ಕೊಚ್ಚೆ ಎಲ್ಡು ಭಾಗ ಮಾಡಿದ್ರೆ ನಾರೋದ್ಯಾವ್ದು? ನಾದೆ ಇರೋದ್ಯಾವ್ದು?

ಸಿ‌ಎಂ ಕೊಮಾಸಾಮಿ ಡಿಸಿ‌ಎಂ ಯಡೂರಿ ಏಟೇ ಗಾಢಲಿಂಗನ ಮಾಡ್ಕ್ಯಂಡು ಮುತ್ತು ಕೊಡ್ತಾ ಜನರ ಎದುರ್ನಾಗೆ ಪಕ್ಷದ ವರ್ಕರ್ಕ್ಸ್ ಎದುರ್ನಾಗೆ ಪ್ರೇಮಿಗಳಂಗೆ ಪೋಜ್ ಕೊಟ್ಟರೂ ಅದೇ ಪ್ರೇಮ ಎಲ್ಡೂ ಪಕ್ಷದ ಶಾಸಕರು ವರ್ಕರ್ಸ್ ನಡುವಿನಾಗೆ ಉಳ್ಕಂಡಿಲ್ಲ ಬಿಡ್ರಿ. ೨೦೦೦ ದ ಇಸವಿಯಿಂದ ಇಲ್ಲಿತಂಕ ಗಣಿಗಾರಿಕೆನಾಗೆ ನಡೆದಿರೋ ಅವ್ಯವಹಾರಾಂವಾ ನ್ಯಾಯಾಂಗ ತನಿಖೆಗೆ ಸರ್ಕಾರ ಒಪ್ಪಿಸಿದ್ರೂವೆ, ಇದು ಕಾಂಗ್ರಸ್ಸಿಗರ ಮ್ಯಾಗಿನ ಪ್ರಹಾರವೇ ಹೊರ್ತು ಬಳ್ಳಾರಿ ರೆಡ್ಡಿ ಕೋಮಾಸಾಮಿ ಕತ್ತಿಗೆ ಉರ್ಲು ಹಾಕಿದ ಸುದ್ದಿ ಇದ್ರಾಗೆ ಬರೋದೇ ಇಲ್ಲ ಅಂಬೋ ಡೌಟಂತೂ ಇದ್ದೇ‌ಐತೆ. ಖರ್ಗೆ, ಧುರ್ಮುದಾದ ಸಿಬಿಐ ತನಿಖೆ ಆಗ್ಲೇಬೇಕು ಅಂತ ಪಟ್ಟು ಹಿಡಿದು ಕುಂತಾರೆ ಜೆಡಿ‌ಎಸ್ನೋರ ಕೈಗೆ ಜುಟ್ಟು ಜನಿವಾರ, ಶಿವದಾರ, ಉಡುದಾರ ಕೊಟ್ಟು ಕುಂತಿರೋ ಬಿಜೆಪಿ ಇರೋಧ ಪಕ್ಷವಾಗಿದ್ದಿದ್ರೆ ಅದೇಟು ಬೊಗೊಳಾಡ್ಯಾರೋ! ಈಗಂತು ಬಾಯಿಗೆ ಬೀಗ ಜಡ್ಕಂಡು ಪವರ್ನೆಲ್ಲಾ ಕೊಮಾಸಾಮಿ ಕೈನಾಗಿಟ್ಟುಬಿಟ್ಟಪ್ರ. ಇದ್ರಾಗೂ ಶಾಣ್ಯತನ ಐತೆ. ಕೊಮಾರನ ಕತ್ತಿಗೆ
ಬಿದ್ದಿರೋ ಕುಣಿಕೆ ಹಗ್ಗ ಕೊಯ್ಕಂಡಾರ ಬೀಳ್ಲಿ. ಇಲ್ವೆ ಅದ್ರಾಗೇ ಸಿಕ್ಕಂಡು ಸಾಯ್ಲಿ. ಅಂಬೋ ಥಿಂಕಿಂಗ್ ಬಿಜೆಪೀಯ ಪ್ಲಾನಿಂಗ್ ಆಗೇತಿ. ಆಕಾಸಾನೇ ತೆಲಿಮ್ಯಾಗೆ ಬೀಳ್ಲಿ ಕೊಮಾಅನಂತೂ ನಿರಾಳ. ‘ನೀನು ೧೫೦ ಕೋಟಿ ತಿಂದಿಯಲ ಅಂದ್ರೆ; ನೀನು ಅಧಿಕಾರ್ದಾಗಿದ್ದಾಗ ತಿಂದಿಲ್ಲ್ವೇನು’ ಅಂತ ದಬಾಯಿಸ್ತಾನೆ. ನೀನು ದೊಡ್ದ ಕಳ್ಳ ಅದಿಯಲೆ ಅಂದ್ರೆ; ನಾನು ಕಳ್ಳ ಅಲ್ಲ ಅನ್ನೋ ಧಂ ತೋದೆ ನೀನೂ ಅವ್ನೆ ಅಂತ ಗುರಾಯಿಸ್ತಾನೆ. ಮಾನಷ್ಟ ಮೊಕದ್ದಮೆ ಮಾನ ಇದ್ದೋನು ಹಾಕ್ಕಳಿ. ನಂಗೇನ್ ಅರ್ಜೆಂಟಿಲ್ಲ ಬ್ರದರ್ಸ್ ಅನ್ನೋ ಕೂಮಾರ, ದೇವರಾಜ ಅರಸು ಸಿ‌ಎಂ ಅಗಿದ್ದಾಗ್ಲೆ ಅವರ ಇರುದ್ದ ಕೇಂದ್ರ ಸರ್ಕಾರ ಗ್ರೋವರ್ ಅಯೋಗ ರಚಿಸಿದ್ದ ನಾಲ್ಕು ಕಂಪ್ಲೇಟ್ನಾಗೆ ಹುರುಳೈತೆ ಅಂತ ಹೇಳಿದ್ನ ಮರೀತಾನೆ. ಗುಳ್ಳೆನರಿ ಹೆಗಡೆ ಇರುದ್ದವೂ ಕುಲದೀಪ್ ಸಿಂಗ್ ಆಯೋಗ, ದಯಾಳ್ ಆಯೋಗ ತನಿಖೆ ಮಾಡಿ ಆರೋಪ ಸಾಬಿತಾಗಿತ್ತು. ಇದ್ಕಿಂತ ಮುಂಚೆ, ನಾಗೆ ಗೋಡ ಎನ್‍ಜಿ‍ಈಎಫ್-ಎಇಜಿ ಸಂಸ್ಥೆಗಳ ಅವ್ಯವಹಾರಕ್ಕೆ ಖುದ್ ಹೆಗಡೆನೇ ಕಾರಣ ಅಂತ ಮಾಡಿದ ಕಂಪ್ಲೇಟ್ನ ಸಿ‌ಎಂ ಅಗಿದ್ದ ಹೆಗಡೇನೇ ಲೋಕಾಯುಕ್ತಕ್ಕೆ ಒಪ್ಪಿಸಿದ್ದುಂಟು. ಆರೋಪ ನಿರಾಧಾರವಾದಾಗ ಟಿವಿ ನ್ಯೂಸ್ ರೀಡರ್ ಮಿನು ಜೊತೆ ಹನಿಮೂನ್ ಹೋಗಿದ್ದುಂಟು. ಆದ್ರೆ ಯಾವ ಸಿಯಮ್ಮೂ ಕಂಪ್ಲೇಂಟ್ ಮಾಡ್ದೊರ ಮ್ಯಾಗೆ ಮಾನ ನಷ್ಟದ ಕೇಸ್ ಹಾಕಿದ್ದು ಹಿಸ್ಟರಿನಾಗೇ ಇಲ್ಲ ಬಿಡ್ರಿ, ಖೇಣಿ ರಸ್ತೆ ಗುತ್ತಿಗೆ ಪ್ರಕರಣ್ದಾಗೆ ಸುಪ್ರೀಂ ಕೋಲ್ಟೇ ಉಗಿದ್ರೂ ಕುಮಾರಸ್ವಾಮಿ ಮಕ ವರಸಿಕ್ಯಾಂಬಾಕೆ ಯಡೂರಿನೆ ಕರ್ಚಿಫ್ ಕೊಡ್ತಾನೆ! ರೆಡ್ಡಿ ಬಾಯಿಗೆ ಬಿಗ್ ಪ್ಲಾಸ್ಟರ್ ಹಾಕ್ರಿ ಇಲ್ಲ ಯಲಕ್ಷನ್ಗೆ ಹೋಗೋಣ ನಡಿರಿ ಅಂತ ಜೆಡಿ‌ಎಸ್ ನೋರೇ ಧಂಕಿ ಹಾಕಿದ್ರೂ ಅಧಿಕಾರದ ರುಚಿ ಕಂಡ ಬಿಜೆಪಿ ದೈನೇಸಿ ಸ್ಥಿತಿಗೆ ಬಿದ್ದು ಪ್ರತಿಭಟಿಸೋ ತಾಕತ್ತೇ ಇಲ್ದೆ ನಾಯಕರ ಬಿಹೇವಿಯರನ್ನು ಖಂಡಿಸ್ದೆ ತೆಪ್ಪಗದೆ. ತತ್ವ ಸಿದ್ಧಾಂತ ನಿಷ್ಠೆ ಅಂತ ಬೊಗಳೆ ಹೊಡೆಯೋ ಬಿಜೆಪಿ ಪ್ರಬುದ್ಧ ಪಕ್ಷ ಆಗೋದಾರ ಯಾವಾಗ್ರಿ?

ದೊಡ್ಡ ಗೋಡ್ರರಂತೂ ಬಿಜೆಪಿನಾಗಿರೋರು ನನ್ನ, ನನ್ನ ಪಕ್ಷನ್ನಾ ಮಟಾಷ್ ಮಾಡ್ಲಿಕ್ಕೆ ಹೊಂಟಾರೆ ಅಂತ ಅಗ್ದಿ ರಾಂಗ್ ಆಗಿ ೧೭೫ ತಾಲ್ಲೂಕಿನಾಗೂ ‘ಬೇರ್ ಪೂಟ್ ಟೂರ್’ ಮಾಡಿ ಪಕ್ಷನಾ ಸ್ಟ್ರಾಂಗ್ ಮಾಡ್ತೀನಿ. ಹಂಗ್ ಮಾಡ್ತೀನಿ ಹಿಂಗ್ ಮಾಡ್ತೀನಿ ಮಂಗಮಾಯ ಮಾಡ್ತೀನಿ. ಮಾಯ ಮಂಗ ಮಾಡ್ತೀನಿ ಅಂತ ಬೊಂಬ್ಡಿ ಬಜಾಯ್ಸಿಸ್ತಿದ್ರೂ ಬಿಜೆಪಿ ಹೈದರು ಕ್ಯಾರೆ ಅನ್ನಂಗಿಲ್ಲ. ‘ದ್ಯಾವೇಗೋಡ್ನಾ’ ಇಂವಾ ಯಾರುಂಟು ಮಾರಾಯ್ರ! ನಮಗೆ ಕುಮಾರಸಾಮಿ ಓನ್ಲಿ ಗೊತ್ತುಂಟು. ಗೋಡಂತಾವ ನಮ್ಮದೆಂತ ಯವ್ಹಾರವೂ ಇಲ್ಲದಲ್ಲ್ಕೋ… ಈ ಗೋಡುದೆಂತ ಪಿರಿಪಿರಿ. ನಮ್ಗೆ ಕೊಮಾರನ ಮಾತಷ್ಟೆ ಸರಿಸರಿ ಅನ್ನಲಿಕತ್ತಾನೆ ಕೊಲ್ಗೇಟ್ ನಗೆಯ ಸದಾ ಆನಂದ ಗೋಡ. ನಮ್ಮ ಬಿಜೆಪಿನಾಗೆ ಗುಂಪುಗಾರಿಕೆ ಐತೆ ಅಂಬೋ ಗೋಡನ ಮಾತು ಸುಳ್ಳುಂಟು. ಗುಂಪುಗಾರಿಕೆ ಲಂಚಗಾರಿಕೆ ಇರೋದೆಲ್ಲಾ ಜೆಡಿ‌ಎಸ್ನಾಗೆ ಅಂತ ನೀರು ಸಚಿವ ಈಸ್ವರಿ ಗೋಡನ ಬುಡಕ್ಕೇ ನರು ಬಿಡ್ಲಿಕತ್ತಾನೆ.

