Home / ಕವನ / ಕವಿತೆ / ಟೇಮ್ಸ ನದಿಯ ಮೇಲೆ ರಾಜಹಂಸ!

ಟೇಮ್ಸ ನದಿಯ ಮೇಲೆ ರಾಜಹಂಸ!

ನಿರಭ್ರವಾದ ನಭೋಮಂಡಲ!
ಮಧ್ಯರಾತ್ರಿಯಲ್ಲಿ ಸಹ ನೀನು
ನಿಚ್ಚಳವಾಗಿ ಕಾಣುವೆಯಲ್ಲ!
ಕುಳಿರನ್ನು ಪಾತಾಳಕಟ್ಟಿದೆ ನೀನು,
ತಳಿರೊಡೆದ ನೆಲವನ್ನು ಎವೆಯಿಕ್ಕದೆ
ನೋಡಿ ನಿಂತಿರುವೆ!
ಸಾಗರವು ಸಹ ಸಾಗರಬೀಳುವದು,-
ಈ ನಿನ್ನ ಚೆಲುವನ್ನು ನೋಡಿ!
ಚಿಕ್ಕಮಕ್ಕಳಂತೆ ಸ್ವಚ್ಚಂದವಾಗಿ ತಿರುಗುವವು,-
ಹೆಣ್ಣುಗಂಡು ಕೂಡಿ!

ಅಲ್ಲಿ ನೋಡು!
ನಿನ್ನ ಚಿಕ್ಕ ಚಿಕ್ಕೆವೆಳಕಿನ
ಕೆಳಗೆ ಬೆಳ್ಳಿಯ ಮೈ ಮಾಡಿಕೊಂಡು
ತೇಲುತಿಹುದು ರಾಜಹ೦ಸ!
ಅಂಚೆಯಿದು ನದಿಯೊಡನೆ ಮುಂಬರಿಯುವದು.
ಈ ಅರಸಂಚೆಯಂತೆ ನನ್ನ ಬಾಳ್ವೆಯಿರಲಿ, ತಂದೆ!
ಇದರಂತೆ ನದಿಯು ನನ್ನನ್ನು ತೇಲಿಸಲಿ!
ನಭದ ಹರಕೆಯ ಹೊತ್ತು
ಸಾಗಿರಲಿ ನನ್ನ ಸಂಸಾರ!

ಏಕಾಕಿಯಾಗಿ ನಡುಗತ್ತಲೆಯಲ್ಲಿ-
ನಡುನದಿಯ ಸೆಳವಿನಲ್ಲಿ-ಚಿಕ್ಕೆಗಳ
ಕಿರುವೆಳಕಿನಲ್ಲ-ಇನಿಸೊಂದು ಚಿಂತೆಯಿಲ್ಲದೆ
ಸಾಗಿಹುದಲ್ಲ ರಾಜಹಂಸ!
ಅಹಾ! ಏನು ಗಾಂಭೀರ್ಯವಿದು!
ಎಂತಹ ಸಹಜ ರಮಣೀಯತೆಯಿದು!
ಇದರ ಕಳೆಯನ್ನು ನನಗೆ ಕರುಣಿಸು, ತಂದೆ!
ಈ ತಿಮಿರಸಮಾಧಿಯ
ಸಮಾಧಾನವನ್ನು ಕೊಡು ನನಗೆ!
ಜನರಿಲ್ಲದ ರಹದಾರಿಯ ಮೇಲೆ ಏಕಾಕಿಯಾಗಿ
ನಡೆದಿಹೆನು ಮುಂದೆ.
ದಿಕ್ಕಿಲ್ಲದ ಕತ್ತಲೆಯು ಬಂದು ಮುತ್ತಿಹುದು ನನ್ನ.
ಹೃದಯವಿದು ಕಳವಳಿಸುವದು.

ಅರಸಂಚೆಗೆ ನದಿಯೇ ರಹದಾರಿ;
ನನಗೆ ರಹದಾರಿಯೇ ನದಿ.
ಅಮರತೆವೆತ್ತ ಕಂಗಳು ನಮ್ಮನ್ನು
ದಿಟ್ಟಿಸಿ ನೋಡುತಿವೆಯಲ್ಲ!
ಆದರೆ ಆರಸಂಚೆಯ ಪುಣ್ಯಸಂಚಯವಿಲ್ಲ ನನಗೆ.
ಆ ದಿವ್ಯಶಾಂತಿಯಿಲ್ಲ ನನಗೆ.
ಅದನ್ನೊಂದು ಕರುಣಿಸು ತಂದೆ!
ಆಗ ಕಾಲೆತ್ತಿ ನಡೆಯುವದಿಲ್ಲ ನಾನು,-
ನೀರು ಹರಿದತ್ತ ರೆಕ್ಕೆಯನು ಮುಚ್ಚಿ ತೇಲುವೆನು!
ಕಂಡಿದ್ದೇ ಗುರಿ; ಉಂಡಿದ್ದೇ ಅಮೃತ;
ಅರಸಂಚೆಯಾಗುವೆನು ನಾನು!

ಶೇಕ್ಸಪಿಯರ್‌ ಮಹಾಕವಿಯು ಏವ್ಹನ್‌ ನದಿಯ ರಾಜಹಂಸವಂತೆ. ಅವನ ಕಾವ್ಯಗಳನೋದಿ ಕೊನೆಯಿಲ್ಲದ ದುಃಖವನ್ನರಿತೆ ನಾನು. ಟೇಮ್ಸ ನದಿಯ ಅರಸಂಚೆಯಿದು,-ಮಧ್ಯರಾತ್ರಿಯಲ್ಲಿ ಬೆಳ್ಳಿ ಬೆಳ್ಳಿಯಾಗಿ ಹೊನಲಂತೆ ಸಾಗಿಹುದು; ಇದನ್ನು ನೋಡಿ ಶಾಂತಿಪಾಠವನ್ನು ಕಲಿತೆ ನಾನು!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...