ಎಂದೂ ಇರದ ನೋವು
ಇಂದೇಕೆ ಹೊಮ್ಮಿದೆ,
ಹಿಂಡಿದೆ ನನ್ನ ಮನವನ್ನೆಲ್ಲ
ಉಲ್ಲಾಸದ ಭಾವ ಇಷ್ಟೂ ಇಲ್ಲ!
ಬಾನೊಳಗೆ ಮುಗಿಲೇ ಇಲ್ಲ
ಬರೀ ಬೋಳು ಮೌನ,
ಎಲೆಯೊಂದೂ ಅಲುಗುತ್ತಿಲ್ಲ
ಸೃಷ್ಟಿ ಚಲನ ಹೀನ.
ಏತಕೆ ಲೋಕ ಈ ರೀತಿ
ಕಂಗಾಲಾಗಿದೆ, ಬರಿ ಭೀತಿ
ಕಾಡಿದೆ ಸೃಷ್ಟಿಯನೆಲ್ಲ
ಎಲ್ಲೂ ಗೆಲುವೇ ಇಲ್ಲ!
ಜೀವದ ದಿಗಿಲೇ ಹೀಗೆ
ಹೊರಗೆ ರೂಪ ತಾಳಿದೆ,
ಪ್ರೀತಿಯ ಕೊರತೆಯೆ ಹೀಗೆ
ವ್ಯಥೆಯಾಗಿ ಹೊಮ್ಮಿದೆ
ನನ್ನೊಳು ನೀನು ನಿಲ್ಲದಿರೆ
ನಿನ್ನೊಳು ನಾನು ಇಲ್ಲದಿರೆ
ಎಲ್ಲಿದೆ ಜೀವಕೆ ಶಾಂತಿ
ಎಲ್ಲಿದೆ ಭಾವಕೆ ಕಾಂತಿ?
*****
ಪುಸ್ತಕ: ನಿನಗಾಗೇ ಈ ಹಾಡುಗಳು