ಪ್ರಿಯ ಕಿಟ್ಟಿ,
ನಾನೀಗ ಆರಾಮ ಆಗಿ ಮುಖ್ಯ ಕಚೇರಿಯಲ್ಲಿ ಕೂತು, ಕರ್ಟನ್ನಿನ ಸಣ್ಣ ತೂಬಿನ ಮೂಲಕ ಹೊರಗೆ ನೋಡುತ್ತಾ ಕುಳಿತಿರುವೆ. ಇದು ಸಂಜೆಯ ಹೊತ್ತು. ಆದರೂ ನಿನಗೆ ಬರೆಯಲು ಬೇಕಾಗುವಷ್ಟು ಬೆಳಕಿದೆ.
ಅಲ್ಲಿ ಓಡಾಡುತ್ತಿರುವ ಜನರನ್ನು ನೋಡುತ್ತಿದ್ದಂತೆ ಅದೊಂದು ಸಂಕಟದ ದೃಶ್ಯದಂತಿದೆ. ಅವರೆಲ್ಲ ಅತಿಯಾದ ಅಜೆಂಂಟಿನಲ್ಲಿರುವಂತೆ, ತಮ್ಮ ಕಾಲ ಬೆರಳಿನ ಮೇಲೆಯೇ ನಡೆಯುತ್ತಿದ್ದಂತೆ ಕಾಣುತ್ತಿದ್ದಾರೆ. ವೇಗದ ಸೈಕಲ್ಲ ಸವಾರರಿಗೂ ತಮ್ಮ ದಾರಿಯನ್ನು ಸಂಭಾಳಿಸಲು ಯಾರಿಗೂ ಆಗುತ್ತಿಲ್ಲ. ಆ ಮಶಿನ್ ಮೇಲೆ ಸವಾರಿ ಮಾಡುವ ವ್ಯಕ್ತಿ ಎಂಥವನೆಂದು ಕಾಣಲು ನನಗೂ ಸಾಧ್ಯವಾಗುತ್ತಿಲ್ಲ.
ಅಕ್ಕಪಕ್ಕದ ಮನೆಯವರು ನೋಡಲು ಅಂತಹ ಆಕರ್ಷಕ ಜನರಂತೆ ಕಾಣುತ್ತಿಲ್ಲ. ಆ ಮಕ್ಕಳು ಎಷ್ಟು ಗಲೀಜಾಗಿದ್ದಾರೆಂದರೆ ನೀನು ಅವರನ್ನು ಉದ್ದದ ಕುಣಿಕೆ ಹಿಡಿದು ಕೂಡಾ ಮುಟ್ಟಲೂ ಇಷ್ಟಪಡುವುದಿಲ್ಲ. ಸೋರುತ್ತಿರುವ ಮೂಗಿನ ಅವರೆಲ್ಲ ಕೊಳಗೇರಿ ಮಕ್ಕಳು. ಅವರಾಡುವ ಮಾತುಗಳನ್ನು ಅಲ್ಪಸ್ವಲ್ಪ ಮಾತ್ರ ನನಗೆ ಅರ್ಥಮಾಡಿಕೊಳ್ಳಲು ಸಾಧ್ಯ.
ನಿನ್ನೆ ಮಧ್ಯಾಹ್ನ ನಾನು ಮಾತ್ತು ಮಾರ್‍ಗೊಟ್ ಸ್ನಾನ ಮಾಡುತ್ತಿದ್ದಾಗ ನಾನೆಂದೆ, ಅಲ್ಲಿ ಜೋರಾಗಿ ನಡೆಯುತ್ತಿರುವ ಮಕ್ಕಳನ್ನು ನಾವು ಕರೆದುಕೊಂಡು, ಅವರನ್ನೆಲ್ಲಾ ಮೀನು ಗಾಳದ ಸರಳಿಗೆ ತೂಗುಹಾಕಿ. ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ, ಅವರ ಬಟ್ಟೆಗಳನ್ನೆಲ್ಲಾ ತೊಳೆದು ಮತ್ತೆ ಅವರನ್ನು ಹೋಗಲು ಬಿಟ್ಟರೆ… ಹೇಳುತ್ತಿದ್ದಂತೆ ಮಾರ್‍ಗೊಟ್ ನಡುವೆಯೇ ತಡೆದಳು. ಹಾಗೇ ಮಾಡಿದರೂ ನಾಳೆ ಪುನಃ ಅವರು ಮೊದಲಿನಂತೆ ಅದೇ ಗಲೀಜು ಮತ್ತು ಕೊಳೆಯಾಗೇ ಕಾಣುವರು
ನಾನು ಅಸಂಬದ್ಧ ಮಾತಾಡುತ್ತಿದ್ದೇನೆ. ಹಾಗಿದ್ದೂ ಅಲ್ಲಿ ನೋಡಲು ಬೇರೆ ಸಂಗತಿಗಳಿವೆ. – ಕಾರು, ಬೋಟಗಳು, ಮಳೆ ಇವೆಲ್ಲ ಇವೆ. ನನಗೆ ಪ್ರಮುಖವಾಗಿ ಟ್ರಾಮ್ ಗಾಡಿಯು ಚಲಿಸುವಾಗ ಮಾಡುವ ಕೀರಲು ಸದ್ದು ಇಷ್ಟವಾಗುತ್ತದೆ
