ್ರೀ ಎಂ.ಎನ್.ಭಂಡಾರಿಯವರು. ತುಂಬಾ ಸಹಕಾರಿ. ಅವರ ವಿಷಯದಲ್ಲಿ ಕುಂದಿಲ್ಲದೇ ಪಾಠ ಮಾಡುತ್ತಿದ್ದರು. ಹೆಗಡೆಯಿಂದ ಬರುವಾಗಲೂ ಸಮಯದ ವಿಷಯದಲ್ಲಿ ಅಚ್ಚುಕಟ್ಟು. ಶಿಕ್ಷಣ ಪದವಿ (ಬಿ.ಎಡ್.) ಪಡೆದು ಮೊದಲು ಅಸಿಸ್ಟೆಂಟ್ ಆದಾಗಿನಿಂದ ಮುಖ್ಯಾಧ್ಯಾಪಕರಾಗುವವರೆಗೂ, ನಂತರವೂ ಶಾಲೆಯ ಏಳ್ಗೆಗಾಗಿ ದುಡಿದವರು. ಕೆಲವೊಮ್ಮೆ ನನಗೆ ಉಪಯುಕ್ತ ಸಲಹೆ ಕೊಡುತ್ತಿದ್ದರು. ಇಬ್ಬರು ವಿಜ್ಞಾನದ ಶಿಕ್ಷಕರು: ಶ್ರೀ ಎಸ್.ಎಸ್.ಕೂರ್ಸೆ ಮತ್ತು ಶ್ರೀ ಎಸ್.ಡಿ.ನಾಯಕ. ಕೆಲಕಾಲ ಸೇವೆ ಸಲ್ಲಿಸಿದರು. ಶ್ರೀ ಜಿ.ಎನ್. ಕೂರ್ಸೆ ಹಿಂದಿ ಪಾರ್ಟ್ ಟೈಂ ಶಿಕ್ಷಕರು.ಆಫೀಸ್ ಸಹಾಯಕ ನಾರಾಯಣ ನಾಗಪ್ಪ ಗುನಗ. ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ. ನಂತರ ಬಂದವರು ಶ್ರೀ ವಾಯ್.ಏ.ಶೇಖ(ಕುಮಟಾ)ದಿಂದ ಹಿಂದಿ ಮತ್ತು ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದರು. ಶ್ರೀ ಎಸ್.ಡಿ.ನಾಯಕರು ಕಾರವಾರದವರು, ಮನೆ ಮಾತು ಕೊಂಕಣಿ. ಕನ್ನಡ ಮಾತಾಡಲು ಪ್ರಯಾಸಪಡುತ್ತಿದ್ದರು. ಅವರದೊಂದು ಹಾಸ್ಯ ಪ್ರಸಂಗ ಹೇಳುತ್ತೇನೆ:
ನನ್ನ ಮಗನಿಗೆ ಶಿವರಾತ್ರಿ ದಿನ ಭೇದಿ ಆಗಿತ್ತು. ಜವಾನ ನಾರಾಯಣ ಶಾಲೆಯಲ್ಲಿ ಹೇಳಿದ: “ಹೆಡ್ ಮಾಸ್ಟರು ಇಂದು ಶಾಲೆಗೆ ಬರುವುದಿಲ್ಲ. ಅವರ ಮಗನಿಗೆ ಹೇಲಾಟ”. ಕೇಳಿದ ಶ್ರೀ ಎಸ್.ಡಿ. ನಾಯಕರು ಕೂರ್ಸೆಯವರ ಬಳಿ ಹೇಳಿದರಂತೆ: “ಅರೆ ಕೂರ್ಸೆ ಮಾಸ್ತರರೇ, ಹೆಡ್ ಮಾಸ್ತರರು ಬಹಳ ಕಂಜೂಸ್ ಅಂತ ಕಾಣ್ತದೆ”. ” ಏಕೆ ಏನಾಯ್ತು?” “ಅಲ್ಲ, ಅವರು ಮಗನಿಗೆ ಶಿವರಾತ್ರಿಯಲ್ಲಿ ಆಟ ತೆಗೆಸಿಕೊಡಲಿಲ್ಲ ಅಂತ ಕಾಣ್ತದೆ. ಅವ ….ನಲ್ಲಿ ಆಟ ಆಡ್ತಾನಂತೆ. ನಾರಾಯಣ ಹೇಳಿದ.” ಕೂರ್ಸೆ ಮಾಸ್ತರು ನಕ್ಕು ಆಮೇಲೆ ಎಸ್.ಡಿ.ನಾಯಕರಿಗೆ ಶಬ್ದದ ಅರ್ಥ ತಿಳಿಸಿ ಹೇಳಿದರು. ಸದ್ಯ, ನಾನು ಕಂಜೂಸ್ ಅಲ್ಲ ಎಂದು ತೀರ್ಮಾನವಾಯಿತು!
ಮೊದಲವರ್ಷದ ಗ್ಯಾದರಿಂಗ್‌ಗೆ ಶ್ರೀ ಗೌರೀಶ ಕಾಯ್ಕಿಣಿಯವರು ಮುಖ್ಯ ಅತಿಥಿಗಳಾಗಿ ಬಂದರು. ಶ್ರೀ ಆರ್.ಬಿ.ನಾಯಕರು ಅಧ್ಯಕ್ಷತೆ ವಹಿಸಿದ್ದರು.ರಾತ್ರಿ ಯಕ್ಷಗಾನ- ವಿದ್ಯಾರ್ಥಿಗಳಿಂದ. “ಲವಕುಶರ ಕಾಳಗ”. ಗೌರೀಶ ಮಾಸ್ತರು ಯಕ್ಷಗಾನ ನೋಡಿದರು. ವಾಲ್ಮೀಕಿ ರಾಮಾಯಣ ಬರೆಯುತ್ತಿದ್ದಾನೆ.ಶಾಹಿ,ದೌತಿ ಉಂಟು. ಕೈಯಲ್ಲಿ ಲೆಕ್ಕಣಿಕೆ ಉಂಟು. ಒಮ್ಮೆಯೂ ದೌತಿಗೆ ಲೇಖನಿ ಅದ್ದಲಿಲ್ಲ. “ಭಟ್ಟ ಮಾಸ್ತರೇ, ವಾಲ್ಮೀಕಿ ಲೇಖನಿ ಅದ್ಭುತ.” ಎಂದರು. “ಯಾಕೆ?” ಎಂದೆ.”ರಾಮಾಯಣ ಮುಗಿದರೂ ಲೇಖನಿ ಶಾಹಿ ಖರ್ಚಾಗಲಿಲ್ಲ, ನೋಡಿ” ಎಂದರು. ನಗೆಯೋ ನಗೆ. ಗ್ಯಾದರಿಂಗ್‌ನಲ್ಲಿ ಪ್ರದರ್ಶನಗೊಂಡ ಮಕ್ಕಳ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಕಾಯ್ಕಿಣಿಯವರು ಮೆಚ್ಚಿಕೊಂಡರು. ‘ಹಳ್ಳಿ ಊರಲ್ಲಿ ಸಂಗೀತ ಸಾಮಗ್ರಿ ಒದಗಿಸಿ ಹಾಡಿದ್ದು ಶ್ಲಾಘನೀಯ.’ ಎಂದರು. ತಬಲಾ ಗೋಕರ್ಣದ ರಾಮಶೆಟ್ಟರು, ಗಿರಿಯನ್ ಗಂಪಿ ಹಾರ್ಮೋನಿಯಂಗೆ.
ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸಹಕಾರ ನೆನೆಯಲೇ ಬೇಕು. ರಂಗ ಸಜ್ಜಿಕೆ ಸಿದ್ಧಮಾಡುವುದರಿಂದ ತೊಡಗಿ ಪ್ರದರ್ಶನ, ಪ್ರೇಕ್ಷಕರ ಸಹಕಾರ ಪ್ರತಿಯೊಂದೂ ಉನ್ನತ ಮಟ್ಟದ್ದಾಗಿತ್ತು.
