ವರ್ಗ: ಕವನ
ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ
೪೭
ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು –
ಬೆನ್ನೇರಿ ಹಾಯುತಿದೆ ಹೀಗೆ ಇಂದು?
ಯಾವುದೋ ನೆನಪನ್ನು ಹೊತ್ತು, ಹೊಸಿಲಿಗೆ ಬಂದು
ಯಾಚಿಸಿದೆ ಬರಲೇನು ಒಳಗೆ ಎಂದು
ಎಲ್ಲಿದೆಯೊ ಮಲ್ಲಿಗೆ, ಯಾವುದೋ ಗಲ್ಲಿಗೆ
ಸರಕಾಗಿ ತೆರಳಿ, ಹೊಸಕೈಗೆ ಉರುಳಿ?
ತನ್ನ ಚೆಲುವಿಗೆ ಬೇರೆ ದಿಕ್ಕು ದೆಸೆಗಳ ಹೂಡಿ
ತೃಪ್ತವಾಗಿರಬಹುದು ನೆನಪ ನೀಗಿ.
ಸೆಳೆವ ಈ ಪರಿಮಳವ ಮನೆಯೊಳಗೆ ಕರೆಯಲೇ
ನಾನೇ ಹಾಕಿದ ಕದವ ನಾನೆ ತೆರೆದು?
ನುಡಿಸದೇ ಸರಿಸಿದಾ ರಾಗಗಳ ಮೈ ನೀವಿ
ಕೂತು ಹಾಡುವೆ ಮತ್ತೆ ಸ್ವಸ್ತಿ ಎಂದು.
*****
ಪುಸ್ತಕ: ನಿನಗಾಗೇ ಈ ಹಾಡುಗಳು