ಇಲ್ಲಿ ತಂದ ಸಂಕಲ್ಪ ಬರಿ ವಿಕಲ್ಪವಾಯಿತೆ?
ಅಂದು ನುಡಿದ ಬೀರನುಡಿಯದಿಂದು ಜಲ್ಪವಾಯಿತೆ?
ಜಲಧಿಯಾಚೆ ಕರೆದು ತಂದ ದೈವ ಕೈಯ್ಯ ಬಿಟ್ಟಿತೆ?
ದುರ್‍ದೈವವು ಬಿಟ್ಟ ಬಾಣ ಮರೆ-ಮೋಸದಿ ನಟ್ಟಿತೆ?
ಎದೆಯ ಮುಗುಳ ಮುಟ್ಟಿತೆ?
ಹಾತೊರೆಯಲಿಲ್ಲ ನಾನು ಹ೦ಸತಲ್ಪದಂದಕೆ.
ಬಾಯ್ದೆರೆದು ನಿಲ್ಲಲಿಲ್ಲ ಬೆಳ್ಚಸದಾನಂದಕೆ.
ಕನ್ನಡಿತಿಯ ಚೆನ್ನಡಿಗೆನೆ ಹೂವನೊಂದ ಬೇಡಿದೆ;
ದೊರೆಯದಿರುವ ಪಾಡಿಗಾಗಿ ಇಂದು ನೊಂದು ಹಾಡಿದೆ
ದೇವ! ನಿನ್ನ ಕಾಡಿದೆ.
ನಿನ್ನ ಬಸಿರಿನಲ್ಲಿ ಬೆಳೆದು ಬರಲಿ ತಾಯೆ! ಕುವರರು,-
ಎಣ್ದೆಸೆಯಲಿ ನಿನ್ನ ಗೆಲುವ ಸಾರುವಂಧ ಧೀರರು:
ದೈವವಿರಲಿ ಇಲ್ಲದಿರಲಿ,-ರಾಶಿಯಿತ್ತು: ತೂರಿದೆ;
ಜೊಳ್ಳುಗಾಳು ಗಾಳಿಗುಂಟ ಹೋಯ್ತು: ಹೌಹಾರಿದೆ:
ಮುಗಿಲಿಗೆದೆಯ ತೋರಿದೆ.
ಕಾಣದಂಥ ದೈವತವದು ನಿಂತು ನನ್ನ ಹೃದಯದಿ
ತಾಳ ಹಾಕುತಿಹುದು. ಅದರ ಸುಳಿವು ಹಿಡಿದು ವಿನಯದಿ
ಸಾಗುತಿಹೆನು. ಕಣ್ಣನಿತ್ತು, ಕಾಪಿಡುವದು ಕೂಡಿದೆ
ನಿನ್ನನೆನ್ನ ತಾಯೆ! ಅದರ ಕಿರಿಯಾಸೆಯು ಮೂಡಿದೆ:
ಕತ್ತಲಲ್ಲು ನಿನ್ನ ಸೇವೆಗೆಂದು ನನ್ನ ಹೂಡಿದೆ.
*****