ರಾಜ್ಯ ಮಟ್ಟದ ಸಾಧನೆ:
ಥಿಯಸಾಫಿಕಲ್ ಸೊಸೈಟಿ,ಬೆಂಗಳೂರು ಇವರು ರಾಜ್ಯಮಟ್ಟದಲ್ಲಿ ಹೈಸ್ಕೂಲು ವಿದ್ಯರ್ಥಿಗಳಿಗೆ ನಿಬಂಧ ಸ್ಪರ್ಧೆ ಏರ್ಪಡಿಸಿದ್ದರು. ನಮ್ಮ ವಿದ್ಯಾರ್ಥಿ ಚಿಂತಾಮಣಿ ಕೊಡ್ಲೆಕೆರೆ (ಹತ್ತನೇ ತರಗತಿಯಲ್ಲಿ ಓದುತ್ತಿದ್ದ) ಬಂಗಾರದ ಪದಕ ಸಮೇತ ಪ್ರಥಮ ಸ್ಥಾನ ಗಳಿಸಿದ್ದು ಹೆಮ್ಮೆಯ ವಿಷಯ. ಆ ವರ್ಷ ಗ್ಯಾದರಿಂಗ್‌ನ ಮುಖ್ಯ ಅತಿಥಿ, ಮಾನ್ಯ ಮಂತ್ರಿ ಶ್ರೀ ಎಸ್.ಎಂ.ಯಾಹ್ಯಾ. ಅವರು ಬಂಗಾರದ ಪದಕ ವಿತರಣೆ ಮಾಡಿದ್ದು ನಮಗೆಲ್ಲಾ ಸಂತೋಷದ ವಿಷಯ. ಕಿರಿಯನ ಸಾಧನೆ ಎಂದು ಮಂತ್ರಿಗಳು ಶ್ಲಾಘಿಸಿದರು. ಶಾಲೆಗೆ ಇಂಥ ಸಾಧನೆ ಬರುತ್ತಿರಲಿ ಎಂದು ಮೆಚ್ಚುಗೆಯ ಮಾತನಾಡಿದರು. ಹೊನ್ನಾವರದ ಶಾಸಕ ಎಸ್.ವಿ.ನಾಯಕರೂ,ವಕೀಲ ಜಾಲಿಸತ್ಗಿಯವರೂ ಬಂದಿದ್ದರು. ಅವರು ಒಮ್ಮೆ ನಮ್ಮ ಶಾಲೆಯ ಬಂಗಾರದ ಪದಕದ ಸಾಧನೆಯನ್ನು ಮೆಚ್ಚಿ ಮಾತನಾಡಿದ್ದುಂಟು.
ಮುಷ್ಠಿ ಫಂಡು
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂತಸ್ತರ ನೆರವಿಗಾಗಿ ಪ್ರತಿ ಮನೆಯಲ್ಲಿ ಬಡವ-ಬಲ್ಲಿದ ಭೇದವಿಲ್ಲದೆ ಪ್ರತಿದಿನ ಅಡುಗೆಗೆಂದು ಪಾತ್ರೆಗೆ ಹಾಕಿದ ಅಕ್ಕಿಯಲ್ಲಿ ಒಂದು ಮುಷ್ಠಿ ಬೇರೆ ತೆಗೆದಿಟ್ಟು ಉಳಿದುದರ ಅನ್ನ ಮಾಡಿ ಉಣ್ಣುತ್ತಿದ್ದರು. ನಮ್ಮ ಹಿರೇಗುತ್ತಿಯಲ್ಲಿ ಆ ಅಕ್ಕಿಯನ್ನು ಮಾರಿ ಬಂದ ಹಣವನ್ನು ಸಂಗ್ರಹಿಸಿ ಮುಷ್ಠಿ ಫಂಡಿನ ಹೆಸರಲ್ಲಿ ಶೇಖರಿಸಿ ಇಡುತ್ತಿದ್ದರು. ನಂತರ ಹಣದ ಅವಶ್ಯಕತೆ ಇಲ್ಲದಾಗಲೂ ಈ ಕಾಯಕ ನಡೆದೇ ಇತ್ತು. ಇದು ಹತ್ತು ಹನ್ನೆರಡು ಸಾವಿರ ರೂಪಾಯಿ ಆಗಿತ್ತು. ಈ ಹಣವನ್ನು ಹೈಸ್ಕೂಲಿನ ಅಗತ್ಯಕ್ಕಾಗಿ ಸಾಲರೂಪದಲ್ಲಿ ಬಳಸಿಕೊಳ್ಳುತ್ತಿದ್ದರು. ಹೀಗಾಗಿ ಒಂದು ರೀತಿಯಲ್ಲಿ ಮುಷ್ಠಿ ಫಂಡಿನ ಹಣವೇ ಮೂಲಧನ ಎಂದರೆ ತಪ್ಪಲ್ಲ. ಹೀಗೆ ನಮ್ಮ ಹೈಸ್ಕೂಲಿನ ಚಾಲಕ ಸಂಸ್ಥೆ ಮಹಾತ್ಮಾ ಗಾಂಧಿ ವಿದ್ಯಾವರ್ಧಕ ಸಂಘ ಎಂದಾಗಿರಬೇಕು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ, ನಮ್ಮ ಶಾಲೆಗೂ ನಿಕಟ ಸಂಬಂಧ ಉಂಟು.
ಶಾಲೆಯ ಬೆಳ್ಳಿ ಹಬ್ಬವನ್ನು ಯೋಗ್ಯ ರೀತಿಯಲ್ಲಿ ಆಚರಿಸಬೇಕು ಎಂದು ನಮ್ಮೆಲ್ಲರಿಗೂ ಅನ್ನಿಸಿತು. ಆಗಲೇ ಆರ್.ಎನ್.ನಾಯಕರು ಸಂಘದ ಅಧ್ಯಕ್ಷರಾಗಿದ್ದರು. ಹುಬ್ಬಳ್ಳಿಯ ಪಾಂಡುರಂಗ ರಂಗಪ್ಪ ಕಾಮತ (ಕಾಮತ್ ಹೋಟಲುಗಳ ಸಮೂಹ) ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ, ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಮುಖ್ಯ ಅತಿಥಿಗಳಾಗಿ ಸಭಾ ಕಾರ್ಯಕ್ರಮ ನಡೆಯಿತು. ನನಗೆ ತಿಳಿದಂತೆ ಇಷ್ಟು ವೈಭವದಿಂದ ಬೆಳ್ಳಿ ಹಬ್ಬ ಆಚರಿಸಿಕೊಂಡ ಶಾಲೆ ಎಂಬ ಶ್ರೇಯಸ್ಸು ನಮ್ಮದೇ. ಈ ಶ್ರೇಯಸ್ಸು ಅಂದಿನ ಚೆಅರಮನ್ ಶ್ರೀ ಎಲ್.ಎಚ್. ಕೆರೆಮನೆ ಮತ್ತು ಉದ್ಯಮಿ, ನಮ್ಮ ಹೈಸ್ಕೂಲ್‌ನ ಚಾಲಕ ಸಂಸ್ಥೆ ಅಧ್ಯಕ್ಷ ಶ್ರೀ ರಾಮಚಂದ್ರ ನಾರಾಯಣ ನಾಯಕ ಅವರದು.
ಮಹಾತ್ಮಾ ಗಾಂಧಿ ಹೆಸರಿನ ಸಂಸ್ಥೆ, ಹಿರೇಗುತ್ತಿಯ ಸಮೀಪದ ಬಳಲೆಯಲ್ಲಿರುವ ಗಾಂಧಿ ಆಶ್ರಮ. ಇದು ಗಡಿನಾಡ ಆಶ್ರಮವೂ ಹೌದು. ಅಂಕೋಲ, ಕುಮಟಾ ತಾಲೂಕಿನ ಗಡಿಯಲ್ಲಿದೆ. ಗಾಂಧಿ ಆಶ್ರಮ ಎಂದು ನಾನು ಹೇಳಿದ್ದು ಗಾಂಧಿಯವರ ನಿಕಟವರ್ತಿಗಳಾಗಿದ್ದ, ಗಾಂಧಿ ಸದೃಶ ವ್ಯಕ್ತಿತ್ವ ಹೊಂದಿದ್ದ ಶ್ರೀ ತಿ.ಶ್ರೀ. ನಾಯಕರ ಆಶ್ರಮದ ಕುರಿತು. ಆಶ್ರಮದಲ್ಲಿ ನೂತ ನೂಲು, ಗುಡಿ ಕೈಗಾರಿಕೆಯ ಸುಲಭ ಸಂಡಾಸದ ಸಾಮಗ್ರಿ ಸಿಗುತ್ತಿತ್ತು. ಒಂದರ ಫಲಾನುಭವಿ ನಾನು. ಇನ್ನೊಂದಕ್ಕೆ ಶ್ರಮಪಟ್ಟು ನಿರಾಶನಾದೆ.
ಸುಲಭ ಸಂಡಾಸಿನ ಸಾಮಗ್ರಿಯನ್ನು ನನ್ನ ಬಿಡಾರಕ್ಕೆ ಕಳಿಸಿಕೊಟ್ಟರು. ಆದರೆ ಒಂದು ಲಡಿ ನೂಲನ್ನು ಕೇಳಿದಾಗ ಧ್ಯೇಯವಾದಿ ತಿ.ಶ್ರೀ. ನಾಯಕರು ನಿಷ್ಠುರವಾಗಿ “ಕೊಡುವುದಿಲ್ಲ” ಎಂದರು. ಖಾದಿ ನೂಲು ನಮ್ಮ ಶಾಲೆಯಿಂದ ಶ್ರೀ ರಾಮಕೃಷ್ಣ ಹೆಗಡೆಯವರಿಗೆ ಮಾಲಾರ್ಪಣೆ ಮಾಡಲು ಬೇಕಾಗಿತ್ತು. “ಗಾಂಧಿಯವರು ಪಾನ ನಿರೋಧ ಪ್ರತಿಪಾದಿಸಿದ್ದರು. ಹೆಗಡೆ ಅದನ್ನು ಪುನಃ ಸಕ್ರಮ ಮಾಡಲು ಹೊರಟಿದ್ದಾರೆ. ಅಂಥವರಿಗೆ ನನ್ನಲ್ಲಿ ಮಾನ್ಯತೆ ಇಲ್ಲ. ಬಡಬಗ್ಗರ ರಕ್ತ ಹೀರುವ ಮದ್ಯಪಾನದ ಹಣದಿಂದ ರಾಜ್ಯ ಉದ್ಧಾರವಾಗುತ್ತದೆಯೇ? ಇದಕ್ಕಾಗಿಯೇ ನಾನು ಈ ಆಶ್ರಮದಲ್ಲಿ ಉಪವಾಸ ಮಾಡಲಿಲ್ಲವೇ? ದೀನ ದಲಿತರನ್ನು ಶೋಷಿಸಿದ ಪಾಪದ ಹಣದಿಂದ ಒಳ್ಳೆ ಕೆಲಸ ಆಗಲಾರದು. ಒಳ್ಳೆ ಕೆಲಸಕ್ಕೆ ಒಳ್ಳೆ ಮೂಲ ಇರಬೇಕು” ನಾಯಕರ ಧ್ಯೇಯ ನಿಷ್ಠೆಗೆ ಜೈ ಎಂದು ಬಂದೆ.
ಬಳಲೆಯ ಈ ಬಳಲದ ಜೀವ ನೂಲುವ ಕಾಯಕವನ್ನು, ಏಕಾದಶ ವ್ರತವನ್ನು ಆಚರಿಸುತ್ತಾ ಮುಕ್ತರಾದರು. ಈ ಆಶ್ರಮದ ಒಂದು ಭಾಗವನ್ನು ನಮ್ಮ ಶಾಲೆಗೆ ಹಾಸ್ಟೆಲ್ ನಡೆಸಲು ಭಕ್ಷೀಸು ಪಡೆದೆವು. ಕೆಲವು ವರ್ಷ ನಡೆಸಿಯೂ ನಡೆಸಿದೆವು. ತಿ.ಶ್ರೀ. ನಾಯಕರ ನೆನಪಿನ ಜೊತೆ ಬಾಲ್ಯದ ಪ್ರಭಾತ ಫೇರಿ ದಿವ್ಯ ಮಂತ್ರಗಳೂ ಧ್ವನಿಸುತ್ತಿವೆ:
“ಈಶ್ವರ ಅಲ್ಲಾ ತೇರೋ ನಾಮ್
ಸಬಕೋ ಸನ್ಮತಿ ದೇ ಭಗವಾನ್”
“ರಾಮ ರಹೀಮ, ಕೃಷ್ಣ ಕರೀಮ”
“ತಿರುವುತ್ತ ರಾಟಿಯನ್ನು, ತರುವ ಸ್ವರಾಜ್ಯವನ್ನು”
“ತಳವಾರ ಹಮಾರಾ ಖಾದಿ ಹೈ”
“ಕರೇಂಗೆ ಯಾ ಮರೇಂಗೆ”
“ಇನ್‌ಕ್ವಿಲಾಬ್ ಜಿಂದಾಬಾದ್”
“ಭೋಲೋ ಭಾರತ್ ಮಾತಾಕಿ ಜೈ”
“ಸ್ವತಂತ್ರ ಹಿಂದೂಸ್ತಾನಕೀ ಜೈ”
“ವಂದೇ ಮಾತರಂ ,ವಂದೇ ಮಾತರಂ”
ಮಧ್ಯಾಹ್ನದ ಊಟ:
ನಮ್ಮ ಶಾಲೆಗೆ ಮಧ್ಯಾಹ್ನದ ಊಟದ ಅವಶ್ಯಕತೆ ಪ್ರಥಮ ಆದ್ಯತೆಯದು. ಐದಾರು ಮೈಲಿ ನಡೆದು ಬರುವ, ಮೊಗಟಾ, ಮೊರಬ, ಹಿತ್ತಲಮಕ್ಕಿ, ಬೆಟ್ಕುಳಿ ಕಡೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಷ್ಟದ್ದಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಮುಷ್ಟಿ ಫಂಡಿನ ವರದಾನ ಸಹಾಯಕ್ಕೆ ಬಂತು. ಪುನಃ ಊರ ದಾನಿಗಳ ನೆರವು. ನಮ್ಮ ಸಹಾಯಕರಲ್ಲೇ ಒಬ್ಬರು ಗಂಜಿ,ಚಟ್ನಿ ತಯಾರಿಸುತ್ತಿದ್ದರು.ದೂರದ ವಿದ್ಯಾರ್ಥಿಗಳು ಈ ಅಮೃತ ಪ್ರಸಾದವನ್ನು ಸ್ವೀಕರಿಸಿ ಹಸಿವು ನೀಗಿಸಿಕೊಂಡು ಜ್ಞಾನದ ಹಸಿವು ತುಂಬಿಕೊಳ್ಳಲು ಅನುಕೂಲವಾಯಿತು. ಈ ವ್ಯವಸ್ಥೆ ಸರಕಾರದಿಂದ ಚಪಾತಿ, ಹಾಲು ಮಂಜೂರು ಆಗುವವರೆಗೂ ನಡೆಯಿತು. ನಂತರ ಈ ವ್ಯವಸ್ಥೆಯನ್ನು ಸರಕಾರ ಕೈಬಿಟ್ಟಿತು. ನಮ್ಮ ವಿದ್ಯಾರ್ಥಿಗಳಿಗೆ ಪುನಃ ಸಂಕಟ. ಬಳಲೆ ಆಶ್ರಮದಲ್ಲಿ ಹಾಸ್ಟೆಲ್ ತರಹದ ವ್ಯವಸ್ಥೆ ನಮ್ಮ ಚಾಲಕ ಸಂಸ್ಥೆಯ ವತಿಯಿಂದ ಆಯಿತು.
