Home / ಲೇಖನ / ಇತರೆ / ಆದರ್‍ಶ ಮತ್ತು ವಾಸ್ತವಿಕತೆ

ಆದರ್‍ಶ ಮತ್ತು ವಾಸ್ತವಿಕತೆ

ಆದರ್‍ಶ ನಾವು ಕಟ್ಟುವ ಕನಸು. ವಾಸ್ತವಿಕತೆ ಜೀವನದಲ್ಲಿ ನಡೆಯುವ ಸತ್ಯ. ಈ ಸತ್ಯ ಕನಸಿನ ಆದರ್‍ಶಕ್ಕೆ ಪೂರಕವಾಗಿಯೂ ಇರಬಹುದು; ವಿರೋಧವಾಗಿಯೂ ಇರಬಹುದು. ಆದರ್‍ಶ ಮತ್ತು ವಾಸ್ತವಿಕತೆಯ ಘರ್‍ಷಣೆ ಇರುವುದು ಈ ವಿರೋಧದಲ್ಲಿಯೇ.

ಕ್ರೋಧವನ್ನು ಶಾಂತಿಯಿಂದ, ಅಸತ್ಯವನ್ನು ಸತ್ಯದಿಂದ, ಹಿಂಸೆಯನ್ನು ಅಹಿಂಸೆಯಿಂದ, ದ್ವೇಷವನ್ನು ಪ್ರೀತಿಯಿಂದ ಜಯಿಸಬೇಕು ಎನ್ನುವುದು ಆದರ್‍ಶ. ಕ್ರೋಧವನ್ನು ಕ್ರೋಧದಿಂದ, ಅಸತ್ಯವನ್ನು ಅಸತ್ಯದಿಂದ, ಹಿಂಸೆಯನ್ನು ಹಿಂಸೆಯಿಂದ, ದ್ವೇಷವನ್ನು ದ್ವೇಷದಿಂದ ಎದುರಿಸುವುದು ಇಂದು ನಮ್ಮ ಸುತ್ತಲಿರುವ ವಾಸ್ತವ. ಬರೇ ಏಳು ಎಂಟು ದಶಕಗಳ ಹಿಂದೆ ಗಾಂಧೀಜಿ ಬೋಧಿಸಿದ್ದ ಸತ್ಯ ಮತ್ತು ಅಹಿಂಸಾ ತತ್ವಗಳೇ ಕಸದ ತೊಟ್ಟಿ ಸೇರಿರುವಾಗ ಶತಮಾನಗಳ ಹಿಂದೆ ಬೋಧಿಸಿರುವ ಆದರ್‍ಶಗಳು ಭೂತಕಾಲದ ಕಾಲಗರ್ಭದೊಳಗೆ ಸೇರಿ ನೆನಪಿನಿಂದಲೇ ಅಳಿಸಿ ಹೋಗಿರುವಾಗ ವಾಸ್ತವ್ಯ ಹೀಗಿರದೆ ಬೇರೆಯಾಗಿರುವುದು ಹೇಗೆ ಸಾಧ್ಯ? ಬೆಳವಣಿಗೆಯ ಎಲ್ಲಾ ಒಳಿತು ಕೆಡುಕುಗಳೊಂದಿಗೆ ನಾಗಲೋಟದೊಂದಿಗೆ ಓಡುತ್ತಿರುವ ಹಾಗೂ ಎಲ್ಲವನ್ನೂ ಪ್ರಾಕ್ಟಿಕಲ್ ದೃಷ್ಟಿಯಿಂದ ನೋಡುತ್ತಿರುವ ಇಂದಿನ ಸಮಾಜ ಎಲ್ಲಾ ಮೌಲ್ಯಗಳನ್ನೂ ಮರೆತು ಜನರ ಮನೋಭಾವವನ್ನು ಬದಲಾಯಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಆದರ್‍ಶ ಮತ್ತು ವಾಸ್ತವಿಕತೆ ಬಹಳ ಹತ್ತಿರ ಹತ್ತಿರದಲ್ಲಿ ಹರಿಯುವ ಎರಡು ಸಮಾನಾಂತರ ರೇಖೆಗಳಂತೆ. ಸಮಾನಾಂತರ ರೇಖೆಗಳೆಂದೂ ಒಟ್ಟು ಸೇರುವುದು ಸಾಧ್ಯವಿಲ್ಲ ಎನ್ನುವುದು ಸಿದ್ಧಾಂತ. ಆದರ್‍ಶ ಮತ್ತು ವಾಸ್ತವಿಕತೆ ಒಂದೇ ದಿಕ್ಕಿನಲ್ಲಿ ಒಂದೇ ವೇಗದಲ್ಲಿ ಚಲಿಸುತ್ತಿದ್ದರೆ ಎಲ್ಲೂ ಘರ್‍ಷಣೆ ಇಲ್ಲದೆ ಒಂದಕ್ಕೊಂದು ಪೂರಕವಾಗಿರಬಹುದು. ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಆದರ್‍ಶ ಮತ್ತು ವಾಸ್ತವಿಕತೆಯ ಮಧ್ಯೆ ದೊಡ್ಡ ಸಂಘರ್‍ಷವೇ ಏಳಬಹುದು. ಈ ಸಂಘರ್‍ಷದಲ್ಲಿ ಆದರ್‍ಶಗಳು ಸೋತು ಜೀವನದಲ್ಲಿ ಎದುರಿಸಬೇಕಾದ ಸತ್ಯಗಳು ನಮ್ಮನ್ನು ಜರ್‍ಜರಿತ ಗೊಳಿಸಬಹುದು. ಧೃತಿಗೆಡಿಸಬಹುದು. ಆದರ್‍ಶ ಮತ್ತು ವಾಸ್ತವಿಕತೆಯನ್ನು ಪತಿ-ಪತ್ನಿಯರಿಗೂ ಹೋಲಿಸಬಹುದು. ಪತಿ-ಪತ್ನಿಯರು ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಒಬ್ಬರನ್ನೊಬ್ಬರು ಅರಿತು, ಸಹಕರಿಸಿಕೊಂಡು ನಡೆದರೆ ಜೀವನ ಸುಗಮ. ಇಲ್ಲವಾದರೆ ಜೀವನವಿಡೀ ಸಂಘರ್‍ಷಗಳು. ಮಧ್ಯದಲ್ಲಿಯೇ ಮುರಿದು ಹೋಗುವ ಸಂದರ್‍ಭಗಳು ಎದುರಾಗಬಹುದು. ಮದುವೆಯಾಗುವಾಗ ಎಲ್ಲರಿಗೂ ತಾವು ಆದರ್‍ಶ ದಂಪತಿಗಳಾಗಬೇಕು ಎನ್ನುವ ಕನಸುಗಳಿರುತ್ತವೆ. ಯಾರೂ ಮದುವೆ ಮುರಿಯಬೇಕು ಎನ್ನುವ ನಕಾರಾತ್ಮಕ ಭಾವನೆಯಲ್ಲಿ ಮದುವೆಯಾಗುವುದಿಲ್ಲ. ಪತಿ ತನ್ನ ಪತ್ನಿ ಹೀಗಿರಬೇಕು ಎಂದು ಕನಸು ಕಟ್ಟಿದ ಹಾಗೇ ಪತ್ನಿಗೂ ತನ್ನ ಪತಿಯ ಬಗ್ಗೆ ಕನಸುಗಳಿರುತ್ತವೆ. ಆದರೆ ಪತಿ-ಪತ್ನಿ ಇಬ್ಬರ ಕನಸುಗಳು, ಆದರ್‍ಶಗಳು ವಾಸ್ತವವಾಗಬೇಕಾದರೆ, ಇಬ್ಬರ ಭಾವನೆಗಳು, ಜೀವನದೃಷ್ಟಿ, ಎಲ್ಲವೂ ಅವರು ಕಟ್ಟಿರುವ ಆದರ್‍ಶಗಳಿಗೆ ಪೂರಕವಾಗಿರಬೇಕು. ಅವರ ಯೋಚನೆಗಳು ಭಿನ್ನವಾಗಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿದ್ದರೆ ಆದರ್‍ಶಗಳು ವಾಸ್ತವಿಕತೆಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಗುತ್ತವೆ. ಮದುವೆ ಎನ್ನುವ ವ್ಯವಸ್ಥೆ ಅರ್‍ಥ ಕಳಕೊಂಡು ಸಾಮಾಜಿಕ ಸ್ವಾಸ್ಥ್ಯವೇ ಕೆಡುತ್ತದೆ. ಹಾಗೇ ಆದರ್‍ಶಗಳು ವಾಸ್ತವಕ್ಕೆ ಪೂರಕವಾಗಿರದಿದ್ದರೂ ಸಮಾಜದ ಸ್ವಾಸ್ಥ್ಯ ಕೆಡುತ್ತದೆ.