ಈಟೆಲ್ಲಾ ಡ್ರಾಮ ನಡೀಬೇಕಾದರೆ ಬಬ್ರುವಾಹನ ಡಿಕೆಶಿ ಸುಮ್ಗೆ ಇರೋದಾರ ಹೆಂಗೆ? ಕೊಮಾರನ ಹೆಂಡ್ರ ಹೆಸರ್ನಾಗೆ ರೀಸೆಂಟ್ ಆಗಿ ೮೫ ಕೋಟಿ ಬಿಲ್ಡಿಂಗ್ ಪರಚೇಸ್ ಆಗೇತಿ. ಸಿ.ಎಂ. ಆಗಿ ೫೦ ದಿನದಾಗೆ ಈ ಪಾಟಿ ರೊಕ್ಕ ಮಾಡ್ಲಿಕ್ಕೆ ಹೆಂಗೆ ಪಾಸಿಬಲ್ ಆತು? ಸಿ‌ಎಂ ಆಸ್ತಿನಾ ಮುಟ್ಟುಗೋಲು ಹಾಕ್ಯಂಡು ಸಿಬಿಐ ಎನ್‍ಕ್ವಯರಿ ಮಾಡ್ಲಿ ಅಂತ ಹಳೆ ಪೇಪರ್ಗಳ್ನ ಹಿಡ್ಕಂಡು ಚೀರಾಡ್ಲಿಕತ್ತಾನಲ್ರಿ. ಡಾಂಬರ್ ಕಲರ್ಗೆ ತಿರುಗಿದ ಕೊಮಾರಸಾಮಿ, ನಾನು ಶೇ. ೮೫ ರಷ್ಟು ಬ್ಯಾಂಕ್ ಲೋನ್ ತಗಂಡೀನಿ. ಶೇ. ೧೩ ರಷ್ಟು ಬಿಲ್ಡಿಂಗ್ ರೆಂಟಿಗೆ ತಗಂಡಾರು ಕೊಟ್ಟಾರೆ…. ಬರೀ ಶೇ. ೩ ಕೈಯಿಂದ ಹಾಕಿವ್ನಿ. ನಾನು ರೈತನ ಮಗ, ಪಾಪರ್ ನನ್ಮಗ ನಂತಾವ ಅಷ್ಟು ರೊಕ್ಕ ಎಲ್ಲದ್ದೀತು ಅಂತ ಫೀಲಾಗವ್ನೆ. ಇದೊಳ್ಳೆ ಕತೆಯಾತೆ! ಸಿ‌ಎಂ ಉಂಡ್ರೆ ಅವರ ಅವರ ಮನೆಯೋರು ಉಂಡಂಗಾತೆ? ಅವರು ಉಣ್ಣಕ್ಕಾಗಿ ಬಿಸಿನೆಸ್ ಮಾಡಿದ್ರೆ ಏನ್ರಿ ತಪ್ಪು ಅಂತ ಗೋಡ್ರ ದತ್ತು ಪುತ್ರ ದತ್ತಕೊಚ್ಚನ್ ಆಕವ್ನೆ. ಇದರ ಮಧ್ಯದಾಗೆ ಬಿಜೆಪಿ ಸಂಸದೆ ಮಾಜಿ ಸುಂದರಿ ಮನೋರಮೆ ದ್ಯಾವೇಗೋಡ ನಾಗಾರ್ಜುನ ವಿದ್ಯುತ್ ಯೋಜ್ನೆನಾಗೆ ಲಂಚ ಹೊಡೆದಾರೆ ಅಂತ ಅವ್ರೆ. ಬೆಂಕಿ ಇಲ್ದೆ ಹೊಗೆ ಆಡ್ತಾ ಅಂತ ಸಿದ್ದು ಕೊಚ್ಚನ್ ಹಾಕವ್ನೆ. ಗೋಡ ಬಿಜೆಪಿನೋನ ಬೋದ್ರೆ ನೀವೇನು ಸೀರಿಯಸ್ ಆಗಿ ತಕ್ಕಾಬೇಡಿ. ನಮ್ಮ ಫ್ರೆಂಡು ವಸಿ ಲೂಸ್ ಟಂಗ್ ಬ್ರದರ್ ಅಂತ ಕುಮಾನೇ ಬಿಜೆಪಿಗೆ ಬೆಣ್ಣೆ ಹಚ್ತಾ ಅವ್ನೆ. ‘ಎ ಕ್ಲಾಸಿಕ್ ಡ್ರಾಮಾ ಈಸ್ ಗೋಯಿಂಗ್ ಆನ್. ಇವರ್ಗೆ ನಾಚ್ಗೆ ಹೇಚ್ಗೆ ಬ್ಯಾಡ್ವಾ? ಈ ಭ್ರಷ್ಟ ಸರ್ಕಾರ ಪಲ್ಟಿ ಹೊಡಿಸೋವಗೂ ನಾನ್ ರೆಸ್ಟ್ ತಗಳಾಕಿಲ್ಲ’ ಅಂತ ಸಿದ್ದುವಿನ ಶಪಥ ಬೇರೆ. ಬಿಜೆಪಿನೋರ ಹೆಲ್ತ್ ಕಂಡೀಷ್ ಇಲ್ಲಾಟೇ ಅಲ್ಲ ಡೆಲ್ಲಿನಾಗೂ ನಾರ್ಮಲ್ ಇಲ್ರಿ. ಪಿವಿ ನರಸಿಂಹರಾನ್ ಪಿ‌ಎಂ ಆಗಿದ್ದಾಗ ಆತನ ಆಫೀಸ್ನಾಗೆ ಗೂಢಾಚಾರ ಇದ್ದ ಅಂತ ಬುಕ್ನಾಗೆ ಬರ್ಕೊಂಡ ಜಸ್ವಂತ ಸಿಂಗು ಅವನ್ಯಾರು ಅಂತ ಹೆಸರು ಮಾತ್ರ ಹೇಳವಲ್ಲ. ಮನಮೋಹನಸಿಂಗ್ಗೆ ಕಳುಹಿಸಿದ ಲ್ವೆಟರ್ನಾಗೂ ಹೆಸರು ಹಾಕಿಲ್ವಂತೆ. ಈವಯ್ಯನ ಮಾತ್ನ ಅಮೇರಿಕಾದೋರೂ ಒಪ್ಕಂಡಿಲ್ಲ. ಇಂಥ ಹುಸಿ ಬಾಂಬ್ ಎಸೆಯೋದ್ರಾಗೆ ಬಿಜೆಪಿ ಮುದುಕರು ಎಕ್ಸ್ ಪರ್ಟುಗಳು ಬಿಡ್ರಿ. ಅಲ್ಲ, ಈ ಜಸ್ವಂತ ಸಿಂಗ ಈಟು ವರ್ಸ ಯಾಕೆ ಬಾಯಿ ಬಿಡದಂಗಿದ್ದದ್ದು ಅಂಬೋದೇ ವಂಡರ್ಪುಲ್ ಡೌಟು ಆಗೇತಲ್ರಿ ಅಂತ ಗುಸಪಿಸ ಹಬ್ಬತ್ಲು ಜಸ್ವಂತಸಿಂಗು ಪ್ಲೇಟೇ ಚೇಂಜ್ ಮಾಡವ್ನೆ. ಎಲ್ಲರೂ ಅಟೇ ಕಣ್ರಿ ಪಕ್ಷ ಭೇದ ಮತು ಒಬ್ಬರು ಮ್ಯಾಗೆ ಮತ್ತೊಬ್ಬರು ಕೊಚ್ಚೆ ಎಸ್ಕಂತಾ ಅವರೆ. ಎಲ್ಲಾ ಕೊಚ್ಚೆಗಳೆ ಕಚ್ಚೆ ಹರಕರೆ ಕಡು ಭ್ರಷ್ಟರೆಯಾ. ಈಗ ಹೇಳ್ರಲಾ, ಕೊಚ್ಚೆನಾ ಎಲ್ಡು ಭಾಗ ಮಾಡಿದ್ರೆ ನಾರೋದು ಯಾವ್ದು ? ನಾರ್ದೆ ಇರೋದು ಯಾವ್ದು?
*****
( ದಿ. ೧೭-೦೮-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪ
Next post ಕಾಲನ ಕುದುರೆಯನೇರಿ ಬರುತಿಹ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…