ಈ ಊಟದ ವ್ಯವಸ್ಥೆಯನ್ನು ಡಾ.ಎನ್.ವಿ.ನಾಯಕ- ಹಿರೇಗುತ್ತಿಯ ಸಮೀಪದ ಕೇಕಣಿಯ ಪ್ರಸಿದ್ಧ ಯಕ್ಷಗಾನ ವೇಷಧಾರಿ ವೆಂಕಟರಮಣ ನಾಯಕರ ಸುಪುತ್ರರು-ವಹಿಸಿಕೊಂಡರು. ಇವರ ಅಕ್ಕಂದಿರು, ತಮ್ಮಂದಿರು- ಇವರೂ ಸಹ – ನಮ್ಮ ಶಾಲೆಯ ಹಿಂದಿನ ವಿದ್ಯಾರ್ಥಿಗಳು. ಈ ಯೋಜನೆ ಆರಂಭವಾಗುವ ಹೊತ್ತಿಗೆ ನಾನು ನಿವೃತ್ತನಾಗಿದ್ದರೂ ಹಿರೇಗುತ್ತಿಗೆ ಬಂದು ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದೆ. ಇಂಥ ದಾನಿ ವಿದ್ಯಾರ್ಥಿಗಳನ್ನು ಪಡೆದ ನಮ್ಮ ಶಾಲೆ, ನಾವು ಶಿಕ್ಷಕರು ಎಲ್ಲರೂ ಧನ್ಯರು. ಈ ಸಮಾರಂಭದ ಧನ್ಯತೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶ್ರೀ ಗಂಗಾಧರ ಹಿರೇಗುತ್ತಿ, ಶ್ರಿ ಹೊನ್ನಪ್ಪ ನಾಯಕ ಇನ್ನೂ ಅನೇಕರು ಭಗವಹಿಸಿದ್ದರು. ಡಾ. ನಾರಾಯಣರನ್ನು ಕುರಿತು ನಾನು ಒಂದು ಶ್ಲೋಕವನ್ನು ಅನ್ವಯಿಸಿ ಹೇಳಿದ್ದೆ. ವೈದ್ಯರೆಲ್ಲಾ ದೇಹಕ್ಕೆ ಚಿಕಿತ್ಸೆ ನೀಡಿ ಆರೋಗ್ಯ ಭಾಗ್ಯ ನೀಡುತ್ತಾರೆ. ನಮ್ಮ ಡಾ.ನಾರಾಯಣ ವಿದ್ಯಾರ್ಥಿಗಳ ಮನಸ್ಸಿಗೇ ಚಿಕಿತ್ಸೆ ನೀಡಿ” ಧಿಯೋಯೋನಃ ಪ್ರಚೋದಯಾತ್”-ಬುದ್ಧಿ ಭಾಗ್ಯ ವೃದ್ಧಿಸುವಂತೆ ಮಾಡಿದ್ದಾರೆ. “ವೈದ್ಯೋ ನಾರಾಯಣೋ ಹರಿಃ”.ನನ್ನ “ವೈದ್ಯೋ…” ಉಲ್ಲೇಖವನ್ನು ಲಕ್ಷ್ಯ ಕೊಟ್ಟು ಕೇಳಿಸಿಕೊಂಡ ಗಂಗಾಧರ ಹಿರೇಗುತ್ತಿ ಆ ಕುರಿತು ಫೋನ್ ಮಾಡಿಯೇ ವಿವರ ಪಡೆದುಕೊಂಡರು. ಹದಿನೈದು ಇಪ್ಪತ್ತು ವರ್ಷಗಳ ಬಳಿಕವೂ ನನ್ನಲ್ಲಿ ಗುರುತ್ವವನ್ನು ಕಂಡ ಗಂಗಾಧರ, ಇನ್ನಿತರ ಕೆಲ ವಿದ್ಯಾರ್ಥಿಗಳನ್ನು ನೆನೆದು ‘ಧನ್ಯೋಸ್ಮಿ’ ಎನಿಸಿತು.
ಹಿರೇಗುತ್ತಿಯಿಂದ ಬರುವಾಗ ನನ್ನ ಹೃದಯದಲ್ಲಿ ಡಾ.ಪಿ.ಎಸ್.ಭಟ್ಟ, ಈಗ ಮುಂಬಯಿಯಲ್ಲಿ ಐಐಟಿಯಲ್ಲಿ ಪ್ರಾಧ್ಯಾಪಕರು, ತೋಟಗುಳಿಯಿಂದ ಹೈಸ್ಕೂಲಿಗೆ ಬರುತ್ತಿದ್ದರು, ಶ್ರೀ ಬೀರಣ್ಣ ನಾಯಕ, ಮೊಗಟಾ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಗಳಿಸಿ ಯಲ್ಲಾಪುರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವವರು, ಡಾ.ವಿನಾಯಕ ಕಾಮತ ಅಮೇರಿಕಾದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೇಧಾವಿ… ಇವರೆಲ್ಲಾ ನೆನಪಿಗೆ ಬಂದು ಮಧುರ ಭಾವ ಹುಟ್ಟಿಸಿದರು. ಡಾ.ವಿ.ಆರ್.ನಾಯಕ ಕುಮಟಾದಲ್ಲಿ ಆಸ್ಪತ್ರೆ ತೆರೆದು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ್ದಾರೆ. ಆರಕ್ಷಕ ಖಾತೆಯಲ್ಲಿ ದಕ್ಷತೆಗೆ ತನ್ನದೇ ಆದ ಛಾಪು ಮೂಡಿಸಿ (ಅಲ್ಪಾವಧಿಯಲ್ಲೇ) ಈಗ ಸಿ.ಪಿ.ಐ. ಆಗಿರುವ ಎನ್.ಟಿ.ಪ್ರಮೋದರಾವ್ ನಮ್ಮ ಊರಿನ, ಶಾಲೆಯ ಹೆಮ್ಮೆ. ನಮ್ಮ ಶಾಲೆಗೆ ಪೂರ್ಣ ಪ್ರಮಾಣದ ಕಟ್ಟಡ ಪೂರ್ತಿಗೊಳಿಸಲು ಅಣ್ಣನೊಂದಿಗೆ ಕೈ ಜೋಡಿಸಿರುವ ವೆಂಕಟೇಶ, ಮಾಧವ, ರಮಾನಂದ, ಚಂದ್ರಕಾಂತ, ವಿನಾಯಕ ಈ ಅಣ್ಣ ತಮ್ಮಂದಿರಲ್ಲಿ, ಅಕ್ಕ ತಂಗಿಯರಲ್ಲಿ – ಎಲ್ಲರೂ ನನ್ನ ಹೆಮ್ಮೆಯ, ಬಹಳ ವರ್ಷ ಹೈಸ್ಕೂಲ್ ಸಮಿತಿಯ ವೈಸ್ ಚೇಅರಮನ್ ಆದ ಶೇಷಗಿರಿ ನಾರಾಯಣ ನಾಯಕರ ಕುಟುಂಬದವರು- ನಮ್ಮಶಾಲೆಗೆ ಸಹಾಯ ಬೇಕಾದಾಗ ನಿಸ್ಸಂಕೋಚವಾಗಿ ಕೇಳಿದ, ಪಡೆದ ನಾವೇ ಧನ್ಯರು. ಇವರಲ್ಲದೇ ನಾನು ಹಿರೇಗುತ್ತಿಗೆ ಹೋದಾಗ ಅತ್ಮೀಯ ಬಂಧುಗಳಂತೆ ನೆರವಾದ ದೇವಣ್ಣ ನಾಯಕರು, ಬೀರಣ್ಣ ನಾಯಕ ಅಡ್ಲೂರಮನೆ, ಟಿ.