Home / ಕಥೆ / ಕಿರು ಕಥೆ / ಝೆನ್ ಸಂಭಾಷಣೆ

ಝೆನ್ ಸಂಭಾಷಣೆ

ಒಮ್ಮೆ ಗುರುಗಳು ಶಿಷ್ಯನಿಗೆ ಹೇಳಿದರು- “ವಿಹಾರದಲ್ಲಿ ಕಲಿತು ಆಯಿತು, ಇನ್ನು ಪರ್‍ಯಟನೆ ಮಾಡಿ ಝೆನ್ ಸಂಭಾಷಣೆಯಲ್ಲಿ ಪರಿಣಿತನಾಗಿ ಬಾ” ಎಂದು ಕಳುಹಿದರು. ಶಿಷ್ಯ ಮೌನವಾಗಿ ವಂದಿಸಿ ಗುರು ಅಣತಿಯ ಮೇರೆಗೆ ವಿಶ್ವದ ಪ್ರಾಂಗಣದಲ್ಲಿ ಹೆಜ್ಜೆ ಇಟ್ಟು ನಡೆದ. ಭೂಮಿಯೊಡನೆ ಪಾದಸ್ಪರ್ಶ ಮಾಡಿ ಮಣ್ಣಿನ ಕಣಕಣದೊಡನೆ ಮೌನ ಸಂವಾದ ಮಾಡಿದ. ವೃಕ್ಷದ ಎಲೆಗಳ ಮರ್ಮರದೊಡನೆ ಮೌನ ಸಂವಾದ ಮಾಡಿದ. ಇನ್ನು ಅರಳಿದ ಹೂ ಸುಗಂಧದೊಡನೆ, ಮಂದಪವನದೊಡನೆ, ಗಿಡ, ಮರ, ಬಳ್ಳಿ, ಪಶು ಪಕ್ಷಿ, ಪ್ರಾಣಿಗಳೊಡನೆ ಮೌನ ಸಂಭಾಷಣೆ ನಿರತ ಸಾಗಿತು. ಆಗಸಕ್ಕೆ ತಲೆ‌ಎತ್ತಿ ಸೂರ್‍ಯಕಿರಣದೊಡನೆ ಮೌನ ಸಂವಾದ ಮಾಡಿದ ನಿಶೆಯಲ್ಲಿ ಚಂದ್ರನ ಬೆಳದಿಂಗಳೊಂದಿಗೆ ಮೌನದ ಮಾತಿನಲ್ಲಿ ಬೆರೆತ. ನಕ್ಷತ್ರದ ನಗುವಿನಲ್ಲಿ ಸತ್ಯದ ಮಿಣಕನು ಅರೆತ. ದಾರಿಗಳೊಡನೆ ಮೌನ ಸಂವಾದದಲ್ಲಿ ಸಾಗಿದ. ಮನದ ಅನಂತ ಮೌನದಲ್ಲಿ ಅನಂತದ ಝೆನ್ ಸಂವಾದದಲ್ಲಿ ತೊಡಗಿ, ಕೊನೆಗೆ ಮೌನ ಹೆಜ್ಜೆ ಇಡುತ್ತಾ ಗುರುಗಳ ಸಮ್ಮುಖ ಉಪಸ್ಥಿತನಾದ “ಪ್ರಿಯ ಶಿಷ್ಯ! ಏನು ವಿಶ್ವ ಪರ್ಯಟನೆಯಲ್ಲಿ ಝೆನ್ ಸಂಭಾಷಣೆಯ ಕುಶಲತೆ ಅರಿತು ಬಂದಿರುವೆಯಾ?” ಎಂದು ಕೇಳಿದರು.

“ಗುರುವರ್ಯಾ! ಮೌನ ಹೆಜ್ಜೆ ಇಟ್ಟು, ಮೌನದಾರಿ ಸವೆದು, ಮೌನ ಸಂಭಾಷಣೆಯಲ್ಲಿ ವಿಶ್ವದಲ್ಲಿ ಒಂದಾದಾಗ ಮಾತೆಲ್ಲ ಮೌನವಾಯಿತು. ಮೌನವೇ ಮಾತಾಯಿತು. ಝೆನ್ ಸಂಭಾಷಣೆಯೊಂದು ಪ್ರಕೃತಿಯ ಮಿಡಿತ, ಅದಕ್ಕೆ ನನ್ನ ಹೃದಯದ ತುಡಿತ ಬೆರಿಸಿದೆ. ಹರಿವ ನದಿಯೊಂದಿಗೆ ಮಾತನಾಡಿ ನಲಿದೆ. ಸಾಗರ ಲಹರಿಯೊಂದಿಗೆ ಮನವನ್ನು ತೇಲಿಸಿದೆ. ಮೌನದಲ್ಲಾದ ವಾರ್‍ತಾಲಾಪ ಮಾತಿನಲ್ಲೂ ಸಾಧ್ಯವಿಲ್ಲವೆಂದು ತಿಳಿದುಬಂದಿರುವೆ”- ಎಂದ ಶಿಷ್ಯ.

“ಹೌದು ಶಿಷ್ಯ! ಮಾತಿನ ಸಂಭಾಷಣೆಗೆ ತರ್‍ಕದ, ವಾದದ, ಮೀಮಾಂಸದ ಎಡೆತಡೆಯುಂಟು. ಆದರೆ ಮೌನ ಸಂಭಾಷಣೆ ಅದೊಂದು ಪ್ರವಾಹ ನಿರಂತರ ಪ್ರಕ್ರಿಯೆ. ಅಲ್ಲಿ ಎರಡು ಮುಖವಿಲ್ಲ. ಎರಡು ಬಾಯಿ ಇಲ್ಲ, ಒಂದೇ ಮನ, ಒಂದೇ ಹೃದಯ, ಒಂದೇ ಜಗ, ಒಂದೇ ಆಗಸ ಭೂಮಿ. ಎಲ್ಲವು ಒಂದುಗೂಡಿದಾಗ ಸೃಷ್ಟಿಯ ಸಮ್ಮಿಲನದ ಮೌನ ಸಂಭಾಷಣೆ, ಅಲ್ಲವೇ? ಅದರ ಅರಿವು ಪಡೆದ ನೀನು ಧನ್ಯ” ಎಂದಾಗ ಗುರುಗಳೊಡನೆ ಶಿಷ್ಯ ಅನಂತ ಮೌನ ಸಂಭಾಷಣೆಯಲ್ಲಿ ತೊಡಗಿದ್ದ.
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...