ಪ್ಯಾನ್ಸಿಯೊಂದು ಸಣ್ಣ ಹೂವು,
ಅದಕೆ ಹಳದಿ ನೀಲಿ ಬಣ್ಣ,
ಕಣ್ಣಿಗೆಂಥ ಹಬ್ಬವಾಗಿ
ಮೆರೆಯುತಿಹುದು ನೋಡು! ಅಣ್ಣ!
ಎಂಥ ಆನಂದವು
ದೇವನಿತ್ತ ಚೆಂದವು.
ಒ೦ದು ಹೂವಿನಲ್ಲಿ ಚೆಲುವ-
ನಿಂತು ತುಂಬಿದಂಥನಂತ
ನಂದನದಲ್ಲೆಂಥ ಸೊಬಗ-
ನಿರಿಸಿದನದರಾದಿಯಂತ
ಹೊಳೆಯಬಹುದು ನೋಡಲು
ಹೂ-ಹುಡಿಯೊಡನಾಡಲು.
ಮಳೆಬಿಲ್ಲದು ಮುಗಿಲೊಳೆಲ್ಲ
ಬಣ್ಣ ಬಣ್ಣವಾಗಿ ಮೂಡಿ
ಸಣ್ಣ ಹೂವನೊ೦ದ ಕಂಡು
ಒಲುಮೆಗಣ್ಣಿನಿಂದ ನೋಡಿ
ಅದಕೆ ಧಾರೆಯೆರೆದಿತು
ತನ್ನ ಸಿರಿಯ ಕರೆಯಿತು.
ದೇವನಿತ್ತ ವೈಭವವದು,-
ಅವನೆ ಚಿತ್ರಿಸಿರುವ ಕಲೆ.
ಮುದ್ದಾಗಿಸಿತೊಲುಮೆಯದನು
ಮುದ್ದಿಸುತ್ತ ಮೊಗದ ಮೇಲೆ;
ಹೊಂದಿಸುವ ನಿಮಿತ್ತವು
ಅವನ ದಿವ್ಯಚಿತ್ತವು.
– ಎಡಿಥ್ ಟೆನ್‌ಬ್ರಿಂಕ್
*****