ಎನ್.ನಾಯಕ ದಂಪತಿಗಳು ಇವರಾರನ್ನೂ ಮರೆಯುವಂತಿಲ್ಲ. ನಮ್ಮ ಊರಿನ ಸಂಸ್ಥೆ ಎನ್ನುವ ಅಭಿಮಾನದಿಂದ ಕಾರವಾರದ ಅವರ ವಕೀಲ ಸ್ನೇಹಿತರಿಂದ ಒಂದು ಗ್ಲಾಸಿನ ಬಾಗಿಲಿನ ಕಪಾಟು ತಂದು ಕೊಟ್ಟು ಪ್ರಯೋಗ ಶಾಲೆಗೆ ಒಂದು ರೂಪ ತಂದುಕೊಟ್ಟರು. ಅನಿಲ ರಾಯಕರ್ ನಮ್ಮ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದು ಅರ್ಬನ್ ಬ್ಯಾಂಕಿನ ಬಹುಮಾನ ಪಡೆದವನು. ಹಿಂದುಳಿದ ವರ್ಗದಿಂದ ಬಂದು ಉತ್ತಮ ಯಶಸ್ಸು ಪಡೆದ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳು… ಇವರೆಲ್ಲರ ನೆನಪಿನ ಭಾರವಾದ ಹೃದಯದಿಂದ ಮನೆಗೆ ಬಂದರೆ ನನ್ನ ನಾಲ್ವರೂ ಮಕ್ಕಳು ಇದೇ ಶಾಲೆಯ ವಿದ್ಯಾರ್ಥಿಗಳಾಗಿ ಜೀವನದಲ್ಲಿ ಉತ್ತಮರಾಗಿ ಬಾಳುತ್ತಿದ್ದಾರೆ. ಇವೆಲ್ಲಾ ಇವರೆಲ್ಲಾ ಶಾಲೆಯ ಸಹಾಯಕ ಹಸ್ತಗಳು. ಮಾದನಗೇರಿಯ ಡಾ.ಗಣೇಶ ಕಿಣಿ ನಮ್ಮ ಹೆಮ್ಮೆಯ ವಿದ್ಯಾರ್ಥಿ. (ಕೆಲವೇ ದಿನಗಳ ಮಟ್ಟಿಗೆ ಎಂದು ಕಾಣುತ್ತದೆ) ವೈದ್ಯಕೀಯ ವೃತ್ತಿಯ ಜೊತೆ ಲಯನ್ಸ್ ಕ್ಲಬ್, ರೋಟರಿ ಕ್ಲಬ್‌ಗಳ ಜೊತೆ ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಿದ್ದು ಕಂಡಿದ್ದೇನೆ. ನಾನು ಲಯನ್ಸ್ ಕ್ಲಬ್ ಅಧ್ಯಕ್ಷನಾಗಿದ್ದಾಗ ಗೋಕರ್ಣಕ್ಕೆ ಬಂದಿದ್ದರು. ಉತ್ಸಾಹಿ ಡಾಕ್ಟರು ಎಂಬ ಪ್ರಶಂಸೆ ಪಡೆದಿದ್ದರು.
ಶ್ರೀ ಕೆ.ಜಿ.ನಾಯಕ ಬೆಟ್ಕುಳಿಯಿಂದ ಬರುತ್ತಿದ್ದ. ಇವನು ಪಠ್ಯೇತರ ಚಟುವಟಿಗಳಲ್ಲಿ ಭಾಗವಹಿಸುತ್ತಿದ್ದ. ಗೋಕರ್ಣದ ಅರ್ಬನ್ ಬ್ಯಾಂಕಿನಲ್ಲಿ ಸ್ಟಾಫ್ . ಇವನು ಬೆಟ್ಕುಳಿಯಲ್ಲಿ ಒಂದು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿ ಸಮೀಪದ ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತಿರುತ್ತಾನೆ. ಶಾಲೆಯ ಬಗೆಗೆ ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗುವವ. ಯಕ್ಷಗಾನದಲ್ಲಿ ಹಾಸ್ಯದ ಪಾತ್ರ ನೋಡಿದ ಜ್ಞಾಪಕ.
ಚಿಟ್ಟೆ ಗಣಪಯ್ಯ: ನನ್ನ ಪ್ರಾಮಾಣಿಕ ದೋಸ್ತ. ಇವನ ತಮ್ಮ ಸಚ್ಚಿಯೂ ಸ್ನೇಹಿತನೇ. ಸಚ್ಚಿ ನನ್ನ ತಮ್ಮ ಲಕ್ಷ್ಮೀನಾರಾಯಣನ ಗಳಸ್ಯ ಕಂಠಸ್ಯ. ಗಣಪಯ್ಯನ ಬಾಯಲ್ಲಿ ಒಮ್ಮೆಯೂ ಯಾರ ಬಗ್ಗೆಯೂ ಕೆಟ್ಟ ಮಾತು ಬರುವುದಿಲ್ಲ. ಒಮ್ಮೆ ನನಗೂ, ಅವನಿಗೂ ಜಗಳವಾಗಿ ಮಾತು ಬಿಟ್ಟೆವು. ಐದಾರು ದಿನಗಳ ನಂತರ – ತಪ್ಪು ನನ್ನದೇ ಆಗಿದ್ದರೂ!- ಇವನು ತಾನಾಗಿಯೇ “ಮಾಚ, ನಾನು ಮಾತು ಬಿಡಬಾರದಾಗಿತ್ತು” ಎಂದ. ಅಂಥ ಸಜ್ಜನ. ಓದುವುದರಲ್ಲಿ ನನಗಿಂತಲೂ ಹುಶಾರಿ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರಾಮಾಣಿಕವಾಗಿ ಬಾಳುತ್ತಿದ್ದಾನೆ.
ವಿಷ್ಣು ಉಪಾಧ್ಯ: ಇವನು ಚಿಟ್ಟೆ ಹಾಗಲ್ಲ, ಸ್ವಲ್ಪ ಏರು. ನಾನು ಏನು ಹೇಳಿದರೂ ಅವನದು ಉಲ್ಟಾ. ನಮ್ಮಿಬ್ಬರಲ್ಲಿ ಯಾರ ತಪ್ಪಿದ್ದರೂ ಮಾತು ಬಿಡುತ್ತಿದ್ದ. ಕಡೆಗೆ ನಾನಾಗಿಯೇ ಮಾತಾಡಬೇಕು. ಬೇಲೆಯಲ್ಲಿ ಆಟ ಆಡುತ್ತಿದ್ದೆವು. ಸಂತೋಷದಲ್ಲೂ, ಸಿಟ್ಟಿನಲ್ಲೂ ಮರಳು ಒಬ್ಬರಿಗೊಬ್ಬರು ಚೋಕುವುದು, ಮನೆಗೆ ಹೋಗಿ ಅಬ್ಬೆಯಿಂದ ಬೈಸಿಕೊಳ್ಳುವುದು.