ನಮ್ಮ ವಿಚಾರಗಳಲ್ಲಿ ನಮ್ಮ ಸಂಗತಿಗಳ ಹೊರತಾಗಿ ಬೇರೆಯ ಯಾವ ವೈವಿಧ್ಯತೆಯೂ ಇರಲಿಲ್ಲ. ಯಹೂದಿ ಸಂಬಂಧಿತ ಸಂಗತಿಗಳಿಂದ ಆಹಾರ, ಮತ್ತೆ ಆಹಾರದ ವಿಚಾರಗಳಿಂದ ರಾಜಕೀಯದ ಸಂಗತಿಗಳ ಸುತ್ತಲೇ ಪುನಃ ಪುನಃ ಗಿರಕಿ ಹೊಡೆಯುತ್ತಿದ್ದೆವು. ಏನೇ ಇರಲಿ, ಯಹೂದಿಗಳ ಬಗ್ಗೆ ಮಾತನಾಡಬೇಕೆಂದರೆ, ನಿನ್ನೆ ಕಿಟಕಿಯ ಪರದೆಯ ಮೂಲಕ ನಾನು ಇಬ್ಬರು ಯಹೂದಿಗಳನ್ನು ನೋಡಿದೆ. ನನಗೆ ನನ್ನ ಕಣ್ಣುಗಳನ್ನೆ ನಂಬಲಾಗಲಿಲ್ಲ. ನಾನೇ ಅವರನ್ನು ಮೋಸಗೊಳಿಸಿದಂತೆ, ಮತ್ತೀಗ ಇಲ್ಲಿ ಅವರ ಸಂಕಟವನ್ನು ನೋಡುತ್ತಿರುವಂತೆ ಕೆಟ್ಟದೆನಿಸಿತು. ನೇರ ಎದುರಿಗೆ ಅಲ್ಲೊಂದು ಹೌಸ್ ಬೋಟ್ ಇದೆ, ಅದರಲ್ಲಿ ಅಂಬಿಗನೊಬ್ಬ ತನ್ನ ಕುಟುಂಬದೊಂದಿಗೆ ವಾಸಿಸುತ್ತಾನೆ. ಅವನ ಹತ್ತಿರ ಒಂದು ಬೊಗಳುನಾಯಿ ಇದೆ. ಅದರ ಬೊಗಳುವಿಕೆ ಮತ್ತು ಬಾಲದಿಂದಲೇ ನಾಯಿ ಇರುವುದು ತಿಳಿಯುತ್ತದೆ. ಹಡಗಿನ ಮೇಲಿನ ಡೆಕ್‌ನಲ್ಲಿ ಆಗಾಗ ಅದು ರೌಂಡ್ಸ ಹಾಕುತ್ತಿರುತ್ತದೆ, ಆಗ ಅದನ್ನು ನೋಡಬಲ್ಲೆವು. ಛೇ! ಇದೀಗ ಮಳೆ ಶುರುವಾಗಿಯೇ ಬಿಟ್ಟಿತು. ಬಹಳ ಜನ ಕೊಡೆಗಳಲ್ಲಿ ಮರೆಯಾದರು. ರೇನ್ಕೋಟ್ ಮತ್ತು ಸಾಂದರ್ಭಿಕವಾಗಿ ಕೆಲವರ ತಲೆಯ ಮೇಲೆ ಹ್ಯಾಟುಗಳನ್ನು ಬಿಟ್ಟು ನನಗೇನೂ ಕಾಣುತ್ತಿಲ್ಲ. ನಿಜಕ್ಕೂ ನನಗೆ ಇನ್ನು ಹೆಚ್ಚನ್ನು ನೋಡುವ ಅಗತ್ಯವಿಲ್ಲ. ನಿಧಾನಕ್ಕೆ ನಾನು ಒಂದೇ ನೋಟದಲ್ಲಿ ಹೆಂಗಸರನ್ನು ತಿಳಿದುಕೊಳ್ಳುವುದನ್ನು ಕಲಿತೆ. ಬಟಾಟೆಯಂತೆ ಊದಿಕೊಂಡವರನ್ನು, ಕೆಂಪು ಅಥವಾ ಹಸಿರು ಕೋಟು ಧರಿಸಿರುವವರನ್ನು, ತುಳಿತಕ್ಕೊಳಗಾದ ಹಿಮ್ಮಡಿಯವರನ್ನು, ಮತ್ತು ತಮ್ಮ ತೋಳುಗಳಲ್ಲಿ ಬ್ಯಾಗುಗಳನ್ನು ಹೊತ್ತ ಹೆಣ್ಣುಗಳನ್ನು ತಿಳಿದುಕೊಳ್ಳುವುದನ್ನು ಕಲಿತೆ. ಅವರ ಮುಖಗಳು ಅವರವರ ಗಂಡಂದಿರ ಮನೋಧರ್ಮಕ್ಕೆ ಅನುಗುಣವಾಗಿ ಒಂದೋ ಕ್ರೂರವಾಗಿ ಕಾಣುತ್ತಿದ್ದವು, ಇಲ್ಲ ಕರುಣಪೂರಿತವಾಗಿದ್ದವು.
ನಿನ್ನ,
ಆನ್
*****






