Home / ಕವನ / ಅನುವಾದ / ದುಃಖಸೇತು

ದುಃಖಸೇತು

ಅನಾಥೆ ಇವಳಿನ್ನೊಬ್ಬ
ಳೀ ಜನ್ಮರೋಸಿ,
ವೇದೆಯನು ತಾಳದೆಯೆ
ಮುಳುಗಿದಳು ಹೊಳೆಗೆ.
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು,
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ
ನೋಡು, ಮೈಯೊಳಗುಡಿಗೆ
ತೊಯ್ದು ಹತ್ತಿಹುದು:
ತೋಡಿ, ತೊರೆನೊರೆಯಾಗಿ
ಹೊಳೆ ಬಸಿಯುತಿಹುದು.
ಎದೆಗರಗು, ಬಾ, ಎತ್ತು,
ಮಾಕರಿಸದೊಲಿದು.
ದುಡುಕಿ, ಕಟ್ಟನು ಮೀರಿ,
ಕೆಟ್ಟವಳು ಇವಳು,
ತಾನು ಮಾಡಿದ ಕರ್ಮ
ತನ್ನ ಬೆನ್ನಲಿ ಬಂದು
ಸುಟ್ಟವಳು ಇವಳು;
ಎನುತ ದೋಷವ ಬೆದಕಿ
ಗದರದಿರು ನೀನು.
ಅವಳ ಪಾಪಗಳೇನೊ,
ಹೊಲ್ಲನಡೆಯೇನೊ ,
ಅದರೆಣಿಕೆಗಿದೆ ಹೊತ್ತು?
ನಾವೆ ಜರೆವವರು?
ಜವರಾಯ ನುಂಗಿದೀ
ಹೆಣ್ಣು ಮಗುವಿನಲಿ
ಹೊರೆದ ಕಲ್ಮಷ ತೊಳೆದು,
ಈಗ ತಾನುಳಿದಿಹುದು,
ಚೆಲುವಾದ, ನಿರ್ಮಲದ
ಹೆಣ್ಣುತನವೊಂದು!
ಏನು ಕರೆಗಳೆ ಇರಲಿ,
ಹೆಣ್ಣು ಹುಟ್ಟಹುದು.
ಒರಸು ಆ ತುಟಿಗಳನು,
ಕೆಸರೊಸರುತಿಹುದು.
ಕಟ್ಟು ಕೂಡಿಸಿ ಕುರುಳ,
ಕರಿಯ ಸೊಂಪಿನ ಕುರುಳ,
ಅದ್ದಿ ಕೆದರಿಹುದು.
ಆರಿವಳು? ಮನೆಯೆಲ್ಲಿ?
ಬಲ್ಲವರು ಯಾರು?
ಇವಳ ತಂದೆಯದಾರು ?
ಇವಳ ತಾಯಿಯದಾರು?
ಅಕ್ಕತಂಗಿಯರಿಹರೆ?
ಅಣ್ಣತಮ್ಮದಿರು?
ಇನ್ನು ಅಕ್ಕರೆಯಾತ
ಇನ್ನು ಹತ್ತಿರದಾತ
ಮತ್ತೊಬ್ಬನಿಹನೊ?
ನಿರಿಹಿಡಿದು, ನಡುವೇರಿ,
ತೊದಲುಮಾತನು ಬೀರಿ,
ಕೊರಗ ನಗಿಸಲು ಬಲ್ಲ
ಮಗುವಿಲ್ಲವೇನೋ?
ಆಹ, ಎಲ್ಲಡಗಿತೋ
ಆರ್ಯಧರ್ಮದ ಕರುಣ,
ಆರ್ಯಜನಗಳ ಮರುಕ,
ಉರಿಯುವನೆ ಬಲ್ಲ!
ಅಯ್ಯೋ, ಏನನ್ಯಾಯ,
ತುಂಬಿದೀ ಊರಲ್ಲಿ,
ಮನೆ ಇವಳಿಗಿಲ್ಲ,
ತುಂಬಿದೀ ಜನದಲ್ಲಿ
ನೆರೆ ಇವಳಿಗಿಲ್ಲ.
ಅನಾಥೆ ಹಾ, ದಿಕ್ಕಿಲ್ಲ,
ಮರಣವೇ ಶರಣು.
ಹೆತ್ತವರ ಪ್ರೇಮವೋ,
ಸೋದರರ ಪ್ರೇಮವೋ,
ಕೂಡಿದನ ಪ್ರೇಮವೋ,
ಮಕ್ಕಳಲ್ಲಿ ಪ್ರೇಮವೋ,
ಯಾವುದೂ ಹಿಡಿಯದೆಯೆ
ತಡೆಯದೆಯೆ ಹೋಯ್ತೆ?