ನಾರಾಯಣ ಹಿರೇಗಂಗೆ: ಮೂಲತಃ ವೇದೇಶ್ವರನ ಸ್ನೇಹಿತ. ನಾಲ್ಕನೇ ತರಗತಿಯವರೆಗೂ ನಮಗಿಂತ ಒಂದು ವರ್ಷ ಕೆಳಗೆ. ನಮ್ಮಿಬ್ಬರಲ್ಲಿ ಜಗಳ ಕಡಿಮೆ. ಶಾಲಾ ಚರ್ಚಾಕೂಟದ ಕುರಿತು ಪ್ರೌಢಚರ್ಚೆ. ಕೆಲವೊಮ್ಮೆ ಶನಿವಾರ, ಭಾನುವಾರ ಸಂಜೆ, ಪಾಂಡವರ ಗುಡಿ, ರಾಮತೀರ್ಥಕ್ಕೆ ಹೋಗಿ ಹರಟೆ, ತಮಾಷೆ. ಕೆಲವು ಪದ್ಯಗಳ ಬಗೆಗೆ ಚರ್ಚೆ ನಡೆಯುತ್ತಿತ್ತು. ಆಗಲೇ ವೇದೇಶ್ವರದ ಉಪ್ಪರಿಗೆಯ ಮೇಲೆ ಬಾಲಸಂಘ ಸ್ಥಾಪನೆಯಾಯಿತು. ಅದು ವಾಚನಾಲಯ. ಇದಕ್ಕೆ ಮೂಲ ವೇದೇಶ್ವರನೇ. ಅವನಿಗೆ ಈ ಶಕ್ತಿ ದೈವದತ್ತವೇ ಸರಿ. ಬಾಲ ಸಂಘ ಮುಂದೆ ಸ್ಟಡಿ ಸರ್ಕಲ್ ಆದ ಬೆಳವಣಿಗೆ ಕುರಿತು ನನಗೆ ಮಾಹಿತಿ ಸಾಲದು. ಆದರೆ ಬಾಲಸಂಘ, ಗೋಪಿಯವರ ಪ್ರೇಮಸಂಘ, ಹಿರಿಯರ ಕೆಳೆಯರ ಕೂಟ ಎಲ್ಲ ಸೇರಿ ಕರ್ನಾಟಕ ಸಂಘವಾಯಿತು. ಆ ಲಾಗಾಯ್ತು ಈಗಿನವರೆಗೂ ವೇದೇಶ್ವರ – ಗ.ಮ.ವೇ. (ಗಣಪತಿ ಮಹಾಬಲೇಶ್ವರ ವೇದೇಶ್ವರ) ಮತ್ತು ಗೋಪಿ ಚಂದ್ರಶೇಖರ ಸಂಘದ ಅವಿಭಾಜ್ಯ ಅಂಗ. ಚಂದ್ರಶೇಖರನ ತೂಕವೇ ಹೆಚ್ಚಿತ್ತು. ಆ ತೂಕಕ್ಕಿಂತ ಸಂಘದ ಬಗ್ಗೆ ಅವನ ಅಭಿಮಾನ ಇನ್ನೂ ಹೆಚ್ಚು. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಚಂದ್ರು.
ಲೈಬ್ರರಿಗ್ರ್ಯಾಂಟ್ ೩-೧-೦ ಕುಮಟಾದಲ್ಲಿ ಪಡೆಯಬೇಕು. ನಮ್ಮ ಗೋಪಿಯವರು ಬೆಳಿಗ್ಗೆ ಮನೆಯಲ್ಲಿ ಗಂಜಿ ಉಂಡು ಅಘನಾಶಿನಿಯ ಮೇಲೆ ಕುಮಟಾಕ್ಕೆ ಹೋಗುವವರು. ತಾರಿದೋಣಿಯ ಎರಡು ಬಿಲ್ಲಿ, ಹೋಗ್ತಾ-ಬರ್ತಾ ಅಷ್ಟೆ. ಉಳಿದ ಮೂರು ರೂ. ಸಂಘಕ್ಕೆ ಜಮಾ. ಚಂದ್ರು ಸ್ವಂತ ಖರ್ಚಿನಿಂದ ಮಂಡಕ್ಕಿ ಖರೀದಿಸಿ ಹೋಗ್ತಾ-ಬರ್ತಾ ತಿನ್ನುತ್ತ ಬರುತ್ತಿದ್ದನಂತೆ. ಸಂಜೆ ಊಟ ಮನೆಗೆ ಬಂದ ಮೇಲೆ.
ಚಂದ್ರಶೇಖರನದು ಒಂದು ತಮಾಷೆ. “ವೇದೇಶ್ವರಾ, ಈ ನಮ್ಮ ಸಂಘದ ಜಿರಲೆ ನೆಫ್ತಲಿನ್ ಗುಳಿಗೆನೇ ತಿಂದುಕೊಂಡು ದಪ್ಪ ಆಜು ನೋಡು” ಎನ್ನುತ್ತಿದ್ದ. “ಅಲ್ದೋ ವೇದೇಶ್ವರ, ಈ ನಾಗಕ್ಕನ ಹೆಸರಿನಲ್ಲಿ ಕೇಶ ಸಂಘರ್ಷ ಪುಸ್ತಕ ತೆಗೆದುಕೊಂಡು ಒಂದು ತಿಂಗಳು ಆಯ್ತು. ಪುಸ್ತಕದ ಕಾಪಿ ಮಾಡ್ತೊ ಹೇಗೆ?” ಅದಕ್ಕೆ ವೇದೇಶ್ವರನ ಉತ್ತರ ಹೀಗೆ: “ಹಾಂಗಲ್ದೋ ಅದು. ಮತ್ತೂ ಮೂರು ಪುಸ್ತಕ ಯಾರು ಯಾರದೋ ಹೆಸರಿನಲ್ಲಿ ತಕಂಡು ಮುಂಬೈಗೆ ಹೋಜು. ಮಗಳ ಬಾಳಂತನಕ್ಕೆ. ಇನ್ನೂ ಎರಡು ತಿಂಗಳು ಆ ಮೂರೂ ಪುಸ್ತಕ ಬತ್ತಿಲ್ಲೆ”. “ಹಾಂಗಲ್ಲ, ಗಿಡ್ಡಜ್ಜನ ಕತ್ತಲೆ ಲೈಬ್ರರಿಗೆ ಹೋತೋ ಹೇಗೆ ಹೇಳಿ ಸಂಶಯ ಬಂತು” ಎಂದ ಗೋಪಿ ಚಂದ್ರು.
ಗಿಡ್ಡಜ್ಜನ ಕಥೆ ಈಗ ಹೇಳಬೇಕಾಯಿತು. ಅವನು ಗೋಕರ್ಣದ ಐತಿಹಾಸಿಕ ವ್ಯಕ್ತಿ. ಈ ಬ್ರಹ್ಮಸೃಷ್ಟಿಯಲ್ಲಿ ಅವನಿಗೆ ಬೇಡದ ವಸ್ತುವಿಲ್ಲ, ಅವನು ಮಾಡದ ಕೆಲಸವಿಲ್ಲ.
ನಾವು ತೀರ್ಥಹಳ್ಳಿಯಲ್ಲಿದ್ದಾಗ ಶಂಕರಲಿಂಗ ರಾಮಕೃಷ್ಣ ಭಟ್ಟರು – ನಮ್ಮ ತಂದೆಯವರು ಸ್ನೇಹಿತರು – ತಿಂಗಳು, ಹದಿನೈದು ದಿನ ನಮ್ಮೊಡನೆ ಇರುತ್ತಿದ್ದರು. ಅವರಿಗೆ ಇನ್ನೂ ಎರಡು ಹೆಸರುಗಳು. ಋಭಾವ, ಇನ್ನೊಂದು ಶಂಕರಲಿಂಗ ಮಾಸ್ತರರು. ಅವರು ಊರಿಗೆ ಸಂಬಂಧಪಟ್ಟಂತೆ ಕೆಲವು ಕಥೆಗಳನ್ನು ಸೃಷ್ಟಿಸಿ ಹೇಳುತ್ತಿದ್ದರು.
