Home / ಕವನ / ಕವಿತೆ / ಮನಸುಖರಾಯನ ಮಗಳು

ಮನಸುಖರಾಯನ ಮಗಳು

ಗೌರಿಹುಣ್ಣಿವೆ ಬಂತು ಕಾರ ದುರ್ದಿನ ನಿಂತು;
ಹಾರಿ ಹಾತೊರೆದು ಗೋಳಾಡುತಿಹೆನು
ಅರಸುಮಗಳಿಗು ಹೊರಗೆ ಹೋಗಗೊಡರೈ! ನನ್ನ
ಕನ್ನೆ ವಾಡದಿ ಕೂತು ನೋಡುತಿಹೆನು

ಎತ್ತೆತ್ತು, ತೆರೆದಿರುವ ಹತ್ತು ಕಿಟಿಕಿಗಳಿಂದ
ಒತ್ತೊತ್ತಿ ಬರುತಿರುವ ನೋಟಗಳನು
ಎಷ್ಟು ದಿವಸನುಭವಿಸಿ ಕಡೆಗೆ ಕಳೆಯಲುಬಹುದು
ಸೃಷ್ಟಿ ಚದುರಿಯ ಮಾಟಿ ಮಾಟಗಳನು
* * * *

ಓಲಾಡುತಿವೆ ಹಕ್ಕಿ ತೇಲಾಡುತಿವೆ ಹಕ್ಕಿ
‘ಗೌರಿಹುಣ್ಣಿವೆ ಬಂತು ಬಂತು’ ಎಂದು
ಹಾರಾಡುತಿವೆ ಮತ್ತೆ ಚೀರಾಡುತಿವೆ ತಿಳಿದು
ತಮ್ಮ ಜನ್ಮವಿದೊಂದು ಹಬ್ಬವೆಂದು

ಹಕ್ಕಿಗಳ ಬಳಗವನ್ನೆಲ್ಲ ರೆಕ್ಕೆಯ ಬಲದಿ
ಮಿಕ್ಕಿ ಹಾರುವದೆಂಬ ಹರ್ಷದಿಂದ
ಚೊಕ್ಕ ಬೆಳ್ಳಿಯ ಕಂಕ ಕಿಂಕಿಲಿಸಿ ನುಡಿಸುತಿದೆ
ದಿಕ್ಕುದಿಕ್ಕನು ಧ್ವನಿಯ ಸ್ಪರ್ಶದಿಂದ

ಚೀಚಿಚೀ ಚೀಚಿಚೀ ಚಿಚಿಚಿಚೀ ಚೀಚಿ ಚಳಿ-
ಗಾಲದಾರತಿಯೊರೆವ ಕರಿಯ ಗುಬ್ಬಿ
ಚೀಚಿಚಿಲಿಪಿಲಿಗುಡುವ ಗುಬ್ಬಿಗಳ ಮುಂದೆ ಬಿಳಿ-
ಗರಿ ಸೆಟಿಸಿ ಕುಣಿಯುತಿದೆ ಉಬ್ಬಿಯುಬ್ಬಿ

ಬರುವ ಸುಗ್ಗಿಯ ಕೂಗು ಕಲಿತು ಇಡಬೇಕೆಂದು
ಈಗಿಂದ ಕೋಗಿಲೆಯು ಕುಕಿಲುತಿಹುದು
ಕರಿಕಾಗೆ ಕಾವ್‌ಗುಡಲು ಕೆಂಗಾಗೆ ಗೂಗಿಡುವ
ನೋಟ ನಡುಹಗಲೊಳಗೆ ಕಾಣಬಹುದು

ಹಿಂಗಾರಿ ಮಳೆಯಾಸೆಯಿಂದ ಹಾರುತ್ತಿರುವ
ಚಾತಕದ ಆತುರತೆ ಚೆಂದವಾಯ್ತು
ತಿಂಗಳನ ಹಾಲ್ಕುಡಿದು ಜಾಗರದಿಯೊರೆಯುವ ಚ-
ಕೋರ ರವ ಬೆಳೆಗಿಸಲಿ ಮಂದವಾಯ್ಕು
* * * *

ಉಗುರುಬೆಚ್ಚಗೆ ಬಿದ್ದ ಬಿಸಿಲು ಗಾಳಿಗೆ ನದುಗೆ
ಚಳಿಯ ಮುಂಚೂಣಿಯೆಂದೆನಿಸುತಿಹುದು
ಹಗುರಾಗಿ ಜಾರುವಿರುಳನ್ನು ಕಾಣುತ ಜೀವ
ಬೇಸಿಗೆಯ ರಾತ್ರಿಯನು ನೆನೆಸುತಿಹುದು

