ಹಿತ್ತಲಿಂದ ಬರುತಲೊಮ್ಮೆ
ಬೆಚ್ಚಿ ಬಿದ್ದೆನು
ದೂರದಲ್ಲಿ ಕಪ್ಪು ಕಪ್ಪು
ಏನೋ ಕಂಡೆನು

ತಲೆಯ ಮೇಲೆ ಕೋಡು
ಕೋರೆಗಳಿವೆ ಜೋಡು
ವಿಕಾರವಾದ ಮುಖ
ಉದ್ದುದ್ದನೆಯ ನಖ

ಮಾರಿಗೊಂದು ಹೆಜ್ಜೆ
ತಿನುವ ಮಾಂಸ ಮಜ್ಜೆ
ಝಲ್ಲೆಂದಿತು ಎದೆಯು
ಬಿರಿಯ ಬಾರ್ದೆ ಭುವಿಯು

ಆನೆಗಿಂತ ಎತ್ರ
ಅವನ ಆ ಗಾತ್ರ
ನಡುಗುತ್ತಲೆ ನಿಲುವುದ್ಹೇಗೆ
ಅಯ್ಯೋ ಬಂದ ಹತ್ರ

ಇವನೆ ಇವನೆ ರಕ್ಕಸ
ಏರಿಳಿಯಿತು ಪುಪ್ಪಸ
ರಾಮ, ಭೀಮ, ಹನುಮರೆಲ್ಲ
ಕೊಂದ ರಕ್ಕಸ

ಓಡಲೆಂದು ನೋಡಿದೆ
ಕಾಲು ಮರವೆ ಆಗಿದೆ
ಕೂಗಲೆಂದು ಬಾಯಿತೆರೆದೆ
ಅದೂ ಹೊಲೆದು ಕೊಂಡಿದೆ

ಗಣಪನನ್ನು ನೆನೆದೆ
ಮೇಷ್ಟ್ರರನ್ನು ಕರೆದೆ
ಬರಲಿಲ್ಲ ಯಾರು ಪಾಲಿಗೆ
ಮಗನಿಲ್ಲ ನನ್ನತಾಯಿಗೆ

ದಡಬಡನೆ ಬಂದೆಬಿಟ್ಟ
ಮುಷ್ಟಿಯಲ್ಲಿ ಎತ್ತಿಬಿಟ್ಟ
ಮುದ್ದು ಮರಿಯೆ ಎಂದ
ಕೊಟ್ಟ ಮುತ್ತನೊಂದ

ಹೆದರಬೇಡ ನಡುಗಬೇಡ
ಕೇಳೋ ಇಲ್ಲಿ ಪೋರ
ತಿನ್ನೋದಿಲ್ಲ ನಿನ್ನ ನಾನು
ಗೆಳೆಯ ನೀನು ಬಾರ

ಗೆಳೆಯನಲ್ಲ ನೀನು
ಹೆದರಿಹೆನು ನಾನು
ನೀನು ನರ ಭಕ್ಷಕ
ನಾನು ಶಾಲಾ ಬಾಲಕ

ನಾನು ಶಾಲೆಗೆ ಬರುವೆ
ನಿನ್ನ ಜೊತೆಗೆ ಆಡುವೆ
ಬಿಸಿಊಟವನ್ನೆ ಮಾಡುವೆ
ಆಪ್ ಎಂದು ತೇಗುವೆ

ಬೇಡ, ಬೇಡ ರಕ್ಕಸ
ನನ್ನ ಕಾಡಬೇಡ
ನೀನು ಜೊತೆಗೆ ಬಂದರೆ
ನನಗೆ ಭಾರಿ ತೊಂದರೆ

ತಂಟೆ ಮಾಡೆನು
ಮಾಂಸ ಮಜ್ಜೆ ಕೇಳೆನು
ಗೆಳೆಯನಲ್ವೆ ನೀನು
ಪಪ್ಪಿ ಕೊಡುವೆ ನಾನು

