ಹದಿನೆಂಟರ ಬಾನು
ಕನಸುಗಳ ಸರಮಾಲೆ ಹೊತ್ತು
ಹಾರಿ ಬಂದಿದ್ದಾಳೆ
ಹೈದರಾಬಾದಿನಿಂದ ಅರೇಬಿಯಕ್ಕೆ
ಅರಬ್ಬನ ದರ್ಬಾರಿನಲ್ಲಿ
ರಾಣಿಯಹಾಗಿರಬಹುದೆಂದು
ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು
ಮರ್ಸಿಡಿಸ್ ಕಾರಿನಲ್ಲಿ
ಮೆರೆಯಬಹುದೆಂದು
ಕೈಕಾಲಿಗೊಂದೊಂದು
ನೌಕರಿ ಚಾಕರಿ ಇಟ್ಟುಕೊಂಡು
ನಶ್ಯ ಏರಿಸಬಹುದೆಂದು.
ಕತ್ತಲೆ ಓಡಿಹೋಯಿತು
ನನಸಿನ ಬೆಳಕು ಚುಮು ಚುಮುವಾಗಿ
ಮುದ ನೀಡುತ್ತದೆ
ಅಬ್ದುಲ್ ಬಾನುಳನ್ನು ಬಾಚಿ ತಬ್ಬಿದ
ಯೌವನದ ಬಾನು
ಮುದಿ ಅಬ್ದುಲ್‌ನ ತೆಕ್ಕೆ ತುಂಬಿದಳು
ಈಗ ಅಬ್ದುಲ್‌ನ ವಠಾರಿನಲ್ಲಿ
ದಡ್ಡಿಗಳ ಗೊಬ್ಬೆದ್ದಿದೆ
ಗಡ್ಡದ ತುಂಬ ನೊಣಗಳು ಹಾರುತ್ತಿವೆ
ಬಾನೂಳ ಕನಸುಗಳು
ಒಂದೊಂದೇ ನೇಣು ಹಾಕಿಕೊಳ್ಳುವಾಗ
ಮಕ್ಕಳ ದೊಡ್ಡಿ ಇಂಬಾಗುತ್ತದೆ.
ಅಬ್ದುಲ್‌ನ ಮೊದಲ ರಾಣಿ
ಇಜಿಪ್ಷಿಯನ್ ತಾಷಾ
ಲಿಬನಾನಿನ ಹನಿಫಾಳನ್ನು
ಕಟ್ಟಿಕೊಂಡವನು
ಇರಾನಿನ ರಫಿಕಾಳನ್ನು ಇಟ್ಟುಕೊಂಡವನು
ಆಗಲೇ ಬಿಟ್ಟಿದ್ದಾನೆ
ಕುವೈತಿನ ಶಬಾನಾಳನು
ಬಾನುವಿಗೆ ಈಗ ಬೆಳಕಿಲ್ಲ
ಕಣ್ಣುತುಂಬ ಕನಸುಗಳಿಲ್ಲ ಕಣ್ಣೀರೂ ಇಲ್ಲ,
ಧಗಿಸುವ ಸೂರ್ಯನಡಿ ಬಿದ್ದು
ದೂರದ ಹೈದರಾಬಾದಿನಲ್ಲಿ
ಸಲೀಮ್ ಸೈಕಲ್ ತುಳಿಯುತ್ತ
ಮನೆ ಮುಂದೆ ಗಂಟೆ ಹೊಡೆಯುತ್ತ
ಹೋಗುತ್ತಿದ್ದವನು
ಈಗ ಹುಚ್ಚನಾಗಿದ್ದಾನೋ ಏನೋ?
ಚಿಂತಿಸುವ ಬಾನು
ಈಗ ಮನೆಯವರೆಲ್ಲರ ನೌಕರಳಾಗಿ
ಗುಂಡಿ ತೊಳೆಯುತ್ತ ಮುಳುಗಿಹೋಗಿದ್ದಾಳೆ.
*****
ಪುಸ್ತಕ: ಗಾಂಜಾ ಡಾಲಿ