ಹಲವು ಬಣ್ಣದ ಸಂಜೆ ದಿಗಲುಬಡಿಸುತ ಬರಲು
ಜೇವಕೋಟಿಯ ಮೈಯ ದಣಿವು ಹೋಯ್ತು
ನೆಲವು ಪಚ್ಚೆಯ ಹೊಲವು, ಮುಗಿಲು ಹೀರಕದ ಮನೆ
ಅಡವಿಗಡವಿಯೆ ಹೊನ್ನ ಬಣಿವೆಯಾಯ್ತು

ಅಮೃತದರವಟ್ಟಿಗೆಯೊ, ಹಾಲ ಆಲೀಮನೆಯೊ,
ಏಂಬಂತೆ ಬೆಳ್ದಿಂಗಳಿದ್ದ ಇರುಳು
ಅಮೃತಾನುಭವವಾಗಿ ಅರಗುಟುಕು ಆದಂತೆ
ಎನಿಸಿ ಕೊರಗುವದೆಲ್ಲ ಜನರ ಕರುಳು

ಚಿಕ್ಕಿ ಚಕ್ಕನೆ ಹೊಳೆದು ಬಿಳಿಮೋಡಗಳ ಮುಸುಕು
ಹೊಕ್ಕು ಫಕ್ಕನೆ ಮತ್ತೆ ಹೊರಗೆ ಬಂದು
ನಕ್ಕು ನಗಿಸುತ್ತಲಿವೆ ಅಕ್ಕರದ ನೋಟಕರ-
ಚಿಕ್ಕಮಕ್ಕಳ ಆಟ ಸ್ಮೃತಿಗೆ ತಂದು

ಸೊಂಪುಳ್ಳ ಸೇವಂತಿಗಂಪು ಪೇರಲಗಂಪು
ಬಂತು, ಬಿಡದಿರಲು ಮುಂಜಾವ ಜೊಂಪು
ತಂಪುಗಾಳಿಯ ಕೂಡ ಕುಣಿಯುತ್ತ ಹಾಡುತ್ತ
‘ಹಂಪುಗಾಲದ ಪೆಂಪು ಸೊಂಪು ಸೊಂಪು’
* * * *

ಗೊಲ್ಲತಿಯು ನಾನಾಗಿ ಅಲೆದಾಡಿ ಬೀದಿಯಲಿ
ತಿರಿದು ಈಚಲಚಾಪೆ ಹೆಣೆಯಬಹುದು
ಒಲ್ಲಂತೆ ನಾನು ನಾಡಾಡಿ ಡೊಂಬತಿಯಾಗಿ
ಗಣಿಮಿಣಿಗಳನ್ನೇರಿ ಕುಣಿಯಬಹುದು

ತಿರಿಪೆ ಅನ್ನವೆ ಇರಲಿ ಹರಕು ಅರಿವೆಯೆ ಬರಲಿ
ಓರಿಗೆಯ ಮೈಯೊಡನೆ ತಿರುಗಬಲ್ಲೆ
ನೆರಳನ್ನು ಬಿಟ್ಟೆಲ್ಲೊ ತಿರುಳೆ ಮೈಗರೆದಿರಲು
ಅಂಥ ಒಗೆತನವನ್ನು ಮರೆಯೊ ಒಲ್ಲೆ

ಆ ಅನಾಹತದ ಸಂಗೀತ ಕೇಳುವದೆಂದೊ?
ಮುದ್ದು ನುಡಿಗಾಗಿ ಹಸಿದಿಹುದು ಕಿವಿಯು
ನಾ ಅರಸಿ; ನೀ ಅರಸ, ಉಚ್ಚನೀಚನೆ ಬರಲಿ,
ಒಗರಿರುವ ವರೆಗಂತು ಹುಳಿಯೆ ಸವಿಯು

ನಾನು ಮನಸುಖರಾಯನೆಂಬ ರಾಜನ ಮಗಳು
ನರಳುತಿಹೆ ಬಂಧನವ ಅಡಸಿಕೊಂಡು
ಏನಾರೆ ಮಾಡಿ ಯಾರಾರೆ ಬಂದಿಲ್ಲಿಂದ
ಎಲ್ಲಾದರೂ ಹೋಗಿ ಬಿಡಿಸಿಕೊಂಡು

ತೆರೆದ ಕರಣವ ಮುಚ್ಚಿ ಮರೆಯ ದೈವವನರಸಿ
ಇಷ್ಟುದಿನ ಬಳಲಿದುದು ಅಷ್ಟೆ ಸಾಕು
ಧರೆಯ ಸಿರಿ ಸೂರೆ ಹೋಗುತ್ತಿರಲು ಬರ ಏಕೆ?
ಕಣ್ಣಚೆಲುವನು ಮೊದಲು ಉಣ್ಣಬೇಕು
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...