Home / ಕವನ / ಕವಿತೆ / ಕಾವ್ಯ ಸ್ರೋತ

ಕಾವ್ಯ ಸ್ರೋತ

ಒಣಗುತಿದೆ ನನ್ನ ಪಂಚೆ,
ಒಣಗುತಿದೆ ನನ್ನ ಪಂಚೆ
ಎಲ್ಲಿ ತೊಯ್ಯಿಸಲಿ ಈ ಪಂಚೆ,
ಎಲ್ಲಿ ಒದ್ದಿ ಮಾಡಲಿ ಈ ಪಂಚೆ
ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು
ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ
ನಿಮ್ಮ ಕಣ್ಣೀರೂ ಬತ್ತಿಹುದು
ಸಮೀಪಿಸುತಿದೆ ನನ್ನ ಜೀವನದ ಸಂಜೆ
ಒಣಗುತಿದೆ ನನ್ನ ಪಂಚೆ

ಒಣಗಿದ ಪಂಚೆಯುಟ್ಟು
ಒಣಗಿದ ಕವಿತೆಗಳ ಬರೆಯುತಿರುವೆ
ಗೀಚುತಿರುವೆ,
ಗೀಚಿ ಬರೆಯುತಿರುವೆ
ಕವಿತೆಯಾಗಬಹುದೆಂಬಾಸೆಯಿಂದ
ಎಲ್ಲವೂ ಒಣಗಿವೆ, ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ
ನಿಟ್ಟುಸಿರಿನ ಕಾವಿನಿಂದ
ಇದು ಎಂಥ ಬರ, ಒಣಗಿವೆ ಎಲ್ಲಾ

ದೇವರೇ ಮಳೆಯಾಗಲಿ
ಮರ ಗಿಡ ಬಳ್ಳಿಗಳು
ಬಯಲೋ ಬಯಲು
ಹುಯಿಲೋ ಹುಯಿಲು

ಇದನು ವರ್‍ಣಿಸಿ ಕವಿ ಅನ್ನಿಸಿಕೊಳ್ಳಲು ನಾಚಿಕೆಯಾಗುತಿದೆ
ಯಾರಿಗಿಹುದು ನನ್ನ ಒಣಗಿದ ಪಂಚೆಯ ಚಿಂತೆ
ಎಲ್ಲರಿಗೂ ಅವರವರ ದಿನದ ಗಂಜಿಯ ಚಿಂತೆ
ದೇವರೇ, ಮಳೆಯಾಗಲಿ ಬೆಳೆಯಾಗಲಿ, ಎಲ್ಲ ಹಸಿರಾಗಲಿ
ಜಗದ ನೋಟ ಕಣ್ಣಿಗೊಂದು ಹಬ್ಬವಾಗಲಿ,
ನೋಡಿ ವರ್‍ಣಿಸಿದುದು ಕಬ್ಬವಾಗಲಿ!
ಆದರೆಂದು ತೀರುವದೊ ಈ ಬರ,
ಎಂದು ಚಿಗುರುವದೊ ನಾ ನೆಟ್ಟ ಮರ…

ಮಳೆಯಾದಾಗ ತೊಯ್ಯಿಸಲು ಈ ಪಂಚೆ
ನಾನೇ ಇರದಿರಬಹುದು
ಬಾಳ ಸಂಜೆಯ ದಾಟಿ ದೂರ ಸಾಗಿರಬಹುದು
ಆದರೂ ಪ್ರಾರ್‍ಥಿಸುವೆ ಮಳೆಯಾಗಲೆಂದು

ನಾನಿದ್ದರೂ ಇರದಿದ್ದರೂ ನಾ
ಬಿಟ್ಟು ಹೋಗುವೆ ನಾನುಟ್ಟ ಪಂಚೆ
ನಾನುಟ್ಟ ಪಂಚೆಯೆಂದು ಅಲಕ್ಷಿಸದಿರಿ,
ಇದು ಕುಮಾರವ್ಯಾಸನುಟ್ಟ ಪಂಚೆ-
ಅವನು ನನಗೆ ಕೊಟ್ಟ ಪಂಚೆ;
‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯ ಪಂಚೆ’
ಉಟ್ಟು ನೋಡಿರಿ ಮಳೆಯಾದಾಗ –
ನಾ ಹೋಗುವೆ, ಮತ್ತೆ ಬರುವೆ
ಮಳೆ ನೀರಿನ ಹನಿಗಳಾಗಿ ಬೀಳುವೆ –
ಬಿದ್ದು ನಿಮ್ಮ ಬರವ ತೀರಿಸುವೆ
ನಾ ನೆಟ್ಟ ಮರದ ಹೂವಾಗುವೆ.
ಆದರೆ ಆ ಹೂವ ಬಣ್ಣಿಸಲು ಮರೆಯದಿರಿ
ನಿಮ್ಮ ವರ್‍ಣನೆಯಲಿ ನಾನೊಂದು ಕವನವಾಗುವೆ
ಕವಿಯಾಗದಿದ್ದರೂ ಚಿಂತೆಯಿಲ್ಲ
ನೀವು ಬರೆದ ಕವನವಾದರೂ ಆಗುವೆ
*****

ಕನ್ನಡದ ದಿಗ್ಗಜ ಕವಿ ಕುಮಾರವ್ಯಾಸ ಮಹಾಭಾರತವನ್ನು ರಚಿಸುವ ಮುನ್ನ ಕೆರೆಯಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನು ಉಟ್ಟು ಪಂಚೆ ಆರಿಹೋಗುವ ತನಕ ಗದಗಿನ ವೀರನಾರಾಯಣ ಗುಡಿಯಲ್ಲಿ ಕುಳಿತುಕೊಂಡು ರಚಿಸುತ್ತಿದ್ದನೆಂದು ಪ್ರತೀತಿ. ಇದನ್ನೇ ಕಾವ್ಯ ಸ್ರೋತದ ಸ್ಫೂರ್‍ತಿಯ ಸಂಕೇತವನ್ನಾಗಿಟ್ಟುಕೊಂಡು ರಚಿಸಿದ ಕವನ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...