ಓದುವುದು ಶಾಸ್ತ್ರ ಇಕ್ಕುವುದು ಗಾಳ ಎನ್ನುವಂತೆ ತುಂಬಾ ಜನರಲ್ಲಿ ಆದರ್‍ಶ ಮತ್ತು ವಾಸ್ತವ ಬದುಕು ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ಸುತ್ತಲಿನ ಪರಿಸರ, ಪರಿಸ್ಥಿತಿಗಳು ಕಾರಣವಾಗಬಹುದು. ಮನುಷ್ಯರಲ್ಲಿರುವ ದ್ವಂದ್ವ ವ್ಯಕ್ತಿತ್ವವೂ ಕಾರಣವಾಗಬಹುದು, ಉದಾಹರಣೆಗೆ ಸುಳ್ಳು ಹೇಳಲೇಬಾರದು ಎನ್ನುವ ಆದರ್‍ಶವಿದ್ದರೂ ಸುಳ್ಳು ಹೇಳಲೇಬೇಕಾದ ಪರಿಸ್ಥಿತಿಗಳು ಎದುರಿಗೆ ನಿಂತರೆ ಆದರ್‍ಶದ ಕೊಲೆ ಮಾಡಲೇಬೇಕಾಗುತ್ತದೆ.

ಬರಹದಲ್ಲಿ, ಮಾತಿನಲ್ಲಿ ಆದರ್‍ಶಗಳನ್ನು ಪ್ರತಿಪಾದಿಸುವುದು ಸುಲಭ. ಆದರೆ, ಅದರಂತೆ ಬದುಕುವುದು ಬಹಳ ಕಷ್ಟ. ಬರೆದಂತೆ, ಬೋಧಿಸಿದಂತೆ, ಬದುಕುವುದು ಅಥವಾ ಬದುಕಿದಂತೆ ಬರೆಯುವುದು, ಬೋಧಿಸುವುದು ಸಾಧ್ಯವಾದಾಗ ಮಾತ್ರ ಬದುಕು ಮತ್ತು ಹೇಳಿಕೆ ಒಂದೇ ಆಗುತ್ತದೆ. ಇಲ್ಲವಾದರೆ ಗೊಂದಲಗಳ ಸೃಷ್ಟಿಯಾಗುತ್ತದೆ. ಬದುಕು ಗೋಜಲಾಗುತ್ತದೆ. ನಾವು ನಂಬಿರುವ ಆದರ್‍ಶಗಳು ನಮ್ಮ ನಡೆ ನುಡಿಯಲ್ಲೂ ಪ್ರತಿಬಿಂಬಿಸಿದರೆ ನುಡಿದಂತೆ ನಡೆ ಎನ್ನುವುದು ಸತ್ಯವಾಗುತ್ತದೆ.

ಇದು ಕಷ್ಟವಾದರೂ ಅಸಾಧ್ಯವೇನಲ್ಲ. ಮನಃಪೂರ್‍ವಕ ಪ್ರಯತ್ನ ಬೇಕು. ಎಲ್ಲ ರೀತಿಯ ಸಂಘರ್‍ಷಗಳನ್ನು ಎದುರಿಸುತ್ತ ಆದರ್‍ಶಗಳನ್ನು ವಾಸ್ತವಿಕತೆಗೆ ಹತ್ತಿರವಾಗಿರಿಸಲು ಪ್ರಯತ್ನಿಸುವುದು ಸಾಮಾಜಿಕ ಜವಾಬ್ದಾರಿಯುಳ್ಳ ಹಾಗೂ ಸಮಾಜದ ಆರೋಗ್ಯವನ್ನು ಬಯಸುವ ಪ್ರತಿಯೊಬ್ಬ ಪ್ರಜೆಯ ಕರ್‍ತವ್ಯವಾಗಿದೆ ಎನ್ನುವ ಅರಿವು ಅಗತ್ಯ.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...