ಮುದ್ದು ಪುಟಾಣಿಗಳೆ.. ನೀವೆಲ್ಲ ಮಾಟಗಾತಿಯರ ಬಗ್ಗೆ ಈಗಾಗಲೇ ಓದಿರಬಹುದು. ಕಂಡಿರಲೂಬಹುದು, ಕೇಳಿರಲೂ ಬಹುದು.
ನೀವೆಲ್ಲ.. ಜಾರ್‍ಖಂಡ ರಾಜ್ಯದ ಹೆಸರನ್ನು ಕೇಳಿರಬಹುದು. ಅಲ್ಲಿ ರಾಂಚಿ ಎಂಬ ಪಟ್ಟಣವಿದೆ. ಅಲ್ಲೇ ಸಮೀಪದಲ್ಲೇ ಮಂದರ್ ಎಂಬ ಪುಟ್ಟ ಗ್ರಾಮವಿದೆ. ಇದು ರಾಂಚಿಯಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಅಂದರೆ ಅದೊಂದು ಕುಗ್ರಾಮ ತೀರಾ ಹಿಂದುಳಿದ ಸಣ್ಣದೊಂದು ಹಳ್ಳಿ.
ಅಲ್ಲಿ ಒಬ್ಬರಲ್ಲ! ಐದು ಜನ ಮಾಟಗಾತಿಯರು…! ಅಬ್ಬಾ! ಒಬ್ಬರಿದ್ದರೆ ತಡೆಯಲಾಗುವುದಿಲ್ಲ. ಇನ್ನು ಐದು ಜನರೆಂದರೆ ಜನ ಹೌಹಾರಿ ಬಿಟ್ಟರು.
ಮಂದರ್ ಗ್ರಾಮದ ತುಂಬೆಲ್ಲ ಇವರದೇ ಉಪಟಳ, ಮನೆಯಲ್ಲಿನ ಹಾಲು ಇಂಗಿ ಹೋಗುವುದು. ಮಕ್ಕಳಿಗೆ ಸುಸ್ತಾಗಿ ಸಾಯುವುದು, ದೊಡ್ಡವರಿಗೆ ಕೈಕಾಲು ಬಿದ್ದೋಗುವುದು. ಮನೆಯಲ್ಲಿನ ಜೀವ ದನಗಳು ಸಾಯುವುದು. ಒಂದೇ ಎರಡೇ ನಿತ್ಯ ಹತ್ತಾರು ಜನರಿಗೆ ಈ ಮಾಟಗಾತಿಯರು ಮಾಟ ಮಾಡಿಸಿದ್ದೇ ಮಾಡಿಸಿದ್ದು!
ಇನ್ನು ಹೆಣ್ಣು ಮಕ್ಕಳಿಗೆ ಮದುವೆಯಾಗದಂತೆ, ಗಂಡು ಅವರ ಮನೆಗೆ ಬರದಂತೆ ಮಾಡುವುದು, ಋತುಮತಿಯಾಗದಂತೆ ಮಾಡುವುದು, ಹುಚ್ಚಿಯಾಗಿಸುವುದು, ಮನೆಬಿಟ್ಟು ಓಡಿ ಹೋಗುವಂತೆ, ಮನೆಯಲ್ಲಿ ಯಂತ್ರ, ಮಂತ್ರ, ನಿಂಬೆಹಣ್ಣು ಗೊಂಬೆ ಮಾಡಿ ಇಡುವುದು! ನಿತ್ಯ ಜಗಳ, ಹೊಡೆದಾಟ ಬಡಿದಾಟ ನ್ಯಾಯಾ ಪಂಚಾಯ್ತಿ ಬೆಳೆ ಹಾನಿ ನೀರಿಲ್ಲದಂತೆ ಮಾಟ ಮಾಡಿಸುವುದು ಸಾಗಿಯೇ ಇತ್ತು.
ಜನರು ರೋಸಿ ಹೋಗಿದ್ದರು. ಗ್ರಾಮದಲ್ಲಿ ಉಸಿರು ಗಟ್ಟಿಸುವ ವಾತಾವರಣವಿತ್ತು.
ದಿನಾಂಕ ೦೭-೦೮-೨೦೧೫ರಂದು ಶುಕ್ರವಾರ ತಡರಾತ್ರಿ ಮಾಟ ಮಾಡುತ್ತಿದ್ದ ಐವರ ಮನೆಗೆ ನುಗ್ಗಿದ ಗ್ರಾಮಸ್ಥರು ಅವರನ್ನು ಧರಧರನೆ ಹೊರಗೆ ಎಳೆದು ದೊಣ್ಣೆ, ಕಲ್ಲು, ಕಬ್ಬಿಣದ ರಾಡ್, ಬಡಿಗೆ ಕಟ್ಟಿಗೆಗಳಿಂದ ನಾಯಿಗೆ ಬಡಿದಂತೆ ಚೆಂದ ಮಾಡಿ ಬಡಿದು ಬಡಿದು ಕೊಂದಿದ್ದಾರೆ.
ದಿನಾಂಕ ೦೮-೦೮-೨೦೧೫ರಂದು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಆ ಐವರ ಶವಗಳನ್ನು ವಶಕ್ಕೆ ಪಡೆದುಕೊಂಡು ಶವ ಪರೀಕ್ಷೆಗೆ ಕಳಿಸಿದರು.
– ಹೀಗೆ ಜಾರ್‍ಖಂಡ್‌ನಲ್ಲಿ ಒಟ್ಟು ಈಗಾಗಲೇ ೭೫೦ ಜನ ಮಹಿಳೆಯರನ್ನು ಮಾಟಗಾತಿಯರೆಂಬ ಆರೋಪ, ಶಂಕೆ, ಅನುಮಾನಾಸ್ಪದದ ಮೇಲೆ, ಹೀಗೆ ಕೊಂದಿರುವರು.
ನಮ್ಮಲ್ಲಿ ಹಳ್ಳಿಗಳಲ್ಲಿ – ಪಟ್ಟಣಗಳಲ್ಲಿ – ಹೀಗೆ ಮಾಟಗಾರರು ಮಾಟಗಾತಿಯರಿದ್ದಾರೆ! ಅವರ ಬಗ್ಗೆ ಪೊಲೀಸ್ಸರಿಗೆ ದೂರು ನೀಡಬಹುದಾಗಿದೆ. ಸುಮ್ಮನೆ ನೋಡಿ, ಕೇಳಿ, ಓದಿ ಸುಮ್ಮನಿರಬೇಡಿ…
*****