ಶಾಲೆಗೆ ಬಂದ್ರೆ ನೀನು
ಪಾಠಕಲಿಯ ಬೇಕು
ಹೋಂವರ್ಕ ಮಾಡಬೇಕು
ಅಲ್ಲಿ ಏಟು ತಿನ್ನಬೇಕು

ಪಾಠ ಗೀಟ ಓದುವೆ
ಮಗ್ಗಿ ಹಾಡು ಹೇಳುವೆ
ಏಟು ಕೊಡಲು ಮೇಷ್ಟ್ರು ಬಂದ್ರೆ
ಅವರನ್ನೆ ಮಾಯ ಮಾಡುವೆ

ನರ-ರಾಕ್ಷಸ ಒಂದಾದರು
ಸಂತಸದೀ ಕುಣಿದರು
ಶಾಲೆ ಕಡೆಗೆ ನಡೆದರು
ಗೇಟು ತೆರೆದು ಬಿಟ್ಟರು

ರಕ್ಕಸನ ಕಂಡರು
ಮಕ್ಕಳು ಬೆರಗಾದರು
ಚಿಳ್ಳೆ ಪಿಳ್ಳೆ ಎಲ್ಲರೂ
ಚೆಡ್ಡಿ ತೋಯಿಸಿಕೊಂಡರು

ಹೆದರಬೇಡಿ ಮಕ್ಕಳೆ
ಮುದ್ದು ಮುದ್ದು ಹೂಗಳೆ
ನಾನು ನಿಮ್ಮ ತಿನ್ನೆನು
ಆಗುವೆ ನಿಮ್ಮ ಗೆಳೆಯನು

ಮಕ್ಕಳೆಲ್ಲ ನಕ್ಕರು
ಹತ್ತಿರಕ್ಕೆ ಬಂದರು
ಕೈಯ ಹಿಡಿದು ಎಳೆದರು
ಭಾರಿ ಖಷಿಯಪಟ್ಟರು

ಮಾಸ್ತರ್ ಮಾತು ಮರೆತರು
ಶಿಕ್ಷಕಿ ಶಿಲೆಯಾದರು
ಕನಸೆ ಇರಬೇಕೆಂದುಕೊಂಡು
ಕೈಯ ಚಿವುಟಿಕೊಂಡರು

ಪುರದ ಜನರು ನೆರೆದರು
ಬಡಿಗೆ ಹಿಡಿದು ಬಂದರು
ರಕ್ಕಸನ ಕಂಡ ಅವರು
ಅವಾಕ್ಕಾಗಿ ನಿಂತರು

ಕೇಳಿ ಪುರದ ಜನಗಳೇ
ಇಲ್ಲ ನನ್ನಿಂದ ತೊಂದರೆ
ಬೇರೆ ಏನು ಬಯಸೆನು
ವಿದ್ಯೆ ಕಲಿಯ ಬಂದೆನು

ಬಡಿಯ ಬೇಡಿ ನನ್ನ
ತಿನ್ನುವುದಿಲ್ಲ ನಿಮ್ಮ
ವಿದ್ಯೆ ಕಲಿಸಿ ನನಗೆ
ನಾನು ಶರಣು ನಿಮಗೆ

ಟೀಚರ್ ಒಪ್ಪಿಬಿಟ್ಟರು
ಶಾಲೆಯೊಳಗೆ ಕರೆದರು
ಸ್ಟೇಟು ಬಳಪ ಕೊಟ್ಟರು
ಅಕ್ಷರ ಕಲಿಸಿ ಬಿಟ್ಟರು

ವಿದ್ಯೆ ಕಲಿತ ರಕ್ಕಸ
ವಿರೂಪ ಕಳಚಿ ಬಿಟ್ಟನು
ಕೋರೆ, ದಾಡೆ, ಕೋಡು ಎಲ್ಲ
ಮಾಯವಾಗಿ ಬಿಟ್ಟವು.
*****