ನಿಷ್ಕರುಣರಲಿ ಬೆಂದು,
ಪ್ರೇಮಸಾಗರದಮೃತ
ಬಯಲುದೊರೆಯಾಯ್ತೆ?
ದೀನರಕ್ಷಕ ಮೊರೆಯ
ಕೇಳಿ ಕಾಪಾಡುವುದು
ತನಗೆ ಹುಸಿಯಾಯ್ತೆ?
ಏನು ಬಂತೋ ದುಃಖ,
ಏನು ಬಂತೋ ರೋಷ,
ಕ್ರೂರಮನಸನು ಮಾಡಿ
ಬೀರಿದಳು ಬದುಕು!
ಊರ ಮನೆಬೆಳಕುಗಳು
ದೂರ ಸರಿಯುತ್ತ,
ಕತ್ತಲೆಯ ಹೊಳೆ ಹರಿದು
ಹತ್ತಿರಕೆ ಬರುತ,
ಚಳಿಗಾಲ ಸೋಕಿದರೆ
ಬೆಚ್ಚಿ ನಡುಗುವಳು,
ಬೆಚ್ಚಿದಳೆ, ನಡುಗಿದಳೆ,
ಹೆದರಿದಳೆ ಹೊಳೆಗೆ?
ಹುಚ್ಚು ಹಿಡಿಸಿದ ಹಾಳು
ಬಾಳ ತೆಗೆದೊಗೆದು,
ಏನಿದೆಯೊ ಅರಿಯದಿಹ
ಸಾವ ಕೆಳೆಬಗೆದು,
ಎಲ್ಲಾದರೂ ಸರಿಯೆ,
ಎಲ್ಲಾದರೂ ಸರಿಯೆ,
ಈ ಲೋಕ ಬೇಡೆಂದು
ಹಾರಿದಳು ನೆಗೆದು.
ಹಾರಿದಳು, ಮುಳುಗಿದಳು,
ತೇಲಿದಳು, ಕೊಚ್ಚಿದಳು,
ಕೊರೆವ ಹೊಳೆಯೊಳಗೆ,
ಎಲವೊ ಕಾಮುಕ, ಕಟುಕ,
ಇಲ್ಲಿ ಬಾ, ನೋಡು ಬಾ
ಎಲ್ಲಿ ಬೆಚ್ಚಗೆ ಮಲಗಿ
ಸಲ್ಲಾಪಮಾಡುತಿಹೆ.
ಈಗ ಬಾ, ನೋಡು ಬಾ,
ಇವಳೊಡನೆ ಮುಳುಗು ಬಾ,
ಮುಳುಗು ಬಾ, ಪಾಪಿ!
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು.
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ!
ಕೈಕಾಲುಗಳ ಸವರಿ
ಮೃದುವಾಗಿ ಮಡಿಸು;
ಬಿರುಗಣ್ಣ ನೋಟವನು
ರೆಪ್ಪೆಯಲಿ ಕವಿಸು;-
ಜರೆಯುವರ, ಹಳಿಯುವರ,
ಕೊರೆಯುವರ, ತುಳಿಯುವರ,
ಕಿವಿ ಕೇಳಿ ಕೇಳಿ,
ಹಲ್ಲುಮುಡಿಯನು ಕಚ್ಚಿ
ಕಲ್ಲುಮನಸಾದಾಗ
ನೆಟ್ಟು ದೀ ನೋಟ!
ಮುಂದ ಬಲ್ಲವರಾರು?
ಇಂದಾಯ್ತು ಶಾಂತಿ.
ದೇವ ಮಾಡುವುದಿರಲಿ,
ನಾವು ಮಾಡುವ ಹಿಂಸೆ,
ಅದೆ ನರಕಹಿಂಸೆ!
ದುಃಖಿಗಳ, ಪಾಪಿಗಳ
ನಾವು ಧಿಕ್ಕರಿಸುವೆವು
ದೂರ ಅಟ್ಟುವೆವು.
ಅಟ್ಟನಾ ರೀತಿಯಲಿ
ತಂದೆ, ರಕ್ಷಕನು.
ದೈನ್ಯದಲಿ, ಮೌನದಲಿ
ತನ್ನ ಪಾಪವನೊಪ್ಪಿ
ಮರೆಹೊಗುವನಾಥೆಯನು
ಎದೆಯಲ್ಲಿ ಕೈಮುಗಿಸಿ
ಅವನ ಬಳಿ ಕಳುಹು.
*****
HOOD (1799 – 1845): Bridge of sighs
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...