ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ
ಸೂರ್ಯ ಮಕರರಾಶಿ ಪ್ರವೇಶಿಸುವ ದಿನ
ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ
ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ
ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು
ಚಳಿಗೆ ಮೈಮರಗಟ್ಟುವ ಸಮಯ
ನೆಲದ ಕಣ ಕಣ ಉಸುರಿನೊಳು
ವಸಂತಾಗಮನದ ಪಲ್ಲವ ತರುಲತೆಗಳ ತೋರಣ
ಕುಂಭಮೇಳದ ಚೈತನ್ಯಸಾಗರ ಪರ್ವಕಾಲ
ಪುಷ್ಯ ಹುಣ್ಣಿಮೆ ಮಕರ ಸಂಕ್ರಮಣ
ಮೌನಿ ಅಮವಾಸೆ ವಸಂತಪಂಚಮಿ
ಮಾಘ ಪೂರ್ಣಿಮೆ ಮಹಾಶಿವರಾತ್ರಿಯಲಿ
ಕುಂಭಮೇಳ ಅರ್ಧಕುಂಭಮೇಳಗಳ ಹರ್ಷೋಲ್ಲಾಸ
ನದಿಗುಂಟ ಎಲ್ಲೆಂದರಲ್ಲಿ ಭಕ್ತರ ಸಂಕುಲ
ಬಾಯ್ತುಂಬ ದೇವರನಾಮ
ದೈನ್ಯತೆ ಸಮರ್ಪಣಾ ಭಾವ
ಗಂಗಾ ಯಮುನಾ ಸರಸ್ವತಿ
ತ್ರಿವೇಣಿ ಸಂಗಮದ ಪ್ರಯಾಗ
ಪುಣ್ಯ ಸ್ನಾನಕೆ ಕೊರೆವ ಚಳಿಯೊಳಗೆ
ಹೆಪ್ಪುಗಟ್ಟಿದ ನೀರಿಗಿಳಿವ
ದ್ವಿಗುಣ ಫಲಪ್ರಾಪ್ತಿಯ ನಂಬಿಕೆಯವರ
ಜೀವನೋತ್ಸಾಹ ಆಸೆ ನೀರಿಕ್ಷೆ ಅದಮ್ಯ
ಮುಡಿಯಿಂದ ಅಡಿವರೆಗೆ ಸುರುಳಿಸುರುಳಿಯಾಗಿ
ಇಳಿದ ಕೂದಲು ಆಲದಮರದ ಬಿಳಲುಗಳು
ಈ ಸಾದು ಸನ್ಯಾಸಿಯರದು
ಹೊಂಗಿರಣ ಮೂಡುವ ಮೊದಲೇ
ಹಿಮನೀರಿಗೆ ಧುಮುಕಿ – ಪಾಪ ಕಳೆಯಿತೆಂಬಂತೆ
ಮೇಲೆದ್ದು ನಗ್ನದೇಹಕೆ ಭಸ್ಮ ಧರಿಸಿ
ಓಂ ಶಿವ, ಹರಹರಮಹಾದೇವ
ಧ್ಯಾನಿಸುತ ಒಂಟಿಕಾಲಲಿ ನಿಂತು
ಜಗದ ಪರಿವೆ ಬಿಟ್ಟು ಭಕ್ತಿ ಪರಾಕಾಷ್ಟೆ ತಲುಪಿ
ದಿನೆ ದಿನೆ ದೇಹದಂಡಿಸುವ ಪರಿ ಅಗಣಿತ
ಭಕ್ತಿಯೋನ್ಮಾದದ ಪರಿ ಅಪರಿಮಿತ
ಇದು ಯೋಗ
ಭಕ್ತರ ಸಮ್ಮಿಲನ ಶಾಂತಿಯ ಮಿಲನ
ತ್ರಿವೇಣಿ ಸಂಗಮದೆದೆ ದಡಗುಂಟಲೆಲ್ಲ
ಲಕ್ಷ ಲಕ್ಷಾಂತರ ಭಕ್ತರ ಸಾಗರ ಹೋಮ ಹವನಗಳ
ದೀಪ ಧೂಪಗಳ ಹೊಗೆ ಬೆಂಕಿ ಜ್ವಾಲೆ
ಬೆರಗುಕಣ್ಣುಗಳ ನೋಟ
ಏನೇನೋ ಪಾಪ ಪ್ರಜ್ಞೆಗಳಿಗೆ
ಪ್ರಾಯಶ್ಚಿತ ಪಡುವಾಸೆ
ತ್ರಿವೇಣಿಯರ ಗಾಂಭೀರ್ಯ ನಡಿಗೆಯೊಳಿಳಿದು
ಅವರ ಸಾನಿಧ್ಯ ಸಂಸ್ಕಾರದೊಳಗೊಂದಾಗುವ ತವಕ
ಎಲ್ಲೆಲ್ಲೂ ಭಕ್ತಿ ಶಕ್ತಿಯ ಆವರಣ
ಅವರವರ ಭಕುತಿಗೆ ಒಲೆಯುತಿಹರು……
ಮೆಲ್ಲ ಮೆಲ್ಲನೆ ನಿರಿಗೆ ಚಿಮ್ಮಿಸಿ
ಗೆಜ್ಜೆನಾದದಿ ಬಳುಕಾಡಿ ಸುತ್ತಿ ಸುಳಿದಾಡಿ
ಸಾಗುವ ಜೀವನದಿಗಳ ಸಂಭ್ರಮ ಹರ್ಷೋಲ್ಲಾಸ
ಹಗಲು ರಾತ್ರಿ ಪೂಜಿಸಿಕೊಳುತ ಹೂವಿನ ತೆಪ್ಪ
ಹಣ್ಣುಕಾಯಿ ಅರಿಷಿಣ ಕುಂಕುಮ ಉಡಿತುಂಬಿಕೊಂಡು
ಆಶೀರ್ವದಿಸಿ ಪಾವನಿಸಿ
ಮುಂದೆ ಮುಂದೆ ಹೆಜ್ಜೆಹಾಕುವ ಶಕ್ತಿಯರು
ಎಷ್ಟೊಂದು ಕಣ್ಣಿಗೆ ಕೀಲಿಸಿದರೂ ಕಡಿಮೆಯೆ.