ಬೇಲೆಹಿತ್ತಲ ಕರಿಯನ ಮನೆಯಲ್ಲಿ ಒಳ್ಳೆ ಹಾಲು ಸಿಗುತ್ತದೆ ಎಂದು ಗಿಡ್ಡಜ್ಜನಿಗೆ ಗೊತ್ತಾದ ತಕ್ಷಣ ಬೇಲೆಹಿತ್ತಲಿಗೆ ಹೋಗಿ ದಿನಾ ಒಂದು ಶಿದ್ದೆ ಹಾಲಿಗೆ ಆರ್ಡರ್ ಕೊಟ್ಟ. ಹಾಲು ದಿನಾಲು ಬರಲು ಪ್ರಾರಂಭವಾಯಿತು. ಆಗಲೇ ನಮ್ಮ ಶಂಮಾಸ್ತರರು “ಅಲ್ದೋ, ಅದು ಮಡಿಗೆ ಸರಿ ಆಗ್ತಾ? ಹಾಲು ನೀನು ದೇವರಿಗೆ ಬೇರೆ..”ಎಂದರು. “ಸುಮ್ಮಂಗಿರು” ಎಂದ ಗಿಡ್ಡಜ್ಜ. ಒಂದು ತಿಂಗಳಾಯ್ತು. ಕರಿಯ ಹಾಲಿನ ದುಡ್ಡಿಗೆ ಬಂದ. ಗಿಡ್ಡಜ್ಜನಿಗೆ ಎಲ್ಲಿಲ್ಲದ ಕೋಪ ಬಂತು. “ನಿನ್ನ ದುಡ್ಡು ತಗೋ. ನೀನು ಸಣ್ಣ ತಮ್ಮನ ಮಗನಂತೆ.ಮಡಿ ಬಗ್ಗೆ ನಿನಗೆ ಗೊತ್ತಿದೆ ಎಂದುಕೊಂಡೆ.ನೀನು ಮಡಿಮಾಡಲಿಲ್ಲ. ನಿನ್ನ ಮೈಲಿಗೆ ಹಾಲನ್ನು ದೇವರ ಅಭಿಷೇಕಕ್ಕೆ, ಪಂಚಾಮೃತ ತುಪ್ಪಕ್ಕೆ ಎಲ್ಲಾ ಉಪಯೋಗಿಸಿದೆ. ಮಹಾ ಪಾಪ, ಮಹಾಪಾಪ. ಪ್ರಾಯಶ್ಚಿತ್ತಕ್ಕೆ ಐವತ್ತು ರೂ. ಬೇಕು. ನಿನ್ನ ಹಾಲಿನ ದುಡ್ಡು ರೂ.೩೫/-. ಇದಕ್ಕೆ ರೂ.೧೫/- ಸೇರಿಸಿಕೊಡು. ನಾಳೆಯಿಂದ ಹಾಲು ಬೇಡ. ಒಂದೇ ಮಾತು, ಹಾಲು ಬೇಡ, ಹದಿನೈದು ರೂಪಾಯಿ ಕೊಡು.” ಕರಿಯನ ಮುಖ ಕಪ್ಪಿಟ್ಟು ಕಂಗಾಲಾದ. “ಒಡೆಯಾ, ಇಪ್ಪತ್ತು ಕಾಯಿ ಕೊಡ್ತೆ” ಎಂದ. ಆಗ ಗಿಡ್ಡಜ್ಜ “ಸಿಪ್ಪೆ ಸಮೇತ ಕೊಡು” ಎನ್ನಬೇಕೆ?
“ಶಿವರಾಮನ ಅಂಗಡಿಗೆ ಟೊಪ್ಪಿ”: ಉದ್ರಿ ಅಂಗಡಿ, ಹದಿನೈದು ದಿನ, ತಿಂಗಳಿಗೆ ಹಣ ಕೊಡುವುದು. ಗಿಡ್ಡಜ್ಜ ಹಣಕೊಡದೇ ಒಂದೂವರೆ ತಿಂಗಳು ಆಗಿಹೋಗಿತ್ತು. ಅರವತ್ತು ರೂಪಾಯಿ ಬಾಕಿ. ಮುಂಬಯಿಯಿಂದ ಮಗ ನೂರು ರೂ ಕಳಿಸಿದ್ದ. ಪೋಸ್ಟ್ ಮ್ಯಾನ್ ಬರುವ ಹೊತ್ತಿಗೆ ಇವನು ಅಂಗಡಿ ಹತ್ತಿರವೇ ಇದ್ದ. ದುಡ್ಡು ಪಡೆದ. ಅಷ್ಟು ಹೊತ್ತಿಗೆ ಇನ್ನೊಬ್ಬ ಮಗ ಮಾಬ್ಲ ಬಂದ. ಸಾಮಾನಿನ ಚೀಟಿ ಕೈಯಲ್ಲಿ. ನೂರು ರೂ. ನೋಟು ಹಿಡಿದೇ ಚೀಟಿ ಕೊಟ್ಟ. ಹೇಗೂ ಎಂ.ಓ.ಬಂದಿದೆ ಎಂದು ಅಂಗಡಿಯವನೂ ಸಾಮಾನುಕೊಟ್ಟ. ಅಷ್ಟು ಹೊತ್ತಿಗೆ ಹೆಂಡತಿ ಶೇಷಕ್ಕನೇ ಅಂಗಡಿಗೆ ಬಂದು, ” ಆ ನೂರು ಕೊಡಿ. ಅಲ್ಲಿ ಅಜ್ಜಿ ಮನೆ ಚಚ್ಚಕ್ಕ ಪಿತ್ಥ ಬಿಗೀತು. ಮಗನ ಪರೀಕ್ಷೆ, ಪುಸ್ತಕ ಹೇಳಿ ನೂರೈವತ್ತು ರೂಪಾಯಿ ಕೊಡುದಾಗ್ತಡ” ಎಂದು ನೂರು ರೂ. ತೆಗೆದುಕೊಂಡು ಹೊರಟೇ ಹೋದಳು. “ಏ ಏ ಏ” ಎಂದು ಗಿಡ್ಡಜ್ಜ ಹುಸಿಕೋಪ ಮಾಡುತ್ತಲೇ ಇದ್ದ. ಶಿವರಾಮ ನಾಗಪ್ಪನ ಮುಖ, ನಾಗಪ್ಪ ಮುಖ ಶಿವರಾಮ ನೋಡುತ್ತಲೇ ಇದ್ದರು. “ಹೂಂ ಬರ್ಕೊ, ಒಟ್ಟು ರೂ. ನೂರು ಬಾಕಿ ಬರ್ಕೊ. ನೀ ಬರೂದು, ನಾವ್ ತೆರೂದು” ಹೇಳಿ ನಸ್ಯ ಏರಿಸಿ ಮನೆಗೆ ಹೊರಟ.
