ಹಠಯೋಗ ಸಾಧಿಸುವ ಯೋಗಿ ಬಾ, ದಿಟವನುಡಿ.
ಕಪಟಿ ಕಣ್ಣಿನ ಕೂರ ಕಿಡಿ ನೋಟ ಚಿಮ್ಮದಿರು!
ಉಪಚಾರ ವೈಖರಿಯ ವಿಸ್ತರಿಸಿ ಹಿಗ್ಗದಿರು
ಮಠ ಮಾನ್ಯ ಸೌಧ ಗುಡಿ ಗೋಪುರಕದ ಕಾಲಹುಡಿ
ಚಿಮ್ಮಿ ಚಿತ್ರಿಸುವ ಘನ ಪುಣ್ಯ ಮೂರ್ತಿಯ ರೂಪ
ಹೊಮ್ಮಿ ಹೊನ್ನಿನ ಹೊಗೆಯಲೊಗೆದ ಸ್ಮರ ಸುರಚಾಪ!
ದಿಕ್ತಟವ ಧೀಂಕಿಟ್ಟು ಹಾರುತಿದೆ; ಹಾ! ನೋಡು!
ಮುಕ್ತ ಮನ ನಿರ್‍ಲೇಪದಲಿ ನಿಂತು ನಿರುಕಿಸಿತು-
ಯುಕ್ತಿ ಮಾರ್ಗದ ಮಹಾ ತಾಂತ್ರಿಕರ ಗುರುತಿಸಿತು
ಭಕ್ತನೊಲು ಶರಣೆಂದು ದನಿಗೈಯ್ಯಲಾ ಹಾಡು
ಜೀವನದ ನೈರ್‍ಮಲ್ಯ ನಲ್ವಾಸನೆಯ ಪೊತ್ತು
ಭಾವನಾಪೂರ್ಣ ಸತ್ಕಾವ್ಯವೇ ಮೈವೆತ್ತು
ಅನಂದಮೊದವಿಸುವ ಸಂಜೀವಿನೀ ಸುಧೆಯು
ಜ್ಞಾನನಿಧಿ ಪಾದದಲ್ಲಿ ಪ್ರಸರಿಸಿತು! ಭೋ! ಕಾಯು!
*****
ಬೆಂಗಳೂರು : ೧೯೪೩








