ಕೊಕ್ಕಿನಲಿ ಕೊಕ್ಕು, ರೆಕ್ಕೆಗೆ ರೆಕ್ಕೆ, ನೋಟದಲಿ
ನೋಟ ಹುದುಗೊಳಿಸಿರುವ ಹಕ್ಕಿಯೆರಡು-
ಎಲೆ ಚವರ ಬೀಸೆ, ಹೂಗಂಪು ಸಲೆ ಸೂಸೆ, ಎಲ –
ರೂದೆ, ಬೆಳಕಾಡೆ- ಹೊರ ಜಗವ ಮರೆದು
ಕೂಡಿರಲು, ಬೇಡನೊಡ ನೋಡಿರಲು, ಗುರಿಯಿಡುತ
ಹೂಡಿದನು ಎದೆಮಾಡಿ ಹೆದೆಗೆ ಕಣೆಯ,
ಒಂದು ನೆಲಕುದುರೆ, ಇನ್ನೊಂದು ಬಾನ್ ಬಿರಿವಂತೆ
ಚೀರುತಿದೆ-ಅಗಲಿದರು, ಗೆಳತಿಗೆಣೆಯು!
ವಾಲ್ಮಿಕಿಯ ಕಿವಿಸೇರಿ ಎದೆಸಾರೆ ಕೂಡ,
‘ಒಗೆತನದ ಹಗೆ ಸಾಯಲಿವನೆ ಬೇಡ’
ಹಾಡು ಬರೆ; ವೇದಕವಿ ಆದಿಕವಿಗೆ
ಎಂದ: ‘ಸೋತೆನು ಛಂದದೊಂದು ಸವಿಗೆ. ’
*****