ಕಟ್ಟಿಗೆ ಗಾಡಿ ಎಂಕಣ್ಣ: “ಎಂಕಣ್ಣ, ೧೫ ಗಾಡಿ ಕಟ್ಟಿಗೆ ಬೇಕು, ಹೇಗೆ ದರ?” “ಒಡೆಯಾ, ಒಂದು ಗಾಡಿಗೆ ಹದಿನೆಂಟು ರೂಪಾಯಿ. ನೀವು ರಾಶಿ ತಕಳ್ತ್ರಿ, ಹೇಳಾದರೆ ಹದಿನೈದು ರೂಪಾಯಿಗೆ ಕೊಡ್ವ”. “ಆತು, ಹದಿನೈದು ಹದಿನೈದಲೆ ಇನ್ನೂರಿಪ್ಪತ್ತೈದು ರುಪಾಯಿ. ತಕೊ ರೂ. ಇಪ್ಪತ್ತೈದು ಮುಂಗಡ. ಶಿವರಾತ್ರಿ ಮರುದಿವಸ ತಕಂಡು ಬಾ”. ತಕ್ಷಣ ಶಿವಭಾವ, ತಿಮ್ಮಪ್ಪ ಭಾವ, ಚಚ್ಚಕ್ಕ, ರಾಮಭಾವ ಇವರಿಗೆ ಕಟ್ಟಿಗೆ ಗಾಡಿ ವಿಷಯ ವಿವರಿಸಿದ ಪ್ರತ್ಯೇಕವಾಗಿ. ಒಪ್ಪಿದರು. “ಗಾಡಿ ದುಡ್ಡು ಮೊದಲೇ ಕೊಡೊ” ಎಂದು ಪ್ರತಿಯೊಬ್ಬರಿಂದಲೂ ನಲವತ್ತೈದು ರೂಪಾಯಿ ತೆಗೆದುಕೊಂಡ.”ನಿಮ್ಮ ಮನೆ ಬಾಗಿಲಿಗೆ ತಂದು ಹಾಕೋ ಎಂದ್ರೆ ಪಾಪ, ಗಾಡಿಗೆ ಐದು ರೂಪಾಯಿ ಕೊಡುವಾ, ಬೇಡ, ಎಲ್ಲಾ ಸೇರಿ ಹತ್ತು ರೂಪಾಯಿ ಒಟ್ಟು ಕೊಡುವಾ ಆಗದನೋ ರಾಮಮಾವ” ಎಂದ. “ಅಕ್ಕಲಿ” ಎಂದ ರಾಮಮಾವ. ಒಟ್ಟು ಇನ್ನೂರು ರೂಪಾಯಿ ಸೇರಿಸಿದ. ಶಿವರಾತ್ರಿ ಮರುದಿನ ಬಂತು, ಕಟ್ಟಿಗೆ ಗಾಡಿಗಳೂ ಬಂದವು. “ಎಂಕಣ್ಣ ನಾಯಕ, ತಗೋ ರೂ.೨೨೫ರಲ್ಲಿ ೨೫ ಆಗಲೇ ಸಂದಿದೆ. ಉಳಿದ ಇನ್ನೂರರಲ್ಲಿ ಈಗ ನೂರು ತೆಗೆದುಕೋ. ಉಳಿದ ನೂರು ಯುಗಾದಿ ಮಾರನೆ ದಿವಸ” ಎಂದ. ಹೂಂ ಎನ್ನದೇ ವಿಧಿ ಇಲ್ಲ. ಯುಗಾದಿ ಮರುದಿನ ಮೂವತ್ತು ನಂತರ ಹದಿನೈದು, ನಂತರ ಇಪ್ಪತ್ತೈದು, ಬಳಿಕ ಹದಿನೈದು ಹೀಗೆ ಕೊಡುತ್ತಾ ಇನ್ನೂ ಹದಿನೈದು ರೂಪಾಯಿ ಕೊಡುವುದು ಬಾಕಿ ಇರುವಾಗ ಒಂದು ದಿನ “ಏನೋ ಎಂಕಣ್ಣ, ನಿನ್ನ ಲೆಕ್ಕ ಮುಗೀತೋ ಇಲ್ಲವೋ? ೧೫, ೨೫, ೩೫…… ನನ್ನ ಲೆಕ್ಕದಂತೆ ನಿನಗೆ ಒಂದು ಐದು ರೂಪಾಯಿ ಹೆಚ್ಚೇ ಸಂದಿದೆ. ಇರಲಿ ಬಿಡು. ಅದನ್ನು ಕೊಡುವುದು ಬೇಡ. ಏ, ಎಂಕಣ್ಣಂಗೆ ಒಂದು ಲೋಟ ಚಹಾ ಮಾಡೇ ಅಥವಾ ಬೇಡ, ಮಜ್ಜಿಗೆ ಕೊಡು” ಎಂದ ಗಿಡ್ಡಜ್ಜ!
ಗಿಡ್ಡಜ್ಜನ ಪುಸ್ತಕ ಸಂಗ್ರಹ: ಗೋಕರ್ಣದ ಕೆಲ ಸಾಹಿತ್ಯಾಸಕ್ತರು ಸಂಗ್ರಹ ಯೋಗ್ಯವಾದ ಪುಸ್ತಕ ತರಿಸುತ್ತಿದ್ದರು. ಇವನು ಹೊಂಚು ಹಾಕಿ “ಭೈರಪ್ಪನವರ ವಂಶವೃಕ್ಷ ಒಂದು ಸಲ ಕೊಡು” ಎಂದ. ಪುಸ್ತಕ ತಂದವನೇ ಪುಸ್ತಕದ ಕೆಲ ಪುಟಗಳಲ್ಲಿ,- ೨೫ನೇ ಪುಟ, ೭೫ ನೇ ಪುಟ, ೧೨ನೇ ಪುಟ ಎಂದುಕೊಳ್ಳೋಣ – ಬೈಂಡಿನ ಕಡೆಗೆ ಗಿಜ್ಜಗೋರ್ಣ ಎಂದು ಬರೆದ. ಪುಸ್ತಕ ಹಿಂತಿರುಗಿಸಿದ. ಪುಸ್ತಕ ತಂದಿದ್ದವರ ಮನೆಗೆ ಕೆಲ ದಿನಗಳ ಬಳಿಕ ಹೋಗುವುದು. ಆಗ ಅವರ ಮನೆಯವರು ಘಟ್ಟಕ್ಕೆ ಹೋಗಿದ್ದಾರೆ ಎಂದು ಖಾತ್ರಿಮಾಡಿಕೊಂಡೇ ಇವನು ಹೋಗುವುದು! “ನಾಗು, ನಿನ್ನ ಗಂಡ ನನ್ನ ಪುಸ್ತಕ ತಕಂಡಿದ್ದ. ಕೊಡು” ಎನ್ನುವ ಗಿಡ್ಡಜ್ಜ. ಆ ಮನೆಯಾಕೆ “ಇವರು ಏನೂ ಹೇಳಲಿಲ್ಲವಲ್ಲ” ಅನ್ನಬೇಕು, “ಹೇಳಲಿಲ್ಲವಾ? ಇರಲಿ ಬಿಡು, ಪುಸ್ತಕ ತಕಂಡು ಬಾ”. ಪುಸ್ತಕ ತಂದ ಮೇಲೆ ಇವನು ಆಯ್ದ ಪುಟಗಳಲ್ಲಿ ಗಿಜ್ಜಗೋರ್ಣ ಎಂದು ಬರೆದದ್ದು ತೋರಿಸುತ್ತಿದ್ದ. ಗಿಜ್ಜಗೋರ್ಣ ಎಂಬುದು ಗಿಡ್ಡಜ್ಜ ಗೋಕರ್ಣ ಎಂಬುದರ ಸಂಕ್ಷಿಪ್ತರೂಪ! ಸರಿ, ಇನ್ನು ಸಂಶಯಕ್ಕೆ ಎಡೆ ಎಲ್ಲಿದೆ? ಗಿಜ್ಜಗೋರ್ಣನ ಪುಸ್ತಕ ಭಂಡಾರದಲ್ಲಿರುವುದು ಈ ಬಗೆಯಾಗಿ ಸಂಗ್ರಹಿಸಿದ ಪುಸ್ತಕಗಳು! ಆ ಬಡ ಹೆಂಗಸರೂ ಗಿಡ್ಡಜ್ಜ ತನ್ನ ಪುಸ್ತಕ ತಾನು ತೆಗೆದುಕೊಂಡು ಹೋದ ತಾನೆ ಎಂದು ಗಂಡನಿಗೂ ಹೇಳಲಿಲ್ಲ. “ಇತಿಗೋಕರ್ಣ ಪುರಾಣೇ ಗಿಡ್ಡಜ್ಜ ಕಾಂಡೇ ಪ್ರಥಮ ಅಧ್ಯಾಯಃ”. ಎಂಬಲ್ಲಿಗೆ ಶ್ರಾವಣಮಾಸ ಶುರುವಾದ್ದರಿಂದ ಮಾಸ್ತರರು ಗೋಕರ್ಣಕ್ಕೆ ಹೋದರು.
ಮುಂದುವರೆಯುವುದು….