ಅದೋ ಅಲ್ಲಿ ಜಾತ್ರೆಯ ಸಂಭ್ರಮ
ನೆನಪುಗಳು ಹೊತ್ತೊಯ್ಯುವ ಕಾಲ
ಅಲ್ಲಿ ಎನುಂಟು ಏನಿಲ್ಲ ಎಲ್ಲವೂ ದೇವಸಾನಿಧ್ಯ
ಕಂಡದ್ದೆಲ್ಲ ಮುಟ್ಟಿದ್ದೆಲ್ಲ ಪವಿತ್ರ ಸ್ಪರ್ಷದ
ಸೆಳೆತ ಒಂದೊಂದಾಗಿ ಗಂಟಿಗಿಳಿಸಿಕೊಳ್ಳುವ ಕಾತರ
ಗಂಗಾಜಲ ಒಯ್ಯದವರಾರು.
ಮತ್ತೊಂದೆಡೆ ನೂರಾರು ಭಕ್ತರ ಊಟದ ಸಾಲು
ದಾನಿಗರ, ಮಠದವರ ವಿಶಾಲಹೃದಯ
ಕಾಣುವ ಸಮಯ, ಮೈತುಂಬಾ ಬಟ್ಟೆ
ಊಟ ಹಣ ಬಡವರ ನೆಮ್ಮದಿಗೆ ಹೇಳಿದ ತಾಣ
ಚಳಿಗೊಡ್ಡಿದ ಮೈಗೆ ಹಸಿವಿನ ಕ್ಷಣ
ಕಣ್ತುಂಬ ನೀರು ಕೃತಜ್ಞತೆ ಗಂಗೆಗೆ.
ಮಿಣು ಮಿಣುಕು ದೀಪ ಝಗಝಗಿಸುವ ದೀಪಸಾಲು
ಇನ್ನೊಂದೆಡೆ ಅಲ್ಲೊಂದೆಡೆ ಈ ಕಡೆ ಆ ಕಡೆ
ಹಿಮನೀರು ಸುರಿವ ಅನುಭವ ಈ ಚಳಿ
ಕೆಂಡಹೊತ್ತಿಸಿ ಕಾಯಿಸಿಕೊಳುತ
ದೇವರನಾಮ ಜಪಿಸುವ, ದೇವ ಮಹಿಮೆಯ
ನಾಟಕಗಳ ನೋಡುವ ಒಮ್ಮೊಮ್ಮೆ
ತಮ್ಮೊಳಗೇ ದೇವರು ಹೊಕ್ಕಂತೆ ಎದ್ದು ಕುಣಿಯುತ
ನಿರಾಳತೆಯ ರಾತ್ರಿಗೆ ಶರಣಾಗುತ ಬೆಚ್ಚಗಾಗುವರು.
ಅದೇ ಇಲ್ಲಿ ಗುರುಸಾನಿಧ್ಯದಲಿ
ಸತ್ಸಂಗದ ಶಾಂತಿಯ ತಿಳುವಳಿಕೆ
ಮೌನವಾಗಿ ಆಲಿಸುವ ಪಶ್ಚಾತ್ತಾಪಿಗರ
ಕಣ್ಣೀರು ಕಟ್ಟೆಯೊಡೆಯುವ ಜನರ ಗುಂಪು
ನಿಂತು ಕುಳಿತು ಕೇಳುವ ಸಂಯಮಿಗಳು
ಧರ್ಮ ಸಂಸ್ಕಾರ ಸಂಸ್ಕೃತಿಯ ಭೂಮಿಸ್ಪರ್ಷ
ನಡು ನಡುವೆ ವಿದೇಶಿಗರ ಪರಿವರ್ತನಾ
ಮುಖಗಳು ಪ್ರಸನ್ನತೆಯ ಕಳೆ ಸನ್ಯಾಸ
ಸ್ವೀಕರಿಸುವ ಒಲವು ಅದೆಷ್ಟೋ ಗೆಲವು
ಮುಡಿನೀಡಿ ಗಂಗೆಯಲಿ ಮಿಂದು
ವೇದ ಮಂತ್ರಗಳ ಪಠಿಸುತ ಶಾಂತಿ ಸಿಕ್ಕ
ನೆಮ್ಮದಿಗೆ ಸನ್ಯಾಸ, ಅಹಿಂಸೆ ಒಪ್ಪಿ ಅಪ್ಪಿಕೊಂಡದ್ದು
ಜಗದಗಲದ ಶಾಂತಿ ಹುಡುಕಾಟದ ಜನ
ಎಲ್ಲೆಲ್ಲೂ ಚೈತನ್ಯದ ಚಿಲುಮೆ
ತ್ರಿವೇಣಿಯರ ಸ್ಪರ್ಷ
ಬೆಳಗು ಮುಂಜಾವು ನಡುಹಗಲು
ಸಂಜೆ ನಡುರಾತ್ರಿ ಕುಂಭಮೇಳದ ಪರ್ವಕಾಲ.
*****
ಪುಸ್ತಕ: ಇರುವಿಕೆ