Home / ಕವನ / ಕವಿತೆ / ಮಧುವನ

ಮಧುವನ

ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ-
ನಂಜನಗುಡಿಯ ರಾಜಮಾರ್ಗದಲಿ
ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು
ಮೈಸೂರಿನುದ್ಯಾನ ಮಧುವನವು ೧

ರಂಗುರಂಗಿನ ಹೂಗಳಾಭರಣ ಒಪ್ಪಿರಲು
ಕಂಗಳನು ಮೋಹಿಸುವ ಹಸುರುಡುಗೆಯ
ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್ಲಿ
ಕಾಂಬುವುದು ಸೊಗವಡೆದ ಮಧುವನವು ೨

ಕುಲವನಿತೆ ಸೂಸುತಿಹ ಎಳೆನಗೆಯ ರೀತಿಯಲಿ
ಅರಳಿರಲು ಕೊಳದಲ್ಲಿ ತಾವರೆಗಳು
ಬಂಡುಂಡು ಝೇಂಕರಿಪ ಮರಿದುಂಬಿ ತಂಡಗಳು
ಹಾಡುವುವು ಮಧುರ ಸಂಗೀತಗಳನು ೩

ತಂಗಾಳಿ ಸುಳಿಯುತಿರೆ ತನಿಗಂಪು ಬೀರುತಿರೆ
ಗಿಳಿವಿಂಡು ತನಿರಸವ ನೀಂಟುವುವು-
ಹಾರುವುವು ಬಿಳಿಮುಗಿಲ ತೆರೆತೆರೆಯ ಜೊತೆಯಲ್ಲಿ
ಪಚ್ಚೆತೆನೆಗಳ ಸಾಲು ತೋರಣದಂತೆ ೪

ಹೂಬಿಟ್ಟು ಬಳುಕುತಿಹ ಬಳ್ಳಿ ಮಾಲೆಯಲ್ಲಲ್ಲಿ
ತೂಗುವುವು ಮಾಮರದ ಕೊಂಬೆಯಲ್ಲಿ
ಚೆಲುವು ಕಂಗಳ ನವಿಲು ಕುಣಿಯುತಿರೆ ಸಂತಸದಿ
ಕೋಗಿಲೆಯು ಹಾಡುವುದು ಸವಿದನಿಯಲಿ ೫

ದನಿಯೆತ್ತಿ ಕೂಗುತಿಹ ಹಕ್ಕಿಗಳ ಕಲರವದ
ಮಾರ್ದನಿಯು ಸೆಲೆಯುತಿರೆ ಮಧುವನದಲಿ
ಆಡುವುವು ಅರಸಂಚೆ ತಿಳಿನೀರ ಕೊಳದಲ್ಲಿ
ತಾವರೆಯ ಬನದಲ್ಲಿ ಅನುದಿನವು ೬

ಪರಿಸರಿಯ ಹೂಗಳನು ಮುಡಿದಿರುವ ಬನದೇವಿ
ಕೋಗಿಲೆಯ ಗಾನವನು ಉಲಿಯುತಿಹಳು
ಮಧುಪಗಳ ಝೇಂಕಾರ ಕಾಲಋಳಿ ಘಲ್ಲೆನಲು
ಮಲ್ಲಿಕಾರತಿಮಾಲೆ ಬೆಳಗುತಿಹಳು ೭

ಅಚ್ಚಹಸುರಿನ ಹಾಸಿನಲಿ ಅಂಚು ಬರೆದಂತೆ
ಕಂಗೊಳಿಸೆ ಬಣ್ಣ ಬಣ್ಣದ ಹೂಗಳು
ಕಾಂಬುಪವುದು ಮಧುವನವು ವನಲಕ್ಷ್ಮಿ ಸಿಂಗರಿಪ
ಮಧುರಾಜನರಮನೆಯ ಸೆಜ್ಜೆಯಂತೆ ೮

ಹಬ್ಬಿರುವ ಬಳ್ಳಿಯಲಿ ರಚಿಸಿರುವ ನವಿಲು ಹುಲಿ
ಗಂಡಭೇರುಂಡ ಸಿಂಹ ಶರಭಗಳು
ಕಾಣುವುವು ವೈಹಾರ ಕೇಳಿಯಲಿ ನಲಿವಂತೆ
ಜಾತಿ ವೈರವಬಿಟ್ಟು ಬಾಳುವಂತೆ ೯

