ಓ ಮೇಘರಾಜ ಘನ ವಿದ್ಯುಲ್ಲತಾ ತೇಜ
ಓಜೆಗುಂದಿದನಿಂದು ರವಿರಾಜ. ಆ ಗ್ರೀಷ್ಮ
ಭೀಷ್ಮ ಭಾಸ್ಕರತೆ ಎಂದೋ ಮಸಳಿ, ನೀ ಬಂದೆ
ತಂದೆ ಜೀವನದಾಶೆ, ಕೃಷಿಕರೀಕ್ಷಣದಲ್ಲಿ
ಸ್ಫುರಿಸೆ ಚಾತಕ ಭಾಷೆ, ರಿಕ್ತ ಧ್ವನಿಯಾಗಿ ಗ-
-ರ್ಜಿಸಬೇಡ; ಸುಪ್ತ ಬೀಜವು ಬೇಡದೇನೊ ಜೀ-
ವನ ಮೋಕ್ಷ, ಅಗೊ ಆಲ್ಲಿ ಏಕಾಕ್ಷ ದಾಂಪತ್ಯ
ಕರೆಕರೆಯೊಳೇಕೊ ಕರೆಯುತ್ತಿಹುದು ಬಾ ಬೇಗ.
ಓ ಘನವೆ ಜೀವನನೆ ಅಂತರಿಕ್ಷದೊಳಿಂತು
ಸಾಕ್ಷಿಕನ ತೆರದಿ ಸಂಚರಿಸುವರೆ? ಇಳಿಯಣ್ಣ;
ಕ್ಷೇತ್ರವಾಗಲಿ ಫಲ ರುಚಿರ ಗಾತ್ರ ಸತ್ಪಾತ್ರ
ಬಾಂಬೊಲದಿ ಬರಿದೇನು ಇಂದ್ರಚಾಪದ ಬಣ್ಣ.
ದೃಶ್ಯಕು ಅದೃಶ್ಯಕ್ಕು ಕೊಡುಕೊಳೆಯೆ ಚೆಂದ
ಜೀವಕು ಅಜೀವಕ್ಕು ದೈವಿಕವೆ ಬಂಧ.
*****

