ನಿಂಬ ಕುರುವಕ ಜಂಬು ನೇರಿಳೆ ಹಲಸು ಬೇವು
ರಸಾಲ ಸುರಹೊನ್ನೆ ತಮಾಲ ಕೌಂಗು
ದಾಳಿಂಬೆ ಬಾಳೆ ಸಂಪಿಗೆ ಬೇಲ ಚಕ್ಕೋತ
ತೆಂಗು ಮಾದಳ ವೃಕ್ಷ ಬೆಳೆದಿರುವುವು ೧೦

ಮಧುಮಾಸ ಬಂದಿರಲು ವನದೇವಿ ಸುಖಿಸುವಳು
ಮೃದು ತಳಿರ ಶಯ್ಯೆಯಲಿ ಮಧುವನದಲಿ
ಮೈಮರೆತು ನಿದ್ರಿಪಳು ಕೋಗಿಲೆಯ ಗಾನದಲಿ
ಮಂದ ಮಾರುತ ಬೀಸೆ ಚಾಮರವನು ೧೧

ಗ್ರೀಷ್ಮಋತು ಬಂದಿರಲು ಕುಳ್ಳಿಹಳು ಮಧುಲಕ್ಷ್ಮಿ
ತಂಪೀವ ಹೊಂಗೆಯಾ ನೆರಳಿನಲ್ಲಿ
ತಣ್ಣೆಲರು ಬೀಸುತಿರೆ ಎಳನೀರ ನೀಂಟುವಳು
ಜಲಕೇಳಿಯಾಡುವಳು ಮಧುವನದಲಿ ೧೨

ವರ್ಷಋತು ಸಮನಿಸಲು ಕಾರ್ಮುಗಿಲ ಗರ್ಭದಲಿ
ಸೆಳೆಮಿಂಚು ಹೊಳೆಯುತಿರೆ ನೋಡುತಿಹಳು
ಬನಲಕುಮಿ ಗರಿಗೆದರಿ ಕುಣಿಯುತಿಹ ಕೊರಲೆತ್ತಿ
ಕೇಕೆಹಾಕುತಿಹ ನವಿಲು ಬಳಗವನು ೧೩

ಮಳೆಮುಗಿಲ ಮಾಲೆಯನು ಧರಿಸಿರಲು ಚಾಮುಂಡಿ
ಕಾಳ ಮಹಿಷನ ಸದೆವ ವಿರೂಪದಲಿ
ವನಲಕ್ಷ್ಮಿ ನಡುಗುತಿಹ ತೆರದಲ್ಲಿ ಕಾಂಬುವಳು
ಮಳೆಗಾಳಿ ಬೀಸುತಿರೆ ಮಧುವನದಲಿ ೧೪

ಶರದೃತು ಕಾಲಿಡಲು ಕೆರೆಕಟ್ಟೆ ತುಂಬಿರಲು
ವನಲಕ್ಷ್ಮಿ ನಲಿಯುವಳು ಕೌಮುದಿಯಲಿ
ರಾಜ್ಯಲಕ್ಷ್ಮಿಯ ಹರಸಿ ಕಳುಹುವಳು ಜಯಮೆಂದು
ಚತುರಂಗ ಬಲದಿ ವಿಜಯದಶಮಿಯಲಿ ೧೫

ಹೇಮಂತ ಋತುಬರಲು ಚಳಿಗಾಳಬೀಸುತಿರೆ
ಕಾರಂಜಿ ನೀರೆಲ್ಲ ಕೊರೆಯುತಿರಲು
ಬನದೇವಿ ಕೋಗಿಲೆಯ ಗಾನವನು ಮರೆಯುವಳು
ಹಿಮಮುಸುಕ ಹಾಕುವಳು ವಧುವನದಲಿ ೧೬

ಶಿಶಿರಋುತು ತಲೆದೋರೆ ಬನದೇವಿ ಅನುವರಿತು
ತರುಗಣದ ಸಿಂಗರವ ಮಾಡುತಿಹಳು
ಮಧುರಾಜ ಬರುವುದನು ಸಡಗರದಿ ಕಾಯುವಳು
ಹೊಸ ಕಳೆಯ ಬೀರುತ್ತ ಮಧುವನದಲಿ ೧೭

ಮಧುವನದ ಸೌಂದರ್ಯ ಜಲಧಿಯಲಿ ವನಲಕ್ಷ್ಮಿ
ಯೋಲಾಡಿ ಮನದಣಿಯೆ ನಲಿಯುತಿರಲು
ಸಮರಾತ್ರಿ ಸಮನಿಸಲು ಕಾಂಬುವಳು ಋಷಿಯಂತೆ;
ಯೋಗನಿದ್ರೆಯ ತಳೆದ ಯೋಗಿಯಂತೆ! ೧೮
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...